ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಧಾನಿ ಮೋದಿ ವೇಷಕ್ಕೆ ಕುರುಬರು ಯಾಮಾರಬೇಡಿ: ಸಿದ್ದರಾಮಯ್ಯ

Published 3 ಮೇ 2024, 16:15 IST
Last Updated 3 ಮೇ 2024, 16:15 IST
ಅಕ್ಷರ ಗಾತ್ರ

ರಾಣೆಬೆನ್ನೂರು (ಹಾವೇರಿ): ‘ರಾಜ್ಯದಲ್ಲಿ ಒಬ್ಬೇ ಒಬ್ಬ ಕುರುಬರಿಗೂ ಟಿಕೆಟ್ ನೀಡದ ನರೇಂದ್ರ ಮೋದಿ ಕರ್ನಾಟಕಕ್ಕೆ ಬಂದು ಕರಿ ಕಂಬಳಿ ವೇಷ ಹಾಕಿಕೊಂಡು ಡ್ರಾಮಾ ಮಾಡ್ತಾವ್ರೆ. ಕುರುಬರು ಈ ಬಾರಿ ದಯಮಾಡಿ ಯಾಮಾರ ಬೇಡಿ. ಬಿಜೆಪಿಗೆ ಮತ ಹಾಕಿ ಮೋಸ ಹೋಗಬೇಡಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. 

ಪಟ್ಟಣದಲ್ಲಿ ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರ ಚುನಾವಣಾ ಪ್ರಚಾರಾರ್ಥ ಶುಕ್ರವಾರ ಆಯೋಜಿಸಿದ್ದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಆರೋಪಗಳ ಸುರಿಮಳೆಗೈದರು. 

ಈ ಬಾರಿ ಎನ್‌ಡಿಎ ಅಧಿಕಾರಕ್ಕೆ ಬರುವುದಿಲ್ಲ ಎನ್ನುವುದು ಖಚಿತವಾಗಿ ಮೋದಿ ಹತಾಶರಾಗಿದ್ದಾರೆ. ಬಾಯಿಗೆ ಬಂದಂತೆ ಸುಳ್ಳುಗಳ ಸುರಿಮಳೆ ಸುರಿಸುತ್ತಿದ್ದಾರೆ. ‘ರಾಜ್ಯ ಆರ್ಥಿಕವಾಗಿ ದಿವಾಳಿಯಾಗಿದೆ. ಕಾಂಗ್ರೆಸ್ ಹಿಂದುಳಿದವರ ಮೀಸಲಾತಿ ಕಿತ್ತುಕೊಳ್ಳುತ್ತದೆ’ ಎನ್ನುವ ಸುಳ್ಳುಗಳನ್ನು ಸೃಷ್ಟಿಸಿ, ಹಿಂದುಳಿದವರನ್ನು ‘ಬಕ್ರಾ’ ಮಾಡಬಹುದು ಎಂದುಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು. 

ಸಂವಿಧಾನ ಓದಿಕೊಳ್ಳಿ ಮೋದಿ: ಮೋದಿಯವರೇ ಸಂವಿಧಾನ ಓದಿ, ನಿಮಗೆ ಓದಲು ಆಗದಿದ್ದರೆ ಯಾರಿಂದಲಾದರೂ ಓದಿಸಿ ತಿಳಿದುಕೊಳ್ಳಿ. ಮಂಡಲ್ ವರದಿಯನ್ನು ವಿರೋಧಿಸಿ ರಥಯಾತ್ರೆ ನಡೆಸಿ ಅಮಾಯಕ ಹಿಂದುಳಿದ ಮಕ್ಕಳನ್ನು ಆತ್ಮಹತ್ಯೆಗೆ ಪ್ರಚೋದಿಸಿ ದೂಡಿದ್ದು ನಿಮ್ಮವರೇ ಅಲ್ಲವೇ ಮೋದಿ? ಮಹಿಳೆಯರಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ಕೊಟ್ಟಾಗ ಇದನ್ನು ವಿರೋಧಿಸಿ ನ್ಯಾಯಾಲಯಕ್ಕೆ ಹೋಗಿದ್ದು ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ ರಾಮಾ ಜೋಯಿಸ್ ಅಲ್ಲವೇ ಮೋದಿಜಿ. ನಿಮಗೆ ತಿಳಿವಳಿಕೆ ಇಲ್ಲದಿದ್ದರೆ ಸ್ವಲ್ಪ ಓದಿ ತಿಳಿದುಕೊಳ್ಳಿ ಎಂದರು.

ಚೆಂಬು ನೀಡಿದ ಮೋದಿ: ರಾಜ್ಯಕ್ಕೆ ಹಾವೇರಿ ಗದಗ ಜಿಲ್ಲೆಗೆ ಮುಖ್ಯಮಂತ್ರಿಯಾಗಿ ನಯಾಪೈಸೆ ಅನುಕೂಲ ಮಾಡದ ಬೊಮ್ಮಾಯಿ ಅವರನ್ನು ಸೋಲಿಸಿ ಮನೆಗೆ ಕಳುಹಿಸಿ. ಬೆಲೆ ಏರಿಕೆಗೆ ಕಡಿವಾಣ ಹಾಕ್ತೀವಿ ಎಂದು ಜನರನ್ನು ನಂಬಿಸಿದ ಮೋದಿ ಅವರು ಗೆದ್ದು ಬಂದ ನಂತರ ಡೀಸೆಲ್,‌ ಪೆಟ್ರೋಲ್, ಗ್ಯಾಸ್, ರಸಗೊಬ್ಬರ, ಕಾಳುಬೇಳೆ ಎಲ್ಲದರ ಬೆಲೆಯನ್ನೂ ಆಕಾಶಕ್ಕೆ ಏರಿಸಿ ಭಾರತೀಯರ ಕೈಗೆ ಖಾಲಿ ಚೊಂಬು ನೀಡಿದರು. ರೈತರ ಆದಾಯ ದುಪ್ಪಟ್ಟು ಮಾಡುವುದಾಗಿ ನಂಬಿಸಿ ರೈತರ ಓಟು ಪಡೆದ ಮೋದಿ ಈಗ ರೈತರ ಖರ್ಚು ಮೂರು ಪಟ್ಟು ಆಗುವಂತೆ ಮಾಡಿ ರೈತರ ಕೈಗೂ ಖಾಲಿ ಚೊಂಬು ನೀಡಿದರು.

ನಮ್ಮ ಗ್ಯಾರಂಟಿ ಯೋಜನೆಗಳು ರಾಜ್ಯದ ಎಲ್ಲಾ ಜಾತಿ, ಎಲ್ಲಾ ಧರ್ಮಗಳ ಬಡವರು ಮತ್ತು ಮಧ್ಯಮ ವರ್ಗದವರಿಗೆ ಆರ್ಥಿಕ ಶಕ್ತಿ ನೀಡುವ ಐದು ಗ್ಯಾರಂಟಿಗಳನ್ನು ಜಾರಿ ಮಾಡಿ ನುಡಿದಂತೆ ನಡೆದಿದ್ದೇವೆ. ಎಐಸಿಸಿಯಿಂದ 25 ಗ್ಯಾರಂಟಿಗಳಿಗೆ ರಾಹುಲ್, ಖರ್ಗೆ ಸಹಿ ಮಾಡಿದ್ದಾರೆ. ರಾಜ್ಯದಲ್ಲಿ ನಾವು ಐದು ಗ್ಯಾರಂಟಿಗಳನ್ನು ಕೊಟ್ಟಂತೆ ರಾಷ್ಟ್ರೀಯ ಕಾಂಗ್ರೆಸ್ 25 ಗ್ಯಾರಂಟಿಗಳನ್ನು ಘೋಷಿಸಿದೆ ಎಂದರು. 

ಬಿಜೆಪಿಯು ಭಾರತೀಯರ ಭಾವನೆಗಳನ್ನು ಕೆರಳಿಸಿ ಬದುಕಿನ ಜತೆ ಚೆಲ್ಲಾಟ ಆಡುತ್ತದೆ. ಕಾಂಗ್ರೆಸ್ ಭಾರತೀಯರ ಭಾವನೆಗಳನ್ನು ಗೌರವಿಸುತ್ತಲೇ ಬದುಕನ್ನು ಮೇಲೆತ್ತುವ ಕೆಲಸ ಮಾಡುತ್ತದೆ ಎಂದರು.

‘ಮೋದಿ ಮಾತಿಗೆ ಬೊಮ್ಮಾಯಿ ಡ್ಯಾನ್ಸ್‌’

ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿ ಆಗಿದ್ದಾಗ ರಾಜ್ಯಕ್ಕೆ ಆಗಿರುವ ಅನ್ಯಾಯ ಸರಿಪಡಿಸಿ ಎಂದು ನಾವು ಹೇಳಿದರೆ, ಮೋದಿ ಹೇಳಿದಂತೆ ಡ್ಯಾನ್ಸ್‌ ಮಾಡಿಕೊಂಡು ಕಾಲ ಕಳೆದರು. ಮೋದಿ ಎದುರಿಗೆ ಹೆದರಿ, ಬೆದರಿ ನಿಂತು ರಾಜ್ಯದ ಪರವಾಗಿ ಮಾತನಾಡದೆ 40 ಪರ್ಸೆಂಟ್‌ ಕಮಿಷನ್ ಎಣಿಸಿಕೊಂಡು ತಾಕತ್ತು, ಧಮ್ಮು ಅಂತ ಡೈಲಾಗ್ ಹೇಳಿಕೊಂಡು ಓಡಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT