‘ಚಿನ್ನ ಖರೀದಿಸಿದ್ರೆ ನಷ್ಟವೇನಲ್ಲ’

ಶನಿವಾರ, ಮೇ 25, 2019
27 °C

‘ಚಿನ್ನ ಖರೀದಿಸಿದ್ರೆ ನಷ್ಟವೇನಲ್ಲ’

Published:
Updated:
Prajavani

ಬಿಸಿಲನ್ನು ಲೆಕ್ಕಿಸದೇ ರಸ್ತೆ ಬದಿಯಲ್ಲಿ ನಿಂತು ಸಂಗೀತ ಕೇಳುತ್ತಿದ್ದ ಜನರನ್ನು ‍ಪೊಲೀಸರು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದರು. ಯುವಕರು, ಮಕ್ಕಳು ಅಬ್ಬರದ ಸಂಗೀತಕ್ಕೆ ಹೆಜ್ಜೆ ಹಾಕುತ್ತಿದ್ದರು. ಚಾಲಕರು ಆಟೊಗಳನ್ನು ನಿಲ್ಲಿಸಿ ಕುತೂಹಲದಿಂದ ನೋಡುತ್ತಿದ್ದರು.

ನಗರದ ಬಿ.ಎನ್‌. ರಸ್ತೆಯಲ್ಲಿ ಈಚೆಗೆ ವೈವಿಧ್ಯ ಜ್ಯುವೆಲ್ಸ್‌ ಮಳಿಗೆ ಉದ್ಘಾಟನೆ ಪ್ರಯುಕ್ತ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮ ನೋಡಲು ಜನ ಮುಗಿಬೀಳುತ್ತಿದ್ದರು. ಕಟ್ಟಡದ ಮುಂದಿನ ಆವರಣದಲ್ಲಿ ಎತ್ತರದ ವೇದಿಕೆ ಮೇಲೆ ಗಾಯನದೊಂದಿಗೆ ನೃತ್ಯ ಮಾಡುತ್ತಿದ್ದ ಕಲಾವಿದರು ಆಕರ್ಷಣೆಯ ಕೇಂದ್ರವಾಗಿದ್ದರು.

ಜನ ಸೇರಲು ಅಲ್ಲಿ ಮೊತ್ತೊಂದು ವಿಶೇಷವಿತ್ತು. ಅದೇನೆಂದರೆ ಗುಳಿಕೆನ್ನೆಯ ಚೆಲುವ ದಿಗಂತ್‌ ಹಾಗೂ ಮುದ್ದು ಮುಖದ ನಟಿ ಐಂದ್ರಿತಾ ರೇ ನೂತನ ಆಭರಣ ಮಳಿಗೆ ಉದ್ಘಾಟಕರಾಗಿ ಬರುತ್ತಾರೆ ಎಂದು ನಿರೂಪಕಿ ಐದು ನಿಮಿಷಕ್ಕೊಮ್ಮೆ ಮೈಕಿನಲ್ಲಿ ಹೇಳುತ್ತಿದ್ದರಿಂದ ಜನಸಂದಣಿ ಹೆಚ್ಚಾಗಿತ್ತು.

ನೆಚ್ಚಿನ ನಟ, ನಟಿಯನ್ನು ಕಣ್ತುಂಬಿಕೊಳ್ಳಲು ಕಾದಿದ್ದ ಜನರಿಗೆ ನಿರಾಸೆಯಾಗಲಿಲ್ಲ. ನೀಲಿ ಬಣ್ಣದ ಘಾಗ್ರಾ ಚೋಲಿ ಧರಿಸಿ ಅಭಿಮಾನಿಗಳತ್ತ ಕೈಬೀಸುತ್ತಾ ಐಂದ್ರಿತಾ ರೇ ಬಂದರು. ದೂರದಿಂದಲೇ ಕೆಲವರು ಮೊಬೈಲ್‌ ಫೋನ್‌ಗಳಲ್ಲಿ ಸೆಲ್ಫಿ ತೆಗೆದುಕೊಂಡರು. ಮತ್ತೆ ಕೆಲವರು ವಿಡಿಯೊ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಜ್ಯುವೆಲ್ಸ್‌ ಮಳಿಗೆಯೊಳಗೆ ಬಂದ ಐಂದ್ರಿತಾ, ವಜ್ರದ ಆಭರಣಗಳ ಸಂಗ್ರಹವನ್ನು ಕಣ್ತುಂಬಿಕೊಡರು, ಜೊತೆಗೆ ಧರಿಸಿಕೊಂಡು ಫೋಟೊಗೆ ಪೋಸ್‌ ಕೊಟ್ಟರು. ಮಕ್ಕಳು, ಯುವತಿಯರು ನಟಿಯೊಂದಿಗೆ ಫೋಟೊ ತೆಗೆಸಿಕೊಂಡು ಖುಷಿಪಟ್ಟರು.

ನಂತರ ಮಾತನಾಡಿದ ಐಂದ್ರಿತಾ, ‘ನನಗೆ ವಜ್ರದ ಆಭರಣಗಳೆಂದರೆ ತುಂಬಾ ಇಷ್ಟ, ಇಲ್ಲಿ ಅತ್ಯುತ್ತಮ ಸಂಗ್ರಹವಿದೆ. ನನ್ನ ತಾಯಿ ಜೊತೆ ಆಭರಣಗಳನ್ನು ಖರೀದಿಸುತ್ತೇನೆ. ಮದುವೆ ಸಂಗ್ರಹವೂ ಇಲ್ಲಿ ಹೇರಳವಾಗಿವೆ. ಮಹಿಳೆಯರಿಗೆ ಇಷ್ಟವಾಗಲಿವೆ. ಮೈಸೂರು ಅಂದ್ರೆ ನನಗೆ ತುಂಬಾ ಇಷ್ಟ, ಇಲ್ಲಿಂದ ಮೈಸೂರ್‌ಪಾಕ್‌ ತೆಗೆದುಕೊಂಡು ಹೋಗುತ್ತೇನೆ’ ಎಂದು ಹೇಳಿದರು.

ದಿಗಂತ್‌ ಅವರು ಬರಲಿಲ್ಲವೇ ಎಂಬ ಪ್ರಶ್ನೆಗೆ, ‘ದಿಗಂತ್‌ ಹುಟ್ಟು ಹಬ್ಬದ ಶುಭಾಶಯಗಳು ಚಿತ್ರದ ಮುಹೂರ್ತಕ್ಕೆ ಹೋಗಿದ್ದರಿಂದ ಒಬ್ಬಳೇ ಬಂದೆ’ ಎಂದು ಮುಗುಳ್ನಕ್ಕರು.

ಮಾತು ಮುಂದುವರಿಸಿದ ಅವರು, ‘ಬಂಗಾರ ಖರೀದಿಸಿದರೆ ನಷ್ಟವೇನಲ್ಲ, ಯಾವತ್ತಿದ್ದರೂ ಅನುಕೂಲವೇ, ಜೊತೆಗೆ ಹೂಡಿಕೆಯಿದ್ದಂತೆ’ ಎಂದು ಸಲಹೆ ನೀಡಿದರು.

‘ಮೈಸೂರಿನ ಎಲ್ಲಾ ಸ್ಥಳಗಳೂ ಇಷ್ಟವಾಗುತ್ತವೆ. ದೊಡ್ಡ ದೊಡ್ಡ ಬಡಾವಣೆಗಳಿವೆ. ಹಸಿರು ಬೆಳೆಸಿ, ನಿರ್ವಹಣೆ ಮಾಡಿರುವ ರೀತಿ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಿರುವುದಕ್ಕೂ ಈ ನಗರ ಇಷ್ಟವಾಗುತ್ತದೆ. ಬೆಂಗಳೂರಿನ ಎಲ್ಲಾ ಕಡೆ ಕಸದ ಸಮಸ್ಯೆಯಿದೆ. ಗಾರ್ಡನ್‌ ಸಿಟಿ ಈಗ ಗಾರ್ಬೇಜ್‌ ಸಿಟಿ ಆಗಿರುವುದಕ್ಕೆ ಬೇಸರವಾಗುತ್ತಿದೆ’ ಎಂದು ಹೇಳಿದರು.

 

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !