ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೆಟ್ಟರ್‌ ರಾಜಕಾರಣ ಬೆಳಗಾವಿಗೆ ಶಿಫ್ಟ್‌!

ಹುಬ್ಬಳ್ಳಿ–ಧಾರವಾಡ ರಾಜಕಾರಣದಲ್ಲಿ 3 ದಶಕಗಳಿಂದಲೂ ಕೇಂದ್ರಬಿಂದು
Published 27 ಮಾರ್ಚ್ 2024, 4:46 IST
Last Updated 27 ಮಾರ್ಚ್ 2024, 4:46 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕಳೆದ 30 ವರ್ಷಗಳಲ್ಲಿ ಹುಬ್ಬಳ್ಳಿ– ಧಾರವಾಡ ರಾಜಕೀಯ ರಂಗದ ಕೇಂದ್ರಬಿಂದುವಾಗಿದ್ದ ಬಿಜೆಪಿ ಮುಖಂಡ ಜಗದೀಶ  ಶೆಟ್ಟರ್‌ ಈಗ ಪಕ್ಕದ  ಬೆಳಗಾವಿ  ರಾಜಕಾರಣಕ್ಕೆ ಹೆಜ್ಜೆ ಇಟ್ಟಿದ್ದಾರೆ. ಬುಧವಾರದಿಂದ ಅವರು ಪ್ರಚಾರ ಕಾರ್ಯ ಆರಂಭಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.

ಬಿಜೆಪಿಯ ಸಾಮಾನ್ಯ ಕಾರ್ಯಕರ್ತ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ, ಶಾಸಕ, ಸಚಿವ, ವಿರೋಧ ಪಕ್ಷದ ನಾಯ ಮತ್ತು ಮುಖ್ಯಮಂತ್ರಿಯಾಗಿ ಬಹುತೇಕ ಎಲ್ಲ ಮಹತ್ವದ ಹುದ್ದೆಗಳನ್ನು ಅಲಂಕರಿಸಿರುವ ಅವರ ಪಯಣ ರೋಚಕವಾಗಿದೆ.

ಜನಸಂಘ ನಂಟು:

ಜಗದೀಶ ಶೆಟ್ಟರ್‌ ಅವರ ತಂದೆ ಎಸ್‌.ಎಸ್‌. ಶೆಟ್ಟರ್‌ ಅವರು ಜನಸಂಘದ ಸಕ್ರಿಯ ಕಾರ್ಯಕರ್ತರಾಗಿದ್ದರು. ಮಹಾನಗರ ಪಾಲಿಕೆ ಸದಸ್ಯರಾಗಿ, ಮೇಯರ್‌ ಕೂಡ ಆಗಿದ್ದರು. ತಂದೆಯ ಪ್ರಭಾವದಿಂದ  ಚಿಕ್ಕ ವಯಸ್ಸಿನಲ್ಲೇ ಜಗದೀಶ ಶೆಟ್ಟರ್‌ ಅವರಿಗೆ ಜನಸಂಘದ ಜೊತೆ ನಂಟು ಬೆಳೆಯಿತು. ನಂತರ ಜನಸಂಘ ಬಿಜೆಪಿಯಾಗಿ ರೂಪಾಂತರಗೊಂಡ ನಂತರ 1990ರ ವೇಳೆ ಬಿಜೆಪಿಯ ಹುಬ್ಬಳ್ಳಿ ಗ್ರಾಮೀಣ ತಾಲ್ಲೂಕು ಘಟಕದ ಅಧ್ಯಕ್ಷರಾದರು.

ಈದ್ಗಾ ಮೈದಾನ:

1992ರ ಸಮಯದಲ್ಲಿ ಹುಬ್ಬಳ್ಳಿ ಈದ್ಗಾ ಹೋರಾಟ ಪ್ರಕರಣದಲ್ಲಿ ಕೇಂದ್ರ ಮಾಜಿ ಸಚಿವ ದಿ.ಅನಂತಕುಮಾರ್‌, ಪ್ರಲ್ಹಾದ ಜೋಶಿ ಜೊತೆ ಶೆಟ್ಟರ್‌ ಕೂಡ ಮುಂಚೂಣಿಯಲ್ಲಿದ್ದರು. 1994ರಲ್ಲಿ ಮೊದಲ ಬಾರಿಗೆ ಹುಬ್ಬಳ್ಳಿ– ಧಾರವಾಡ ಸೆಂಟ್ರಲ್‌ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸಿ, ಜಯಗಳಿಸಿದರು. ಇದೇ ಕ್ಷೇತ್ರದಿಂದ ಸತತ 6 ಸಲ ವಿಧಾನಸಭೆಗೆ ಆಯ್ಕೆಯಾದರು.

ಮುಖ್ಯಮಂತ್ರಿ ಪಟ್ಟಕ್ಕೆ:

2012ರ ಜುಲೈನಿಂದ 2013 ಮೇ ವರೆಗೆ ಮುಖ್ಯಮಂತ್ರಿಯಾಗಿ ಶೆಟ್ಟರ್‌ ಕಾರ್ಯನಿರ್ವಹಿಸಿದ್ದರು. ಇದಕ್ಕೂ ಮುಂಚೆ 2008ರಿಂದ 2009ರವರೆಗೆ ವಿಧಾನಸಭೆಯ ಸಭಾಧ್ಯಕ್ಷರಾಗಿದ್ದರು. 2014ರಿಂದ 2018ರವರೆಗೆ ವಿರೋಧ ಪಕ್ಷದ ನಾಯಕರಾಗಿದ್ದರು. ಕಂದಾಯ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌, ಬೃಹತ್‌ ಹಾಗೂ ಮಧ್ಯಮ ಕೈಗಾರಿಕೆ ಸಚಿವರಾಗಿಯೂ ಕಾರ್ಯನಿರ್ವಹಿಸಿದರು. ವಿವಿಧ ಹುದ್ದೆಗಳನ್ನು ಸಮರ್ಥವಾಗಿ ಕಾರ್ಯನಿರ್ವಹಿಸಿದರು.

ಬಿಜೆಪಿ ಬಿಟ್ಟಿದ್ದು– ಮರುಸೇರ್ಪಡೆ:

2023ರ ವಿಧಾನಸಭೆ ಚುನಾವಣೆ ವೇಳೆ ಶೆಟ್ಟರ್‌ ಅವರಿಗೆ ಬಿಜೆಪಿ ಟಿಕೆಟ್‌ ನಿರಾಕರಿಸಿತ್ತು. ಇದರಿಂದ ಅಸಮಾಧಾನಗೊಂಡ ಅವರು, ಕಾಂಗ್ರೆಸ್‌ ಸೇರಿ ಚುನಾವಣಾ ಕಣಕ್ಕಿಳಿದರು. ಚುನಾವಣೆಯಲ್ಲಿ ಪರಾಭವಗೊಂಡರು. ಇದು ಅವರ ಮೊದಲ ಸೋಲು. ನಂತರ ಕಾಂಗ್ರೆಸ್‌ ಹೈಕಮಾಂಡ್‌ ಅವರನ್ನು ವಿಧಾನ ಪರಿಷತ್‌ ಸದಸ್ಯರನ್ನಾಗಿ  ನೇಮಿಸಿತು. 9 ತಿಂಗಳಲ್ಲೇ ಅವರು ಬಿ.ಎಸ್‌. ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿಗೆ ಮರುಸೇರ್ಪಡೆಯಾದರು.

ಧಾರವಾಡ ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿಯಲು ಪ್ರಯತ್ನಿಸಿದರು. ಆದರೆ, ಪಕ್ಷದ ಹೈಕಮಾಂಡ್‌ ಹಾಲಿ ಸಂಸದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರನ್ನೇ ಮುಂದುವರಿಸಲು ತೀರ್ಮಾನಿಸಿತು. ಇದರಿಂದ ನಿರಾಶರಾದ ಶೆಟ್ಟರ್‌ ಅವರಿಗೆ ಪರ್ಯಾಯವಾಗಿ ಬೆಳಗಾವಿ ಲೋಕಸಭಾ ಕ್ಷೇತ್ರದ ಟಿಕೆಟ್‌ ನೀಡಿದೆ.

ಬೀಗರ ಊರು:

ಶೆಟ್ಟರ್‌ ಅವರ ಪುತ್ರ ಸಂಕಲ್ಪ ಅವರಿಗೆ ಬೆಳಗಾವಿಯ ಸಂಸದೆ ಮಂಗಳಾ ಅಂಗಡಿ ಅವರ ಪುತ್ರಿಯ ಜೊತೆ ಮದುವೆ ಮಾಡಿಕೊಡಲಾಗಿದೆ. ಹೀಗಾಗಿ ಬೆಳಗಾವಿ ಶೆಟ್ಟರ್‌ ಅವರಿಗೆ ಬೀಗರ ಊರಾಗಿದೆ. ಇದಲ್ಲದೇ, ಮುಖ್ಯಮಂತ್ರಿಯಾಗಿದ್ದಾಗ, ವಿರೋಧ ಪಕ್ಷದ ನಾಯಕರಾಗಿದ್ದಾಗ ಹಲವು ಸಲ ಬೆಳಗಾವಿಯ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಅಲ್ಲಿನ ಪಕ್ಷದ ನಾಯಕರ ಜೊತೆ ಒಡನಾಟ ಹೊಂದಿದ್ದಾರೆ.

ಹೊರಗಿನವರಿಗೆ ಟಿಕೆಟ್‌ ನೀಡಬಾರದೆಂದು ಬೆಳಗಾವಿಯಲ್ಲಿ ಕೆಲವು ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರನ್ನು ಮನವರಿಕೆ ಮಾಡಿ, ಚುನಾವಣೆ ಮಾಡುವ ವಿಶ್ವಾಸವನ್ನು ಶೆಟ್ಟರ್‌ ವ್ಯಕ್ತಪಡಿಸಿದ್ದಾರೆ.

ಜಗದೀಶ ಶೆಟ್ಟರ್‌ ರಾಜ್ಯ ಮಟ್ಟದ ನಾಯಕರು. ಧಾರವಾಡ ಅಷ್ಟೇ ಅಲ್ಲ ಎಲ್ಲ ಜಿಲ್ಲೆಗಳಲ್ಲೂ ಅವರ ಅಭಿಮಾನಿಗಳು ಇದ್ದಾರೆ. ಮುಖ್ಯಮಂತ್ರಿ ಆಗಿದ್ದ ವೇಳೆ ಬೆಳಗಾವಿಯಲ್ಲೂ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ.

– ನಾಗೇಶ ಕಲಬುರ್ಗಿ ಶೆಟ್ಟರ್ ಆಪ್ತ ಹುಡಾ ಮಾಜಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT