ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜನಶಕ್ತಿ ಮುಂದೆ ಯಾವ ಶಕ್ತಿಯೂ ನಡೆಯದು: ಡಾ. ಸಿ.ಎನ್. ಮಂಜುನಾಥ್

‌ಡಿ.ಕೆ. ಸಹೋದರರ ತವರಲ್ಲಿ ‘ಮೈತ್ರಿ’ ಶಕ್ತಿ ಪ್ರದರ್ಶನ
Published 25 ಮಾರ್ಚ್ 2024, 13:28 IST
Last Updated 25 ಮಾರ್ಚ್ 2024, 13:28 IST
ಅಕ್ಷರ ಗಾತ್ರ

ಕನಕಪುರ: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಂಸದ ಡಿ.ಕೆ. ಸುರೇಶ್ ತವರು ಕನಕಪುರ ಮತ್ತು ಪಕ್ಕದ ಹಾರೋಹಳ್ಳಿಯಲ್ಲಿ ಬಿಜೆಪಿ–ಜೆಡಿಎಸ್ ಮೈತ್ರಿಕೂಟ ಸೋಮವಾರ ಶಕ್ತಿ ಪ್ರದರ್ಶಿಸಿತು. ಪಟ್ಟಣದ ಕಲ್ಯಾಣ ಮಂಟಪದಲ್ಲಿ ನಡೆದ ಎರಡೂ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರ ಸಮ್ಮಿಲನ ಸಭೆಯಲ್ಲಿ ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಪಾಲ್ಗೊಂಡಿದ್ದರು.

ಮೈತ್ರಿಕೂಟದ ಅಭ್ಯರ್ಥಿಯಾಗಿ ಬಿಜೆಪಿಯಿಂದ ಕಣಕ್ಕಿದಿರುವ ಡಾ. ಸಿ.ಎನ್. ಮಂಜುನಾಥ್, ರಾಜರಾಜೇಶ್ವರಿನಗರ ಶಾಸಕ ಮುನಿರತ್ನ, ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್, ಮಾಜಿ ಶಾಸಕ ಎ. ಮಂಜುನಾಥ್ ಸೇರಿದಂತೆ ಬಹುತೇಕರು ಡಿ.ಕೆ. ಸಹೋದರರ ವಿರುದ್ಧ ಗುಡುಗಿದರು. 

‘ಜನಶಕ್ತಿಯ ಮುಂದೆ ಯಾವ ಶಕ್ತಿಯು ನಡೆಯುವುದಿಲ್ಲ’ ಎಂದು ಡಿ.ಕೆ. ಸಹೋದರರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಡಾ. ಮಂಜುನಾಥ್ ಅವರು, ‘ಕ್ಷೇತ್ರದ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ಹೃದಯಗಳು ಒಂದಾಗಿವೆ. ಕನಕಪುರದಲ್ಲಿ ಒಂದೊಂದು ಮತವೂ ಸ್ವಾಭಿಮಾನದ ಮತವಾಗಿದ್ದು, ನಮಗೆ ಆನೆ ಬಲ ತಂದು ಕೊಡುತ್ತದೆ. ಟೀಕೆಗಳು ಸಾಯುತ್ತವೆ, ಸಾಧನೆಗಳು ಉಳಿಯುತ್ತವೆ. ಟೀಕೆಗಳಿಗೆ ಕಿವಿಗೊಡದೆ ಗೆಲುವಿಗಾಗಿ ಶ್ರಮಿಸಿ’ ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು.

ಸಿ.ಪಿ. ಯೋಗೇಶ್ವರ್, ‘ಮಂಜುನಾಥ್ ಗೆದ್ದರೆ ಕ್ಷೇತ್ರದಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರು ಅನುಭವಿಸಿರುವ ನೋವು ಹಾಗೂ ಕಷ್ಟಗಳು ಕೊನೆಯಾಗಲಿವೆ. ಸದ್ಯದಲ್ಲೇ ಜೆಡಿಎಸ್ ನಾಯಕರಾದ ಎಚ್‌.ಡಿ. ದೇವೇಗೌಡರು, ಎಚ್‌.ಡಿ. ಕುಮಾರಸ್ವಾಮಿ ಹಾಗೂ ಬಿಜೆಪಿ ನಾಯಕರ ನೇತೃತ್ವದಲ್ಲಿ ಬಹಿರಂಗ ಸಭೆ ನಡೆಸಲಾಗುವುದು. ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಸಹ ಬರಲಿದ್ದಾರೆ. ಮಂಜುನಾಥ್ ಅವರನ್ನು ಗೆಲ್ಲಿಸಿದರೆ ದೇಶಕ್ಕೆ ಉತ್ತಮ ಆರೋಗ್ಯ ಸಚಿವರನ್ನು ಕೊಟ್ಟ ಹೆಮ್ಮೆ ನಿಮ್ಮದಾಗಲಿದೆ’ ಎಂದು ಉತ್ಸಾಹ ತುಂಬಿದರು.

ಸಭೆಗೂ ಮುಂಚೆ ಮಂಜುನಾಥ್ ಅವರು ರಾಮನಗರ ತಾಲ್ಲೂಕಿನ ತಟ್ಟೆಕೆರೆಯ ಮಹದೇಶ್ವರ ದೇವಾಲಯಕ್ಕೆ ಭೇಟಿ ನೀಡಿದರು. ಹಾರೋಹಳ್ಳಿಯಲ್ಲಿ ಜರುಗಿದ ಚಾಮಂಡೇಶ್ವರಿ ರಥೋತ್ಸವದಲ್ಲಿ ಪಾಲ್ಗೊಂಡ ಅವರು, ಅಲ್ಲಿಯೂ ಬಿಜೆಪಿ–ಜೆಡಿಎಸ್ ಕಾರ್ಯಕರ್ತರು ಮತ್ತು ಮುಖಂಡರ ಸಭೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT