ಗುರುವಾರ , ಏಪ್ರಿಲ್ 2, 2020
19 °C
ಬರಗೂರರ ’ಚೈತ್ರಯಾತ್ರೆ’ ಉದ್ಘಾಟನೆ

ಸಮುದಾಯದತ್ತ ಕಲಾತ್ಮಕ ಚಿತ್ರಜನರ ಬಳಿಗೆ ‘ಭೀಮಣ್ಣ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಾತ್ಮಕ ಸಿನಿಮಾಗಳಿಗೆ ಚಿತ್ರಮಂದಿರಗಳು ಸಿಗುವುದಿಲ್ಲ. ಸಿಕ್ಕರೂ ಇಂಥ ಸಿನಿಮಾಗಳನ್ನು ಚಿತ್ರಮಂದಿರಕ್ಕೆ ಬಂದು ನೋಡುವ ಪ್ರೇಕ್ಷಕರೂ ಕಡಿಮೆ. ಇಂಥ ಹೊತ್ತಲ್ಲಿ ಕಲಾತ್ಮಕ ಚಿತ್ರಗಳನ್ನು ಜನರಬಳಿಗೆ ಕೊಂಡೊಯ್ಯುವ ಪ್ರಯತ್ನ ಮಾಡುತ್ತಿದ್ದಾರೆ ಸಾಹಿತಿ, ಸಿನಿಮಾ ನಿರ್ದೇಶಕ ಬರಗೂರು ರಾಮಚಂದ್ರಪ್ಪ.

ತಾವು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ‘ಬಯಲಾಟದ ಭೀಮಣ್ಣ’ ಎಂಬ ಸಿನಿಮಾವನ್ನು ಸಮುದಾ ಯದ ನಡುವೆಯೇ ಬಿಡುಗಡೆ ಮಾಡಿಸಿ, ಜನರ ಬಳಿಗೇ ಕೊಂಡೊಯ್ಯುವ ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆ ‘ಸಮುದಾಯದತ್ತ ಸಿನಿಮಾ’ ಎಂಬ ಪರಿಕಲ್ಪನೆ ರೂಪಿಸಿ, ‘ಚಿತ್ರಯಾತ್ರೆ’ಯ ಮೂಲಕ ರಾಜ್ಯದಾದ್ಯಂತ ಪ್ರೇಕ್ಷಕರ ಬಳಿಗೆ ಸಿನಿಮಾ ಕೊಂಡೊಯ್ಯುತ್ತಿದ್ದಾರೆ. ಇದಕ್ಕೆ ‘ಪರ್ಯಾಯ ಬಿಡುಗಡೆ’ ಪ್ರಯೋಗ ಎಂದು ಹೆಸರಿಸಿದ್ದಾರೆ. 

ಬರಗೂರರು ಹೀಗೆ ಜನರ ಬಳಿಗೆ ಕಲಾತ್ಮಕ ಚಿತ್ರಗಳನ್ನು ಕೊಂಡೊಯ್ಯುತ್ತಿರುವುದು ಇದೇ ಮೊದಲಲ್ಲ. ಹಿಂದೆ ತಾವೇ ನಿರ್ದೇಶಿಸಿದ ‘ಶಾಂತಿ’, ‘ಏಕಲವ್ಯ’, ‘ಉಗ್ರಗಾಮಿ’, ‘ಶಬರಿ’ ಸಿನಿಮಾಗಳನ್ನು ’ಚಿತ್ರಯಾತ್ರೆ’ಯ ಮೂಲಕ ನಾಡಿನಾದ್ಯಂತ ನೂರಕ್ಕೂ ಹೆಚ್ಚು ಊರುಗಳಲ್ಲಿ ಪ್ರದರ್ಶಿಸಿದ್ದರು. ಆಗ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. 

ಸಂವಿಧಾನದ ಆಶಯಕ್ಕೆ ಬದ್ಧವಾದ, ಸಮಕಾಲೀನ ಸಂದರ್ಭವನ್ನು ಸಾಮಾಜಿಕ ಕಲಾತ್ಮಕತೆಯಿಂದ ಕಟ್ಟಿಕೊಡುವ ’ಬಯಲಾಟದ ಭೀಮಣ್ಣ’ ಸಿನಿಮಾವನ್ನು ರಾಜ್ಯದಾದ್ಯಂತ 250 ಪ್ರದರ್ಶನಗಳನ್ನು ನೀಡಲು ಸಿದ್ಧತೆ ನಡೆಸಿದ್ದಾರೆ. ‘ಈ ಬಾರಿ ವಿಶೇಷವಾಗಿ ಶಾಲಾ – ಕಾಲೇಜುಗಳಂತಹ ಶಿಕ್ಷಣ ಸಂಸ್ಥೆಗಳು, ಸಾಮಾಜಿಕ, ಸಾಂಸ್ಕೃತಿಕ ಸಂಘಟನೆಗಳಲ್ಲಿ ಪ್ರದರ್ಶನಗಳನ್ನು ಏರ್ಪಡಿಸುತ್ತಿದ್ದೇವೆ’ ಎನ್ನುತ್ತಾರೆ ಬರಗೂರು. 

ಈ ಸಿನಿಮಾದ ಮೊದಲ ಪ್ರದರ್ಶನ ಮತ್ತು ಚಿತ್ರಯಾತ್ರೆಯ ಉದ್ಘಾಟನೆ ಭಾನುವಾರ ತುಮಕೂರಿನ ಎಂ.ಜಿ ರಸ್ತೆಯಲ್ಲಿರುವ ಬಾಲಭವನದಲ್ಲಿ ನಡೆಯಿತು. ಹೈಕೋರ್ಟ್‌ ವಿಶ್ರಾಂತ ನ್ಯಾಯಾಧೀಶ ಎಚ್‌.ಎನ್‌. ನಾಗಮೋಹನ್‌ ದಾಸ್‌ ಚಿತ್ರಯಾತ್ರೆ ಉದ್ಘಾಟಿಸಿದರು ಈ ’ಚಿತ್ರಯಾತ್ರೆ’ಯನ್ನು ಅಪೆಕ್ಷ್ ಬ್ಯಾಂಕ್ ಮತ್ತು ತುಮಕೂರು ಡಿ.ಸಿ.ಸಿ  ಬ್ಯಾಂಕ್‌ಗಳು ಪ್ರಾಯೋಜಿಸಿದ್ದವು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)