ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕನ್ನಡ ಲೋಕಸಭಾ ಕ್ಷೇತ್ರ: ಗಡಿ, ಭಾಷೆಯ ಚರ್ಚೆ ಸೇರ್ಪಡೆ?

ಬಿಜೆಪಿ, ಕಾಂಗ್ರೆಸ್‍ನ ಚುನಾವಣೆ ವಿಷಯದ ಮಗ್ಗಲು ಬದಲಿಸಲು ಎಂ.ಇ.ಎಸ್ ತಂತ್ರ
Published 16 ಏಪ್ರಿಲ್ 2024, 4:44 IST
Last Updated 16 ಏಪ್ರಿಲ್ 2024, 4:44 IST
ಅಕ್ಷರ ಗಾತ್ರ

ಕಾರವಾರ: ಬೆಳಗಾವಿ ಜಿಲ್ಲೆಯ ಕಿತ್ತೂರು, ಖಾನಾಪುರ ಒಳಗೊಂಡ ಉತ್ತರ ಕನ್ನಡ ಲೋಕಸಭೆ ಕ್ಷೇತ್ರದಲ್ಲಿ ಈ ಬಾರಿ ಭಾಷೆ, ಗಡಿ ವಿವಾದ ಮುನ್ನೆಲೆಗೆ ತರಲು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಪ್ರಯತ್ನ ನಡೆಸಿದೆ.

ನಾಲ್ಕು ಅವಧಿಯಿಂದ ಸತತ ಗೆದ್ದ ಬಿಜೆಪಿ, ‘ಹಿಂದುತ್ವ’ದ ಅಸ್ತ್ರವನ್ನೇ ಕ್ಷೇತ್ರದಲ್ಲಿ ಚುನಾವಣೆಗೆ ಬಳಸುತಿತ್ತು. ಈ ಸಲ ಗ್ಯಾರಂಟಿ ಯೋಜನೆ, ಮೋದಿ ಸಾಧನೆ, ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ವಿಚಾರ ಮುಂದಿಟ್ಟು ಕಾಂಗ್ರೆಸ್, ಬಿಜೆಪಿ ಸೆಣಸಾಡುತ್ತಿವೆ. ಇದೆಲ್ಲರರ ಮಧ್ಯೆ ‘ಗಡಿ’ ಮತ್ತು ‘ಭಾಷೆ’ ವಿಚಾರ ಮುನ್ನೆಲೆಗೆ ತರಲು ಎಂಇಎಸ್ ಹೊರಟಿದೆ.

ಸೋಮವಾರ ನಗರದಲ್ಲಿ ಖಾನಾಪುರ ಭಾಗದಿಂದ ಬಂದ 120ಕ್ಕೂ ಹೆಚ್ಚು ಎಂಇಎಸ್ ಕಾರ್ಯಕರ್ತರು ಮೆರವಣಿಗೆ ನಡೆಸಿದರು. ಮುಖ್ಯ ರಸ್ತೆಗಳಲ್ಲಿ ಸಾಗಿ ಜಿಲ್ಲಾಧಿಕಾರಿ ಕಚೇರಿ ಬಳಿ ಬಂದ ಅವರು ಮೆರವಣಿಗೆಯುದ್ದಕ್ಕೂ ಮಹಾರಾಷ್ಟ್ರ ಪರ ಘೋಷಣೆ ಕೂಗಿದರು.‘ಕಾರವಾರವನ್ನೂ ಮಹಾರಾಷ್ಟ್ರಕ್ಕೆ ಸೇರಿಸಿ, ಸಂಯುಕ್ತ ಮಹಾರಾಷ್ಟ್ರ ರಚಸಿ’ ಎಂದು ಆಗ್ರಹಿಸಿದರು.

‘ಕಾರವಾರ, ಹಳಿಯಾಳ, ಜೊಯಿಡಾ ಭಾಗದಲ್ಲಿ ನೂರಾರು ಮರಾಠಿ ಮಾಧ್ಯಮ ಶಾಲೆಗಳಿದ್ದವು. ಕರ್ನಾಟಕ ಸರ್ಕಾರ ಅವುಗಳನ್ನು ಮುಚ್ಚಿ ಹಾಕಿದೆ. ಮರಾಠಿ ಭಾಷಿಕರಿಗೆ ನಿರಂತರ ಅನ್ಯಾಯವಾಗಿದೆ. ಉತ್ತರಕನ್ನಡ ಕ್ಷೇತ್ರದ ಮರಾಠಿ ಭಾಷಿಕರ ಹಕ್ಕುಗಳ ರಕ್ಷಣೆಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇವೆ’ ಎಂದು ಎಂಇಎಸ್ ಅಭ್ಯರ್ಥಿ ನಿರಂಜನ ಸರ್ದೇಸಾಯಿ ಹೇಳಿದರು.

‘ಉತ್ತರ ಕನ್ನಡ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಖಾನಾಪುರ ಹೊರತುಪಡಿಸಿದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಎಂಇಎಸ್ ಚಟುವಟಿಕೆ ಇಲ್ಲ. ಆದರೂ, ಚುನಾವಣೆ ನೆಪದಲ್ಲಿ ಜಿಲ್ಲೆಯಲ್ಲೂ ತನ್ನ ಕಾರ್ಯಚಟುವಟಿಕೆ ವಿಸ್ತರಿಸಿಕೊಳ್ಳಲು ಗಡಿ, ಭಾಷೆಯ ವಿಚಾರ ಮುನ್ನೆಲೆಗೆ ತರಲು ಯತ್ನಿಸಿರಬಹುದು’ ಎಂದು ಸಾಮಾಜಿಕ ಕಾರ್ಯಕರ್ತ ಜಗದೀಶ್ ಹೇಳಿದರು.

‘2006 ರಿಂದ 2010ರ ಅವಧಿಯಲ್ಲಿ ಕೊಂಕಣಿ ಮಂಚ್ ಮೂಲಕ ಕಾರವಾರವನ್ನು ಗೋವಾಕ್ಕೆ ಸೇರಿಸಲು ಕೆಲವರು ಹೋರಾಟ ನಡೆಸಿದ್ದರು. ಕನ್ನಡ ಪರ ಸಂಘಟನೆಗಳ ಹೋರಾಟದ ಫಲವಾಗಿ ಅವರ ಹೋರಾಟ ಮೂಲೆಗುಂಪಾಯಿತು. ಮಹಾರಾಷ್ಟ್ರ ವಿಧಾನಸಭೆಯಲ್ಲಿ ಕೆಲವು ವರ್ಷಗಳ ಹಿಂದೆ ಉದ್ಧವ್ ಠಾಕ್ರೆ ಸಂಯುಕ್ತ ಮಹಾರಾಷ್ಟ್ರಕ್ಕೆ ಬೆಳಗಾವಿ ಜತೆ ಕಾರವಾರವನ್ನೂ ಸೇರಿಸಬೇಕು ಎಂಬ ಹೇಳಿಕೆ ನೀಡಿದ್ದು ಬಿಟ್ಟರೆ ಗಡಿ ವಿಚಾರ ಸ್ಥಳೀಯವಾಗಿ ಚರ್ಚೆಯಾಗುವ ಸಂಗತಿಯೇ ಅಲ್ಲ’ ಎಂದರು.

‘ನಾಡದ್ರೋಹದ ಪ್ರಕರಣ ದಾಖಲಿಸಬೇಕು’

‘ಕಾರವಾರ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ಕಾರವಾರದಲ್ಲಿ ಘೋಷಣೆ ಕೂಗಿರುವ ಎಂಇಎಸ್ ಮುಖಂಡರು ಕಾರ್ಯಕರ್ತರ ವಿರುದ್ಧ ನಾಡದ್ರೋಹದ ಪ್ರಕರಣ ದಾಖಲಿಸಿ ಬಂಧಿಸಬೇಕು. ಅವರು ಸಲ್ಲಿಸಿದ ನಾಮಪತ್ರ ತಿರಸ್ಕರಿಸಬೇಕು. ಮಹಾರಾಷ್ಟ್ರ ಏಕೀಕರಣ ಸಮಿತಿಗೆ ಕರ್ನಾಟಕದಲ್ಲಿ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಕೊಡಬಾರದು’ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎನ್.ವಾಸರೆ ಒತ್ತಾಯಿಸಿದ್ದಾರೆ.

‘ಉತ್ತರ ಕನ್ನಡ ಸೇರಿದಂತೆ ರಾಜ್ಯದ ಒಂದಿಂಚೂ ಜಾಗವನ್ನು ಬೇರೆ ರಾಜ್ಯಕ್ಕೆ ಸೇರಿಸಲಾಗದು ಎಂಬುದನ್ನು ಎಂ.ಇ.ಎಸ್ ಮುಖಂಡರು ಅರಿಯಲಿ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT