ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಸರ್ಕಾರಕ್ಕೆ ಭ್ರಷ್ಟಾಚಾರದ್ದೇ ಧ್ಯಾನ: ಪ್ರಧಾನಿ ಮೋದಿ ವಾಗ್ದಾಳಿ

Published 20 ಏಪ್ರಿಲ್ 2024, 12:59 IST
Last Updated 20 ಏಪ್ರಿಲ್ 2024, 12:59 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕದಲ್ಲಿನ ಕಾಂಗ್ರೆಸ್‌ ಸರ್ಕಾರಕ್ಕೆ ಭ್ರಷ್ಟಾಚಾರದ್ದೇ ಧ್ಯಾನ. ಜನರ ಸಮಸ್ಯೆಗಳ ಪರಿಹಾರದತ್ತ ಗಮನವೇ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.

ನಗರದ ಅರಮನೆ ಮೈದಾನದಲ್ಲಿ ಶನಿವಾರ ನಡೆದ ವಿಜಯ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು, ‘ಬೆಂಗಳೂರನ್ನು ಅತ್ಯಂತ ಸುಂದರ ನಗರವನ್ನಾಗಿ ನಿರ್ಮಿಸುವ ಕನಸು ನಾಡಪ್ರಭು ಕೆಂಪೇಗೌಡ ಅವರದ್ದಾಗಿತ್ತು. ‘ಟೆಕ್‌ ಸಿಟಿ’ (ತಂತ್ರಜ್ಞಾನ ನಗರ) ಆಗಿದ್ದ ಬೆಂಗಳೂರನ್ನು ಕಾಂಗ್ರೆಸ್‌ ಸರ್ಕಾರವು ಟ್ಯಾಂಕರ್‌ ಸಿಟಿ ಮಾಡಿದೆ. ಇಡೀ ನಗರ ಈಗ ಟ್ಯಾಂಕರ್‌ ಮಾಫಿಯಾದ ಕೈಯಲ್ಲಿ ಸಿಲುಕಿದೆ’ ಎಂದರು.

‘ಅಲ್ಪ ಅವಧಿಯಲ್ಲಿ ಇಲ್ಲಿನ ಪರಿಸ್ಥಿತಿ ಬಿಗಡಾಯಿಸಿದೆ. ಕೃಷಿ, ನಗರ ಮೂಲಸೌಕರ್ಯ ಅಭಿವೃದ್ಧಿಗೆ ಬಜೆಟ್‌ನಲ್ಲಿ ಒದಗಿಸುವ ಅನುದಾನ ಕಡಿತ ಮಾಡಲಾಗಿದೆ. ಕೇಂದ್ರ ಸರ್ಕಾರದ ಯೋಜನೆಗಳು ಮಾತ್ರ ಬೆಂಗಳೂರಿನಲ್ಲಿ ವೇಗವಾಗಿ ಅನುಷ್ಠಾನಗೊಳ್ಳುತ್ತಿವೆ’ ಎಂದು ಹೇಳಿದರು.

2014ರ ಮೊದಲು ಬೆಂಗಳೂರಿನಲ್ಲಿ 17 ಕಿ.ಮೀ. ಉದ್ದದ ಮೆಟ್ರೊ ರೈಲು ಮಾರ್ಗ ಇತ್ತು. ಈಗ ಅದು 70 ಕಿ.ಮೀ.ಗೆ ವಿಸ್ತರಿಸಿದೆ. ಹಳದಿ ಮಾರ್ಗವೂ ಶೀಘ್ರದಲ್ಲಿ ಬಳಕೆಗೆ ಲಭ್ಯವಾಗಲಿದೆ. ಉಪನಗರ ರೈಲು ಯೋಜನೆಯು ಬೆಂಗಳೂರಿನ ಸಂಚಾರ ಸಮಸ್ಯೆಗೆ ಪರಿಹಾರ ನೀಡಲಿದೆ. ಇದೆಲ್ಲವೂ ಸಾಧ್ಯವಾಗಿರುವುದು ಹತ್ತು ವರ್ಷಗಳ ಎನ್‌ಡಿಎ ಸರ್ಕಾರದ ಆಡಳಿತದಿಂದ ಎಂದರು.

ಎನ್‌ಡಿಎ ಸರ್ಕಾರವು ಕರ್ನಾಟಕದ ರಾಗಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅವಕಾಶ ಕಲ್ಪಿಸುವ ಗುರಿಯನ್ನು ಹೊಂದಿದೆ. ಕೃಷಿಕರ ವಿರೋಧಿಯಾಗಿರುವ ಇಲ್ಲಿನ ಕಾಂಗ್ರೆಸ್‌ ಸರ್ಕಾರ ರೈತರಿಗೆ ನೀಡುತ್ತಿದ್ದ ₹ 4,000 ಸಹಾಯಧನಕ್ಕೆ ಕತ್ತರಿ ಹಾಕಿದೆ. ಆದರೆ, ಕೇಂದ್ರ ಸರ್ಕಾರ ಕೃಷಿ ಸಮ್ಮಾನ್‌ ಯೋಜನೆಯಡಿ ರೈತರಿಗೆ ನೀಡುತ್ತಿರುವ ₹ 6,000 ಪ್ರೋತ್ಸಾಹಧನ ನಿಲ್ಲುವುದಿಲ್ಲ ಎಂದರು.

ಜನರಿಗೆ ಭರಪೂರ ನೆರವು:

ಎನ್‌ಡಿಎ ಸರ್ಕಾರದ ಅವಧಿಯಲ್ಲಿ ನಗರ ಪ್ರದೇಶಗಳ ಬಡವರಿಗಾಗಿ ಒಂದು ಕೋಟಿ ಮನೆಗಳನ್ನು ನಿರ್ಮಿಸಲಾಗಿದೆ. ಅವುಗಳಲ್ಲಿ 84,000 ಮನೆಗಳು ಬೆಂಗಳೂರಿನ ಬಡವರಿಗೆ ದೊರಕಿವೆ. ಮಧ್ಯಮ ವರ್ಗದವರಿಗೆ ಮನೆ ನಿರ್ಮಾಣ ಸಾಲದ ಮೇಲಿನ ಬಡ್ಡಿ ಸಹಾಯಧನ ನೀಡಲಾಗುತ್ತಿದೆ. ಇದರಿಂದ ಮಧ್ಯಮ ವರ್ಗದ ಜನರಿಗೆ ₹ 60,000 ಕೋಟಿ ನೆರವು ದೊರಕಿದೆ ಎಂದು ಮೋದಿ ಹೇಳಿದರು.

ಎನ್‌ಡಿಎ ಅಧಿಕಾರಕ್ಕೆ ಬರುವ ಮುನ್ನ ಜನರ ಮೇಲೆ ಪರೋಕ್ಷ ತೆರಿಗೆಗಳ ಭಾರ ಅತಿಯಾಗಿತ್ತು. ಜಿಎಸ್‌ಟಿ ಜಾರಿಯಿಂದ ಪರೋಕ್ಷ ತೆರಿಗೆಗಳು ನಿಂತಿವೆ. ₹ 400ಕ್ಕೆ ಸಿಗುತ್ತಿದ್ದ ಎಲ್‌ಇಡಿ ಬಲ್ಬ್‌ ಈಗ ₹ 40ಕ್ಕೆ ಸಿಗುತ್ತಿದೆ. ಈಗ ಪ್ರಧಾನಮಂತ್ರಿ ಸೂರ್ಯ ಘರ್‌ ಯೋಜನೆ ರೂಪಿಸಲಾಗಿದೆ. ಇದರಿಂದ ಸೌರಶಕ್ತಿ ಬಳಸಿಕೊಂಡು ಉಚಿತ ವಿದ್ಯುತ್‌ ಪಡೆಯುವ ಜತೆಯಲ್ಲೇ ವಿದ್ಯುತ್‌ ಮಾರಾಟ ಮಾಡುವ ಅವಕಾಶವೂ ಜನರಿಗೆ ಲಭಿಸಲಿದೆ ಎಂದರು.

ಸಾಮಾಜಿಕ, ಭೌತಿಕ ಮತ್ತು ಡಿಜಿಟಲ್‌ ಮೂಲಸೌಕರ್ಯ ಅಭಿವೃದ್ಧಿಗೆ ತಮ್ಮ ಸರ್ಕಾರ ವ್ಯಾಪಕ ಹೂಡಿಕೆ ಮಾಡಿದೆ. ದೇಶವನ್ನು ಎಲೆಕ್ಟ್ರಾನಿಕ್‌, ಎಲೆಕ್ಟ್ರಿಕಲ್‌, ವಿದ್ಯುತ್‌ ಚಾಲಿತ ವಾಹನಗಳ ತಯಾರಿಕೆ ಮತ್ತು ತಂತ್ರಜ್ಞಾನದ ಹಬ್‌ ಮಾಡುವ ಗುರಿ ತಮ್ಮ ಮುಂದಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT