ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ಸೋತ ನೆಲದಲ್ಲೇ ಎದ್ದು ನಿಲ್ಲುವರೇ ಎಚ್‌ಡಿಕೆ?

ಅನಾರೋಗ್ಯ, ಅನುಕಂಪದ ಬೆನ್ನೇರಿ ಮಂಡ್ಯಕ್ಕೆ ಬರುತ್ತಿದ್ದಾರೆ ಕುಮಾರಸ್ವಾಮಿ
Published 27 ಮಾರ್ಚ್ 2024, 4:25 IST
Last Updated 27 ಮಾರ್ಚ್ 2024, 4:25 IST
ಅಕ್ಷರ ಗಾತ್ರ

ಮಂಡ್ಯ: ‘ಕಳೆದ ಲೋಕಸಭಾ ಚುನಾವಣೆಯಲ್ಲಿ ಪುತ್ರ ನಿಖಿಲ್‌ ಸೋಲು ಕಂಡ ನೆಲದಲ್ಲೇ ಗೆಲ್ಲಬೇಕೆಂದು ಎಚ್‌.ಡಿ.ಕುಮಾರಸ್ವಾಮಿ ಈ ಬಾರಿ ತಾವೇ ಅಭ್ಯರ್ಥಿಯಾಗುತ್ತಿದ್ದಾರೆ’ ಎಂಬ ಮಾತುಗಳು ಜಿಲ್ಲೆಯಾದ್ಯಂತ ಹರಿದಾಡುತ್ತಿವೆ.

ನಿಖಿಲ್‌ ಸೋಲನ್ನು, ಆಗ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರದ್ದೇ ಸೋಲು ಎಂದು ಬಿಂಬಿಸಲಾಗಿತ್ತು. ‘ಮಂಡ್ಯ ಜನ ಸೋಲಿಸಿಲ್ಲ, ವಿರೋಧಿಗಳ ಕುತಂತ್ರದಿಂದ ಸೋಲಾಯಿತು’ ಎಂದು ಹೇಳುತ್ತಿದ್ದ ಅವರು ಸೋತ ನೆಲದಲ್ಲೇ ಕಣಕ್ಕಿಳಿಯುತ್ತಿದ್ದಾರೆ.

ಕಳೆದ ಬಾರಿಯ ಸೋಲಿನ ಅನುಕಂಪ, ಸದ್ಯದ ಅನಾರೋಗ್ಯ ಸೇರಿದಂತೆ ಭಾವನಾತ್ಮಕ ವಿಚಾರಗಳನ್ನು ಮುನ್ನೆಲೆಗೆ ತಂದು ಮತಯಾಚಿಸಲಿದ್ದಾರೆ ಎಂಬ ಅಂಶಗಳು ಚರ್ಚೆಯಾಗುತ್ತಿವೆ.

ಶಸ್ತ್ರಚಿಕಿತ್ಸೆಗೆ ತೆರಳುವ ಮೊದಲು, ನಗರದಲ್ಲಿ ನಡೆದ ಸಭೆಯಲ್ಲಿ ಕುಮಾರಸ್ವಾಮಿ ಅವರು, ‘ಹಾಸನ ನನ್ನ ಜನ್ಮಭೂಮಿ, ರಾಮನಗರ ಕರ್ಮಭೂಮಿ. ಎರಡಕ್ಕೂ ಮಿಗಿಲಾಗಿ ಮಂಡ್ಯ ನನ್ನ ಹೃದಯದಲ್ಲಿದೆ, ಅದರ  ಋಣ ತೀರಿಸುವೆ’ ಎಂದಿದ್ದರು.

2018ರ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಏಳೂ ಕ್ಷೇತ್ರಗಳಲ್ಲಿ ಜೆಡಿಎಸ್‌ ಗೆದ್ದಿತ್ತು. ‘ಆಗ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲು ಮಂಡ್ಯ ಕೊಡುಗೆ ದೊಡ್ಡದು’ ಎಂದೇ ಬಣ್ಣಿಸಲಾಗಿತ್ತು. ಅದಕ್ಕೆ ಅವರು ‘ಮಂಡ್ಯ ಋಣ’ ಎಂದಿದ್ದರು.

‘ಮಂಡ್ಯ ಜನ ಭಾವನಾತ್ಮಕ ವಿಚಾರಗಳಿಗೆ ಹೆಚ್ಚು ಸ್ಪಂದಿಸುತ್ತಾರೆ. ಆದ್ದರಿಂದಲೇ ಸುಮಲತಾ ಗೆದ್ದಿದ್ದರು. ಕುಮಾರಸ್ವಾಮಿ ಅವರಿಗೆ ಈ ಸತ್ಯದ ಅರಿವಾಗಿದ್ದು, ಈ ಬಾರಿ ಮಂಡ್ಯ ಋಣದ ವಿಚಾರವನ್ನೂ ಚುನಾವಣಾ ಅಸ್ತ್ರವನ್ನಾಗಿಸಿಕೊಳ್ಳಲಿದ್ದಾರೆ’ ಎಂದು ಸ್ಥಳೀಯ ಮುಖಂಡರೊಬ್ಬರು ತಿಳಿಸಿದರು.

ಕ್ಷೇತ್ರಾಂತರ; ಮಂಡ್ಯ ಕ್ಷೇತ್ರದಲ್ಲಿ ಸ್ಪರ್ಧಿಸುವುದರೊಂದಿಗೆ ಕುಮಾರಸ್ವಾಮಿ ಮತ್ತೊಮ್ಮೆ ಕ್ಷೇತ್ರಾಂತರ ಮಾಡುತ್ತಿರುವುದು ಖಾತ್ರಿಯಾಗಿದೆ. ಕನಕಪುರ ಲೋಕಸಭಾ ಕ್ಷೇತ್ರದಿಂದ ರಾಜಕೀಯ ಜೀವನ ಆರಂಭಿಸಿದ ಅವರು ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಕ್ಷೇತ್ರ‌ದಲ್ಲೂ ಅದೃಷ್ಟ ಪರೀಕ್ಷಿಸಿದ್ದರು.

ಸ್ಪರ್ಧಿಸಿದ ಒಟ್ಟು 5 ಲೋಕಸಭಾ ಚುನಾವಣೆಗಳ ಪೈಕಿ 2 ಬಾರಿ ಗೆದ್ದು, 3 ಬಾರಿ ಸೋತಿರುವ ಅವರು, 6ನೇ ಚುನಾವಣೆಗೆ ಅಣಿಯಾಗುತ್ತಿದ್ದಾರೆ. 1996ರಲ್ಲಿ ಕನಕಪುರದಲ್ಲಿ ಗೆದ್ದು ಸಂಸದರಾಗಿದ್ದರು. 1998, 1999ರ ಚುನಾವಣೆಗಳಲ್ಲಿ ಅಲ್ಲಿಯೇ ಸೋತಿದ್ದರು. 2009ರಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಗೆದ್ದಿದ್ದರು.

‘ಎಚ್‌.ಡಿ.ಕುಮಾರಸ್ವಾಮಿ ಅಥವಾ ನಿಖಿಲ್‌ – ಇಬ್ಬರಲ್ಲಿ ಒಬ್ಬರು ಸ್ಪರ್ಧಿಸಬೇಕೆಂದು ಒತ್ತಾಯಿಸಿದ್ದೆವು. ಅದರಂತೆ ಸ್ಪರ್ಧಿಸುತ್ತಿರುವ ಕುಮಾರಣ್ಣನವರನ್ನು ಸ್ವಾಗತಿಸುತ್ತೇವೆ’ ಎಂದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಡಿ.ರಮೇಶ್‌ ಹೇಳಿದರು.

ಸಭೆ ಬಳಿಕ ಸುಮಲತಾ ತೀರ್ಮಾನ ಬಿಜೆಪಿ

ಟಿಕೆಟ್‌ಗಾಗಿ ದೆಹಲಿ ಮಟ್ಟದಲ್ಲಿ ತೀವ್ರ ಪ್ರಯತ್ನ ನಡೆಸಿದ್ದ ಸಂಸದೆ ಸುಮಲತಾ ಅವರು ಈಗ ಅತಂತ್ರರಾಗಿದ್ದಾರೆ. ಅವರ ಮುಂದಿನ ನಡೆ ಏನು ಎಂಬ ಬಗ್ಗೆ ಕ್ಷೇತ್ರದಲ್ಲಿ ಕುತೂಹಲ ಮೂಡಿದೆ. ‘ಮುಂದಿನ ನಡೆ ಬಗ್ಗೆ ಶೀಘ್ರ ಮಂಡ್ಯದಲ್ಲಿ ಬೆಂಬಲಿಗರ ಸಭೆ ನಡೆಸಲು ಸುಮಲತಾ ಅವರು ತೀರ್ಮಾನಿಸಿದ್ದಾರೆ. ನಂತರ ತೀರ್ಮಾನ ತಿಳಿಸಲಿದ್ದಾರೆ’ ಎಂದು ಸುಮಲತಾ ಬೆಂಬಲಿಗ ಹನಕೆರೆ ಶಶಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT