ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವೇಗೌಡರು ತಮ್ಮ ಪಕ್ಷದ ಅಸ್ತಿತ್ವದ ಭವಿಷ್ಯ ನುಡಿಯಲಿ: ಡಿ.ಕೆ. ಶಿವಕುಮಾರ್

Published 13 ಏಪ್ರಿಲ್ 2024, 8:12 IST
Last Updated 13 ಏಪ್ರಿಲ್ 2024, 8:12 IST
ಅಕ್ಷರ ಗಾತ್ರ

ಬೆಂಗಳೂರು: 'ದೇವೇಗೌಡರು ನಮ್ಮ ಸರ್ಕಾರದ ಅಸ್ತಿತ್ವದ ಬಗ್ಗೆ ಭವಿಷ್ಯ ನುಡಿಯುವುದಕ್ಕಿಂತ, ಅವರ ಪಕ್ಷದ ಅಸ್ತಿತ್ವದ ಬಗ್ಗೆ ಭವಿಷ್ಯ ನುಡಿಯಲಿ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದರು.

'ರಾಜ್ಯ ಸರ್ಕಾರಕ್ಕೆ ಗ್ಯಾರಂಟಿ ಇಲ್ಲ ' ಎಂದು ದೇವೇಗೌಡರು ಶುಕ್ರವಾರ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, 'ದೇವೇಗೌಡರು ಎಷ್ಟು ಭವಿಷ್ಯ ಕಾಲವನ್ನು ನೋಡಿದ್ದಾರೋ ನಾನೂ ಅಷ್ಟೇ ಭವಿಷ್ಯ ಕಾಲವನ್ನು ನೋಡಿದ್ದೇನೆ. ಅವರಿಗೆ 60 ವರ್ಷಗಳ ರಾಜಕೀಯದ ಅನುಭವವಿದ್ದರೆ, ನನಗೆ 40 ವರ್ಷಗಳ ಅನುಭವವಿದೆ' ಎಂದರು.

'136ಕ್ಕೂ ಹೆಚ್ಚು ಸೀಟುಗಳು ನಮ್ಮ ಬಳಿ ಇವೆ. ಅವರು ತಮ್ಮ ಪಕ್ಷ ಜೀವಂತವಾಗಿ ಇರುತ್ತದೆಯೋ ಇಲ್ಲವೋ ಎಂಬುದನ್ನು ಮೊದಲು ಹೇಳಲಿ. ಜೆಡಿಎಸ್ ಬಿಜೆಪಿಯಲ್ಲಿ ವಿಲೀನವಾಗುತ್ತದೆಯೇ ಅಥವಾ ತನ್ನದೇ ಪ್ರತ್ಯೇಕ ಅಸ್ತಿತ್ವ ಉಳಿಸಿಕೊಳ್ಳಲಿದೆಯೇ ಎಂಬುದರ ಬಗ್ಗೆ ಜನರಿಗೆ ತಿಳಿಸಿಲಿ. ಅವರೇ ಕಟ್ಟಿದ ಪಕ್ಷ ಹಾಗೂ ಅದರ ಬಗ್ಗೆ ಅವರ ನಿಷ್ಠೆಯನ್ನು ನಾನು ಪ್ರಶ್ನೆ ಮಾಡುವುದಿಲ್ಲ. ನಮ್ಮ ಸರ್ಕಾರದ ಅಸ್ತಿತ್ವ ಪಕ್ಕಕ್ಕಿರಲಿ, ಅವರ ಪಕ್ಷದ ಅಸ್ತಿತ್ವವೇ ಈಗ ಇಲ್ಲವಲ್ಲ' ಎಂದರು.

ಸಂವಿಧಾನದ ಬಗ್ಗೆ ಬದ್ಧತೆ ಇದ್ದರೆ ಉಚ್ಛಾಟಿಸಲಿ: 'ಅಂಬೇಡ್ಕರ್ ಅವರೇ ಬಂದರೂ ಸಂವಿಧಾನ ಬದಲಾವಣೆ ಮಾಡುವುದಿಲ್ಲ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, 'ಪ್ರಧಾನಮಂತ್ರಿ ಈ ವಿಚಾರವಾಗಿ ಈಗ ಯಾಕೆ ಮಾತನಾಡುತ್ತಿದ್ದಾರೆಯೋ ಗೊತ್ತಿಲ್ಲ. ಸಂವಿಧಾನ ಬದಲಿಸುತ್ತೇವೆ ಎಂದ ಅವರ ಪಕ್ಷದ ನಾಯಕರುಗಳನ್ನು ಪಕ್ಷದಿಂದ ಉಚ್ಛಾಟನೆ ಮಾಡಲಿಲ್ಲ ಏಕೆ' ಎಂದು ಪ್ರಶ್ನಿಸಿದರು.

'ಮೋದಿಯವರಿಗೆ ಸಂವಿಧಾನದ ಬಗ್ಗೆ ಬದ್ಧತೆ ಇದ್ದರೆ ಸಂವಿಧಾನ ಬದಲಿಸುತ್ತೇವೆ ಎಂದು ಹೇಳಿದವರನ್ನು ತಮ್ಮ ಪಕ್ಷದಿಂದ ಮೊದಲು ಉಚ್ಛಾಟಿಸಲಿ. ಆಗ ಅವರ ಬದ್ಧತೆಯನ್ನು ನಾವು ಒಪ್ಪಬಹುದು. ಈಗ ಚುನಾವಣೆ ಬಂದಿದೆ ಎಂದು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ನಾವು ಸಂವಿಧಾನದ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸುತ್ತೇವೆ. ಬಿಜೆಪಿಗೆ 400 ಸೀಟು ಬಂದರೆ ಸಂವಿಧಾನ ಬದಲಿಸುತ್ತೇವೆ ಎಂದೆಲ್ಲಾ ಅವರ ಪಕ್ಷದ ನಾಯಕರು, ಅಭ್ಯರ್ಥಿಗಳು ಹೇಳುತ್ತಿದ್ದಾರೆ. ಇಷ್ಟು ದಿನ ಈ ವಿಚಾರವಾಗಿ ಮೌನವಾಗಿದ್ದು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಬಡವರು ಸೇರಿದಂತೆ ಎಲ್ಲ ವರ್ಗದವರು ಸಂವಿಧಾನಕ್ಕೆ ಅಪಾಯ ಬಂದಿದೆ, ನಮ್ಮ ಹಕ್ಕುಗಳಿಗೆ ಕುತ್ತು ಬಂದಿದೆ ಎಂದು ಧ್ವನಿ ಎತ್ತಿದ ನಂತರ ಈ ಹೇಳಿಕೆ ನೀಡಿದ್ದಾರೆ. ಇದು ರಾಜಕೀಯ ಹೇಳಿಕೆ' ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT