ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ ಲೋಕಸಭಾ ಕ್ಷೇತ್ರ: ಬಿಜೆಪಿ ಓಟಕ್ಕೆ ಬೀಳುವುದೇ ಕಾಂಗ್ರೆಸ್ ಲಗಾಮು?

Published 30 ಏಪ್ರಿಲ್ 2024, 22:30 IST
Last Updated 30 ಏಪ್ರಿಲ್ 2024, 22:30 IST
ಅಕ್ಷರ ಗಾತ್ರ

ಧಾರವಾಡ: ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ನೇರಾ ಹಣಾಹಣಿ ಏರ್ಪಟ್ಟಿದೆ. ಸತತ ನಾಲ್ಕು ಸಲ ಗೆದ್ದು ಐದನೇ ಸಲಕ್ಕೆ ಸ್ಪರ್ಧಿಸಿರುವ ಬಿಜೆಪಿಯ ಪ್ರಲ್ಹಾದ ಜೋಶಿ ಅವರಿಗೆ ಕಾಂಗ್ರೆಸ್‌ ಹೊಸಮುಖ ವಿನೋದ ಅಸೂಟಿ ಎದುರಾಳಿ ಆಗಿದ್ದಾರೆ. ಪ್ರಲ್ಹಾದ ಜೋಶಿ ಅವರಿಗೆ ದೀರ್ಘಕಾಲದ ರಾಜಕೀಯ ಅನುಭವವಿದ್ದರೆ, ವಿನೋದ ಅಸೂಟಿ ಕೆಲ ವರ್ಷಗಳಿಂದ ರಾಜಕಾರಣದ್ದಾರೆ. ಅವರು ಮೊದಲ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ.

ಒಟ್ಟು 17 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಪ್ರಲ್ಹಾದ ಜೋಶಿ ಅವರನ್ನು ಸೋಲಿಸುವ ಗುರಿಯೊಂದಿಗೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಗದಗ ಜಿಲ್ಲೆ ಶಿರಹಟ್ಟಿಯ ಭಾವೈಕ್ಯ ಪೀಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಅವರು ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಆದರೆ, ಜೋಶಿ ಮೇಲಿನ ಕೋಪ ಇನ್ನೂ ಶಮನಗೊಂಡಿಲ್ಲ.

ಜೋಶಿ ಬ್ರಾಹ್ಮಣ ಸಮುದಾದವರು, ಅಸೂಟಿ ಕುರುಬರು. ಕ್ಷೇತ್ರದ ಲೋಕಸಭಾ ಚುನಾವಣಾ ಚರಿತ್ರೆಯಲ್ಲಿ ಮತದಾರರು ಜಾತಿ ಮೀರಿ ಪ್ರೀತಿ ತೋರಿದ ನಿದರ್ಶನಗಳು ಇವೆ.1951ರಿಂದ 1991ರವರೆಗೆ ನಡೆದ ಚುನಾವಣೆಗಳಲ್ಲಿ ಸತತ ಗೆಲುವು ದಾಖಲಿಸಿದ ಕಾಂಗ್ರೆಸ್‌, 1996ರಿಂದ ಸತತ ಸೋಲುಂಡಿತು. 1996ರಿಂದ ಬಿಜೆಪಿ ಗೆಲುವಿನ ಅಲೆಯಲ್ಲಿದೆ.

ಹಾವೇರಿ ಜಿಲ್ಲೆಯ ಶಿಗ್ಗಾವಿ ಸಹಿತ 8 ವಿಧಾನಸಭಾ ಕ್ಷೇತ್ರಗಳು ಧಾರವಾಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇವೆ. ಬಿಜೆಪಿ ಮತ್ತು ಕಾಂಗ್ರೆಸ್‌ ಶಾಸಕರು ತಲಾ 4 ಕ್ಷೇತ್ರಗಳಲ್ಲಿ ಇದ್ದಾರೆ.

ಕಾಂಗ್ರೆಸ್‌ ಮನೆಯೊಳಗೆ ಕಾಲಿಟ್ಟು, ಪುನಃ ಬಿಜೆಪಿಗೆ ಮರಳಿದ ಜಗದೀಶ ಶಟ್ಟರ್‌ ಅವರು ಧಾರವಾಡ ಕ್ಷೇತ್ರದ ಬಿಜೆಪಿ ಟಿಕೆಟ್‌ ಮೇಲೆ ಕಣ್ಣಿಟ್ಟಿದ್ದರು. ಅದು ಸಾಧ್ಯವಾಗದ ಕಾರಣ ಲಿಂಗಾಯತ ಸಮುದಾಯದ ಶೆಟ್ಟರ್‌ ಅವರನ್ನು ಬೆಳಗಾವಿ ಕ್ಷೇತ್ರದಿಂದ ಕಣಕ್ಕಿಳಿಸಲಾಯಿತು. ಇದು ಕ್ಷೇತ್ರದಲ್ಲಿ ಬಿಜೆಪಿ ಪಾಳಯದಲ್ಲಿ ‘ಏಕ ಚಕ್ರಾಧಿಪತ್ಯ’ದ ಚರ್ಚೆ ಹುಟ್ಟುಹಾಕಿದೆ.

ಕಾಂಗ್ರೆಸ್‌ ಪಕ್ಷವು ಸಾಮಾಜಿಕ ನ್ಯಾಯ ಪಠಿಸುತ್ತಿದೆ. ‘ಟಿಕೆಟ್‌ ವಿಚಾರದಲ್ಲೂ ಅದನ್ನು ಪಾಲಿಸಿದ್ದೇವೆ’ ಎಂಬುದು ಆ ಪಕ್ಷದ ಊವಾಚ. ವಿನೋದ ಅವರು ಮೊದಲ ಪ್ರಯತ್ನದಲ್ಲೇ ವಿಜಯಮಾಲೆ ಹಾಕಿಕೊಳ್ಳಲು ಬೆವರಿಳಿಸುತ್ತಿದ್ದಾರೆ. 2013ರಿಂದ ಕಾಂಗ್ರೆಸ್‌ನಲ್ಲಿರುವ ಅವರು 2018ರಲ್ಲಿ ನವಲಗುಂದ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲುಂಡರು.

ನಾಲ್ಕು ಅವಧಿಯ ಅಭಿವೃದ್ಧಿ ಕಾರ್ಯ, ನರೇಂದ್ರ ಮೋದಿ ಪ್ರಭೆಯನ್ನು ಜೋಶಿ ನಂಬಿದ್ಧಾರೆ. ಕಾಂಗ್ರೆಸ್‌ನ ಪಂಚ ಗ್ಯಾರಂಟಿ ಕಾರ್ಯಕ್ರಮಗಳು ಕೈಹಿಡಿಯಲಿವೆ ಎಂಬ ನಿರೀಕ್ಷೆಯಲ್ಲಿ ವಿನೋದ ಅಸೂಟಿ ಇದ್ದಾರೆ.

ಈ ಎಲ್ಲದರ ಮಧ್ಯೆ ಹುಬ್ಬಳ್ಳಿಯ ಬಿವಿಬಿ ಕಾಲೇಜಿನ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಪ್ರಕರಣವು ರಾಜಕೀಯ ಚದುರಂಗದ ‘ದಾಳ’ ವಾಗಿ ಬಳಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಬಿಜೆಪಿ, ಕಾಂಗ್ರೆಸ್‌ ಮುಖಂಡರು ಅಲ್ಲದೇ ವಿವಿಧ ಸಂಘಸಂಸ್ಥೆಗಳ ಪ್ರತಿನಿಧಿಗಳು ನಿರಂತರವಾಗಿ ನೇಹಾ ಮನೆಗೆ ಭೇಟಿ ನೀಡಿ, ಸಾಂತ್ವನ ಹೇಳುತ್ತಿದ್ದಾರೆ. ಇದು ಮತದಾರರ ಮೇಲೆ ಪರಿಣಾಮ ಬೀರಬಹುದೇ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆದಿದೆ.

ಬರಗಾಲ
ಬರಗಾಲ
ಬರಗಾಲ
ಬರಗಾಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT