ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧೀಜಿ ಕೊಂದವರಿಂದ ದೇಶಪ್ರೇಮದ ಪಾಠ: ಶಾಸಕ ಡಾ.ಕೆ.ಸುಧಾಕರ್ ಟೀಕೆ

ಬೂತ್‌ ಮಟ್ಟದ ಕಾಂಗ್ರೆಸ್‌ ಕಾರ್ಯಕರ್ತರ ಸಭೆ
Last Updated 1 ಏಪ್ರಿಲ್ 2019, 13:37 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಬ್ರೀಟಿಷರನ್ನು ಭಾರತದಲ್ಲಿ ಇರಿ ಎಂದು ಹೇಳಿದವರು, ಮಹಾತ್ಮ ಗಾಂಧೀಜಿ ಅವರನ್ನು ಕೊಂದಂತಹ ಬಿಜೆಪಿ ಅವರು ಇವತ್ತು ಭಾರತ ಮಾತಾಕೀ ಜೈ ಎನ್ನುತ್ತ ನಮಗೆ ದೇಶ ಪ್ರೇಮದ ಬಗ್ಗೆ ಪಾಠ ಹೇಳುತ್ತಿರುವುದು ವಿಪರ್ಯಾಸ’ ಎಂದು ಶಾಸಕ ಡಾ.ಕೆ.ಸುಧಾಕರ್ ಹೇಳಿದರು.

ತಾಲ್ಲೂಕಿನ ಮಂಡಿಕಲ್ ಹೋಬಳಿ ವ್ಯಾಪ್ತಿಯ ಕಮ್ಮಗುಟ್ಟಹಳ್ಳಿ, ಮಂಡಿಕಲ್, ಅಡ್ಡಗಲ್‌ನಲ್ಲಿ ಸೋಮವಾರ ಬೂತ್‌ ಮಟ್ಟದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

‘ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕ ಕಾಂಗ್ರೆಸಿಗರು ಪ್ರಾಣ ತ್ಯಾಗ ಮಾಡಿದ್ದಾರೆ. ದೇಶದಲ್ಲಿ ಇವತ್ತು ಅನೇಕ ಭಾಷೆಗಳು, ಧರ್ಮಗಳು, ಸಾವಿರಾರು ಜಾತಿಗಳ ಜನರು ಕಳೆದ 60 ವರ್ಷಗಳಿಂದ ಶಾಂತಿಯಿಂದ ಬದುಕುತ್ತಿದ್ದೇವೆ. ಆದರೆ ಇತ್ತೀಚೆಗೆ ಕೆಲವು ರಾಜಕೀಯ ಪಕ್ಷಗಳು ದೇಶಪ್ರೇಮಿಗಳಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ಇವತ್ತು ಭಾರತ ಮಾತಾಕೀ ಜೈ ಎನ್ನುವ ಹಕ್ಕಿರುವುದು ಕಾಂಗ್ರೆಸಿಗೆ’ ಎಂದು ಅಭಿಪ್ರಾಯಪಟ್ಟರು.

‘ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬದ್ಧ ವೈರಿಗಳಂತೆ ಹೋರಾಟ ಮಾಡಿದ ಕಾಂಗ್ರೆಸ್‌–ಜೆಡಿಎಸ್ ಪಕ್ಷಗಳು ರಾಜ್ಯದಲ್ಲಿ ಕೋಮುವಾದಿ ಬಿಜೆಪಿಯನನು ಅಧಿಕಾರದಿಂದ ದೂರವಿಡಬೇಕು ಎಂಬ ಏಕೈಕ ಉದ್ದೇಶದಿಂದ ಒಂದಾಗಿವೆ. ಆ ಕಾರಣಕ್ಕೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆ ಮಾಡಲಾಗಿದೆ. ಈ ಸರ್ಕಾರ ಸುಭದ್ರವಾಗಿ ಉಳಿಯಬೇಕಾದರೆ ಈ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಬೇಕಾದ ಅನಿವಾರ್ಯತೆ ಇದೆ’ ಎಂದು ತಿಳಿಸಿದರು.

‘ಸಂವಿಧಾನ ಪುನರ್ ರಚನೆ ಆಗಬೇಕಾದರೆ, ಮೀಸಲಾತಿ ತೆಗೆಯಬೇಕಾದರೆ, ರೈತರು ಇನ್ನಷ್ಟು ಹಾಳಾಗಬೇಕಾದರೆ, ನಿರುದ್ಯೋಗ ಸಮಸ್ಯೆ ಹೆಚ್ಚಾಗಬೇಕಾದರೆ, ಜಿಲ್ಲೆ ಮರುಭೂಮಿ ಆಗಬೇಕಾದರೆ ಇವತ್ತು ಬೇರೆ ಪಕ್ಷಗಳಿಗೆ ಮತ ನೀಡಿ. ಈ ಸಮಸ್ಯೆಗಳೆಲ್ಲ ಪರಿಹಾರವಾಗಬೇಕಾದರೆ ಕಾಂಗ್ರೆಸ್‌ಗೆ ಮತ ನೀಡಬೇಕು’ ಎಂದರು.

‘ಕೇವಲ ಪ್ರಚಾರದಲ್ಲಿ ತೊಡಗಿಸಿಕೊಂಡವರು ಏನಾದರೂ ಅಧಿಕಾರಕ್ಕೆ ಬಂದರೆ ನಿಮ್ಮ ಬದುಕು ಇನ್ನಷ್ಟು ಜಟೀಲವಾಗುತ್ತದೆ. ಆದ್ದರಿಂದ ಬೂತ್‌ ಮಟ್ಟದಲ್ಲಿ ಜವಾಬ್ದಾರಿ ಹೊತ್ತವರು ಹೆಚ್ಚಿನ ಕೆಲಸ ಮಾಡಬೇಕು. ಕೆಲಸ ಮಾಡಲು ಆಗದವರನ್ನು ತೆಗೆದುಹಾಕಲಾಗುತ್ತದೆ. ಈ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಎಂ.ವೀರಪ್ಪ ಮೊಯಿಲಿ ಅವರು ಗೆಲ್ಲಲೇ ಬೇಕು’ ಎಂದು ಹೇಳಿದರು.

‘ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ದೇಶದ ಬಡವರಿಗೆ ಪ್ರತಿ ತಿಂಗಳಿಗೆ ₹6 ಸಾವಿರದಂತೆ ಕನಿಷ್ಠ ಆದಾಯ ಒದಗಿಸುವ ‘ನ್ಯಾಯ್’ ಯೋಜನೆ ಜಾರಿಗೆ ತರುವುದಾಗಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಅವರು ಭರವಸೆ ನೀಡಿದ್ದಾರೆ. ಈ ಬಗ್ಗೆ ಪಕ್ಷದ ಕಾರ್ಯಕರ್ತರು ಹೆಚ್ಚೆಚ್ಚು ಪ್ರಚಾರ ಮಾಡುವ ಜತೆಗೆ ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕೆಲಸ ಮಾಡಬೇಕು’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಎನ್ ಕೇಶವರೆಡ್ಡಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಮೋಹನ್ ರೆಡ್ಡಿ, ಎಪಿಎಂಸಿ ಸದಸ್ಯ ಗೋವಿಂದಸ್ವಾಮಿ, ಪರೇಸಂದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷ ಚನ್ನಾಕೃಷ್ಣಾರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾರಾಯಣಸ್ವಾಮಿ, ಕೆಪಿಸಿಸಿ ಕಾರ್ಯದರ್ಶಿ ಮರಳುಕುಂಟೆ ಕೃಷ್ಣಮೂರ್ತಿ ಮುಖಂಡರಾದ ಫಯಾಜ್,ಮೂರ್ತಿ, ರಾಮಸ್ವಾಮಿ, ವೆಂಕಟರವಣ, ಚಂದ್ರಶೇಖರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT