ಇಂದೋರ್ ಹುಡುಗ ಸಲೀಮ್ ಖಾನ್ ಪೊಲೀಸರ ಮಗ. ಕವಿ ಜಾನ್ ನಿಸಾರ್ ಅಖ್ತರ್ ಮಗ ಜಾವೇದ್ ಅಖ್ತರ್ ಗ್ವಾಲಿಯರ್ನಲ್ಲಿ ಹುಟ್ಟಿ, ಬೆಳೆದವರು. ಇಬ್ಬರೂ ಮಧ್ಯಪ್ರದೇಶದವರು.

ನಟನಾಗುವ ಆಸೆಯಿಂದ ಕ್ರಾಪು ತಿದ್ದಿಕೊಳ್ಳುತ್ತಿದ್ದ ಸಲೀಮ್, ನಿರ್ದೇಶಕ ಆಗಬೇಕು ಎಂದು ಕನಸು ಕಟ್ಟಿಕೊಂಡು ಮುಂಬೈ ಗಲ್ಲಿಗಳಲ್ಲಿ ಓಡಾಡಿದ ಜಾವೇದ್ ಇಬ್ಬರೂ ‘ಸರಹದಿ ಲೂಟೇರಾ’ ಸಿನಿಮಾದ ಚಿತ್ರೀಕರಣದಲ್ಲಿ ಭೇಟಿಯಾದದ್ದು.

ಸಲೀಮ್ಗೆ ಸಣ್ಣ ಪಾತ್ರ ಸಿಕ್ಕಿದ ಖುಷಿ. ಅಖ್ತರ್ ಆಗ ಕ್ಲಾಪ್ ಬಾಯ್. ಮುಂದೆ ಈ ಇಬ್ಬರೂ ಅಲೀಮ್–ಜಾವೇದ್ ಆದರು. ಸಿನಿಮಾ ಪೋಸ್ಟರ್ಗಳಲ್ಲಿ ಬರಹಗಾರರ ಹೆಸರು ಮೊದಲು ದೊಡ್ಡಕ್ಷರಗಳಲ್ಲಿ ಮೂಡುವಂತೆ ಮಾಡಿದ್ದು ಈ ಇಬ್ಬರೇ. ‘ಸೀತಾ ಔರ್ ಗೀತಾ’, ‘ದೀವಾರ್’, ‘ಶೋಲೆ’, ‘ಜಂಜೀರ್’, ‘ದೀವಾರ್’, ‘ಡಾನ್’, ‘ತ್ರಿಶೂಲ್’, ‘ಕಾಲಾ ಪತ್ತರ್’ ಹೀಗೇ ನೆನಪಿಸಿಕೊಳ್ಳುತ್ತಾ ಹೋದರೆ ಅವರು ಬರೆದಿಟ್ಟ ಹದಿನೆಂಟು ಹಿಂದಿ ಸಿನಿಮಾಗಳ ಸ್ಕ್ರಿಪ್ಟ್ಗಳು ಬೇರೆ ಬೇರೆ ಕಾರಣಕ್ಕೆ ಅಧ್ಯಯನಕ್ಕೆ ವಸ್ತುವಾಗಬಲ್ಲವು. ಕದ್ದರೂ ಗೊತ್ತೇ ಆಗದಂತೆ ಮಾರ್ಪಡಿಸುವ, ಡೈಲಾಗು ಕೇಳಿ ಜನ ಶಿಳ್ಳೆ ಹೊಡೆಯಬೇಕೆಂದು ಅಂದಾಜು ಮಾಡುತ್ತಿದ್ದ ಜಾಣ ಜೋಡಿ ಅದು. 1980ರ ದಶಕದಲ್ಲಿ ಬಿ–ಟೌನ್ನಲ್ಲಿ ಈ ಬರಹಗಾರ ದ್ವಯರದ್ದು ದೊಡ್ಡ ಹವಾ.

ಈ ಜೋಡಿಯ ಜಾವೇದ್ ಅಖ್ತರ್ ವಿಷಯಕ್ಕೆ ಜಿಗಿಯೋಣ. ಅವರು ಚಿತ್ರಕಥೆಯನ್ನಷ್ಟೇ ಅಲ್ಲ, ಹಾಡುಗಳನ್ನೂ ಬರೆದವರು. 1972ರಲ್ಲಿ ಅವರು ಹನಿ ಇರಾನಿ ಎಂಬ ನಟಿಯನ್ನು ಮದುವೆಯಾದರು. ಹತ್ತನೇ ವಯಸ್ಸಿಗೇ ಬಾಲನಟಿಯಾಗಿದ್ದ ಹನಿ, ಮದುವೆಯಾಗುವಷ್ಟರಲ್ಲಿ 22ರ ಪ್ರಾಯ. ಅಭಿನಯ ಬದುಕಿನಿಂದ ನಿವೃತ್ತರಾಗಿ ಎರಡು ಮಕ್ಕಳನ್ನು ಹಡೆದರು.

ನಲವತ್ತೊಂದನೇ ವಯಸ್ಸಿಗೆ ಹನಿ ಕೂಡ ಚಿತ್ರಕಥಾ ಲೇಖಕಿಯಾಗಿ ಬೆಳಕಿಗೆ ಬಂದರು. ‘ಲಮ್ಹೆ’, ‘ಪರಂಪರಾ’, ‘ಆಯಿನಾ’ ಹೀಗೆ ಟೇಕಾಫ್ ಆಗಿ, ‘ಡರ್’ ಸಿನಿಮಾ ಮಾಡಿದ ಸದ್ದಿನಿಂದ ಅವರು ಜನಪ್ರಿಯ ಕಥಾ ಲೇಖಕಿ ಎನಿಸಿಕೊಂಡರು. 2013ರಲ್ಲಿ ‘ಕ್ರಿಶ್ 3’ಗೆ ಚಿತ್ರಕಥೆ ಬರೆದುಕೊಟ್ಟಾಗ ಅವರಿಗೆ 63 ವರ್ಷ.

ಅವರು ಜನ್ಮವಿತ್ತ ಇಬ್ಬರು ಮಕ್ಕಳು– ಫರ್ಹಾನ್ ಅಖ್ತರ್, ಜೋಯಾ ಅಖ್ತರ್. ‘ದಿಲ್ ಚಾಹತಾ ಹೈ’ ಸಿನಿಮಾ ಮೂಲಕ ಫರ್ಹಾನ್ ನಿರ್ದೇಶಕನಾಗುವ ಕನಸನ್ನು ನನಸಾಗಿಸಿಕೊಂಡರು. ಆಮೇಲೆ ಅವರು ನಟನಾಗಿ, ಪಾತ್ರದ ಅಗತ್ಯಕ್ಕೆ ತಕ್ಕಂತೆ ದೇಹಾಕಾರವನ್ನೂ ಬದಲಿಸಿಕೊಂಡು ಅಪರೂಪದ ಸಿನಿಮೋಹಿ ಎನಿಸಿಕೊಂಡರು. ಹನಿ ಕಥೆ ಮಾಡಿದ್ದ ‘ಡರ್’ ಸಿನಿಮಾದಲ್ಲಿ ನಟನಾಗಿ ಜಿಗಿತ ಕಂಡವರು ಶಾರುಖ್ ಖಾನ್. ಈ ಖಾನ್ ‘ಡಾನ್’ನ ಮರುಸೃಷ್ಟಿಯಲ್ಲಿ ಮಿಂಚಲು ಕಾರಣ ಫರ್ಹಾನ್. ಹದಿನಾಲ್ಕು ವರ್ಷಗಳಲ್ಲಿ ನಿರ್ದೇಶನ, ನಿರ್ಮಾಣ, ಅಭಿನಯ, ಹಾಡುಗಾರಿಕೆ ಎಂದೆಲ್ಲಾ ಇಪ್ಪತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ಫರ್ಹಾನ್ ತೊಡಗಿಕೊಂಡರು.

ಫರ್ಹಾನ್ಗಿಂತ ಎರಡು ವರ್ಷ ದೊಡ್ಡವರು ಜೋಯಾ (43 ವರ್ಷ). ‘ಲಕ್ ಬೈ ಚಾನ್ಸ್’ನಿಂದ ‘ದಿಲ್ ಧಡಕ್ನೆ ದೊ’ವರೆಗೆ ನಾಲ್ಕು ಸಿನಿಮಾಗಳಿಗೆ ಅವರೂ ಆ್ಯಕ್ಷನ್/ಕಟ್ ಹೇಳಿದವರೇ. ‘ತಲಾಶ್’ ಸಿನಿಮಾಗೆ ಚಿತ್ರಕಥೆ ಬರೆದ ತಂಡದಲ್ಲಿ ಒಬ್ಬರಾಗಿದ್ದ ಅವರು 1998ರಿಂದ 2004ರವರೆಗೆ ಸಹಾಯಕ ನಿರ್ದೇಶಕಿಯಾಗಿಯೂ ಕೈಪಳಗಿಸಿಕೊಂಡರು. ನಿರ್ದೇಶಕಿಯಾದದ್ದು 2009ರಲ್ಲಿ.

‘ಬಾಹುಬಲಿ’ ತೆಲುಗು ಸಿನಿಮಾ ಸದ್ದು ಮಾಡಿದೆ. ಅದರ ನಿರ್ದೇಶಕ ಎಸ್.ಎಸ್. ರಾಜಮೌಳಿ 2001ರಲ್ಲಿ ‘ಸ್ಟೂಡೆಂಟ್ ನಂಬರ್ ಒನ್’ ಸಿನಿಮಾ ನಿರ್ದೇಶಿಸುವ ಹೊತ್ತಿಗೆ ಅವರ ತಂದೆ ಕೆ.ವಿ. ವಿಜಯೇಂದ್ರ ಪ್ರಸಾದ್ ಆರನೇ ಸಿನಿಮಾಗೆ ಚಿತ್ರಕಥೆ ಬರೆಯುತ್ತಿದ್ದರು.

1988ರಲ್ಲಿ ‘ಜಾನಕಿ ರಾಮುಡು’ ಸಿನಿಮಾ ಕಥೆ ಬರೆದಾಗಲೇ ಅವರು ರಾಮಾಯಣ ಹಾಗೂ ಮಹಾಭಾರತದ ಕಥೆಗಳ ಮರುಸೃಷ್ಟಿ ಮಾಡುತ್ತಿದ್ದಾರೆ ಎಂಬ ವಾಸನೆ ಬಡಿದಿತ್ತು. ಈಗ ನೋಡಿ, ಮಗ ರಾಜಮೌಳಿ ಮಹಾಭಾರತದ ಉಪಕಥೆಗಳನ್ನು ನೆನಪಿಸುವ ‘ಬಾಹುಬಲಿ’ಯನ್ನು ತೇಲಿಬಿಟ್ಟರೆ, ರಾಮಾಯಣದ ಹನುಮಂತನನನ್ನು ನೆನಪಿಸುವಂಥ ‘ಬಜರಂಗಿ ಭಾಯಿಜಾನ್’ ಹಿಂದಿ ಚಿತ್ರಕಥೆಯನ್ನು ಅಪ್ಪ ಜನತೆಗೆ ಕೊಟ್ಟರು. ‘ಬಾಹುಬಲಿ’ಗೆ ಸಂಗೀತ ನೀಡಿರುವ ಎಂ.ಎಂ. ಕೀರವಾಣಿಗೆ ವಿಜಯೇಂದ್ರ ಪ್ರಸಾದ್ ಚಿಕ್ಕಪ್ಪ ಆಗಬೇಕು. ಸಿನಿಮಾ ಮುದ್ದಿಸುವ ಇಂಥ ಖಾಂದಾನ್ಗಳು ಎಲ್ಲಾ ಭಾಷೆಗಳಲ್ಲೂ ಇವೆಯಷ್ಟೆ. ಸದ್ಯಕ್ಕೆ ಇವೆರಡು ಕುಟುಂಬಗಳು ಸದ್ದು ಮಾಡುತ್ತಿರುವುದಂತೂ ಹೌದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.