ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ ಲೋಕಸಭಾ: ಸಿದ್ದು ನ್ಯಾಮಗೌಡರ ವಿರುದ್ಧ ಸೋಲಿನ ಕಹಿಯುಂಡ ಮಾಜಿ CM ಹೆಗಡೆ

ಅನುಕಂಪದ ಅಲೆಗೆ ಕೊಚ್ಚಿಹೋದ ರಾಮಕೃಷ್ಣ ಹೆಗಡೆ
Published 14 ಏಪ್ರಿಲ್ 2024, 5:31 IST
Last Updated 14 ಏಪ್ರಿಲ್ 2024, 5:31 IST
ಅಕ್ಷರ ಗಾತ್ರ

ಬಾಗಲಕೋಟೆ: ಹತ್ತನೇ ಲೋಕಸಭಾ ಚುನಾವಣೆಯಲ್ಲಿ ಬಾಗಲಕೋಟೆ ಲೋಕಸಭಾ ಕ್ಷೇತ್ರದ ಚುನಾವಣೆಯು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತು. ಒಂದೆಡೆ ರಾಜ್ಯ, ರಾಷ್ಟ್ರ ರಾಜಕಾರಣದಲ್ಲಿ ಹೆಸರು ಮಾಡಿದ್ದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ, ಇನ್ನೊಂದೆಡೆ ಹೊಸ ಮುಖ ಸಿದ್ದುಪ್ಪ ನ್ಯಾಮಗೌಡರ.

1991ರಲ್ಲಿ ಜನತಾ ದಳದಿಂದ ಸ್ಪರ್ಧಿಸಿದ್ದ ರಾಮಕೃಷ್ಣ ಹೆಗಡೆ ಈ ಮೂಲಕ ರಾಷ್ಟ್ರ ರಾಜಕಾರಣದತ್ತ ಮುಖ ಮಾಡಿದ್ದರು. ರಾಜೀವ್‌ಗಾಂಧಿ ಅವರ ಸಾವಿನಿಂದ ಹುಟ್ಟಿಕೊಂಡ ಅನುಕಂಪದ ಅಲೆ, ಮುಖ್ಯಮಂತ್ರಿಯಾಗಿದ್ದ ಎಸ್‌.ಬಂಗಾರಪ್ಪ ಅವರ ಯತ್ನ, ಬ್ಯಾರೇಜ್‌ ನಿರ್ಮಾಣದ ಮೂಲಕ ಹೆಸರು ಮಾಡಿದ್ದ ಸಿದ್ದು ನ್ಯಾಮಗೌಡರ ಹೋರಾಟದ ಫಲವಾಗಿ ಹೆಗಡೆ ಸೋಲನುಭವಿಸಿದರು. 

ಬಾಗಲಕೋಟೆಯಿಂದ ರಾಮಕೃಷ್ಣ ಹೆಗಡೆ ಸ್ಪರ್ಧೆಯ ಸುಳಿವು ದೊರೆಯುತ್ತಿದ್ದಂತೆಯೇ ಮುಖ್ಯಮಂತ್ರಿಯಾಗಿದ್ದ ಎಸ್‌.ಬಂಗಾರಪ್ಪ ಚಿಕ್ಕಪಡಸಲಗಿ ಬಳಿ ಶ್ರಮಬಿಂದು ಬ್ಯಾರೇಜ್‌ ನಿರ್ಮಿಸಿ ಸುದ್ದಿಯಾಗಿದ್ದ ಸಿದ್ದು ನ್ಯಾಮಗೌಡರನ್ನು ಕಣಕ್ಕಿಳಿಸಿದರು. ಜೊತೆಗೆ ಎಲ್ಲ ರೀತಿಯ ನೆರವನ್ನೂ ನೀಡಿ ಹೆಗಡೆ ವಿರುದ್ಧ ಚಕ್ರವ್ಯೂಹ ಹೆಣೆದರು.

ಉತ್ತರ ಕರ್ನಾಟಕ ಲಿಂಗಾಯತ ಸಮಾಜದ ಪ್ರಶ್ನಾತೀತ ನಾಯಕರಾಗಿದ್ದ ಹೆಗಡೆ ಅವರು, ಬಾಗಲಕೋಟೆ ಸುರಕ್ಷಿತ ಕ್ಷೇತ್ರವೆಂದೇ ಕಣಕ್ಕಿಳಿದಿದ್ದರು. ಜೊತೆಗೆ ಆಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಾಗಲಕೋಟೆ, ಬೀಳಗಿ, ಗುಳೇದಗುಡ್ಡ, ಬಾದಾಮಿ ವಿಧಾನಸಭೆ ಕ್ಷೇತ್ರಗಳಲ್ಲಿ ಜನತಾ ದಳದ ಶಾಸಕರೇ ಇದ್ದರು. ಶಾಸಕರು ಆಯ್ಕೆಯಾಗಿದ್ದರು.

ರಾಮಕೃಷ್ಣ ಹೆಗಡೆ
ರಾಮಕೃಷ್ಣ ಹೆಗಡೆ

ಹೆಗಡೆ ಅವರಿಗಿದ್ದ ಜನಪ್ರಿಯತೆ, ಜೀವರಾಜ ಆಳ್ವಾ ನೇತೃತ್ವದ ಚುನಾವಣಾ ಉಸ್ತುವಾರಿಯಿಂದಾಗಿ ಆರಂಭದ ದಿನಗಳಲ್ಲಿ ಹೆಗಡೆ ಅವರ ಪರವಾದ ಅಲೆಯಿತ್ತು. ಇನ್ನೊಂದೆಡೆ ಅಭ್ಯರ್ಥಿಯ ಹಿಂದೆ ನಿಂತಿದ್ದ ಬಂಗಾರಪ್ಪ ಅವರು ಲಿಂಗಾಯತ ಮತಗಳ ಜೊತೆಗೆ ಹಿಂದುಳಿದ, ಮುಸ್ಲಿಂ ಸೇರಿದಂತೆ ವಿವಿಧ ಸಮುದಾಯಗಳ ಮತ ಒಗ್ಗೂಡಿಸುವಲ್ಲಿ ಯಶಸ್ವಿಯಾದ ಕಾರಣ ಅವರಿಗೆ ಹಿನ್ನಡೆಯಾಯಿತು.

ಮತದಾನ ಕೆಲವೇ ದಿನಗಳು ಇರುವಾಗ ರಾಜೀವ್‌ ಗಾಂಧಿ ಅವರ ಹತ್ಯೆಯಾದದ್ದು ಅವರ ಪ್ರಮುಖ ಹಿನ್ನಡೆಗೆ ಕಾರಣವಾಯಿತು. ಅನುಕಂಪದ ಅಲೆಯಲ್ಲಿ ಹೆಗಡೆ ಅವರ ಪ್ರಭಾವ ಕೊಚ್ಚಿ ಹೋಯಿತು.

6,12,827(ಶೇ64.33ರಷ್ಟು) ಮತಗಳು ಚಲಾವಣೆಯಾಗಿದ್ದವು. ಸಿದ್ದು ನ್ಯಾಮಗೌಡ 2,76,849 ಮತಗಳನ್ನು ಪಡೆದರೆ, ರಾಮಕೃಷ್ಣ ಹೆಗಡೆ ಅವರು 2,55,645 ಮತಗಳನ್ನು ಪಡೆದು 21,204 ಮತಗಳಿಂದ ಸೋತರು. ಮೊದಲ ಬಾರಿಗೆ ಬಿಜೆಪಿ ಕಣದಲ್ಲಿತ್ತು. ಆ ಪಕ್ಷದಿಂದ ಸ್ಪರ್ಧಿಸಿದ್ದ ಪಿ.ಎಚ್.ಪೂಜಾರ 33,681 ಮತಗಳನ್ನು ಪಡೆದಿದ್ದರು.

ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಿದ್ದು ನ್ಯಾಮಗೌಡ
ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಿದ್ದು ನ್ಯಾಮಗೌಡ
ಬ್ಯಾರೇಜ್‌ ನಿರ್ಮಾಣದ ಸಾಧನೆ
ಬಾಗಲಕೋಟೆ: ಚಿಕ್ಕಪಡಸಲಗಿ ಬಳಿ ಶ್ರಮಬಿಂದು ಸಾಗರ ಬ್ಯಾರೇಜ್‌ ನಿರ್ಮಾಣದ ಮೂಲಕ ಜಮೀನು ಹಾಗೂ ಕುಡಿಯುವ ನೀರು ಒದಗಿಸುವ ಯೋಜನೆಯನ್ನು ಸಿದ್ದು ನ್ಯಾಮಗೌಡ ಕೈಗೆತ್ತಿಕೊಂಡಿದ್ದರು. ಸರ್ಕಾರ ಆರ್ಥಿಕ ನೆರವು ನೀಡಲು ನಿರಾಕರಿಸಿದ್ದರಿಂದ ರೈತರೆಲ್ಲರೂ ಸೇರಿ ಹಣ ಬಾಕಿ ಬ್ಯಾರೇಜ್‌ ನಿರ್ಮಾಣ ಮಾಡಿದರು. ರೈತರೇ ನಿರ್ಮಿಸಿದ ಮೊದಲ ಬ್ಯಾರೇಜ್‌ ಎಂಬ ಹೆಗ್ಗಳಿಕೆ ಇದಾಗಿತ್ತು. ಇಂದಿಗೂ ಬ್ಯಾರೇಜ್‌ ನೀರಿನ ಲಾಭ ರೈತರಿಗೆ ದೊರೆಯುತ್ತಿದೆ. ಆ ನಂತರ ಜಿಲ್ಲೆಯಲ್ಲಿ ಬಹಳಷ್ಟು ಬ್ಯಾರೇಜ್‌ಗಳು ಸರ್ಕಾರದಿಂದಲೇ ನಿರ್ಮಾಣವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT