ಹಿರಿಯ ನಟ ವೈಜನಾಥ್ ಬಿರಾದರ್ ‘90 ಬಿಡಿ ಮನೀಗ್ ನಡಿ’ ಎನ್ನುತ್ತ ನಾಯಕರಾಗಿದ್ದಾರೆ. ‘ಇವತ್ತೆ ಲಾಸ್ಟು ಗುರು, ನಾಳೆಯಿಂದ ನಾನ್ ಎಣ್ಣೆ ಹೊಡಿಯಲ್ಲ’ ಎಂಬುದು ಚಿತ್ರದ ಅಡಿಬರಹ. ಇದು ಬಿರಾದಾರ್ ಅವರ 500ನೇ ಚಿತ್ರ. ಉಮೇಶ್ ಬಾದರದಿನ್ನಿ ಹಾಗೂ ನಾಗರಾಜ್ ಅರೆಹೊಳೆ ಇಬ್ಬರೂ ಸೇರಿ ಚಿತ್ರ ನಿರ್ದೇಶಿಸಿದ್ದಾರೆ. ಈ ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ.
‘90 ಹೊಡಿ ಮನೀಗ್ ನಡಿ’ ಎಂದು ಶೀರ್ಷಿಕೆ ಇಡಲಾಗಿತ್ತು. ಆದರೆ ಸೆನ್ಸಾರ್ ಮಂಡಳಿ ಈ ಶೀರ್ಷಿಕೆ ಒಪ್ಪಲಿಲ್ಲ. ಹಾಗಾಗಿ, ಚಿತ್ರದ ಶೀರ್ಷಿಕೆ ಬದಲಿಸಿದ್ದೇವೆ. ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟ ಬಿರಾದಾರ್ ಈ ಚಿತ್ರದಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಜುಲೈನಲ್ಲಿ ಚಿತ್ರ ಬಿಡುಗಡೆ ಮಾಡಲು ತಯಾರಿ ನಡೆದಿದೆ ಎಂದು ನಿರ್ದೇಶಕರು ಹೇಳಿದರು.
ರತ್ನಮಾಲ ಬಾದರದಿನ್ನಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ‘ನನ್ನ ರಂಗಭೂಮಿ ಹಾಗೂ ಸಿನಿಪಯಣಕ್ಕೆ 50 ವರ್ಷ ತುಂಬಿದೆ. ಹಾಡೊಂದಕ್ಕೆ ಭರ್ಜರಿ ಸ್ಟೆಪ್ ಹಾಕಿದ್ದೇನೆ. ಕುಡಿತದಿಂದ ಏನೆಲ್ಲಾ ದುಷ್ಪರಿಣಾಮ ಆಗುತ್ತದೆ ಎಂಬುದನ್ನು ನಿರ್ದೇಶಕರು ಈ ಚಿತ್ರದಲ್ಲಿ ತೋರಿಸಿದ್ದಾರೆ’ ಎಂದರು ನಟ ಬಿರಾದಾರ್.
ಕರಿಸುಬ್ಬು, ಧರ್ಮ, ಪ್ರಶಾಂತ್ ಸಿದ್ಧಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕೃಷ್ಣ ನಾಯ್ಕರ್ ಛಾಯಾಗ್ರಹಣ, ವೆಂಕಟೇಶ್ ಯುಡಿವಿ ಸಂಕಲನ, ರಾಕಿ ರಮೇಶ್ ಸಾಹಸ ನಿರ್ದೇಶನ, ವೀರ್ ಸಮರ್ಥ್ ಅವರ ಹಿನ್ನೆಲೆ ಸಂಗೀತ, ಕಿರಣ್ ಶಂಕರ್ ಮತ್ತು ಶಿವು ಭೇರಗಿ ಅವರ ಸಂಗೀತ ನಿರ್ದೇಶನ ಚಿತ್ರಕ್ಕಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.