ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರಿ ಹತ್ಯೆ ಬಳಿಕ ಮದುವೆ ಆಗಬೇಕು ಅನ್ನಿಸಿತು: ಮೇಘಾ ಕೈ ಹಿಡಿಯಲಿರುವ ಚೇತನ್

Last Updated 24 ಜನವರಿ 2020, 9:59 IST
ಅಕ್ಷರ ಗಾತ್ರ
ADVERTISEMENT
""
""

ಬೆಂಗಳೂರು: ಜೀವನದಲ್ಲಿ ಮದುವೆಯೇ ಆಗುವುದಿಲ್ಲ ಎಂದು ದೃಢನಿಶ್ಚಯ ಮಾಡಿದ್ದ ಚಿತ್ರನಟ, ಹೋರಾಟಗಾರ ಚೇತನ್ ಅಹಿಂಸಾ ಇದೇ ಫೆ.2 ರಂದು ಮದುವೆಯಾಗಲಿದ್ದಾರೆ.

ಚೇತನ್ ಕೈ ಹಿಡಿಯುವ ಸುಂದರಿಯ ಹೆಸರು ಮೇಘಾ. ಮೂಲತಃ ಮಧ್ಯಪ್ರದೇಶದ ಗ್ವಾಲಿಯರ್ ನ ಮೇಘಾ ಕಳೆದ ಕೆಲವು ವರ್ಷಗಳಿಂದ ಬೆಂಗಳೂರಲ್ಲಿ ಕಾನೂನು ಪದವಿ ಕಲಿಯುತ್ತಿದ್ದಾರೆ.

ಅನಾಥಾಶ್ರಮದ ಮಕ್ಕಳು, ವೃದ್ಧರ ಜೊತೆಗೆ ವಿನೋಬಾ ಆಶ್ರಮದಲ್ಲಿ ಈ ಸರಳ ಮದುವೆ ನಡೆಯಲಿದೆ. ಮದುವೆ ದಿನ ವಚನ ಗಾಯನ, ಸೂಫಿ ಸಂಗೀತ, ಸಿದ್ಧಿ, ಲಂಬಾಣಿ, ಕೊರಗ ನೃತ್ಯ ಮತ್ತು ಪುಸ್ತಕ ಪ್ರದರ್ಶನ ಇರಲಿದೆ. ಸಮಾರಂಭದಲ್ಲಿ ವಧೂವರರು ಮದುವೆ ಪ್ರತಿಜ್ಞೆ ಕೈಗೊಳ್ಳಲಿದ್ದಾರೆ.

ಸಿನಿಮಾ ನಟನೆಯ ಜೊತೆಗೇ ಜನಪರ ಚಳವಳಿಗಳಲ್ಲಿ ಮುಂಚೂಣಿಯಲ್ಲಿರುವ ಚೇತನ್ ಗೆ ಕೊಳೆಗೇರಿ ವಾಸಿಗಳ ಸಲುವಾಗಿ ದುಡಿಯುತ್ತಿದ್ದ ಮೇಘಾ ಪರಿಚಯವಾದದ್ದು 5 ವರ್ಷಗಳ ಹಿಂದೆ. ಆದರೆ ಮದುವೆ ಎನ್ನುವ ಸಂಸ್ಥೆಯ ಬಗ್ಗೆ ಚೇತನ್ ಗೆ ನಂಬಿಕೆ ಇರಲಿಲ್ಲ. ಮನೆಯವರ ಯಾವ ಒತ್ತಡಕ್ಕೂ ಅವರು ಮಣಿದಿರಲಿಲ್ಲ.

'ನಿಜ, ಜೀವನಪೂರ್ತಿ ಒಬ್ಬಂಟಿಯಾಗಿಯೇ ಇರಬೇಕು ಎಂದು ನಿರ್ಧರಿಸಿದ್ದೆ. ನನ್ನದು ಹೋರಾಟದ ಬದುಕು. ಮದುವೆ ಆದರೆ ಸಮಾಜ ಸೇವೆಗೆ, ಹೋರಾಟಕ್ಕೆ ತೊಂದರೆ. ಮದುವೆಯಾಗಿ ಬರುವ ಹೆಣ್ಣು ನನ್ನಿಂದ ಆರಾಮದ ಬದುಕು ನಿರೀಕ್ಷಿಸುವಂತಿಲ್ಲ. ಅದಕ್ಕಾಗಿ ಮದುವೆಯೇ ಬೇಡ ಎಂದು ನಿರ್ಧರಿಸಿದ್ದೆ' ಎಂದು ಪ್ರಜಾವಾಣಿ ಜೊತೆ ಮದುವೆಯ ವಿಷಯ ಹಂಚಿಕೊಂಡರು ಚೇತನ್.

'ಮೇಘಾ ಕೂಡಾ ನನ್ನಂತೆಯೇ ಯೋಚಿಸುವವರು. ಸಮಾಜದ ತಳವರ್ಗದ ಜನರಿಗಾಗಿ ಜೀವನ ಮುಡಿಪಾಗಿಡಲು ನಿರ್ಧರಿಸಿದವರು. ಸ್ಲಂ ಜನರ ಮಧ್ಯೆ ದುಡಿಯುತ್ತಿದ್ದಾರೆ. ಸಮಾನಮನಸ್ಕರಾದ್ದರಿಂದ ಮದುವೆಯಾದರೆ ಹೇಗೆ..ಎನ್ನುವ ಆಲೋಚನೆ ಇಬ್ಬರಿಗೂ ಎರಡು ವರ್ಷದ ಹಿಂದೆಯೇ ಬಂದಿತ್ತು. ಆದರೆ ನಿರ್ಧಾರ ಇತ್ತೀಚೆಗಷ್ಟೇ ಕೈಗೊಂಡೆವು' ಎಂದರು ಚೇತನ್.

'ವಾಸ್ತವವಾಗಿ ಪತ್ರಕರ್ತೆ ಗೌರಿ ಲಂಕೇಶ್ ಕೊಲೆಯಾದ ಬಳಿಕ ನನಗೆ ಮದುವೆಯ ಕಡೆಗೆ ಗಮನ ಹರಿಯಿತು. ಒಬ್ಬನೇ ಹೋರಾಟ ಮಾಡುವಾಗ ಅದೇ ರೀತಿಯ ಬದ್ಧತೆ ಇರುವ ಸಂಗಾತಿಯೊಬ್ಬಳು ಜೊತೆಗಿದ್ದರೆ ಹೋರಾಟಕ್ಕೆ ಹೆಚ್ಚು ದೃಢತೆ ಬರಬಹುದು ಅನ್ನಿಸಿತು. ಅದಕ್ಕೆ ಸರಿಯಾಗಿ ನನ್ನ ವಿಚಾರಕ್ಕೆ ಸ್ಪಂದಿಸುವ ಮೇಘಾ ದೊರೆತರು. ನಾನು ದಿಡ್ಡಳ್ಳಿ ಆದಿವಾಸಿಗಳ ಹೋರಾಟಕ್ಕೆ ಧುಮುಕಲು ಮೇಘಾ ಅವರೇ ಕಾರಣ. ಅವರೇ ನನ್ನನ್ನು ಅಲ್ಲಿಗೇ ಹೋಗಿ ಹೋರಾಟ ಮಾಡಲು ಕಳಿಸಿದ್ದು' ಎಂದು ಚೇತನ್ ಹೇಳಿದರು.

ಮೇಘಾಅವರ ತಂದೆ ಮಧ್ಯಪ್ರದೇಶ ಸರ್ಕಾರದ ನೌಕರ. ತಾಯಿ ಗೃಹಿಣಿ. ಒಬ್ಬ ತಂಗಿ, ಒಬ್ಬ ತಮ್ಮ ಇದ್ದಾರೆ. ಮೇಘಾ ಅವರಿಗೆ ಕನ್ನಡ ಬರುವುದಿಲ್ಲ. ಆದರೆ ಕರ್ನಾಟಕದ ಸೊಸೆಯಾಗಲು ಈಗ ಕನ್ನಡ ಮೇಜರ್ ಕಲಿಯುತ್ತಿದ್ದಾರೆ. ಶ್ರೀಮಂತ ಮನೆತನದ ಚೇತನ್ ಅಮೆರಿಕದ ಯೇಲ್ ವಿಶ್ವವಿದ್ಯಾಲಯದಲ್ಲಿ ಮಾನವಿಕ ವಿಭಾಗದಲ್ಲಿ ರಂಗಭೂಮಿಗೆ ಸಂಬಂಧಿಸಿ ತುಲನಾತ್ಮಕ ಅಧ್ಯಯನದ ಪದವಿ ಪಡೆದಿದ್ದಾರೆ. ಕೆ.ಎಂ.ಚೈತನ್ಯ ನಿರ್ದೇಶನದ 'ಆ ದಿನಗಳು' ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ್ದರು. ಸಿನಿಮಾ ಅಭಿನಯದ ಜೊತೆಗೇ ಆದಿವಾಸಿಗಳ ಭೂ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT