ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾರುಹಾದಿಯಲ್ಲಿ ಪಣಜಿ ಚಿತ್ರೋತ್ಸವ?

Last Updated 11 ಡಿಸೆಂಬರ್ 2021, 19:30 IST
ಅಕ್ಷರ ಗಾತ್ರ

ಪಣಜಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಖಾಸಗಿಯವರಿಗೆ ವಹಿಸುವ ಉದ್ದೇಶ ಸರ್ಕಾರಕ್ಕಿದೆಯೇ? ಈಚೆಗೆ ಮುಕ್ತಾಯವಾದ 52ನೆಯ ಚಿತ್ರೋತ್ಸವವನ್ನು ಸೂಕ್ಷ್ಮವಾಗಿ ಗಮನಿಸಿದರೆ ಸರ್ಕಾರ ಆ ನಿಟ್ಟಿನತ್ತ ಹೆಜ್ಜೆ ಇಟ್ಟಿದೆ ಎಂದೆನಿಸುತ್ತದೆ.

ಪಣಜಿ ಚಿತ್ರೋತ್ಸವಕ್ಕೆ ಭವಿಷ್ಯವಿಲ್ಲ ಎಂದು ಚಿತ್ರೋದ್ಯಮದ ಹಲವು ಗಣ್ಯರು ಹೇಳಿದ್ದ ಮಾತು ಇಷ್ಟು ಬೇಗ ನಿಜವಾಗುವ ಕಾಲ ಸನ್ನಿಹಿತವಾಯಿತೇ? ಚಿತ್ರೋತ್ಸವ ಜಾರು ಹಾದಿಯಲ್ಲಿ ಸಾಗುತ್ತಿದೆಯೇ? ಹೌದು, ಹೀಗೆ ಭಾವಿಸಬಹುದಾದ ಹಲವು ಬೆಳವಣಿಗೆಗಳು ಸ್ಪಷ್ಟವಾಗಿ ಈಗ ಕಾಣಿಸಿವೆ. ಪ್ರಸ್ತುತ ಸರ್ಕಾರ ಖಾಸಗೀಕರಣದ ಪರವಾಗಿರುವುದರಿಂದ ಈ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಚಿತ್ರೋತ್ಸವ ನಡೆಸುವುದು ದೇಶದ ಪ್ರತಿಷ್ಠೆಗಾಗಿ. ಉದ್ಘಾಟನೆ, ಸಮಾರೋಪ ಸಮಾರಂಭಗಳು ಅದ್ಧೂರಿಯಾಗಿ ನಡೆದು ಬಿಟ್ಟರೆ ಚಿತ್ರೋತ್ಸವ ಯಶಸ್ವಿಯಾದಂತೆ ಎಂದು ಸರ್ಕಾರ ಭಾವಿಸಿದಂತಿದೆ. ಈ ಸಲ ಉದ್ಘಾಟನೆ ಮತ್ತು ಸಮಾರೋಪ ಎರಡೂ ಖಾಸಗಿ ಪ್ರಾಯೋಜಕತ್ವದಲ್ಲಿ ಅದ್ಧೂರಿಯಾಗಿ ನಡೆದವು. ಚಿತ್ರೋತ್ಸವದಲ್ಲಿ ಪ್ರದರ್ಶನವಾದ ಸಿನಿಮಾಗಳನ್ನು ಒಟಿಟಿ ವೇದಿಕೆಗಳಲ್ಲಿ ನೋಡುವ ಅವಕಾಶವೂ ಇತ್ತು. ಈ ಬೆಳವಣಿಗೆ ಬಗ್ಗೆ ಉದ್ಯಮದವರು ಏನು ಹೇಳುತ್ತಾರೆ ಎನ್ನುವುದು ಗೊತ್ತಿಲ್ಲ.

2004ರಲ್ಲಿ ಪಣಜಿಯಲ್ಲಿ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವವನ್ನು ನಡೆಸುವ ಅಂದಿನ ಸರ್ಕಾರದ ನಿರ್ಧಾರ ಚಿತ್ರೋದ್ಯಮದ ಮಂದಿಗೆ ಪಥ್ಯವಾಗಿರಲಿಲ್ಲ. ಗೋವಾದಲ್ಲಿ ಚಿತ್ರೋದ್ಯಮ ಬೆಳೆದಿಲ್ಲ. ಆ ರಾಜ್ಯದ ಜನರಿಗೆ ಸಿನಿಮಾ ನೋಡುವ ಹವ್ಯಾಸವೂ ಇಲ್ಲ. ಅದು ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದ ರಾಜ್ಯವೇ ಹೊರತು ಸಿನಿಮಾಕ್ಕಲ್ಲ ಇತ್ಯಾದಿ ಮಾತುಗಳು ಕೇಳಿ ಬಂದಿದ್ದವು. ಪಣಜಿ ಚಿತ್ರೋತ್ಸವದ ಕಾಯಂ ನೆಲೆಯೂ ಆದ ಮೇಲೂ ಅಪಸ್ವರದ ಮಾತುಗಳು ಕೇಳಿ ಬರುತ್ತಲೇ ಇದ್ದವು.

ಚಿತ್ರೋತ್ಸವದಲ್ಲಿ ಬಾಲಿವುಡ್‌ ಮಂದಿಗೆ ಮಣೆ ಹಾಕಿ, ಪ್ರಾದೇಶಿಕ ಸಿನಿಮಾದವರನ್ನು ದೂರ ಇಡುವ ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ ಎಂಬ ಆರೋಪವೂ ಇತ್ತು. ಇವನ್ನೆಲ್ಲ ಅರಗಿಸಿಕೊಂಡು ಚಿತ್ರೋತ್ಸವ ಯಶಸ್ವಿಯಾಗಿ ನಡೆದು, ಅದು ಪಣಜಿಯಲ್ಲಿ ನೆಲೆಯೂರುವ ಲಕ್ಷಣಗಳು ಕಾಣಿಸಿದ್ದವು. ಆದರೆ ಇತ್ತೀಚಿನ ಮೂರ್ನಾಲ್ಕು ವರ್ಷಗಳ ಅವಧಿಯಲ್ಲಿ ಅದು ಕಳೆಗುಂದುತ್ತಿದೆ. ಪಣಜಿಗೆ ಬರುವ ಪ್ರತಿನಿಧಿಗಳ ಸಂಖ್ಯೆಯೂ ಕಡಿಮೆ ಆಗುತ್ತಿದೆ.

ಈ ವರ್ಷದ ಚಿತ್ರೋತ್ಸವಕ್ಕೆ ಹೆಸರು ನೋಂದಾಯಿಸಿಕೊಂಡ ಪ್ರತಿನಿಧಿಗಳ ಸಂಖ್ಯೆ ಎರಡು ಸಾವಿರ. ಕೊರೊನಾ ಭಯ, ಒಟಿಟಿಯಲ್ಲೇ ಸಿನಿಮಾ ನೋಡುವ ಅವಕಾಶ ಇದ್ದುದರಿಂದ ಹೆಚ್ಚು ಜನ ಬರಲಿಲ್ಲ ಎಂದು ಹೇಳಲಾಯಿತು.

ಬಂದವರಿಗೆ ನೆಮ್ಮದಿಯಾಗಿ ಸಿನಿಮಾ ನೋಡುವ ಅವಕಾಶವೂ ಸಿಗಲಿಲ್ಲ. ಚಿತ್ರೋತ್ಸವದ ಹೊಣೆ ಹೊತ್ತ ಚಲನಚಿತ್ರೋತ್ಸವ ನಿರ್ದೇಶನಾಲಯ (ಡಿಎಫ್ಎಫ್‌) ಕೈಗೊಂಡ ಕೆಲ ಏಕಪಕ್ಷೀಯ ನಿರ್ಧಾರಗಳಿಂದ ಪ್ರತಿನಿಧಿಗಳು ಅಕ್ಷರಶಃ ಪರದಾಡಿದರು.

ಚಿತ್ರೋತ್ಸವ ನಡೆಸುವುದು ಯಾರಿಗಾಗಿ? ಈ ಪ್ರಶ್ನೆಗೆ ಉತ್ತರ ಹೇಳುವವರು ಇರಲಿಲ್ಲ. ಅವ್ಯವಸ್ಥೆಗಳ ಬಗ್ಗೆ ಡಿಎಫ್‌ಎಫ್‌ ಮುಖ್ಯಸ್ಥರು ತಲೆಕೆಡಿಸಿಕೊಳ್ಳಲಿಲ್ಲ. ಸಾವಿರಾರು ರೂಪಾಯಿಗಳನ್ನು ಖರ್ಚುಮಾಡಿಕೊಂಡು ಪಣಜಿಗೆ ಬಂದ ಪ್ರತಿನಿಧಿಗಳ ಅಹವಾಲುಗಳನ್ನು ಕೇಳಿಸಿಕೊಳ್ಳುವ ಸೌಜನ್ಯವೂ ಡಿಎಫ್‌ಎಫ್‌ ತೋರಲಿಲ್ಲ.

2010 ದಶಕದಲ್ಲಿ ನಡೆದ ಐದಾರು ಚಿತ್ರೋತ್ಸವಗಳು ನಿಜಕ್ಕೂ ಅತ್ಯುತ್ತಮವಾಗಿದ್ದವು. ಅವು ಅಕ್ಷರಶಃ ಸಿನಿಮಾ ಹಬ್ಬಗಳಂತೇ ನಡೆದವು. ಸಮುದಾಯದ ಪಾಲ್ಗೊಳ್ಳುವಿಕೆಯಿಂದ ಎಲ್ಲಾ ಕೊರತೆಗಳು ಮುಚ್ಚಿ ಹೋಗಿದ್ದವು. ಪ್ರತಿನಿಧಿಗಳು ಎಲ್ಲವನ್ನೂ ಮರೆತು ಜಗತ್ತಿನ ಅತ್ಯುತ್ತಮ ಸಿನಿಮಾಗಳನ್ನು ನೋಡಿ ಸಂತೋಷಪಟ್ಟಿದ್ದರು. ಈ ವರ್ಷವೂ ಹಲವು ಉತ್ತಮ ಸಿನಿಮಾಗಳಿದ್ದವು. ಆದರೆ ಅವನ್ನು ನೋಡುವ ಅವಕಾಶ ಎಲ್ಲರಿಗೂ ಸಿಕ್ಕಲಿಲ್ಲ. ಡಿಎಫ್‌ಎಫ್‌ನ ಧೋರಣೆಯೇ ಎಲ್ಲ ಅವ್ಯವಸ್ಥೆಗೆ ಕಾರಣ. ಡಿಎಫ್‌ಎಫ್‌ ತನ್ನ ನಿಲುವು ಬದಲಾಯಿಸಿಕೊಳ್ಳದಿದ್ದರೆ ಪಣಜಿ ಚಿತ್ರೋತ್ಸವಕ್ಕೆ ಭವಿಷ್ಯವಿಲ್ಲ.

ಪ್ರತಿವರ್ಷ ಪಣಜಿಯ ಐನಾಕ್ಸ್‌ ಕಾಂಪ್ಲೆಕ್ಸ್‌ನ ಆರು ತೆರೆಗಳು ಮತ್ತು ಸಮೀಪದಲ್ಲೇ ಇರುವ ಕಲಾ ಅಕಾಡೆಮಿಯ ಒಂದು ದೊಡ್ಡ ತೆರೆಯಲ್ಲಿ ಸಿನಿಮಾ ನೋಡುವ ಅವಕಾಶ ಇರುತ್ತಿತ್ತು. ಈ ವರ್ಷ ಕಲಾ ಅಕಾಡೆಮಿಯ ತೆರೆ ಮತ್ತು ಐನಾಕ್ಸ್‌ ಕಾಂಪ್ಲೆಕ್ಸ್‌ ಒಂದು ಸಣ್ಣ ತೆರೆ ಪ್ರದರ್ಶನಕ್ಕೆ ಲಭ್ಯವಿರಲಿಲ್ಲ. ಬದಲಿಗೆ ಪಣಜಿಯಿಂದ ಹದಿನೈದು ಕಿ.ಮೀ ದೂರದ ಪೂರ್ವರಿಂನ ಐನಾಕ್ಸ್‌ ಕಾಂಪ್ಲೆಕ್ಸ್‌ನ ಮೂರು ತೆರೆಗಳಲ್ಲಿ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಿದ್ದರು. ಅಲ್ಲಿಗೆ ಹೋಗಿ ಬರಲು ಬಸ್‌ ವ್ಯವಸ್ಥೆಯೂ ಇತ್ತು. ಆದರೂ ಚಿತ್ರೋತ್ಸವ ಕೇಂದ್ರೀಕೃತಗೊಂಡಿದ್ದು ಪಣಜಿ ಐನಾಕ್ಸ್‌ನಲ್ಲೇ.

ಆಯಾ ದಿನ ಪ್ರದರ್ಶನವಾಗುವ ಸಿನಿಮಾಗಳ ಹೆಸರು,ವೇಳೆ ಇತ್ಯಾದಿ ವಿವರಗಳಿರುತ್ತಿದ್ದ ಸಣ್ಣ (ಸ್ಕ್ರೀನ್‌ ಷೆಡ್ಯೂಲ್‌) ಪುಸ್ತಿಕೆ ಪ್ರಕಟಣೆ ಕೈಬಿಟ್ಟಿದ್ದರು. ಒಂದು ದಿನ ಮುಂಚಿತವಾಗಿ ಪೇಪರ್‌ ಟಿಕೆಟ್‌ ಪಡೆಯುವ ವ್ಯವಸ್ಥೆಯೂ ರದ್ದಾಗಿತ್ತು. ಈ ಸೌಲಭ್ಯಗಳನ್ನು ರದ್ದು ಮಾಡಿದ್ದೇಕೆ ಎಂಬ ಪ್ರಶ್ನೆಗೆ ಯಾರೂ ಉತ್ತರ ಹೇಳಲಿಲ್ಲ. ರಾತ್ರಿ ಹನ್ನೆರಡರ ನಂತರ ಆನ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಕಾದಿರಿಸುವ ವ್ಯವಸ್ಥೆ ಇತ್ತು. ಸ್ಮಾರ್ಟ್‌ಫೋನ್‌ ಇಲ್ಲದವರು ಪರದಾಡಬೇಕಾಯಿತು.

ಚಿತ್ರೋತ್ಸವಕ್ಕೆ ನೋಂದಾಯಿಸಿಕೊಂಡವರು 1800 ರೂಪಾಯಿ ಪ್ರತಿನಿಧಿ ಶುಲ್ಕದ ಜತೆಗೆ ಜಿಎಸ್‌ಟಿ ತೆರಿಗೆ ತೆತ್ತಿದ್ದರು. ಮೊದಲ ಎರಡು ದಿನ ಚಿತ್ರಮಂದಿರಗಳಲ್ಲಿ ಶೇ 50ರಷ್ಟು ಪ್ರವೇಶ ಮಿತಿ ಇತ್ತು. ಅದಕ್ಕೆ ಕೋವಿಡ್‌ ನಿಯಮಾವಳಿ ಪ್ರಕಾರ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಕಾರಣ ಹೇಳಿದ್ದರು. ಐನಾಕ್ಸ್‌ ಆವರಣದಲ್ಲಾಗಲಿ, ಪಣಜಿಯಲ್ಲಿ ಎಲ್ಲೇ ಆಗಲಿ ಸಾಮಾಜಿಕ ಅಂತರ ಇರಲಿಲ್ಲ. ಎರಡು ದಿನ ಸಿನಿಮಾ ನೋಡುವ ಅವಕಾಶ ಸಿಗದೆ ಹತಾಶರಾದ ಹಲವು ಪ್ರತಿನಿಧಿಗಳು ಪ್ರತಿಭಟನೆಗೆ ಮುಂದಾದ ಮೇಲೆ ಪ್ರವೇಶ ಮಿತಿ ಸಡಿಲಿಸಿದರು.

ಐನಾಕ್ಸ್‌ ಆವರಣದಲ್ಲಿ ಲಭ್ಯವಿದ್ದ ತಿನಿಸು, ಪಾನೀಯಗಳ ಬೆಲೆಗಳ ಬಗ್ಗೆ ಹೇಳಬೇಕಿಲ್ಲ. ಬೆಳಗಿನ 10ರಿಂದ ನಡುರಾತ್ರಿವರೆಗೆ ಸಿನಿಮಾ ನೋಡುವವರಿಗೆ ಅವರ ಕೈಗೆಟುಕುವ ಬೆಲೆಯಲ್ಲಿ ಊಟ, ಉಪಹಾರ ಸಿಗಲಿಲ್ಲ. ಐನಾಕ್ಸ್‌ ಹೊರ ಆವರಣದಲ್ಲಿ ಒಂದು ಬಿಯರ್‌ ಕೌಂಟರ್‌ ಇತ್ತು. ಹೊರಗಡೆ 70 ರೂಪಾಯಿಗೆ ಸಿಗುತ್ತಿದ್ದ ಬಾಟಲಿಗೆ ಅಲ್ಲಿ 200 ರೂಪಾಯಿ ತೆರಬೇಕಿತ್ತು.

ಜಗತ್ತಿನ ಹತ್ತು ಪ್ರತಿಷ್ಠಿತ ಅಂತರರಾಷ್ಟ್ರೀಯ ಚಿತ್ರೋತ್ಸವಗಳ ಪೈಕಿ ಪಣಜಿ ಚಿತ್ರೋತ್ಸವವೂ ಒಂದು ಎಂದು ಚಿತ್ರೋತ್ಸವ ನಿರ್ದೇಶನಾಲಯ (ಡಿಎಫ್‌ಎಫ್‌) ಮತ್ತು ಕೇಂದ್ರ ಸರ್ಕಾರ ಹೇಳಿಕೊಳ್ಳುತ್ತದೆ. ಆದರೆ ಚಿತ್ರೋತ್ಸವ ನಡೆಸುವುದು ಯಾರಿಗಾಗಿ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳುವ ಪ್ರಯತ್ನವನ್ನು ಮಾಡಿಲ್ಲ.

ಪಣಜಿ ಚಿತ್ರೋತ್ಸವಕ್ಕಾಗಿಯೇ ಹತ್ತು ತೆರೆಗಳ ಸುಸಜ್ಜಿತ ಕಾಂಪ್ಲೆಕ್ಸ್‌ ನಿರ್ಮಿಸುವುದಾಗಿ ಮನೋಹರ ಪರಿಕ್ಕರ್‌ ಹೇಳುತ್ತಿದ್ದರು. ಚಿತ್ರೋತ್ಸವಕ್ಕೆ ಬರುವ ಪ್ರತಿನಿಧಿಗಳಿಗೆ ಕಡಿಮೆ ವೆಚ್ಚದಲ್ಲಿ ಊಟ, ವಸತಿ ಕಲ್ಪಿಸುವ ಮಾತಾಡಿದ್ದರು. ಅವರ ಕನಸು ಹಾಗೇ ಉಳಿದುಹೋಯಿತು.

ಈ ಸಲ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಗೋವಾದಲ್ಲಿ ಫಿಲಂ ಸಿಟಿ ನಿರ್ಮಿಸುವ ಮಾತು ಆಡಿದರು! ಕೇಂದ್ರದ ಪ್ರಸಾರ ಸಚಿವ ಅನುರಾಗ್‌ ಠಾಕೂರ್‌ ಅವರಂತೂ ಉತ್ತರ ಪ್ರದೇಶದ ನೋಯ್ಡಾ ಬಳಿ ಜಗತ್ತಿನ ಅತಿದೊಡ್ಡ ಫಿಲಂ ಸಿಟಿ ಮತ್ತು ವಿಶ್ವದಲ್ಲೇ ಅತಿ ದೊಡ್ಡದಾದ ವಿಮಾನ ನಿಲ್ದಾಣ ನಿರ್ಮಿಸುವ ಪ್ರಧಾನಿಯವರ ಮಹತ್ವಾಕಾಂಕ್ಷೆಯ ಯೋಜನೆ ಬಗ್ಗೆ ಹೇಳಿಕೊಂಡು ಬೀಗಿದರು. ಪಣಜಿ ಚಿತ್ರೋತ್ಸವದ ಮೂಲಕ ಭಾರತ ಜಗತ್ತಿನ ಗಮನ ಸೆಳೆದಿದೆ ಎಂದು ಹೇಳಿ ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡರು.

ಪ್ರತಿನಿಧಿಗಳು ಎಂಟು ದಿನ ನೆಮ್ಮದಿಯಾಗಿ ಕುಳಿತು ಸಿನಿಮಾ ನೋಡಲು ಏನು ಮಾಡಬೇಕು ಎಂಬ ಬಗ್ಗೆ ಸರ್ಕಾರ ಮತ್ತು ಡಿಎಫ್‌ಎಫ್‌ ಇನ್ನಾದರೂ ಯೋಚಿಸಬೇಕು. ಪ್ರತಿನಿಧಿಗಳ ಮಾತುಗಳನ್ನು ಕೇಳಿಸಿಕೊಳ್ಳುವ ಸೌಜನ್ಯವನ್ನು ತೋರಿಸಬೇಕು. ಪ್ರತಿಷ್ಠೆಗಾಗಿ ಚಿತ್ರೋತ್ಸವ ನಡೆಸುವ ಮನಃಸ್ಥಿತಿ ಬದಲಾಗಬೇಕು.

ಗಮನಸೆಳೆದ ಶೆಮ್ಕೋರ್‌

ಈ ಸಲದ ಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ಆಯ್ಕೆಯಾದ ಸಿನಿಮಾಗಳ ಪೈಕಿ ಹಲವು ಉತ್ತಮವಾಗಿದ್ದವು. ಸತ್ಯಜಿತ್‌ ರೇ ಶತಮಾತ್ಸವದ ವರ್ಷದ ನೆನಪಿಗಾಗಿ ಅವರ ಕೆಲ ಸಿನಿಮಾಗಳು ಪ್ರದರ್ಶನಗೊಂಡವು.

ಭಾರತೀಯ ಪನೋರಮಾ ವಿಭಾಗದಲ್ಲಿ ಅಸ್ಸಾಮಿನ ದಿಮಾಸ ಬುಡಕಟ್ಟು ಭಾಷೆಯ ಮೊದಲ ಸಿನಿಮಾ ಶೆಮ್ಕೋರ್‌ (ನಿ: ಅಮಿ ಬರೂವಾ) ಕನ್ನಡದ ಆ್ಯಕ್ಟ್‌ 1978, ಮರಾಠಿಯ ಮೂರು ತಾಸಿನ ಸಿನಿಮಾ ಮೀ ವಸಂತರಾವ್‌, ಗೋದಾವರಿ ಹೆಚ್ಚು ಸದ್ದು ಮಾಡಿದವು. ಹಿಂದಿಯ ಧಮಾಕಾ, ಅಂಧಾಧುನ್‌ ಚಿತ್ರಗಳಿಗೂ ಅವಕಾಶ ಕಲ್ಪಿಸಿದ್ದರು. ತಮಿಳಿನ ಅಸುರನ್‌ ಬ್ರಿಕ್ಸ್‌ ದೇಶಗಳ ಚಿತ್ರಗಳ ಸ್ಪರ್ಧೆಯಲ್ಲಿ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT