ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಆಯೋಗ ನಿಷ್ಕ್ರಿಯ: ವಾಟಾಳ್ ನಾಗರಾಜ್

ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಆಕ್ರೋಶ
Published 29 ಏಪ್ರಿಲ್ 2023, 4:17 IST
Last Updated 29 ಏಪ್ರಿಲ್ 2023, 4:17 IST
ಅಕ್ಷರ ಗಾತ್ರ

ಬೆಂಗಳೂರು: ‘ವಿಧಾನಸಭೆ ಚುನಾವಣೆಯಲ್ಲಿ ಅಭ್ಯರ್ಥಿಯೊಬ್ಬರಿಗೆ ಗರಿಷ್ಠ ವೆಚ್ಚದ ಮಿತಿ ₹ 40 ಲಕ್ಷ ನಿಗದಿಪಡಿಸಲಾಗಿದೆ. ಆದರೆ, ನಾಮಪತ್ರ ಸಲ್ಲಿಸುವ ಅವಧಿಯಲ್ಲಿಯೇ ಅಭ್ಯರ್ಥಿಗಳು ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಮೆರವಣಿಗೆ ನಡೆಸಿದ್ದಾರೆ. ಇದನ್ನು ಕಂಡು ಕಾಣದಂತೆ ವರ್ತಿಸುತ್ತಿರುವ ಚುನಾವಣಾ ಆಯೋಗ ಸತ್ತು ಹೋಗಿದೆ’ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದರು.

ಈ ಬಾರಿ ಚುನಾವಣೆಯಲ್ಲಿ ಚಾಮರಾಜನಗರ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿರುವ ಅವರು, ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ‘ಈಗ ಚುನಾವಣೆ ವ್ಯಾಪಾರವಾಗಿದೆ. ಮೂರೂ ಪ್ರಮುಖ ರಾಜಕೀಯ ಪಕ್ಷಗಳು ಹಣದ ಆಧಾರದಲ್ಲಿ ರಾಜಕೀಯ ಮಾಡುತ್ತಿವೆ. ಅಭ್ಯರ್ಥಿಗಳು ತಮ್ಮ ಬಲ ಪ್ರದರ್ಶಿಸಲು ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದ್ದಾರೆ. ಇದು ಸಂವಿಧಾನಬದ್ಧವಾಗಿ ನಡೆಯುತ್ತಿರುವ ಚುನಾವಣೆಯಲ್ಲ. ಚುನಾವಣಾ ಆಯೋಗ ಸ್ವತಂತ್ರವಾಗಿದ್ದರೆ ಕೂಡಲೇ ಈ ಚುನಾವಣೆಯನ್ನು ರದ್ದು ಮಾಡಬೇಕು’ ಎಂದು ಆಗ್ರಹಿಸಿದರು. 

‘ಬೆಂಗಳೂರಿಗೆ ದಿನಕ್ಕೆ 35 ಹೆಲಿಕಾಪ್ಟರ್‌ಗಳು ವಿವಿಧೆಡೆಯಿಂದ ಬರುತ್ತಿವೆ. ಇವುಗಳ ಬಾಡಿಗೆ ಹಣವನ್ನೂ ಅಭ್ಯರ್ಥಿಗಳ ಲೆಕ್ಕದಲ್ಲಿ ತೋರಿಸಿ, ಅನರ್ಹ ಮಾಡಬೇಕು. ಚುನಾವಣೆಯನ್ನು ಶುದ್ಧಗೊಳಿಸುವ ಕೆಲಸ ತುರ್ತಾಗಿ ನಡೆಯಬೇಕು. ಅಭ್ಯರ್ಥಿಗಳು ಜೆಸಿಬಿಯ ಮೂಲಕ ಹಾರ ಹಾಕಿಸಿಕೊಳ್ಳುತ್ತಿದ್ದಾರೆ. ಇದು ನಮ್ಮ ಸಂಸ್ಕೃತಿಯೇ? ಹೆಣಗಳಿಗೂ ಆ ರೀತಿ ಹಾರವನ್ನು ಹಾಕುವುದಿಲ್ಲ. ಆಯೋಗಕ್ಕೆ ಚುನಾವಣೆ ವ್ಯವಸ್ಥೆ ಸುಧಾರಿಸಲು ಸಾಧ್ಯವಾಗದಿದ್ದರೆ ಕ್ಷೇತ್ರಗಳನ್ನು ಟೆಂಡರ್ ಕರೆದು, ಅಭ್ಯರ್ಥಿಗಳಿಗೆ ಹಂಚಲಿ. ಈ ರೀತಿಯ ವ್ಯವಸ್ಥೆಯಲ್ಲಿ ಸಾಮಾನ್ಯರು ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು. 

‘ಚಾಮರಾಜನಗರದ ಸಮಸ್ತ ಅಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡಿದ್ದೇನೆ. ಕಾವೇರಿ ನೀರನ್ನು ಒದಗಿಸುವಲ್ಲಿ ಶ್ರಮಿಸಿದ್ದೇನೆ. ಜೋಡಿ ರಸ್ತೆ, ಬಸವ ಭವನಕ್ಕೆ ಜಾಗ, ಹಳ್ಳಿಗಳಿಗೆ ಕುಡಿಯುವ ನೀರು ಸೇರಿ ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದೇನೆ. ಆದ್ದರಿಂದ ಅಲ್ಲಿನ ಜನರು ನನ್ನ ಕೈಹಿಡಿಯುತ್ತಾರೆ ಎಂಬ ವಿಶ್ವಾಸವಿದೆ. ಮಹಿಳೆಯರ ಏಳಿಗೆಗೆ ವಿನೂತನವಾದ ಪ್ರಚಾರವನ್ನೂ ಪ್ರಾರಂಭ ಮಾಡುತ್ತೇನೆ’ ಎಂದು ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT