ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರ ಪರಿಹಾರ ಕೊಡುವುದು ಕೇಂದ್ರ ಸರ್ಕಾರದ ಕರ್ತವ್ಯ, ಭಿಕ್ಷೆಯಲ್ಲ: ಸಚಿವ ಮುನಿಯಪ್ಪ

Published 1 ಮೇ 2024, 13:18 IST
Last Updated 1 ಮೇ 2024, 13:18 IST
ಅಕ್ಷರ ಗಾತ್ರ

ಬೀದರ್‌: ‘ದೇಶದ ಯಾವುದೇ ರಾಜ್ಯದಲ್ಲಿ ಅತಿವೃಷ್ಟಿ, ಅನಾವೃಷ್ಟಿಯಿಂದ ಹಾನಿಯಾದರೆ ಅದಕ್ಕೆ ಪರಿಹಾರ ಕೊಡುವುದು ಕೇಂದ್ರ ಸರ್ಕಾರದ ಕರ್ತವ್ಯ ಹೊರತು ಭಿಕ್ಷೆಯಲ್ಲ’ ಎಂದು ಆಹಾರ ಸಚಿವ ಕೆ.ಎಚ್‌. ಮುನಿಯಪ್ಪ ಹೇಳಿದರು.

ರಾಜ್ಯಕ್ಕೆ ಬರ ಪರಿಹಾರ ಕೊಡದೆ ಕೇಂದ್ರದ ಬಿಜೆಪಿ ಸರ್ಕಾರ ಕರ್ನಾಟಕದ ಜನತೆಗೆ ಅಪಮಾನ ಮಾಡಿದೆ. ಇಷ್ಟೇ ಅಲ್ಲ, ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೂ ಅಪಮಾನ ಎಸಗಿದೆ ಎಂದು ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ಎಲ್ಲ ವಿಷಯಗಳಲ್ಲೂ ರಾಜಕಿಯ ಮಾಡಬಾರದು. ರಾಜಕೀಯವೇ ಬೇರೆ, ಬರ ಪರಿಹಾರವೇ ಬೇರೆ. ಕರ್ನಾಟಕಕ್ಕೆ ಬರ ಪರಿಹಾರ ಕೊಡಲು ಕೇಂದ್ರ ಅನಗತ್ಯ ವಿಳಂಬ ಮಾಡಿತು. ಅಂತಿಮವಾಗಿ ಸುಪ್ರೀಂಕೋರ್ಟ್‌ ಮೂಲಕ ರಾಜ್ಯಕ್ಕೆ ನ್ಯಾಯ ಸಿಕ್ಕಿದೆ. ಆದರೆ, ಸೂಕ್ತ ಪರಿಹಾರ ಇದುವರೆಗೆ ಬಿಡುಗಡೆಗೊಳಿಸಿಲ್ಲ. ಬರ ಪರಿಹಾರದ ಒಟ್ಟು ಮೊತ್ತದಲ್ಲಿ ಶೇ 19–20ರಷ್ಟು ಬಿಡುಗಡೆಗೊಳಿಸಿದ್ದಾರೆ. ಇದು ವ್ಯವಸ್ಥೆಗೆ ವಿರುದ್ಧವಾದ ಕೆಲಸ ಎಂದು ಕಿಡಿಕಾರಿದರು.

ಯುಪಿಎ ಸರ್ಕಾರದ ಅವಧಿಯಲ್ಲಿ ಮನಮೋಹನ್‌ ಸಿಂಗ್‌ ಅವರು ಪ್ರಧಾನಿ ಆಗಿದ್ದರು. ಒಡಿಶಾದಲ್ಲಿ ಅತಿವೃಷ್ಟಿಯಿಂದ ಬಹಳ ಹಾನಿ ಸಂಭವಿಸಿತ್ತು. ಸಿಂಗ್‌ ಅವರು ವೈಮಾನಿಕ ಸಮೀಕ್ಷೆ ನಡೆಸಿ, ಭುವನೇಶ್ವರದಲ್ಲಿಳಿದು ಅಲ್ಲಿಯೇ ಪರಿಹಾರ ಘೋಷಿಸಿದ್ದರು. ಯಾವುದೇ ರಾಜ್ಯ ಸಂಕಷ್ಟಕ್ಕೆ ಒಳಗಾದರೆ ಅದರೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂಬುದಕ್ಕೆ ಉತ್ತಮ ನಿದರ್ಶನ ಎಂದು ನೆನಪಿಸಿದರು.

ಈಗ ಲೋಕಸಭೆ ಚುನಾವಣೆ ನಡೆಯುತ್ತಿರುವುದರಿಂದ ಮಾದಿಗರಿಗೆ ಮೀಸಲಾತಿ ಕೊಡುವ ಮಾತುಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ಆಡುತ್ತಿದ್ದಾರೆ. ಅವರು ಅಧಿಕಾರಕ್ಕೆ ಬಂದು ಹತ್ತು ವರ್ಷಗಳಾದ ನಂತರ ಈಗೇಕೆ ಅದರ ಬಗ್ಗೆ ಮಾತನಾಡುತ್ತಿದ್ದಾರೆ. ಇಷ್ಟು ವರ್ಷಗಳವರೆಗೆ ಅವರೇನು ಮಾಡಿದರು. ಪ್ರಧಾನಿ ಹಿಂದೆಯೂ ಭರವಸೆ ಕೊಟ್ಟಿದ್ದರು. ಆದರೆ, ಅದರಂತೆ ನಡೆದುಕೊಳ್ಳದೇ ವಚನ ಭ್ರಷ್ಟರಾಗಿದ್ದಾರೆ. ಶೋಷಿತರಿಗೆ ಈ ದೇಶದಲ್ಲಿ ಏನಾದರೂ ಒಳ್ಳೆಯದು ಆಗಿದ್ದರೆ ಅದು ಕಾಂಗ್ರೆಸ್‌ ಪಕ್ಷದಿಂದ. ಹೀಗಾಗಿ ಅವರು ಯಾವುದೇ ಕಾರಣಕ್ಕೂ ಕಾಂಗ್ರೆಸ್‌ ಪಕ್ಷದಿಂದ ದೂರ ಹೋಗುವುದಿಲ್ಲ ಎಂದು ಭರವಸೆ ವ್ಯಕ್ತಪಡಿಸಿದರು.

ಹಿಂದುಳಿದ ವರ್ಗದವರ ಮೀಸಲಾತಿ ಕಸಿದುಕೊಂಡು ಮುಸ್ಲಿಮರಿಗೆ ಕೊಡುತ್ತೇವೆ ಎಂದು ಬಿಜೆಪಿ ಅಪಪ್ರಚಾರ ಮಾಡುತ್ತಿದೆ. ಮುಸ್ಲಿಮರು ಈ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಜೈಲು ಕಂಡಿದ್ದಾರೆ. ಸಂವಿಧಾನದ ಪ್ರಕಾರ ಅವರಿಗೆ ಎಷ್ಟು ಸಲ್ಲಬೇಕೋ ಅಷ್ಟು ಸಲ್ಲುತ್ತದೆ. ಆದರೆ, ರಾಜಕೀಯ ದುರುದ್ದೇಶದಿಂದ ಒಂದು ಸಮುದಾಯದವರನ್ನು ಗುರಿ ಮಾಡುವುದು ಸರಿಯಲ್ಲ ಎಂದು ಹೇಳಿದರು.

ಪ್ರಜ್ವಲ್‌ ರೇವಣ್ಣನವರ ಪ್ರಕರಣ ಎಸ್‌ಐಟಿಯಿಂದ ತನಿಖೆ ನಡೆಯುತ್ತಿದೆ. ತನಿಖೆ ನಡೆಯುವಾಗ ಅದರ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ರಾಜ್ಯದ 28 ಕ್ಷೇತ್ರಗಳ ಪೈಕಿ 9 ಕ್ಷೇತ್ರಗಳಲ್ಲಿ ಈ ಸಲ ಯುವಕ/ಯುವತಿಯರಿಗೆ ರಾಹುಲ್‌ ಗಾಂಧಿಯವರು ಟಿಕೆಟ್‌ ಕೊಟ್ಟಿದ್ದಾರೆ. ಐದೂ ಗ್ಯಾರಂಟಿಗಳು ರಾಜ್ಯದಲ್ಲಿ ಅನುಷ್ಠಾನಕ್ಕೆ ಬಂದಿದ್ದು, ಹೆಚ್ಚಿನ ಸ್ಥಾನಗಳಲ್ಲಿ ಗೆಲ್ಲುವ ಭರವಸೆ ಇದೆ ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ, ಮುಖಂಡರಾದ ಬಸವರಾಜ ಬುಳ್ಳಾ, ರೋಹಿದಾಸ್‌ ಘೋಡೆ, ಚಂದ್ರಕಾಂತ ಹಿಪ್ಪಳಗಾಂವ, ಜಾನ್ಸನ್‌ ಘೋಡೆ, ರಮೇಶ ಕಟ್ಟಿತೂಗಾಂವ ಮತ್ತಿತರರು ಹಾಜರಿದ್ದರು.

ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ–ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣನನ್ನು ಬಂಧಿಸುವಂತೆ ಆಗ್ರಹಿಸಿ ಮಹಿಳಾ ಕಾಂಗ್ರೆಸ್‌ ಕಾರ್ಯಕರ್ತೆಯರು ಬೀದರ್‌ನಲ್ಲಿ ಬುಧವಾರ ಸಂಜೆ ಪ್ರತಿಭಟನೆ ನಡೆಸಿದರು

ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ–ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣನನ್ನು ಬಂಧಿಸುವಂತೆ ಆಗ್ರಹಿಸಿ ಮಹಿಳಾ ಕಾಂಗ್ರೆಸ್‌ ಕಾರ್ಯಕರ್ತೆಯರು ಬೀದರ್‌ನಲ್ಲಿ ಬುಧವಾರ ಸಂಜೆ ಪ್ರತಿಭಟನೆ ನಡೆಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT