ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

14ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ: ಉತ್ಸವವಲ್ಲ ಸಿನಿಮಾ ಜಾತ್ರೆ

Last Updated 1 ಏಪ್ರಿಲ್ 2023, 19:30 IST
ಅಕ್ಷರ ಗಾತ್ರ

ಇತ್ತೀಚೆಗೆ ಮುಕ್ತಾಯಗೊಂಡ 14ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಆಯೋಜನೆಯ ದೃಷ್ಟಿಯಿಂದ ಅವ್ಯವಸ್ಥೆಯ ಆಗರವೇ ಆಗಿತ್ತು. ಇವೆಲ್ಲದರ ನಡುವೆಯೂ ಒಂದಷ್ಟು ಅಂತರರಾಷ್ಟ್ರೀಯ ಚಿತ್ರಗಳು ಸಿನಿಪ್ರಿಯರಿಗೆ ಮುದ ನೀಡಿದವು...

***

ಮಾರ್ಚ್ 23ರಿಂದ 30ರವರೆಗೆ ನಡೆದ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ 14ನೇ ಆವೃತ್ತಿಯು ಅವ್ಯವಸ್ಥೆಗೆ ಮತ್ತೊಂದು ಹೆಸರಾಗಿ ಕಾಣಿಸಿತು.

ಉತ್ಸವದ ವಿಭಾಗಗಳು ಮತ್ತು ಸ್ಪರ್ಧೆಗಳಿಗೆ ಚಲನಚಿತ್ರಗಳ ಆಯ್ಕೆಯಿಂದ ಹಿಡಿದು ಡೆಲಿಗೇಟ್ ಪಾಸ್‌ಗಳ ವಿತರಣೆ ಕ್ಯಾಟಲಾಗುಗಳ ಹಂಚುವಿಕೆ ಎಲ್ಲದರಲ್ಲೂ ಆಯೋಜನೆ ಹಾಗೂ ನಿರ್ವಹಣೆಯ ಕೊರತೆ ಕಣ್ಣಿಗೆ ತಟ್ಟುವಂತಿತ್ತು.

ಶನಿವಾರ ಹಾಗೂ ಭಾನುವಾರವಂತೂ ಪರಿಸ್ಥಿತಿ ಹದಗೆಟ್ಟಿದ್ದು, ಪ್ರವೇಶದ್ವಾರದಲ್ಲಿ ಪ್ರೇಕ್ಷಕರು ಮತ್ತು ಸ್ವಯಂಸೇವಕರ ನಡುವೆ ಒಂದೆರಡು ಬಾರಿ ಚಕಮಕಿಯಾಗಿ ಕೈಕೈ ಮಿಲಾಯಿಸುವ ಹಂತಕ್ಕೂ ಹೋಗಿದ್ದು ವಿಷಾದನೀಯ. ಇವೆಲ್ಲಕ್ಕೂ ಮೂಲಕಾರಣ ಸರ್ಕಾರದಿಂದ ತಡವಾಗಿ ಬಂದ ಅನುಮೋದನೆ ಹಾಗೂ ಮಂಜೂರಾತಿ ಎನ್ನಲಾಗಿದೆ. ಪ್ರತಿವರ್ಷ ಮಾರ್ಚ್ 3ರಿಂದ ಚಿತ್ರೋತ್ಸವ ನಡೆಯಲಿ; ನಿರ್ದಿಷ್ಟ ದಿನವನ್ನು ಮುಂಚಿತವಾಗಿ ನಿಗದಿಪಡಿಸಿದರೆ ಯೋಜನೆ ಸುಲಭ ಮತ್ತು ವೃತ್ತಿಪರವಾಗಿರಲು ಸಾಧ್ಯ ಎನ್ನುವುದು ತಜ್ಞರ ಅಭಿಪ್ರಾಯ.

ಇದೇ ಬೇಡಿಕೆಯನ್ನು ಚಿತ್ರೋತ್ಸವದ ಉದ್ಘಾಟನೆಯ ಸಂದರ್ಭದಲ್ಲೂ ಮುಂದಿಡಲಾಯಿತು ಎನ್ನಲಾಗಿದೆ. ಇಂತಹ ಸರಳ, ಸಮಂಜಸ ಮತ್ತು ತರ್ಕಬದ್ಧ ಬೇಡಿಕೆಗೆ ಸ್ಪಂದಿಸದೆ ಹಾಲಿವುಡ್ ಮತ್ತು ಬಾಲಿವುಡ್ ನಿರ್ಮಾಪಕರನ್ನು ಸೆಳೆಯಬಲ್ಲ ಮಾದರಿ ಫಿಲಂ ಸಿಟಿಯೊಂದನ್ನು ನಿರ್ಮಿಸುವ ಭವ್ಯ ಘೋಷಣೆ ಮಾಡಲಾಯಿತಂತೆ. ಮೂರು ಚಕ್ರದ ಸೈಕಲ್‌ ಬೇಕೆಂದು ಕೇಳಿದ ಮಗುವಿಗೆ ಏರೋಪ್ಲೇನ್ ಕೊಡಿಸುವ ಕನಸು ಕಾಣಿಸಿದ ಹಾಗೆ.

ಇವೆಲ್ಲವುಗಳ ನಡುವೆ ಹೆಕ್ಕಿ ಹುಡುಕಾಡಿದ ವೀಕ್ಷಕರಿಗೆ ಸ್ವಲ್ಪ ಮಟ್ಟಿಗಾದರೂ ಖುಷಿಪಡುವಂತಹ ಹಲವು ಚಿತ್ರಗಳು ಸಿಕ್ಕಿದವೆಂದು ಸಮಾಧಾನಪಡಬೇಕಾಯಿತು. ಸಾಮಾನ್ಯವಾಗಿ ಹೇಳುವುದಾದರೆ ಕನ್ನಡ ಚಿತ್ರಗಳಿಗೆ ಉತ್ತಮ ಪ್ರತಿಕ್ರಿಯೆ ದೊರೆತಂತೆ ಕಂಡಿತು. ಶ್ರೇಷ್ಠ ಚಲನಚಿತ್ರ ಛಾಯಾಗ್ರಾಹಕ ದಿವಂಗತ ವಿ.ಕೆ. ಮೂರ್ತಿಯವರ ನೆನಪಿನಲ್ಲಿ ಕಾಣಿಸಿದ ಹಲವು ಹಳೆ ಹಿಂದಿ ಚಿತ್ರಗಳು (ಪ್ಯಾಸಾ, ಕಾಗಜ್ ಕೆ ಫೂಲ್, ಚೌದ್ವೀ ಕ ಚಾಂದ್, ಇತ್ಯಾದಿ) ಪ್ರೇಕ್ಷಕರನ್ನು ಮತ್ತೊಮ್ಮೆ ರಂಜಿಸಿದವು. ಅದರ ಜೊತೆಗೆ ರೌಂಡ್ ಟೇಬಲ್‌ನಲ್ಲಿ ಮೂರ್ತಿಯವರ ಒಡನಾಡಿಗಳಾದ ಗೋವಿಂದ್ ನಿಹಲಾನಿ, ಬಸವರಾಜು, ಭಾಸ್ಕರ್ ಅವರ ಮಾತು ಕೇಳುವ ಅವಕಾಶ ಸಿಕ್ಕಿತು.

ಹಾಂಗ್‌ಕಾಂಗ್‌ನ ನಿರ್ದೇಶಕ ವಾಂಗ್ ಕರ್-ವಾಯ್ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತರಾದವರು. ಸಂಕೀರ್ಣ ಕಥೆಗಳನ್ನು ಅವರದೇ ಆದ ಶೈಲಿಯಲ್ಲಿ ನಿಧಾನಗತಿಯಲ್ಲಿ ತೆರೆದಿಡುವ ವಾಂಗ್ ಕರ್-ವಾಯ್ ಅವರ ಚಿತ್ರಗಳು ದಶಕಗಳ ನಂತರವೂ ಜನಪ್ರಿಯವಾಗಿವೆ ಎಂದು ಈ ಚಿತ್ರೋತ್ಸವ ದೃಢಪಡಿಸಿತು. ಚಿತ್ರೋತ್ಸವಗಳಿಗೇ ಮಾಡಿಸಿದಂತೆ ಕಾಣುವ ಅವರ ಐದು ಫಿಲಂಗಳು (ಚುಂಗ್ ಕಿಂಗ್ ಎಕ್ಸ್ ಪ್ರೆಸ್ / 1994; ಫಾಲನ್ ಏಂಜೆಲ್ಸ್ /1995; ಹ್ಯಾಪಿ ಟುಗೆದೆರ್/1997; ಇನ್ ದಿ ಮೂಡ್ ಫಾರ್ ಲವ್ /2000; /2004) ಪ್ರದರ್ಶಿಸಲ್ಪಟ್ಟವು.

ಸಾಮಾನ್ಯ ಘಟನೆಗಳಿಂದ ಪ್ರಾರಂಭವಾಗಿ ತಮ್ಮದೇ ಆದ ಸಂಕೀರ್ಣತೆಗಳನ್ನು ಬೆಳೆಯಲು ಬಿಡುವ ಇರಾನ್ ದೇಶದ ಕೆಲವು ಚಿತ್ರಗಳು (ಸಬ್ ಟ್ರಾಕ್ಷನ್ /ನಿ: ಮನಿ ಹಗ್ಹೀಘಿ ; ಅನ್‌ಟಿಲ್ ಟುಮಾರೊ/ ನಿ: ಅಲಿ ಅಸ್ಗರಿ; ಸ್ಪೈಡರ್ /ನಿ : ಅಲಿ ಅಬ್ಬಾಸಿ, ಇತ್ಯಾದಿ) ಒಂದು ಹಂತದವರೆಗೆ ಗಮನ ಸೆಳೆದವು. ಅಜರ್‌ಬೈಜಾನ್‌ ದೇಶದ ಹಿಲಾಲ್ ಬೈದರೊವ್ ಬರೆದು ನಿರ್ದೇಶಿಸಿದ ‘ಕ್ರೇನ್ ಲ್ಯಾಂಟರ್ನ್’ (2021) ಒಂದು ವಿಶಿಷ್ಟವಾದ ಕತೆಯನ್ನು ಹೇಳಲು ಪ್ರಯತ್ನಿಸುತ್ತದೆ. ಅತಿ ಎನಿಸುವ ವಾಚಾಳಿತನದ ದೋಷದ ಹೊರತಾಗಿಯೂ ಬೈದರೊವ್ ಅವರೇ ಸಿನಿಮಾಟೋಗ್ರಫಿ ಮಾಡಿ ಸೆರೆಹಿಡಿದ ಕಾವ್ಯಾತ್ಮಕ ದೃಶ್ಯಗಳಿಂದ ‘ಕ್ರೇನ್ ಲ್ಯಾಂಟರ್ನ್’ ಸೂರೆಗೊಂಡಿತು.

ಉಕ್ರೇನಿಯನ್ ಚಲನಚಿತ್ರ ‘ಕ್ಲೋನ್ಡಿಕೆ’ಯಲ್ಲಿ (ನೀ: ಮರಿಯಾನಾ ಗೋರ್ಬಾಚ್) ಯುದ್ಧ ಭೀಭತ್ಸ ಸನ್ನಿವೇಶಗಳನ್ನು ಅಮಾನವೀಯ ಹಿಂಸೆ, ಗೊಂದಲಗಳನ್ನು ಹೊಟ್ಟೆ ಕಿವುಚುವ ಹಾಗೆ ಚಿತ್ರಿಸಲಾಗಿದೆ. ಆದರೆ ವಿಶಾಲ ದೃಷ್ಟಿಕೋನದಿಂದ ನೋಡಿದಾಗ ಇದು ಏಕಮುಖ ನೋಟದಂತೆ ಕಂಡು ತೀವ್ರತೆಯನ್ನು ಕಳೆದುಕೊಳ್ಳುತ್ತದೆ.

ಸಾಮಾನ್ಯವಾಗಿ ಎಲ್ಲ ಸ್ತರಗಳಲ್ಲೂ ರಂಜಿಸಿದ ಚಿತ್ರಗಳಲ್ಲಿ 'ಆಫ್ಟರ್ ಸನ್' (ನಿರ್ದೇಶಕಿ: ಷಾರ್ಲೆಟ್ ವೆಲ್ಸ್ /2022) ಒಂದಾಗಿತ್ತು. ತಂದೆ ಹಾಗೂ ಮಗಳ ನಡುವಿನ ವಿಶೇಷ ಸಂಬಂಧ, ಅವರ ಸಂತೋಷ ಮತ್ತು ಖಾಸಗಿ ಪ್ರಕ್ಷುಬ್ಧ ಸನ್ನಿವೇಶಗಳನ್ನು ಬಹಳ ಸೂಕ್ಷ್ಮವಾಗಿ ಸಮರ್ಪಕವಾಗಿ ಹೊರತರಲಾಯಿತು. ಚಿತ್ರದ ಯಶಸ್ಸಿಗೆ ನಿರ್ದೇಶಕಿಯ ಜೊತೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ ಪಾಲ್ ಮೆಸ್ಕ್ಯಾಲ್ ಹಾಗೂ ಫ್ರಾಂಕೀ ಕೋರಿಯೊ ಕೂಡ ಕಾರಣ ಅನ್ನಲೇ ಬೇಕು. ಇದು ವೆಲ್ಸ್ ನಿರ್ದೇಶನದ ಮೊದಲ ಚಿತ್ರ ಎಂದಾಗ ಆಶ್ಚರ್ಯ ಮತ್ತು ಸಂತೋಷ ಇನ್ನೂ ಹೆಚ್ಚಾಯಿತು.

ವೀಕ್ಷಕರನ್ನು ಆಕರ್ಷಿಸಿದ ಇತರ ಚಿತ್ರಗಳಲ್ಲಿ ರೊಮೇನಿಯಾದ ಆರ್‌ಎಂಎನ್ (ನಿ: ಕ್ರಿಶ್ಚಿಯನ್ ಮುಂಗಿಯು); ಫ್ರಾನ್ಸ್ ಭಾಷೆಯ ದಿ ನೈಟ್ ಆಫ್ ದಿ ಟ್ವೇಲ್ಫತ್ (ನಿ: ಡೊಮಿನಿಕ್ ಮೋಲ್); ಸ್ಪಾನಿಷ್ ಚಿತ್ರ ದಿ ಬೀಸ್ಟ್ಸ್ (ನಿ: ರೋಡ್ರಿಗೋ ಸರಗಯನ್) ಹಾಗೂ ಬೊಲೀವಿಯಾದ ಉತಮ (ನಿ: ಅಲೆಜಾಂಡ್ರೋ ಗ್ರಿಸಿ) ಸೇರಿದ್ದವು.

ಅತ್ಯುತ್ತಮ ಛಾಯಾಚಿತ್ರಣ, ನಟನೆ ಹಾಗೂ ಪರಿಕಲ್ಪನೆಯಿಂದ ಕೂಡಿದ್ದ ಬೆಲ್ಜಿಯಂ ದೇಶದ ಕ್ಲೋಸ್ (ನಿ: ಲುಕಾಸ್ ದೋಣ್ತ್ ) ಉಚ್ಚ ಶ್ರೇಣಿಯ ಚಿತ್ರವಾಗಿತ್ತು. ಪ್ರತಿಷ್ಠಿತ ಕಾನ್ ಚಿತ್ರೋತ್ಸವದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು (2022) ಈ ಚಿತ್ರ ಪಡೆದದ್ದರಲ್ಲಿ ಆಶ್ಚರ್ಯವಿಲ್ಲ. ಅದೇ ಮಾತನ್ನು ಇತ್ತೀಚಿಗೆ ಅನೇಕ ಆಸ್ಕರ್ ಪ್ರಶಸ್ತಿಗಳನ್ನು ತನ್ನ ತಕ್ಕೆಗೆ ಹಾಕಿಕೊಂಡ ಎವೆರಿಥಿಂಗ್ ಎವೆರಿವೇರ್ ಆಲ್ ಅಟ್ ವನ್ಸ್ (ನಿ: ಡ್ಯಾನ್ ಕ್ವಾನ್ /ಡೇನಿಯಲ್ ಸ್ಕ್ಯಾನಿರಾಟ್) ಬಗ್ಗೆ ಹೇಳಲು ಸಾಧ್ಯವೇ ಇಲ್ಲ. ಹೀಗೆ ಹಲವು ಕಾರಣಗಳಿಂದ ಈ ವರ್ಷದ BIFFES ಚಲನಚಿತ್ರೋತ್ಸವವು ಬೆಲ್ಲದ ಜೊತೆ ಸ್ವಲ್ಪ ಹೆಚ್ಚಾಗಿಯೇ ಬೇವಿನ ರುಚಿಯನ್ನು ಪ್ರೇಕ್ಷಕರಿಗೆ ಉಣಬಡಿಸಿತು. ಈ ವರ್ಷ ಕಂಡ ಅನಿಶ್ಚಿತತೆ ಅವ್ಯವಸ್ಥೆ ಅವಾಂತರಗಳು ಮುಂದಿನ ಆವೃತ್ತಿಗಳಲ್ಲಿ ಕಾಣದಂತೆ ಮಾಯವಾಗಲಿ ಎಂಬುದು ಎಲ್ಲರ ಆಶಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT