ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆಮಿಷಕ್ಕೆ ಒಳಗಾಗದೆ ಮತ ಚಲಾಯಿಸಿ: ಡಾ.ಕೆ.ವಿ. ರಾಜೇಂದ್ರ

Published 8 ಏಪ್ರಿಲ್ 2024, 12:19 IST
Last Updated 8 ಏಪ್ರಿಲ್ 2024, 12:19 IST
ಅಕ್ಷರ ಗಾತ್ರ

ಮೈಸೂರು: ‘ಮತದಾರರು ಯಾವುದೇ ಆಮಿಷಗಳಿಗೆ ಒಳಗಾಗದೇ ಸೂಕ್ತವಾದ ವ್ಯಕ್ತಿಗೆ ತಪ್ಪದೇ ಮತದಾನ ಮಾಡಬೇಕು’ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಕೋರಿದರು.

ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಇಲ್ಲಿನ ಕಲಾಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ‘ಚುನಾವಣಾ ಹಬ್ಬ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಚುನಾವಣೆ ಎಂಬುದು ಪ್ರಜಾಪ್ರಭುತ್ವದ ಹಬ್ಬ. ಮತದಾರರು ಯಾವುದೇ ಜಾತಿ, ಮತ, ಧರ್ಮವನ್ನು ನೋಡದೆ ಮತ ಚಲಾಯಿಸಿ ಪ್ರಜಾತಂತ್ರ ಹಬ್ಬವನ್ನು ಯಶಸ್ವಿಗೊಳಿಸಬೇಕು’ ಎಂದು ಕರೆ ನೀಡಿದರು.

‘ವಿದ್ಯಾವಂತರು ಮತದಾನದ ಪ್ರಾಮುಖ್ಯತೆಯನ್ನು ತಿಳಿದುಕೊಂಡು ಕುಟುಂಬ ಹಾಗೂ ಸುತ್ತಮುತ್ತಲಿನ ಜನರಿಗೂ ಜಾಗೃತಿ ಮೂಡಿಸಬೇಕು. ಪ್ರತಿಯೊಬ್ಬರೂ ನೈತಿಕ ಮತದಾನ ಮಾಡುವಂತೆ ಪ್ರೋತ್ಸಾಹಿಸಬೇಕು’ ಎಂದು ತಿಳಿಸಿದರು.

‘ಕಳೆದ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಶೇ 70ರಷ್ಟು ಹಾಗೂ 2023 ವಿಧಾನಸಭಾ ಚುನಾವಣೆಯಲ್ಲಿ ಶೇ 75ರಷ್ಟು ಮತದಾನವಾಗಿತ್ತು. ಈ ಬಾರಿಯ ಚುನಾವಣೆಯಲ್ಲಿ ಮತದಾನ ಪ್ರಮಾಣವನ್ನು ಹೆಚ್ಚಿಸಲು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಮತದಾರರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ’ ಎಂದರು.

100 ನಿಮಿಷದೊಳಗೆ ಕ್ರಮ

‘ಚುನಾವಣಾ ಅಕ್ರಮಗಳು ಕಂಡು ಬಂದಲ್ಲಿ ಸಿ–ವಿಜಿಲ್ ಆ್ಯಪ್‌ನಲ್ಲಿ ವಿಡಿಯೊ, ಆಡಿಯೊ, ಫೋಟೊ ಹಾಗೂ ಜಿಪಿಎಸ್ ಮೂಲಕ ಮಾಹಿತಿ ಸಲ್ಲಿಸಿ ದೂರನ್ನು ನೀಡಬಹುದಾಗಿದೆ. 100 ನಿಮಿಷದೊಳಗೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳುತ್ತಾರೆ. ಮಾಹಿತಿ ನೀಡುವವರ ಹೆಸರು ಹಾಗೂ ವಿಳಾಸವನ್ನು ಬಹಿರಂಗಪಡಿಸುವುದಿಲ್ಲ’ ಎಂದು ತಿಳಿಸಿದರು.

ಜಿಲ್ಲಾ ಸ್ವೀಪ್ ಸಮಿತಿಯಿಂದ ಸಿದ್ಧಪಡಿಸಲಾದ ಚುನಾವಣಾ ರಾಯಬಾರಿಗಳ ಸಂದೇಶಗಳನ್ನು ಒಳಗೊಂಡ ವಿಡಿಯೊ, ಆಕಾಶವಾಣಿಯಿಂದ ರಚಿತಗೊಂಡಿರುವ ಚುನಾವಣಾ ಜಾಗೃತಿ ಗೀತೆಗಳ ವಿಡಿಯೊ ಹಾಗೂ ಮೈಸೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ರಚಿಸಿರುವ ಚುನಾವಣಾ ಜಾಗೃತಿ ವಿಡಿಯೊಗಳನ್ನು ಅನಾವರಣಗೊಳಿಸಲಾಯಿತು.

ಚುನಾವಣಾ ರಾಯಭಾರಿಗಳಾದ ತನಿಷ್ಕಾ ಮೂರ್ತಿ ಹಾಗೂ ಸೇನಾನಿ ಮತದಾನ ಮಾಡುವಂತೆ ಪ್ರೇರೇಪಿಸಿದರು. ಸಹಿ ಸಂಗ್ರಹಣಾ ಅಭಿಯಾನ, ಚಿತ್ರಕಲಾ ಸ್ಪರ್ಧೆ, ಕಲಾ ತಂಡದಿಂದ ಮತದಾನ ಜಾಗೃತಿ ಗೀತೆಗಳ ವಾಚನ ಹಾಗೂ ಕಿರುನಾಟಕ ಕಾರ್ಯಕ್ರಮಗಳು ನಡೆದವು.

ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ.ಗಾಯಿತ್ರಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಾದ ಸೀಮಾ ಲಾಟ್ಕರ್, ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಶಿಲ್ಪಿ ಅಗರವಾಲ್‌, ಸಿಎಫ್‌ಟಿಆರ್‌ಐ ನಿರ್ದೇಶಕಿ ಶ್ರೀದೇವಿ ಅನ್ನಪೂರ್ಣಾ ಸಿಂಗ್, ಆಯಿಷ್ ಸಂಸ್ಥೆ ನಿರ್ದೇಶಕಿ ಪುಷ್ಪವತಿ, ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕ್ಷೇತ್ರ ಪ್ರಚಾರಾಧಿಕಾರಿ ಶ್ರುತಿ, ಮಹಾನಗರ ಪಾಲಿಕೆಯ ಆಯುಕ್ತೆ ಎನ್.ಎಸ್. ಮಧು, ಮೈಸೂರು ಆಕಾಶವಾಣಿ ನಿಲಯದ ನಿರ್ದೇಶಕ ಉಮೇಶ್, ಚುನಾವಣಾ ರಾಯಭಾರಿಗಳಾದ ಕೃಪಾಕರ, ಮಹೇಂದ್ರ, ಶ್ರೀನಿವಾಸ್, ಆನಂದ್‌ರಾಜ್ ರೂನ್‌ವಾಲ, ಮಧುಸೂದನ್ ಪಾಲ್ಗೊಂಡಿದ್ದರು.

ಕ್ಯೂ ಮ್ಯಾನೇಜ್‌ಮೆಂಟ್ ಆ್ಯಪ್

‘ಕೆಲವರು ಮತದಾನವನ್ನು ನಿರ್ಲಕ್ಷಿಸಿ ಪ್ರವಾಸಕ್ಕೆ ಹೋಗಲು ಸಿದ್ಧರಿರುತ್ತಾರೆ. ಆದರೆ, ಮತದಾನ ಪ್ರತಿಯೊಬ್ಬನ ಹಕ್ಕಾಗಿದ್ದು, ಅದನ್ನು ಚಲಾಯಿಸಲು ಮೊದಲ ಆದ್ಯತೆ ನೀಡಬೇಕು. ಮತದಾರರಿಗೆ ತೊಂದರೆ ಆಗದಂತೆ ನೋಡಿಕೊಳ್ಳಲು ಕ್ಯೂ ಮ್ಯಾನೇಜ್‌ಮೆಂಟ್‌ ಆ್ಯಪ್‌ ಹೊರತರಲಾಗಿದ್ದು, ಇದರಿಂದ ಮತದಾರರು ತಮ್ಮ ಮತಟ್ಟೆಯಲ್ಲಿ ಎಷ್ಟು ಕ್ಯೂ ಇದೆ ಎಂಬುದನ್ನು ತಿಳಿದುಕೊಂಡು ಮತದಾನ ಮಾಡಬಹುದು’ ಎಂದು ರಾಜೇಂದ್ರ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT