ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ: ಮತಕ್ಕಾಗಿ ಕೇರಳದ ಮೂಲಕ 120 ಕಿ.ಮೀ ಪ್ರಯಾಣ!

ನಕ್ಸಲರ ಸಂಚಾರ ಶಂಕೆ: ಬಿಗಿ ಭದ್ರತೆ
Published 26 ಏಪ್ರಿಲ್ 2024, 4:10 IST
Last Updated 26 ಏಪ್ರಿಲ್ 2024, 4:10 IST
ಅಕ್ಷರ ಗಾತ್ರ

ಮಡಿಕೇರಿ: ಇದೇ 26ರಂದು ನಡೆಯಲಿರುವ ಲೋಕಸಭೆ ಚುನಾವಣೆಯ ಪ್ರಯುಕ್ತ, 42 ಮತದಾರರ ಮತಗಳನ್ನು ಪಡೆಯಲು 15 ಸಿಬ್ಬಂದಿ ಗುರುವಾರ ಮುನ್ರೋಟ್‌ಗೆ ತೆರಳಲು 120 ಕಿ.ಮೀ ಪ್ರಯಾಣಿಸಿದ್ದರೆ, ಕಡಮಕಲ್ಲಿನ 180 ಮಂದಿಯ ಮತಗಳನ್ನು ಪಡೆಯಲು 30 ಸಿಬ್ಬಂದಿ 95 ಕಿ.ಮೀ ಪ್ರಯಾಣ ಕೈಗೊಂಡರು.

ಈ ಎರಡೂ ಮತಗಟ್ಟೆಗಳು ಮಡಿಕೇರಿ ತಾಲ್ಲೂಕಿಗೆ ಸೇರಿದ್ದು, ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮುನ್ರೋಟ್‌ನಲ್ಲಿರುವ ‌ಮತದಾರರು ಸುಮಾರು 8ರಿಂದ 10 ಕಿ.ಮೀ ದೂರದಲ್ಲಿ ಅಲ್ಲಲ್ಲಿ ನೆಲೆಸಿದ್ದಾರೆ. ಆ ಪ್ರದೇಶ ತಲುಪಲು ಸಿಬ್ಬಂದಿ ಕೇರಳ ರಾಜ್ಯ ಪ್ರವೇಶಿಸಿ ಪಾಣತ್ತೂರು, ಕೋಯಿಚಾಲ್, ಮಾಲಂ, ಚಿತ್ತಾರಿಕಲ್, ಪಾಲಂಬೈಲ್‌ ಮೂಲಕ ಪ್ರಯಾಣಿಸಬೇಕಿದೆ.

‘ಭಾಗಮಂಡಲ ಗ್ರಾಮ ಪಂಚಾಯಿತಿಯ ಮುನ್ರೋಟ್‌ನ ಗ್ರಾಮಸ್ಥರು ಪಂಚಾಯಿತಿ ಕೇಂದ್ರಕ್ಕೆ ಬರಬೇಕಾದರೆ 88 ಕಿ.ಮೀ ಪ್ರಯಾಣಿಸಬೇಕು. ಇಲ್ಲಿ ವಲಯ ಅರಣ್ಯಾಧಿಕಾರಿ ಕಚೇರಿಯಲ್ಲಿ ಮತಗಟ್ಟೆ ಸ್ಥಾಪಿಸಲಾಗಿದ್ದು, ಅಲ್ಲಿಗೆ ತಲುಪಲು ಜೀಪ್‌ಗಳನ್ನು ಬಾಡಿಗೆಗೆ ಪಡೆದೇ ಬರಬೇಕು’ ಎಂದು ಸ್ಥಳೀಯರಾದ ಬೇಬಿ ಮ್ಯಾಥ್ಯೂ ಪ್ರತಿಕ್ರಿಯಿಸಿದರು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಮತಗಟ್ಟೆ ಅಧಿಕಾರಿ ಹಾಗೂ ತಲಕಾವೇರಿ ವನ್ಯಜೀವಿ ವಲಯದ ವಲಯ ಅರಣ್ಯಾಧಿಕಾರಿ ಕೆ.ಕ್ರೊಟೇಶ್, ‘ಮತದಾನಕ್ಕಾಗಿ ಎಲ್ಲ ಸಿದ್ದತೆಗಳೂ ಪೂರ್ಣಗೊಂಡಿವೆ. ಸುಮಾರು 4 ಗಂಟೆಗಳಷ್ಟು ದೀರ್ಘ ಪ್ರಯಾಣ ಮಾಡಬೇಕು’ ಎಂದರು.

ಭಾಗಮಂಡಲಕ್ಕೂ ಮುನ್ರೋಟ್‌ಗೂ ಇರುವ ದೂರ ಕೇವಲ 18 ಕಿ.ಮೀ. ಆದರೆ, ದಟ್ಟ ಅರಣ್ಯವಿರುವುದರಿಂದ ಇಲ್ಲಿ ಸಂಚಾರ ಸಾಧ್ಯವಿಲ್ಲ. ಹಾಗಾಗಿ, ಅನಿವಾರ್ಯವಾಗಿ 88 ಕಿ.ಮೀ ಕ್ರಮಿಸಿ, ಕೇರಳ ರಾಜ್ಯದ ಗಡಿ ದಾಟಿಯೇ ಬರಬೇಕು.

ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗ ಕಡಮಕಲ್‌ ಮತಗಟ್ಟೆಗೆ 95 ಕಿ.ಮೀ ಪ್ರಯಾಣಿಸಬೇಕು. ಕೆಲ ದಿನಗಳ ಹಿಂದೆಯಷ್ಟೇ ಇಲ್ಲಿ ಶಂಕಿತ ನಕ್ಸಲರು ಅಂಗಡಿಯೊಂದರಲ್ಲಿ ಹೆಚ್ಚು ದಿನಸಿ ಖರೀದಿಸಿ ಕಾಡಿನೊಳಗೆ ಹೋಗಿದ್ದರು ಎಂಬ ಕಾರಣಕ್ಕೆ ನಕ್ಸಲ್ ನಿಗ್ರಹ ಪಡೆ ಕೂಂಬಿಂಗ್ ನಡೆಸಿತ್ತು. ಹಾಗಾಗಿ, ಇಲ್ಲಿಗೆ ಹೆಚ್ಚುವರಿ ಭದ್ರತೆ ನೀಡಲಾಗಿದೆ. ಈ ಒಂದು ಮತಗಟ್ಟೆ ವ್ಯಾಪ್ತಿಯಲ್ಲಿರುವ 180 ಮತದಾರರ ಮತಗಳನ್ನು ಪಡೆಯಲು ಒಟ್ಟು ಸಿಬ್ಬಂದಿ 3 ಗಂಟೆಗಳ ಕಾಲ ಪ್ರಯಾಣಿಸಿ ಬಂದಿದ್ದಾರೆ.

ಇಲ್ಲಿನ ಮತಗಟ್ಟೆ ಅಧಿಕಾರಿ ಹಾಗೂ ಮಡಿಕೇರಿ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡೇಗೌಡ ಪ್ರತಿಕ್ರಿಯಿಸಿ, ‘ಕಡಮಕಲ್ಲು ಮತಗಟ್ಟೆಯಲ್ಲಿ ಮತದಾನಕ್ಕೆ ಸಕಲ ಸಿದ್ಧತೆಗಳೂ ಪೂರ್ಣಗೊಂಡಿವೆ. ಎಲ್ಲ ಮೂಲಸೌಕರ್ಯಗಳೂ ಇವೆ’ ಎಂದು ತಿಳಿಸಿದರು.

ಕಡಮಕಲ್ಲು ಮಡಿಕೇರಿಯಿಂದ ಕೇವಲ 20 ಕಿ.ಮೀ ದೂರದಲ್ಲಿದೆ. ಆದರೆ, ಇಲ್ಲೂ ದಟ್ಟ ಅರಣ್ಯ ಇರುವುದರಿಂದ ಈ ಮಾರ್ಗದಲ್ಲಿ ಸಂಚಾರ ಸಾಧ್ಯವಿಲ್ಲ. ಕೊಡಗಿನ ಗಡಿ ದಾಟಿ, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಮೂಲಕವೇ ಇಲ್ಲಿಗೆ ಬರಬೇಕು.

ಕೊಡಗು ಜಿಲ್ಲೆಯಲ್ಲಿದೆ ಅತಿ ದೂರದ ಮತಗಟ್ಟೆಗಳು ಎರಡೂ ಮತಗಟ್ಟೆಗಳ ಪ್ರಯಾಣಕ್ಕೆ ಕೊಡಗಿನ ಗಡಿ ದಾಟಬೇಕಿದೆ ಭದ್ರತೆ ದೃಷ್ಟಿಯಿಂದ ಹೆಚ್ಚು ಸಿಬ್ಬಂದಿ ನಿಯೋಜನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT