ಶನಿವಾರ, ಜೂನ್ 25, 2022
25 °C

ದೇಶದ ಎಲ್ಲ ಭಾಷೆಗಳು ಪೂಜನೀಯ: ಪ್ರಧಾನಿ ಮೋದಿ ಮಾತಿಗೆ ಕಿಚ್ಚ ಸುದೀಪ್ ಹೇಳಿದ್ದೇನು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ರಾದೇಶಿಕ ಭಾಷೆಗಳ ಪ್ರಾಮುಖ್ಯತೆ ಕುರಿತು ಪ್ರಧಾನಿ ನರೇಂದ್ರ ಮೋದಿ ಮಾತನಾಡಿರುವ ಬಗ್ಗೆ ನಟ ಕಿಚ್ಚ ಸುದೀಪ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಎನ್‌ಡಿಟಿವಿ ಸಂದರ್ಶನದಲ್ಲಿ ಮಾತನಾಡಿರುವ ಸುದೀಪ್‌, ‘ಯಾವುದೇ ಗಲಭೆ ಅಥವಾ ವಾದ–ವಿವಾದವನ್ನು ಆರಂಭಿಸುವುದು ನನ್ನ ಉದ್ದೇಶವಾಗಿರಲಿಲ್ಲ. ನನ್ನ ಅಭಿಪ್ರಾಯದ ಹಿಂದೆ ಯಾವುದೇ ಅಜೆಂಡಾ ಇಲ್ಲ. ‘ಹಿಂದಿ ರಾಷ್ಟ್ರೀಯ ಭಾಷೆ ಅಲ್ಲ’ ಎಂಬುದಷ್ಟೇ ನನ್ನ ಅಭಿಪ್ರಾಯವಾಗಿತ್ತು. ಇದೀಗ ಪ್ರಧಾನಿ ಮೋದಿಯವರು ಪ್ರಾದೇಶಿಕ ಭಾಷೆಗಳ ಮಹತ್ವದ ಬಗ್ಗೆ ಮಾತನಾಡಿರುವುದು ನನಗೆ ಸಂತಸ ತರಿಸಿದೆ’ ಎಂದು ಹೇಳಿದ್ದಾರೆ.

ತಮ್ಮ ಭಾಷೆಯನ್ನು ಗೌರವದಿಂದ ಕಾಣುವ ಪ್ರತಿಯೊಬ್ಬರಿಗೂ ಮೋದಿ ಅವರು ಪ್ರಾದೇಶಿಕ ಭಾಷೆಗಳ ಬಗ್ಗೆ ಮಾತನಾಡಿರುವ ಮಾತುಗಳು ಸಂತೋಷ ತರಿಸುತ್ತವೆ ಎಂದು ಸುದೀಪ್ ಹೇಳಿದ್ದಾರೆ.

‘ನಾವು ಮೋದಿ ಅವರನ್ನು ಕೇವಲ ರಾಜಕಾರಣಿಯಾಗಿ ನೋಡುವುದಿಲ್ಲ. ಅವರನ್ನು ನಾಯಕರಾಗಿಯೂ ನೋಡುತ್ತೇವೆ. ಇದೀಗ ಪ್ರಾದೇಶಿಕ ಭಾಷೆಗಳ ಬಗ್ಗೆ ಅವರು ನೀಡಿರುವ ಹೇಳಿಕೆ ಎಲ್ಲಾ ಭಾಷೆಗಳಿಗೆ ಅನ್ವಯವಾಗುತ್ತದೆ. ಅವರ ಮಾತುಗಳು ಮಾತೃಭಾಷೆಯನ್ನು ಗೌರವಿಸುವ ಪ್ರತಿಯೊಬ್ಬರಿಗೆ ಸ್ಫೂರ್ತಿದಾಯಕ’ ಎಂದಿದ್ದಾರೆ. 

’ನಾನು ಯಾರೊಂದಿಗೂ ವೈಷಮ್ಯ ಕಟ್ಟಿಕೊಳ್ಳಲು (ಜಗಳಕ್ಕೆ) ಪ್ರಯತ್ನಿಸುವುದಿಲ್ಲ. ಕೆಲವು ವಿಷಯಗಳು ಬಂದಾಗ ನನ್ನ ಅಭಿಪ್ರಾಯಗಳನ್ನು ಹೇಳುವ ಹಕ್ಕು ನನಗಿದೆ’ ಎಂದು ಸ್ಪಷ್ಟಪಡಿಸಿರುವ ಸುದೀಪ್, ‘ಹಿಂದಿ ಚಲನಚಿತ್ರೋದ್ಯಮಕ್ಕೆ ಅಭದ್ರತೆ ಕಾಡುತ್ತಿದೆ ಎಂಬ ಮಾತುಗಳನ್ನು ತಳ್ಳಿಹಾಕಿದ್ದಾರೆ. 

ಪ್ರಧಾನಿ ಮೋದಿ ಹೇಳಿದ್ದೇನು?
ಭಾಷೆಗಳ ಆಧಾರದ ಮೇಲೆ ವಿವಾದಗಳನ್ನು ಹುಟ್ಟುಹಾಕಲು ಪ್ರಯತ್ನಗಳು ನಡೆಯುತ್ತಿರುವುದನ್ನು ನಾವು ಗಮನಿಸಿದ್ದೇವೆ. ಭಾರತದ ಪ್ರತಿ ಭಾಷೆಯಲ್ಲೂ ಭಾರತೀಯ ಸಂಸ್ಕೃತಿಯ ಪ್ರತಿಬಿಂಬವನ್ನು ಬಿಜೆಪಿ ನೋಡುತ್ತದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ ಹೇಳಿದ್ದಾರೆ.

ಜೈಪುರದಲ್ಲಿ ನಡೆಯುತ್ತಿರುವ ಬಿಜೆಪಿಯ ರಾಷ್ಟ್ರೀಯ ಪದಾಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಕಳೆದ ಕೆಲವು ದಿನಗಳಿಂದ ಭಾಷೆಗಳ ಆಧಾರದ ಮೇಲೆ ವಿವಾದಗಳನ್ನು ಹುಟ್ಟುಹಾಕಲು ಪ್ರಯತ್ನಗಳು ನಡೆಯುತ್ತಿರುವುದನ್ನು ನಾವು ಗಮನಿಸಿದ್ದೇವೆ. ಬಿಜೆಪಿಯು ಪ್ರತಿಯೊಂದು ಪ್ರಾದೇಶಿಕ ಭಾಷೆಯಲ್ಲೂ ಭಾರತೀಯ ಸಂಸ್ಕೃತಿಯ ಪ್ರತಿಬಿಂಬವನ್ನು ಕಾಣುತ್ತದೆ. ಅವುಗಳನ್ನು ಪೂಜನೀಯವಾಗಿ ಪರಿಗಣಿಸುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪ್ರತಿಯೊಂದು ಪ್ರಾದೇಶಿಕ ಭಾಷೆಗೂ ಪ್ರಾಮುಖ್ಯತೆ ನೀಡಲಾಗಿದೆ’ ಎಂದು ತಿಳಿಸಿದ್ದರು.

ಇಬ್ಬರು ಸಿನಿಮಾ ಸ್ಟಾರ್‌ಗಳ (ಕಿಚ್ಚ ಸುದೀಪ್ ಮತ್ತು ಅಜಯ್‌ ದೇವಗನ್‌) ಮಾತು–ತಿರುಗೇಟಿನ ನಡುವೆ 'ಹಿಂದಿ ರಾಷ್ಟ್ರ ಭಾಷೆ'(?) ಎಂಬುದರ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. 

ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಸುದೀಪ್‌, 'ಪ್ರಸ್ತುತ ಹಿಂದಿ ರಾಷ್ಟ್ರೀಯ ಭಾಷೆ ಅಲ್ಲ' ಎಂದು ಹೇಳಿದ್ದರು. ಈ ಮಾತಿಗೆ ಬಾಲಿವುಡ್‌ ನಟ ಅಜಯ್‌ ದೇವಗನ್‌ ಕಿಡಿಕಾರಿದ್ದರು. 

ಇವನ್ನೂ ಓದಿ... 

 ಹಿಂದಿ ರಾಷ್ಟ್ರ ಭಾಷೆ ಅಲ್ಲ: ಕಿಚ್ಚ ಸುದೀಪ್ ಹೇಳಿಕೆಗೆ ಅಜಯ್ ದೇವಗನ್ ಕಿಡಿ

 

ಹಿಂದಿ ರಾಷ್ಟ್ರ ಭಾಷೆ ಎಂದ ಅಜಯ್ ದೇವಗನ್ ಹೇಳಿಕೆಗೆ ನಟಿ ರಮ್ಯಾ ಕಿಡಿ

ದೇಶಕ್ಕೆ ಇರುವುದೊಂದೇ ಭಾಷೆ, ಅದು ಮನರಂಜನೆ: ಅಜಯ್‌ಗೆ ಸೋನು ಸೂದ್‌ ತಿರುಗೇಟು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು