ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಕ್ತಿ‌ಮೀರಿ‌ ಮತ ಹಾಕಿಸಿ, ಬೇರೆಯವರ ಮನವೊಲಿಸಿ: ಲಿಂಗಾಯತ ಮುಖಂಡರಿಗೆ BSY ಮನವಿ

Published 23 ಏಪ್ರಿಲ್ 2024, 4:45 IST
Last Updated 23 ಏಪ್ರಿಲ್ 2024, 4:45 IST
ಅಕ್ಷರ ಗಾತ್ರ

ಶಿವಮೊಗ್ಗ: ‘ಶಕ್ತಿ ಮೀರಿ ಹೆಚ್ಚು‌ ಮತ ಹಾಕಿಸುವ ಜೊತೆಗೆ ಬೇರೆ ಸಮುದಾಯದವರ ಮನವೊಲಿಸುವ ಪ್ರಯತ್ನ ಮಾಡಬೇಕು’ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ್ ಬಿ.ಎಸ್. ಯಡಿಯೂರಪ್ಪ ವೀರಶೈವ–ಲಿಂಗಾಯತ ಸಮುದಾಯದ ಮುಖಂಡರಿಗೆ ಮನವಿ ಮಾಡಿದರು.

ಇಲ್ಲಿನ ವಿನೋಬನಗರದ ತಮ್ಮ ನಿವಾಸದಲ್ಲಿ ನಡೆದ ಸೋಮವಾರ ವೀರಶೈವ ಲಿಂಗಾಯತ ಸಮುದಾಯದ ಸಭೆಯಲ್ಲಿ ಅವರು ಮಾತನಾಡಿದರು.

‘ಸಮುದಾಯದವರು ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಬೇರೆ ಪಕ್ಷದ ಅಭ್ಯರ್ಥಿಯ ಹೆಸರು ನಾನು ಹೇಳಲ್ಲ. ಅವರು ಏನು ಬೇಕಾದರೂ ಮಾತನಾಡಲಿ. ನಾವು ಮತ ಹಾಕಿಸುವ ಕಡೆಗೆ ಗಮನ ಕೊಡಬೇಕು’ ಎಂದರು.

‘10 ವರ್ಷದ ಹಿಂದೆ  ಶಿವಮೊಗ್ಗ ಹೇಗಿತ್ತು. ಈಗ ಹೇಗಾಗಿದೆ ಯೋಚನೆ ಮಾಡಿ. ಬಾಕಿ ಉಳಿದಿರುವ ಕಾರ್ಯಗಳನ್ನು ಮುಂದಿನ ದಿನಗಳಲ್ಲಿ ರಾಘವೇಂದ್ರ ಪೂರ್ಣಗೊಳಿಸಲಿದ್ದಾರೆ’ ಎಂದು ಹೇಳಿದರು.

‘ರಾಜ್ಯ ಸರ್ಕಾರದ ಖಜಾನೆ ಖಾಲಿ ಆಗಿದೆ. ನೀರಾವರಿ ಯೋಜನೆ ಮತ್ತು ಅಭಿವೃದ್ಧಿ ಕುಂಠಿತವಾಗಿದೆ. ಖಜಾನೆ ಖಾಲಿ ಮಾಡಿ‌ಕೊಂಡು ಸರ್ಕಾರ ಕೈ ಕಟ್ಟಿಕೊಂಡು ಕುಳಿತಿದೆ. ಸರ್ಕಾರದ ಆರ್ಥಿಕ ಶಿಸ್ತನ್ನು ಸುಧಾರಣೆ ಮಾಡಲು ಹಲವು ವರ್ಷಗಳು ಬೇಕಾಗಬಹುದು. ಕೇಂದ್ರ ಸರ್ಕಾರ ಆರ್ಥಿಕ ನೆರವು ನೀಡಿದ್ದರೂ ರಾಜ್ಯ ಸರ್ಕಾರ ಸುಳ್ಳು ಹೇಳುತ್ತಿದೆ. ನಾವು ಕೊಟ್ಟಿರುವ ಯೋಜನೆಗಳ ನಿಂತಿವೆ. ಜೆಡಿಎಸ್ ಮತ್ತು ಬಿಜೆಪಿ ಹೊಂದಾಣಿಕೆ ಮಾಡಿಕೊಂಡು ಚುನಾವಣೆ ಎದುರಿಸುತ್ತಿದ್ದೇವೆ. ಇದು ಹೆಚ್ಚು ಸ್ಥಾನಗಳ ಗೆಲ್ಲಲು ಅನುಕೂಲವಾಗಿದೆ’ ಎಂದು ಹೇಳಿದರು.

ಬಸವೇಶ್ವರ ವೀರಶೈವ ಸಮಾಜದ ಅಧ್ಯಕ್ಷ ಎಸ್.ಎಸ್‌. ಜ್ಯೋತಿಪ್ರಕಾಶ್, ‘ಯಡಿಯೂರಪ್ಪ ಅವರಿಗೆ ಹಲವರು ಬೆನ್ನಿಗೆ ಚೂರಿ ಹಾಕಿದ್ದಾರೆ. ಆದರೂ ಎದೆಗುಂದದೇ ಪಕ್ಷ ಕಟ್ಟಿದ್ದಾರೆ. ಇಡೀ ಸಮಾಜ ಅವರ ಬೆಂಬಲಕ್ಕೆ ನಿಲ್ಲಬೇಕು’ ಎಂದು ಮನವಿ ಮಾಡಿದರು.

ವಿಧಾನ‌ಪರಿಷತ್ ಸದಸ್ಯ ಎಸ್. ರುದ್ರೇಗೌಡ ಮತ್ತು ಡಾ.‌ಧನಂಜಯ ಸರ್ಜಿ ಮಾತನಾಡಿದರು. ಮಾಜಿ ಶಾಸಕ ರಘುಪತಿ ಭಟ್,  ರಾಜಶೇಖರ್, ಮಹೇಶ, ಆನಂದಮೂರ್ತಿ, ಶಂಕ್ರಪ್ಪ, ಮೋಹನ ಬಾಳೆಕಾಯಿ, ಬೆನಕಪ್ಪ ಇದ್ದರು.

ಮಾತು ಕೇಳಿದರೆ ಮೈ ಉರಿಯುತ್ತೆ: ಚನ್ನಬಸಪ್ಪ

ಸಭೆಯಲ್ಲಿ ಮಾತನಾಡಿದ ಶಾಸಕ ಎಸ್.ಎನ್. ಚನ್ನಬಸಪ್ಪ ‘ಯಡಿಯೂರಪ್ಪ ಅವರ ಜೊತೆಯಲ್ಲಿ ಬೆಳೆದ ವ್ಯಕ್ತಿ ಇವತ್ತು ಅವರ ಬಗ್ಗೆ ಬಹಳ ಹಗುರ ಮಾತಾಡುತ್ತಾನೆ. ಆತನ ಮಾತು ಕೇಳಿದರೇ ಮೈ ಉರಿಯುತ್ತದೆ. ಚುನಾವಣೆ ಕಾರಣ ಯಡಿಯೂರಪ್ಪ ಸಹಿಸಿಕೊಂಡಿದ್ದಾರೆ. ಇದನ್ನು ಅವರೇ ಮುಕ್ತಾಯ ಮಾಡಬೇಕು. ಇಲ್ಲವೇ ನಾವೇ ಅಂತ್ಯ ಹಾಡಬೇಕು‌. ಸಹಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು ಯಾರ ಹೆಸರು ಹೇಳದೇ ವಾಗ್ದಾಳಿ ನಡೆಸಿದರು.

ಆಗ ಸಭೆಯಲ್ಲಿದ್ದ ಮುಖಂಡರೊಬ್ಬರು ‘ಈಶ್ವರಪ್ಪ ಅಂತಾ ಅವರ ಹೆಸರು ಬಹಿರಂಗವಾಗಿ ಹೇಳಿ ಏಕೇ ಅವರಿಗೆ ಹೆದರುತ್ತೀರಾ’ ಎಂದು ಖಾರವಾಗಿ ಪ್ರಶ್ನಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಚನ್ನಬಸಪ್ಪ ‘ನನಗೆ ಯಾರದ್ದೂ ಭಯವಿಲ್ಲ. ಈಶ್ವರಪ್ಪ ಹೆಸರು ಹೇಳಲು ಹೆದರಿಕೆ ಇಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT