ಶನಿವಾರ, ಮೇ 21, 2022
19 °C
ಬೆಂಗಳೂರಲ್ಲಿ ವಿಶ್ವಕಪ್‌ ಗೆದ್ದ ‘83’ರ ತಂಡ

ಕಪಿಲ್‌ ದೇವ್‌ ಜೊತೆ ಫೋಟೊ ಸಿಗದಿದ್ದಕ್ಕೆ ಅತ್ತಿದ್ದೆ: ಕಿಚ್ಚ ಸುದೀಪ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘1986–87ರ ಸಮಯದಲ್ಲಿ ಭಾರತ ಕ್ರಿಕೆಟ್‌ ತಂಡ ಬೆಂಗಳೂರಿನ ವೆಸ್ಟ್‌ಎಂಡ್‌ ಹೋಟೆಲ್‌ಗೆ ಬಂದಿತ್ತು. ಅಲ್ಲಿ ಕಪಿಲ್‌ ದೇವ್‌ ಅವರ ಜೊತೆ ಫೊಟೊ ತೆಗೆಸಿಕೊಳ್ಳಬೇಕು ಎನ್ನುವಾಗ ಕ್ಯಾಮೆರಾ ಕೈಕೊಟ್ಟಿತ್ತು. ಆಗ ಕಣ್ಣೀರು ಹಾಕಿದ್ದ ನನ್ನನ್ನು ಕಪಿಲ್‌ ದೇವ್‌ ಎತ್ತಿಕೊಂಡಿದ್ದರು...’

ಹೀಗೆ ನೆನಪಿನ ಬುತ್ತಿ ಬಿಚ್ಚಿಟ್ಟಿದ್ದು ನಟ ಕಿಚ್ಚ ಸುದೀಪ್‌. ಬಾಲಿವುಡ್‌ ನಟ ರಣ್‌ವೀರ್‌ ಸಿಂಗ್‌ ನಟನೆಯ ‘83’ ಚಿತ್ರವು ಹಿಂದಿ, ಕನ್ನಡ ಸೇರಿದಂತೆ ಒಟ್ಟು ಐದು ಭಾಷೆಗಳಲ್ಲಿ ಡಿ.24ರಂದು ತೆರೆಕಾಣುತ್ತಿದೆ. ಚಿತ್ರದ ಪ್ರಚಾರ ಕಾರ್ಯಕ್ರಮದ ಶನಿವಾರ ಬೆಂಗಳೂರಿನಲ್ಲಿ ನಡೆಯಿತು. 1983ರಲ್ಲಿ ವಿಶ್ವಕಪ್‌ ಗೆದ್ದ ಭಾರತ ಕ್ರಿಕೆಟ್‌ ತಂಡದ ನಾಯಕ ಕಪಿಲ್‌ ದೇವ್‌ ಸೇರಿದಂತೆ ತಂಡದಲ್ಲಿದ್ದ ರೋಜರ್‌ ಬಿನ್ನಿ, ಸೈಯದ್‌ ಕಿರ್ಮಾನಿ, ಕೆ.ಶ್ರೀಕಾಂತ್‌ ಪ್ರಚಾರದಲ್ಲಿ ಭಾಗವಹಿಸಿದ್ದರು.

ಚಿತ್ರದ ಕನ್ನಡ ಅವತರಣಿಕೆಯನ್ನು ಕಿಚ್ಚ ಸುದೀಪ್‌ ಅವರ ಫ್ಯಾಂಟಮ್‌ ಫಿಲ್ಮ್ಸ್‌ನಡಿ ನಿರ್ಮಾಪಕ ಜಾಕ್‌ ಮಂಜು ಅವರು ಕರ್ನಾಟಕದಲ್ಲಿ ವಿತರಣೆ ಮಾಡುತ್ತಿದ್ದಾರೆ. ಕ್ರಿಕೆಟಿಗ ಕಪಿಲ್‌ ದೇವ್‌ ಅವರ ಪಾತ್ರದಲ್ಲಿ ರಣ್‌ವೀರ್‌ ಸಿಂಗ್‌ ನಟಿಸಿದ್ದು, ಕಬೀರ್‌ ಖಾನ್‌ ಇದನ್ನು ನಿರ್ದೇಶಿಸಿದ್ದಾರೆ. ಕಪಿಲ್‌ ದೇವ್‌ ಅವರ ನಾಯಕತ್ವದಲ್ಲಿ ಭಾರತ ತಂಡವು 1983ರಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಗೆದ್ದು ವಿಶ್ವಕಪ್‌ ಎತ್ತಿತ್ತು. ಚಿತ್ರದಲ್ಲಿ ಕಪಿಲ್‌ ದೇವ್‌ ಅವರ ಪತ್ನಿ ರೋಮಿ ಅವರ ಪಾತ್ರದಲ್ಲಿ ದೀಪಿಕಾ ಪಡುಕೋಣೆ, ಕೋಚ್‌ ಪಾತ್ರದಲ್ಲಿ ಪಂಕಜ್‌ ತ್ರಿಪಾಠಿ ನಟಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುದೀಪ್‌, ‘ಭಾರತ ತಂಡ ವೆಸ್ಟ್‌ಎಂಡ್‌ ಹೋಟೆಲ್‌ನಲ್ಲಿ ಉಳಿದುಕೊಂಡಿತ್ತು. ನಾವು ಕಪಿಲ್‌ ದೇವ್‌ ಅವರನ್ನು ನೋಡಲು ಹೋಗಿದ್ದೆವು. ಅವರು ಒಬ್ಬರೇ ನಡೆದುಕೊಂಡು ಹೋಗುತ್ತಿರುವಾಗ ನಾನು ಹೋಗಿ ಹಿಂದಿನಿಂದ ಕೋಟ್‌ ಎಳೆದಿದ್ದೆ. ನನ್ನ ಕೈಯಲ್ಲಿ ಫ್ಯೂಜಿ ಕ್ಯಾಮೆರಾ ಇತ್ತು. ನಿಮ್ಮ ಜೊತೆ ಒಂದು ಫೋಟೊ ತೆಗೆಸಿಕೊಳ್ಳಬೇಕು ಎಂದಿದ್ದೆ. ನನ್ನ ಜೊತೆ ಅಕ್ಕ ಇದ್ದಳು. ಅಕ್ಕ ಫೊಟೊ ತೆಗೆಯುವಾಗ ಕ್ಯಾಮೆರಾ ಕೈಕೊಟ್ಟಿತು. ನಾನು ಅಂದು ಅತ್ತಿದ್ದೆ. ನನ್ನ ಕಣ್ಣೀರು ಒರೆಸಿ, ನನ್ನನ್ನು ಕಪಿಲ್‌ದೇವ್‌ ಎತ್ತಿಕೊಂಡಿದ್ದರು. ಇಂದು ಇಷ್ಟು ಸಮಯದ ಬಳಿಕ ಅವರೊಂದಿಗೆ ಒಂದು ಫೋಟೊ ತೆಗೆಸಿಕೊಳ್ಳುವ ಅವಕಾಶ ಒದಗಿದೆ’ ಎಂದು ನೆನಪಿಸಿಕೊಂಡರು. 

‘ಈ ಚಿತ್ರದಲ್ಲಿ ನಾನು ಆಟವಾಡುವ 11 ಜನರ ಪೈಕಿ ಇಲ್ಲದೇ ಇರಬಹುದು ಆದರೆ ನಾನು ಈ ಸ್ಕ್ವ್ಯಾಡ್‌ನಲ್ಲಿದ್ದೇನೆ’ ಎಂದ ಸುದೀಪ್‌, ‘ಇದೊಂದು ಸಿನಿಮಾ ಅಂದುಕೊಂಡಿದ್ದೆವು. 83 ವಿಶ್ವಕಪ್‌ ನಡೆದಾಗ ನಾವಿನ್ನೂ ಚಿಕ್ಕವರು. ಟಿ.ವಿ ಇಲ್ಲ, ಕಮೆಂಟ್ರಿ ಅರ್ಥ ಆಗುತ್ತಿರಲಿಲ್ಲ. ಕಾಲೇಜು ಸಮಯದಲ್ಲಿ ಕ್ರಿಕೆಟ್‌ ಬಗ್ಗೆ ಅರಿತೆವು. ಬಿಸಿಸಿಐ ಇಂದು ಇಷ್ಟು ಶ್ರೀಮಂತವಾಗಿದೆ, ಪ್ರತಿಯೊಬ್ಬ ಕ್ರಿಕೆಟ್‌ ಆಟಗಾರ ವರ್ಷಕ್ಕೆ ಕೋಟಿಗಟ್ಟಲೆ ದುಡಿಯುತ್ತಾನೆ ಎಂದರೆ ಇದಕ್ಕೆ ಇವರೆಲ್ಲ ಕಾರಣ. ಇದೊಂದು ವಿಶ್ವಕಪ್‌ ಕಥೆಯಲ್ಲ. ಇದು ಭಾರತೀಯ ಕ್ರಿಕೆಟ್‌ ಇತಿಹಾಸವನ್ನು ಬದಲಿಸಿದ ಕ್ಷಣ. ನಾವು ಆ ವಿಶ್ವಕಪ್‌ ನೋಡಿರಲಿಲ್ಲ. ಇಂದು ಆ ಕ್ಷಣವನ್ನು ಮತ್ತೆ ನೋಡುವ ಅವಕಾಶ ಸಿಕ್ಕಿದೆ’ ಎಂದರು. 

‘ರಣ್‌ವೀರ್‌ ಸಿಂಗ್‌ ಎನರ್ಜಿ ಹಿಂದಿನ ಸೀಕ್ರೆಟ್‌ ಈಸ್‌ ದೀಪಿಕಾ’ ಎಂದು ಸುದೀಪ್‌ ನಗೆಚಟಾಕಿ ಹಾರಿಸಿದರು.

ತಮ್ಮ ಪಾತ್ರದ ಕುರಿತು ಮಾತನಾಡಿದ ರಣ್‌ವೀರ್‌, ‘83ರ ವಿಶ್ವಕಪ್‌ನ ಹೆಚ್ಚಿನ ವಿಡಿಯೊ ಇರಲಿಲ್ಲ. ಕೆಲವು ತುಣುಕುಗಳಷ್ಟೇ ಇದ್ದವು. ಕಬೀರ್‌ ಅವರ ಜೊತೆಗೆ ಕಪಿಲ್‌ ಅವರ ಮನೆಯಲ್ಲಿ ಎರಡು ವಾರ ಇದ್ದು, ವಿಡಿಯೊ ಮಾಡಿಕೊಂಡು ಅವರ ಧ್ವನಿ, ಹಾವಭಾವನ್ನು ಕಲಿತೆ. ನಾನೊಬ್ಬ ಉತ್ತಮ ಬ್ಯಾಟ್ಸ್‌ಮ್ಯಾನ್‌ ಆದರೆ, ನಾನು ಬೌಲಿಂಗ್‌ ಮಾಡಲು ಸಾಧ್ಯವೇ ಇಲ್ಲ. ನಾನೊಬ್ಬ ಗಲ್ಲಿ ಕ್ರಿಕೆಟರ್‌. ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ಕ್ರಿಕೆಟ್‌ ಆಡಿದ ಅನುಭವವನ್ನು ವಿವರಿಸಲು ಪದಗಳೇ ಇಲ್ಲ. ಇದು ಕೇವಲ ಸಿನಿಮಾ ಅಲ್ಲ. ಒಂದು ಐತಿಹಾಸಿಕ ಕ್ಷಣದ ಸಂಭ್ರಮಾಚರಣೆ’ ಎಂದರು.

‘ನಾವೆಲ್ಲ ಮರೆತಿದ್ದ ಆ ನೆನಪುಗಳನ್ನು ಕಬೀರ್‌ ಮತ್ತೆ ತೆರೆಯ ಮೇಲೆ ತಂದಿದ್ದಾರೆ. ನಾನು ಸೇರಿದಂತೆ ನನ್ನ ಇಡೀ ತಂಡ ಆ ಕ್ಷಣ ಮರುಕಳಿಸಲಿದೆ ಎಂದು ಅಂದುಕೊಂಡಿರಲೇ ಇಲ್ಲ. ಈ ಚಿತ್ರದ ಮುಖಾಂತರ ಅಂದು ವಿಶ್ವಕಪ್‌ ಆಡಿದ ನಾವು ಮತ್ತೆ ಜೀವಿಸಲಿದ್ದೇವೆ. ಪ್ರೇಕ್ಷಕರು ಇದನ್ನ ಮೆಚ್ಚಿಕೊಳ್ಳಿದ್ದಾರೆ ಎನ್ನುವ ಭರವಸೆ ಇದೆ’ ಎನ್ನುತ್ತಾರೆ ಕಪಿಲ್‌ದೇವ್‌.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು