ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ ಲೋಕಸಭಾ ಕ್ಷೇತ್ರ: ಕಾಂಗ್ರೆಸ್‌ನಲ್ಲಿ ಬಂಡಾಯದ ಬಿಸಿ

ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಜಿ.ಬಿ.ವಿನಯ್‌ಕುಮಾರ್ ಘೋಷಣೆ
Published 8 ಏಪ್ರಿಲ್ 2024, 23:30 IST
Last Updated 8 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ದಾವಣಗೆರೆ: ಇನ್‌ಸೈಟ್ಸ್‌ ಐಎಎಸ್ ಸಂಸ್ಥೆಯ ಸಂಸ್ಥಾಪಕ, ಕಾಂಗ್ರೆಸ್‌ ಮುಖಂಡ ಜಿ.ಬಿ. ವಿನಯ್‌ಕುಮಾರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಧ್ಯಸ್ಥಿಕೆಯ ಹೊರತಾಗಿಯೂ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಗಿನೆಲೆ ಪೀಠದ ನಿರಂಜನಾನಂದಪುರಿ ಸಮ್ಮುಖದಲ್ಲಿ ಭಾನುವಾರ ‘ಸ್ಪರ್ಧೆ ಬೇಡ’ ಎಂದು ಮನವೊಲಿಸುವ ಪ್ರಯತ್ನ ಮಾಡಿದ್ದರೂ ಅದು ಫಲ ನೀಡಿಲ್ಲ. ಸೋಮವಾರ ಇಲ್ಲಿ ತಮ್ಮ ಬೆಂಬಲಿಗರ ಸಭೆ ನಡೆಸಿದ ಬಳಿಕ ವಿನಯ್‌ಕುಮಾರ್ ಸ್ಪರ್ಧಿಸುವುದಾಗಿ ಘೋಷಿಸಿದರು.

‘ಚುನಾವಣೆಯಲ್ಲಿ ಗೆದ್ದ ಬಳಿಕ ಸಿದ್ದರಾಮಯ್ಯ ಅವರಿಗೆ ಮುಖ ತೋರಿಸುತ್ತೇನೆ. ನಾಯಕರ ಮಾತಿಗಿಂತ ಜನರ ಅಭಿಪ್ರಾಯಕ್ಕೆ ನಾನು ಮನ್ನಣೆ ನೀಡುತ್ತೇನೆ. ಇದೊಂದು ಧರ್ಮ ಸಂಕಟ. ಪಕ್ಷೇತರ ಸ್ಪರ್ಧೆ ಸುಲಭ ಅಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ, ನಾನು ಜನರ ತೀರ್ಮಾನದಂತೆ ಸ್ಪರ್ಧಿಸುವ ತೀರ್ಮಾನ ಮಾಡಿದ್ದೇನೆ’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಎರಡು ಪ್ರಮುಖ ಪಕ್ಷಗಳಲ್ಲೂ ಕುಟುಂಬ ರಾಜಕಾರಣ ನಡೆಯುತ್ತಿರುವುದರಿಂದ ಜನರಲ್ಲಿ ಅಸಮಾಧಾನವಿದೆ. ಇಬ್ಬರ ವಿರುದ್ಧವೂ ಜನರು ಮತ ಚಲಾಯಿಸಲಿದ್ದು, ಆ ಮತಗಳು ನನಗೆ ಬೀಳಲಿವೆ. ಹೊಸಬರಿಗೆ ಅವಕಾಶ ಸಿಗಬೇಕು ಎಂದೇ ನನ್ನ ಹೋರಾಟ. ನನಗೆ ಇಬ್ಬರೂ ಎದುರಾಳಿಗಳೇ’ ಎಂದು ಸುದ್ದಿಗಾರರಿಗೆ ತಿಳಿಸಿದರು.

‘ಮುಖ್ಯಮಂತ್ರಿಗಳ ಜೊತೆ ಭಾನುವಾರ ಸಮಾಲೋಚನೆ ನಡೆಯಿತಷ್ಟೇ. ಅಂತಿಮವಾಗಿ ಏನನ್ನೂ ಹೇಳಿಲ್ಲ. ಇದೊಂದು ಪೊಲಿಟಿಕಲ್ ಸೂಯಿಸೈಡ್ ಅನಿಸಬಹುದು. ಆದರೆ ಕುಟುಂಬದವರು ಹಾಗೂ ಕ್ಷೇತ್ರದ ಜನರ ಜೊತೆ ಚರ್ಚಿಸಿ ನಿರ್ಧಾರ ತೆಗೆದುಕೊಂಡಿದ್ದೇನೆ. ನಾಮಪತ್ರ ಸಲ್ಲಿಸಿದ ಮೇಲೆ ಯಾವುದೇ ಒತ್ತಡ ಬಂದರೂ ವಾಪಸ್‌ ತೆಗೆದುಕೊಳ್ಳುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ಸಚಿವ ಈಶ್ವರ ಖಂಡ್ರೆ ಅವರ ಪುತ್ರನಿಗೆ ಟಿಕೆಟ್ ನೀಡಲಾಗಿದೆ. ಅವರಿಗೆ ಇಲ್ಲದ ಮಾನದಂಡ ನನಗೇಕೆ? 
–ಜಿ.ಬಿ. ವಿನಯ್‌ಕುಮಾರ್, ಕಾಂಗ್ರೆಸ್‌ ಮುಖಂಡ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT