ನವದೆಹಲಿ: ಲಿಂಗ ಸಂವೇದನೆ ವಿಷಯ ವಸ್ತು ಹೊಂದಿರುವ ಹಿಂದಿ ಚಲನಚಿತ್ರ ‘ಲಾಪತಾ ಲೆಡೀಸ್‘, ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಪ್ರದರ್ಶನ ಕಂಡಿತು.
ನಿರ್ಮಾಪಕ ಅಮೀರ್ ಖಾನ್ ಹಾಗೂ ನಿರ್ದೇಶಕಿ ಕಿರಣ್ ರಾವ್ ಅವರನ್ನು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಸ್ವಾಗತಿಸಿ, ಅವರೊಂದಿಗೆ ಚಿತ್ರ ವೀಕ್ಷಿಸಿದರು.
ಈ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ನ ಇತರ ನ್ಯಾಯಮೂರ್ತಿಗಳು ದಂಪತಿ ಸಮೇತರಾಗಿ ಪಾಲ್ಗೊಂಡು ಚಿತ್ರ ವೀಕ್ಷಿಸಿದ್ದು ವಿಶೇಷವಾಗಿತ್ತು.
ಚಿತ್ರ ವೀಕ್ಷಣೆಗೂ ಮೊದಲು, ನ್ಯಾಯಾಲಯದ ಕಲಾಪದಲ್ಲಿ ಅಮೀರ್ ಖಾನ್ ಭಾಗಿಯಾದರು. ನ್ಯಾಯಾಲಯದ ಮುಂಭಾಗದ ಆಸನದಲ್ಲೇ ಕುಳಿತು ಸುಮಾರು 30 ನಿಮಿಷಗಳ ಕಾಲ ಕಲಾಪ ವೀಕ್ಷಿಸಿದರು. ಈ ಸಂದರ್ಭದಲ್ಲಿ ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅವರು ವಾದ ಮಂಡಿಸುತ್ತಿದ್ದರು. ನಡುವೆ ‘ಇಂದು ನ್ಯಾಯಾಲಯ ತಾರೆಗಳಿಂದ ತುಂಬಿದೆ’ ಎಂದು ಬಣ್ಣಿಸಿದ್ದಾಗಿ ಎಎನ್‌ಐ ವರದಿ ಮಾಡಿದೆ.
‘ಸುಪ್ರೀಂ ಕೋರ್ಟ್ ಸ್ಥಾಪನೆಗೊಂಡು 75 ವರ್ಷವಾಗಿರುವ ಸಂದರ್ಭದಲ್ಲಿ ನನ್ನದೊಂದು ಚಿತ್ರ ಇಲ್ಲಿ ಪ್ರದರ್ಶನಗೊಳ್ಳುತ್ತಿರುವುದು ನನಗೆ ಸಂದ ಅತಿ ದೊಡ್ಡ ಗೌರವ’ ಎಂದು ಕಿರಣ್ ರಾವ್ ಧನ್ಯವಾದ ಅರ್ಪಿಸಿದರು.
ನಂತರ ನ್ಯಾಯಾಲಯದ ಆಡಳಿತ ಭವನದ ಸಭಾಂಗಣದಲ್ಲಿ ಚಿತ್ರ ಪ್ರದರ್ಶನ ಕಂಡಿತು. ಸಂಜೆ 4.15ರಿಂದ ಆರಂಭಗೊಂಡ ಸಿನಿಮಾ 6.20ಕ್ಕೆ ಕೊನೆಗೊಂಡಿತು.
ರವಿ ಕಿಶನ್, ನಿತಾಂಶಿ ಗೋಯಲ್, ಪ್ರತಿಭಾ ರತ್ನಾ, ಸ್ಪರ್ಶ ಶ್ರಿವಾಸ್ತವ ಅವರಿದ್ದ ಈ ಚಿತ್ರ 2023ರ ಸೆಪ್ಟೆಂಬರ್‌ನಲ್ಲಿ ನಡೆದ ಟೊರೊಂಟೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾರಿ ಕರತಾಡನದೊಂದಿಗೆ ಪ್ರದರ್ಶನಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.