ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ: ಏಪ್ರಿಲ್‌ 28ರಂದು ಬೆಳಗಾವಿಗೆ ನರೇಂದ್ರ ಮೋದಿ

ಹಿಂದಿನ ವೇಳಾಪಟ್ಟಿ ಪ್ರಕಾರ, ಏ.28ರಂದು ಸಂಜೆ 6ಕ್ಕೆ ಮೋದಿ ಪ್ರಚಾರ ಸಭೆ ನಿಗದಿಯಾಗಿತ್ತು
Published 23 ಏಪ್ರಿಲ್ 2024, 11:36 IST
Last Updated 23 ಏಪ್ರಿಲ್ 2024, 11:36 IST
ಅಕ್ಷರ ಗಾತ್ರ

ಬೆಳಗಾವಿ: ‘ಪ್ರಧಾನಿ ನರೇಂದ್ರ ಮೋದಿ ಏಪ್ರಿಲ್‌ 28ರಂದು ಬೆಳಗಾವಿಗೆ ಆಗಮಿಸಲಿದ್ದು, ಬಿ.ಎಸ್‌.ಯಡಿಯೂರಪ್ಪ ಮಾರ್ಗದ ಮಾಲಿನಿ ಸಿಟಿಯಲ್ಲಿ ಮಧ್ಯಾಹ್ನ 12ಕ್ಕೆ ನಡೆಯಲಿರುವ ಬೆಳಗಾವಿ ಮತ್ತು ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳ ಪ್ರಚಾರ ಸಭೆಯಲ್ಲಿ ಮಾತನಾಡುವರು’ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಅನಿಲ ಬೆನಕೆ ತಿಳಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಂದು ಬೆಳಿಗ್ಗೆ 11.30ಕ್ಕೆ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಂದಿಳಿದು, ಕಾರ್ಯಕ್ರಮ ವೇದಿಕೆಗೆ ಮೋದಿ ಆಗಮಿಸುವರು. ನಂತರ ಬಿಜೆಪಿ ಕಾರ್ಯಕರ್ತರು ಹಾಗೂ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡುವರು. ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ, ಶಾಸಕರು ಮತ್ತು ಮಾಜಿ ಶಾಸಕರೂ ಪಾಲ್ಗೊಳ್ಳುವರು’ ಎಂದರು.

‘ಹಿಂದಿನ ವೇಳಾಪಟ್ಟಿ ಪ್ರಕಾರ, ಏ.28ರಂದು ಸಂಜೆ 6ಕ್ಕೆ ಮೋದಿ ಪ್ರಚಾರ ಸಭೆ ನಿಗದಿಯಾಗಿತ್ತು. ಪರಿಷ್ಕೃತ ವೇಳಾಪಟ್ಟಿಯಂತೆ ಈಗ ಅಂದು ಮಧ್ಯಾಹ್ನವೇ ಪ್ರಚಾರ ಸಭೆಯಲ್ಲಿ ಭಾಗವಹಿಸುವರು. ಸಭೆಗಾಗಿ ಈಗ ಆಯ್ಕೆ ಮಾಡಿದ ಸ್ಥಳ ಜನರ ಅನುಕೂಲತೆ ದೃಷ್ಟಿಯಿಂದ ಉತ್ತಮವಾಗಿದೆ. ಹಿಂದಿನ ವರ್ಷ ಇದೇ ಸ್ಥಳದಲ್ಲಿ ನಡೆದ ವಿಧಾನಸಭೆ ಚುನಾವಣೆ ಪ್ರಚಾರ ಸಭೆಯಲ್ಲೂ ಅವರು ಪಾಲ್ಗೊಂಡಿದ್ದರು’ ಎಂದರು.

ರಾಮದುರ್ಗದಲ್ಲಿ ಜಗದೀಶ ಶೆಟ್ಟರ್‌ ಅವರಿಗೆ ಪ್ರಚಾರ ಮಾಡಲು ಮುಖಂಡ ಚಿಕ್ಕರೇವಣ್ಣ ಅವರ ಬೆಂಬಲಿಗರು ಅವಕಾಶ ನೀಡದಿರುವ ಬಗ್ಗೆ ಪ್ರತಿಕ್ರಿಯಿಸಿದ ಬೆನಕೆ, ‘ಚಿಕ್ಕರೇವಣ್ಣ ಅವರ ಕೆಲವೇ ಬೆಂಬಲಿಗರು ಈ ರೀತಿ ಮಾಡಿದ್ದಾರೆಯೇ ಹೊರತು, ಎಲ್ಲ ಬೆಂಬಲಿಗರೂ ಅಲ್ಲ. ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಮತ್ತು ಚಿಕ್ಕರೇವಣ್ಣ ಇಬ್ಬರೂ ಶೆಟ್ಟರ್ ಪರ ಪ್ರಚಾರ ಮಾಡುತ್ತಿದ್ದಾರೆ’ ಎಂದರು.

ಎಂ.ಬಿ.ಝಿರಲಿ, ಸಂಜಯ ಪಾಟೀಲ, ಸುಭಾಷ ಪಾಟೀಲ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT