ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕ ಚರಿತ್ರೆ | ಕಲಬುರಗಿ: ಪಾಟೀಲರ ‘ಅರ್ಹತೆ’ಗೆ ಮನಸೋತ ‘ಇಂದಿರಾ’

ಇಂದಿರಾ ವಿರುದ್ಧ ಸ್ಪರ್ಧಿಸಿ ಸೋತ ವೀರೇಂದ್ರ ಪಾಟೀಲ: ಇಂದಿರಾ ಸಂಪುಟದಲ್ಲೇ ಮಂತ್ರಿಯಾದರು
Published 12 ಏಪ್ರಿಲ್ 2024, 5:22 IST
Last Updated 12 ಏಪ್ರಿಲ್ 2024, 5:22 IST
ಅಕ್ಷರ ಗಾತ್ರ

ಕಲಬುರಗಿ: ಪಕ್ಷಾಂತರ, ರಾಜಕೀಯ ಏಳು–ಬೀಳು, ಸೋಲು–ಗೆಲವಿನ ನಡುವೆ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ವೀರೇಂದ್ರ ಪಾಟೀಲ ಅವರು, ಉಕ್ಕಿನ ಮಹಿಳೆ ಎಂದೇ ಖ್ಯಾತರಾಗಿದ್ದ ಇಂದಿರಾಗಾಂಧಿ ಅವರ ವಿರುದ್ಧವೇ ಸ್ಪರ್ಧಿಸಿ ಸೋತು, ರಾಜಕೀಯ ಸ್ಥಿತ್ಯಂತರದಿಂದಾಗಿ ಇಂದಿರಾ ಅವರ ‘ಕ್ಯಾಬಿನೆಟ್‌’ನಲ್ಲಿ ಕೇಂದ್ರ ಸಚಿವರಾದ ಹೆಗ್ಗಳಿಗೆ ಪಾಟೀಲರದ್ದು.

ಎಸ್‌.ನಿಜಲಿಂಗಪ್ಪ, ಸ್ವಾಮಿ ರಮಾನಂದ ತೀರ್ಥ ಹಾಗೂ ಚಂದ್ರಶೇಖರ ಪಾಟೀಲರ ಗರಡಿಯಲ್ಲಿ ರಾಜಕೀಯ ಮಜಲುಗಳ ಶಿಕ್ಷಣ ಪಡೆದ ವೀರೇಂದ್ರ ಪಾಟೀಲರು ರಾಜಕಾರಣದಲ್ಲಿ ಸಿಹಿಯಷ್ಟೇ ಕಹಿಯನ್ನೂ ಉಂಡವರು. ಆಳಂದ ಮತ್ತು ಚಿಂಚೋಳಿಯಲ್ಲಿ ಕಾಂಗ್ರೆಸ್‌ ಮೂಲಕ ರಾಜಕೀಯಕ್ಕೆ ಪಾದಾರ್ಪಣೆ ಮಾಡಿ, ರಾಜ್ಯದಲ್ಲಿ ವರ್ಚಸ್ಸುಳ್ಳ ರಾಜಕಾರಣಿಯಾಗಿ ಬೆಳೆದರು. ಮುಂದೆ ಚಿಕ್ಕಮಗಳೂರು, ಬಾಗಲಕೋಟೆ ಹಾಗೂ ಕಲಬುರಗಿ ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಹೆಗ್ಗಳಿಕೆಯೂ ಪಾಟೀಲರಿಗೆದೆ.

ಬದಲಾದ ರಾಜಕೀಯದಿಂದ ಪಾಟೀಲರು ಜನತಾ ಪಕ್ಷ ಸೇರ್ಪಡೆಯಾಗಿ, ಇಂದಿರಾ ವಿರುದ್ಧವೇ ಚುನಾವಣೆ ಕಣಕ್ಕೆ ಇಳಿದಿದ್ದರು. 1975ರಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರು ತುರ್ತುಪರಿಸ್ಥಿತಿ ಘೋಷಿಸಿದ್ದರು. ಆ ಬಳಿಕ ನಡೆದ ಲೋಕಸಭಾ ಚುನಾವಣೆಯಲ್ಲಿ (1977) ರಾಯ್ ಬರೇಲಿ ಕ್ಷೇತ್ರದಲ್ಲಿ ರಾಜ್ ನಾರಾಯಣ್ ವಿರುದ್ಧ ಇಂದಿರಾ ಪರಾಭವಗೊಂಡಿದ್ದರು. ಕಳೆದುಕೊಂಡ ಲೋಕಸಭಾ ಸದಸ್ಯತ್ವ ಪಡೆಯಲು ಚಿಕ್ಕಮಗಳೂರು ಲೋಕಸಭಾ ಉಪ ಚುನಾವಣೆಗೆ (1978) ಇಂದಿರಾ ಸ್ಪರ್ಧಿಸಿದ್ದರು.

ಇಂದಿರಾ ಅವರನ್ನು ಎದುರು ಹಾಕಿಕೊಂಡು ಅವರ ವಿರುದ್ಧ ನಿಲ್ಲುವ ಧೈರ್ಯವನ್ನು ರಾಜ್ಯದ ಯಾವೊಬ್ಬ ನಾಯಕರೂ ಮಾಡಲಿಲ್ಲ. ನಿಂತರೆ ಠೇವಣಿ ಕಳೆದುಕೊಂಡೆವು ಎಂಬ ಭಯವೂ ಕಾಡಿತ್ತು. ಜನತಾ ಪಕ್ಷದ ಮುಖಂಡರು ಪಾಟೀಲರೇ ಸರಿಯಾದ ಸ್ಪರ್ಧಿ ಎಂದು ಭಾವಿಸಿದ್ದರು. ಆದರೆ, ಪಾಟೀಲರು, ‘ನಾನು ನನ್ನ ಜೀವನದಲ್ಲಿ ಸೋತಿಲ್ಲ. ಚಿಕ್ಕಮಗಳೂರಿನಂತಹ ಸೋಲುವ ಜಾಗದಲ್ಲಿ ಅದು, ಇಂದಿರಾಗಾಂಧಿ ಅವರ ವಿರುದ್ಧ ನಿಲ್ಲಲು ತಯಾರಿಲ್ಲ’ ಎಂದು ಕಡ್ಡಿ ಮುರಿದಂತೆ ನುಡಿದರು. ಮೊರಾರ್ಜಿ ದೇಸಾಯಿ, ಜಾರ್ಜ್ ಫರ್ನಾಂಡಿಸ್ ಸೇರಿ ಮುಂತಾದವರು, ‘ನೀವು ನಿಲ್ಲಲೇಬೇಕು. ಬೇರೆ ಯಾರಾದರೂ ನಿಂತರೆ ಠೇವಣಿ ಸಹ ಉಳಿಯುವುದಿಲ್ಲ’ ಎಂದು ಪಾಟೀಲರ ಮನವೊಲಿಸಿ ಕಣಕ್ಕೆ ಇಳಿಸಿದರು.

ಇಂದಿರಾಗಾಂಧಿ ಅವರಿಗೆ ರಾಜಕೀಯ ಪುನರ್ಜನ್ಮ ನೀಡಿದ ಚಿಕ್ಕಮಗಳೂರು ಉಪಚುನಾವಣೆಯು ಆಗ ಜಗತ್ತಿನ ಗಮನ ಸೆಳೆದಿತ್ತು. ಚುನಾವಣೆಯ ಕಣದಲ್ಲಿ 28 ಅಭ್ಯರ್ಥಿಗಳಿದ್ದರು. ಇಂದಿರಾ ಅವರು 2,49,376 ಮತಗಳನ್ನು ಪಡೆದರೆ, ಜನತಾ ಪಕ್ಷದ ವಿರೇಂದ್ರ ಪಾಟೀಲ ಅವರು 1,72,043 ಮತ ಪಡೆದು 77,333 ಮತಗಳ ಅಂತರದಿಂದ ಸೋತರು.

ಚಿಕ್ಕಮಗಳೂರು ಉಪಚುನಾವಣೆಯ ಬಳಿಕ ಪಾಟೀಲರು ಜನತಾ ಪಕ್ಷದಿಂದ ದೂರ ಸರಿಯುತ್ತಿದ್ದಾರೆ ಎಂಬ ವಿಷಯ ತಿಳಿದ ತಕ್ಷಣವೇ ಇಂದಿರಾ ಅವರು ಪ್ರಣಬ್ ಮುಖರ್ಜಿ ಮೂಲಕ ಕಾಂಗ್ರೆಸ್‌ನಲ್ಲಿ ಪಾಟೀಲರಿಗೆ ‘ಸೂಕ್ತ ಸ್ಥಾನ’ವಿದೆ ಬರುವಂತೆ ಆಹ್ವಾನ ಕೊಟ್ಟರು.

‘ಘರ್‌ ವಾಪಸಿ’ಗೂ ಮುನ್ನ ಇಂದಿರಾ ಅವರನ್ನು ಭೇಟಿಯಾದ ಪಾಟೀಲರು, ‘ನಾನು ನಿಮ್ಮ ವಿರುದ್ಧವೇ ಸ್ಪರ್ಧಿಸಿದ್ದೆ. 10 ವರ್ಷ ವಿರೋಧ ಪಕ್ಷದಲ್ಲಿದ್ದು, ನಿಮ್ಮ ವಿರುದ್ಧವೇ ಕೆಲಸ ಮಾಡಿದ್ದೆ. ಹೀಗಿದ್ದರೂ ನನಗೆ ತಮ್ಮ ಪಕ್ಷಕ್ಕೆ ಬರಲು ಆಹ್ವಾನಿಸುತ್ತಿದ್ದೀರಾ’ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಇಂದಿರಾ, ‘ಪಕ್ಷದ ಶಿಸ್ತಿಗೆ ಬದ್ಧರಾಗಿ ಜನತಾ ಪಕ್ಷದ ಅಭ್ಯರ್ಥಿಯಾಗಿ ನನ್ನ ವಿರುದ್ಧ ಸ್ಪರ್ಧಿಸಿದ್ದೀರಿ. ರಾಜಕೀಯದಲ್ಲಿ ‘ಅರ್ಹತೆ’ ಇರುವವರು ಕಡಿಮೆ. ನಾನು, ‘ಅರ್ಹರ’ನ್ನು ಮೆಚ್ಚುತ್ತೇನೆ’ ಎಂದು ಪಾಟೀಲ ಹಾಗೂ ಅವರ ಬೆಂಬಲಿಗರನ್ನು ಸೇರ್ಪಡೆ ಮಾಡಿಕೊಂಡರು.

ಇಂದಿರಾಗಾಂಧಿ
ಇಂದಿರಾಗಾಂಧಿ

ಬಾಗಲಕೋಟೆಯಲ್ಲಿ ರಾಜಕೀಯ ಪುನರ್ಜನ್ಮ: ಒಲಿದ ಕೇಂದ್ರ ಮಂತ್ರಿಗಿರಿ

1980ರ ಲೋಕಸಭಾ ಚುನಾವಣೆಯಲ್ಲಿ ಪಾಟೀಲರು ಸ್ಪರ್ಧಿಸಬೇಕು ಎಂದು ಇಂದಿರಾಗಾಂಧಿ ಅವರು ಸೂಚಿಸಿದ್ದರು. ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತ ಇತ್ತು. ಆದರೆ 10 ವರ್ಷ ಇಂದಿರಾ ಅವರ ಪಕ್ಷವನ್ನು ಟೀಕಿಸಿ ಅದೇ ಪಕ್ಷದಿಂದ ನನಗೆ ಮತ ನೀಡಿ ಎಂದು ಕೇಳುವುದು ಹೇಗೆ? ಜನರು ಕೊಂಕು ನುಡಿದರೆ ಹೇಗೆಂದು ಚಿಂತಿಸಿದ ಪಾಟೀಲರು ಸ್ಪರ್ಧೆಗೆ ಹಿಂದೇಟು ಹಾಕಿದ್ದರು. ಪಾಟೀಲರು ತಮ್ಮ ಸ್ನೇಹಿತ ಎಸ್‌.ಎನ್‌. ಮೆಳ್ಳಿಗೇರಿ ಅವರ ಒತ್ತಾಯದ ಮೇರೆಗೆ ಬಾಗಲಕೋಟೆ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಈ ಹಿಂದೆ ನಡೆದ ಚುನಾವಣೆಗಳಲ್ಲಿಯೂ ಕಾಂಗ್ರೆಸ್ಸಿನ ಎಸ್‌.ಎಸ್‌. ಪಾಟೀಲ ಅವರು ನಿರಾಯಾಸವಾಗಿ ಗೆಲುವು ಸಾಧಿಸಿದ್ದರು. ಕಾಂಗ್ರೆಸ್ಸಿನ ಭದ್ರಕೋಟೆಯೂ ಎನಿಸಿಕೊಂಡಿತ್ತು. ಈ ಕ್ಷೇತ್ರದಲ್ಲಿ ಲಿಂಗಾಯತರು ಬಹುಸಂಖ್ಯಾತರಾಗಿದ್ದರು. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ವೀರೇಂದ್ರ ಪಾಟೀಲರು ಬಾಗಲಕೋಟೆಯಿಂದ ಕಣಕ್ಕಿಳಿದಿದ್ದರು. ವೀರೇಂದ್ರ ಪಾಟೀಲರು 245812 ಮತಗಳಿಸಿದರೆ ಹುಂಡೇಕಾರ 91839 ಹಾಗೂ ವಾಸಣ್ಣ ದೇಸಾಯಿ 64132 ಮತ ಪಡೆದಿದ್ದರು. ಪಾಟೀಲರು 153973 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದರು. ಮುಂದೆ ಇಂದಿರಾ ಸಂಪುಟದಲ್ಲಿ ಪೆಟ್ರೋಲಿಯಂ ಹಡಗು ಮತ್ತು ಸಾರಿಗೆ ಹಾಗೂ ಕಾರ್ಮಿಕ ಇಲಾಖೆಯ ಸಚಿವರಾದರು. ರಾಜೀವ ಗಾಂಧಿ ಅವರ ಸಂಪುಟದಲ್ಲಿ ಕಾರ್ಮಿಕ ಹಡಗು ಮತ್ತು ರಾಸಾಯನಿಕ ಖಾತೆಗಳನ್ನು ನಿಭಾಯಿಸಿದರು.

ಸ್ವಕ್ಷೇತ್ರದಲ್ಲಿ ಗೆಲುವು: ಕ್ಷೇತ್ರ ತ್ಯಾಗ

ರಾಜಕೀಯ ಪುನರ್ಜನ್ಮಪಡೆದು ಸ್ವಕ್ಷೇತ್ರ ಕಲಬುರಗಿ ಲೋಕಸಭಾ ಚುನಾವಣೆಯಲ್ಲಿ (1984) ಸ್ಪರ್ಧಿಸಿದ್ದರು. ಜೆಎನ್‌ಪಿಯ ವಿದ್ಯಾಧರ ಗುರೂಜಿ ವಿರುದ್ಧ 235751 ಮತಗಳನ್ನು ಪಡೆದು 95490 ಮತಗಳ ಅಂತರದಿಂದ ಗೆದ್ದರು. 1989ರಲ್ಲಿ ಲೋಕಸಭಾ ಕ್ಷೇತ್ರವನ್ನು ಅಳಿಯ ಡಾ. ಬಿ.ಜಿ. ಜವಳಿ ಅವರಿಗೆ ಬಿಟ್ಟು ಕೊಟ್ಟ ಪಾಟೀಲರು ತಾವು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದರು. ಮಾವನ ನೆರಳಲ್ಲಿ ಸ್ಪರ್ಧಿಸಿದ್ದ ಬಿ.ಜಿ. ಜವಳಿ ಅವರು ಸತತ ಎರಡು (1989 & 1991) ಬಾರಿ ಸಂಸದರಾದರು. ಮೂವರಿಗೆ ಮಂತ್ರಿ ಸ್ಥಾನ: ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಸಂಸರಾದವರ ಪೈಕಿ ಮೂವರಿಗೆ ಮಾತ್ರವೇ ಕೇಂದ್ರ ಸಚಿವ ಸ್ಥಾನ ಒಲಿದೆ. ವೀರೇಂದ್ರ ಪಾಟೀಲ ಸಿ.ಎಂ. ಸ್ಟೀಫನ್ ಹಾಗೂ ಈಗಿನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ಸಚಿವರಾಗಿ ಕೆಲಸ ಮಾಡಿದರು.

ವೀರೇಂದ್ರ ಪಾಟೀಲ

ವೀರೇಂದ್ರ ಪಾಟೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT