ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನ ಮಾತು ತಿರುಚಿ ಹಂಚಿಕೆ: ಸಚಿವ ಭಗವಂತ ಖೂಬಾ ಆರೋಪ

Published 30 ಏಪ್ರಿಲ್ 2024, 12:32 IST
Last Updated 30 ಏಪ್ರಿಲ್ 2024, 12:32 IST
ಅಕ್ಷರ ಗಾತ್ರ

ಬೀದರ್‌: ‘ಗೃಹಸಚಿವ ಅಮಿತ್‌ ಶಾ ಅವರ ಭಾಷಣ ತಿರುಚಿದಂತೆ ನಾನು ಔರಾದ್‌ ತಾಲ್ಲೂಕಿನ ಧೂಪತಮಹಾಗಾಂವ್‌ನಲ್ಲಿ ಆಡಿದ ಮಾತುಗಳನ್ನು ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆ ಮಾಡಲಾಗುತ್ತಿದೆ’ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಆರೋಪಿಸಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವೈರಲ್‌ ಥಾಟ್ಸ್‌’ ಎಂಬ ನಕಲಿ ಫೇಸ್‌ಬುಕ್‌ ಖಾತೆ ತೆರೆದು ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿರುವವರಿಗೆ ಚುನಾವಣೆಯಲ್ಲಿ ಜನರೇ ತಕ್ಕ ಪಾಠ ಕಲಿಸುವರು ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ಸೋಲಿನ ಭೀತಿಯಿಂದ ಅಧಿಕಾರಿಗಳನ್ನು ಪ್ರಚಾರ ಕಾರ್ಯದಲ್ಲಿ ಬಳಸಿ ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಭಾಲ್ಕಿ ಎಂಜಿನಿಯರಿಂಗ್‌ ಕಾಲೇಜು, ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಎಲ್ಲ ಶಾಲಾ, ಕಾಲೇಜುಗಳ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಪಿ.ಕೆ.ಪಿ.ಎಸ್‌. ಕಾರ್ಯದರ್ಶಿಗಳನ್ನು ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ, ಜಿಲ್ಲಾಧಿಕಾರಿ ಇದರಲ್ಲಿ ಯಾರು ಶಾಮಿಲಾಗಿಲ್ಲ ಎಂದು ಹೇಳಿದ್ದರು. ಆದರೆ, ನಿನ್ನೆ ಕರ್ತವ್ಯಲೋಪ ಎಸಗಿದ ನಾಲ್ವರು ಪಿ.ಕೆ.ಪಿ.ಎಸ್ ಕಾರ್ಯದರ್ಶಿಗಳನ್ನು ಅಮಾನತು ಮಾಡುವ ಮೂಲಕ ಖಂಡ್ರೆ ಅವರ ಅಧಿಕಾರ ದುರ್ಬಳಕೆ ಹೊರಬಿದ್ದಿದೆ ಎಂದರು.

ಇತ್ತೀಚೆಗೆ ಕಲಬುರಗಿಯಲ್ಲಿ ಶರಣು ಮೋದಿಯಿಂದ ಜಪ್ತಿ ಮಾಡಲಾದ ₹2 ಕೋಟಿ ಹಣ ನಿಮ್ಮದೇ ಎಂಬುದು ಸಾಬೀತಾಗಿದೆ. ಈ ಎಲ್ಲ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ನೀಡಿಲ್ಲ. ಸುಳ್ಳು ಹೇಳುವುದರಲ್ಲಿ ಸಾಗರ್‌ ಖಂಡ್ರೆ ಅವರು ತಂದೆ ಈಶ್ವರ ಬಿ. ಖಂಡ್ರೆ ಅವರನ್ನೇ ಮೀರಿಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಸುಳ್ಳು ಮಾಹಿತಿ ಕೊಟ್ಟಿದ್ದಾರೆ. ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಪ್ರಾಮಾಣಿಕರಾಗಿ ವರ್ತಿಸಬೇಕು. ಅಧಿಕಾರ ದುರುಪಯೋಗಪಡಿಸಿಕೊಂಡರೆ ಆಯೋಗಕ್ಕೆ ದೂರು ಸಲ್ಲಿಸಲಾಗುವುದು ಎಂದು ಎಚ್ಚರಿಸಿದರು.

ಲೋಕಸಭೆ ಚುನಾವಣೆ ಬಳಿಕ ರಾಜ್ಯ ಸರ್ಕಾರ ಪತನವಾಗುವುದು ಗ್ಯಾರಂಟಿ. ಡಿ.ಸಿ.ಸಿ ಬ್ಯಾಂಕ್‌ನಲ್ಲಿ ಅಧಿಕಾರ ಕಳೆದುಕೊಳ್ಳುವುದು ಪಕ್ಕಾ. ಮತ್ತೆ ಉಮಾಕಾಂತ ನಾಗಮಾರಪಳ್ಳಿ ಬ್ಯಾಂಕ್‌ ಅಧ್ಯಕ್ಷರಾಗುವುದು ಶತಃಸಿದ್ದ. ಎಷ್ಟೇ ಪ್ರಯತ್ನ ಪಟ್ಟರೂ ಕನಿಷ್ಠ ಮೂರು ಲಕ್ಷ ಮತಗಳ ಅಂತರದಿಂದ ಸೋಲಿಸುವುದು ಗ್ಯಾರಂಟಿ ಎಂದು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ ಮಾತನಾಡಿ, ಮೇ 2ರಂದು 11ಕ್ಕೆ ನಗರದ ಬಿಜೆಪಿ ಕಚೇರಿಯಲ್ಲಿ ನಡೆಯಲಿರುವ ಸಭೆ ಉದ್ದೇಶಿಸಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಮಾತನಾಡುವರು. ಅಂದು ಮಧ್ಯಾಹ್ನ 2ಕ್ಕೆ ಮಾದಿಗ ಸಮಾಜದ ರಾಷ್ಟ್ರೀಯ ಮುಖಂಡ ಮಂದಾಕೃಷ್ಣ ಮಾದಿಗ ಅವರು ನಗರದ ಸಾಯಿ ಶಾಲೆ ಆವರಣದಲ್ಲಿ ಮಾದಿಗ ಸಮಾವೇಶವನ್ನು ಉದ್ದೇಶಿಸಿ ಮಾತನಾಡುವರು. ಸಂಜೆ 6ಕ್ಕೆ ಬಸವಕಲ್ಯಾಣದ ಅಕ್ಕಮಹಾದೇವಿ ಕಾಲೇಜು ಮೈದಾನದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರು ಮರಾಠ ಸಮಾಜದ ಪ್ರಚಾರ ಸಭೆಯಲ್ಲಿ ಭಾಗವಹಿಸುವರು ಎಂದು ವಿವರಿಸಿದರು.

ಬಿಜೆಪಿ ಕಲಬುರಗಿ ವಿಭಾಗೀಯ ಸಹ ಪ್ರಭಾರಿ ಈಶ್ವರ ಸಿಂಗ್ ಠಾಕೂರ್, ಮುಖಂಡರಾದ ಬಾಬುವಾಲಿ, ಬಸವರಾಜ ಪವಾರ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT