ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖಾಮುಖಿ: ಕಲ್ಯಾಣ್‌ (ಮಹಾರಾಷ್ಟ್ರ)

Published 7 ಏಪ್ರಿಲ್ 2024, 23:30 IST
Last Updated 7 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ಶ್ರೀಕಾಂತ್‌ ಶಿಂದೆ (ಶಿವಸೇನಾ ಏಕನಾಥ ಶಿಂದೆ ಬಣ)

ಮಹಾರಾಷ್ಟ್ರದ ಪ್ರತಿಷ್ಠಿತ ಲೋಕಸಭಾ ಕ್ಷೇತ್ರಗಳಲ್ಲೊಂದಾದ ಕಲ್ಯಾಣ್‌ ಕ್ಷೇತ್ರದಿಂದ ‘ಮಹಾಯುತಿ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಶಿವಸೇನಾ ಏಕನಾಥ ಶಿಂದೆ ಬಣವು ಮುಖ್ಯಮಂತ್ರಿ ಏಕನಾಥ ಶಿಂದೆ ಅವರ ಮಗ ಶ್ರೀಕಾಂತ್‌ ಶಿಂದೆ ಅವರನ್ನು ಕಣಕ್ಕಿಳಿಸಿದೆ. ಶ್ರೀಕಾಂತ್‌ ಅವರು ಕಳೆದ ಚುನಾವಣೆಯಲ್ಲಿ 2,50,749 ಮತಗಳ ಅಂತರದಿಂದ ಎನ್‌ಸಿಪಿಯ ಬಾಬಾಜಿ ಬಲರಾಮ್ ಪಾಟೀಲ್ ಅವರನ್ನು ಇಲ್ಲಿ ಸೋಲಿಸಿದ್ದರು. ಕಲ್ಯಾಣ್‌ ಕ್ಷೇತ್ರವನ್ನು ತನಗೆ ಬಿಟ್ಟು ಕೊಡಬೇಕು ಎಂದು ಬಿಜೆಪಿ ಪಟ್ಟುಹಿಡಿದಿತ್ತು. ಇದು ಮೈತ್ರಿಯಲ್ಲಿ ಬಿಕ್ಕಟ್ಟಿಗೂ ಕಾರಣವಾಗಿತ್ತು. ಆದರೆ, ಈ ಕ್ಷೇತ್ರವನ್ನು ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ಶಿವಸೇನಾ ಕೊನೆಗೂ ಯಶಸ್ವಿಯಾಗಿದೆ. ವೃತ್ತಿಯಲ್ಲಿ ವೈದ್ಯರಾಗಿರುವ ಶ್ರೀಕಾಂತ್‌ ಅವರು ಈ ಕ್ಷೇತ್ರದಲ್ಲಿ ಹೆಚ್ಚು ಪ್ರಭಾವ ಹೊಂದಿದ್ದಾರೆ. ಈ ಬಾರಿ ಶಿವಸೇನಾದ ಎರಡು ಬಣಗಳ ಅಭ್ಯರ್ಥಿಗಳು ಪರಸ್ಪರ ಸೆಣಸಲಿರುವುದರಿಂದ ಕಣವು ಹೆಚ್ಚು ರಂಗೇರಿದೆ.

****

ವೈಶಾಲಿ ದರೇಕರ್‌ ರಾಣೆ, ಶಿವಸೇನಾ (ಯುಬಿಟಿ) 

ಕಲ್ಯಾಣ್‌ ಕ್ಷೇತ್ರದಲ್ಲಿ ಶ್ರೀಕಾಂತ್‌ ಶಿಂದೆ ವಿರುದ್ಧ ಸೆಣಸಲು ಶಿವಸೇನಾ ಉದ್ಧವ್‌ ಠಾಕ್ರೆ ಬಣವು (ಯುಬಿಟಿ), ವೈಶಾಲಿ ದರೇಕರ್‌ ರಾಣೆ ಅವರನ್ನು ಅಖಾಡಕ್ಕಿಳಿಸಿದೆ. ಎರಡು ಬಾರಿ ಕಲ್ಯಾಣ್‌ ಡೊಂಬಿವಲಿ ಮಹಾನಗರ ಪಾಲಿಕೆ ಸದಸ್ಯೆಯಾಗಿ ಆಯ್ಕೆಯಾಗಿದ್ದ ಇವರು, 2009ರಲ್ಲಿ ಇದೇ ಕ್ಷೇತ್ರದಿಂದ ಮಹಾರಾಷ್ಟ್ರ ನವನಿರ್ಮಾಣ ಸೇನಾದಿಂದ (ಎಂ.ಎನ್‌.ಎಸ್‌) ಸ್ಪರ್ಧಿಸಿ ಸೋತಿದ್ದರು. ಆದರೆ 1,02,063 ಮತಗಳನ್ನು ಪಡೆಯುವಲ್ಲಿ  ಯಶಸ್ವಿಯಾಗಿದ್ದರು. ಈ ಸಲ ಶಿವಸೇನಾವು (ಯುಬಿಟಿ) ಇಂಡಿಯಾ ಒಕ್ಕೂಟದಲ್ಲಿರುವುದು ವೈಶಾಲಿ ಅವರ ಗೆಲುವಿನ ವಿಶ್ವಾಸ ಹೆಚ್ಚಿಸಿದೆ. ರಾಜ್‌ ಠಾಕ್ರೆ ಅವರು ಶಿವಸೇನಾ ತೊರೆದು ಎಂ.ಎನ್‌.ಎಸ್‌ ಸ್ಥಾಪಿಸಿದಾಗ ವೈಶಾಲಿ ಕೂಡ ಶಿವಸೇನಾ ತೊರೆದಿದ್ದರು. 2016ರಲ್ಲಿ ಶಿವಸೇನಾಗೆ ಮರಳಿದ್ದರು. ವೈಶಾಲಿ ಅವರು ಸ್ಥಳೀಯವಾಗಿ ಪ್ರಭಾವವಿರುವ ನಾಯಕಿಯಾಗಿರುವುದರಿಂದ ಜನರು ಈ ಬಾರಿ ಅವರ ಕೈಹಿಡಿಯಬಹುದು ಎಂಬ ವಿಶ್ವಾಸದಲ್ಲಿದ್ದಾರೆ ಶಿವಸೇನಾ (ಯುಬಿಟಿ) ಮುಖಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT