ಶನಿವಾರ, ಮಾರ್ಚ್ 25, 2023
25 °C

PV Web Exclusive | ದೃಶ್ಯಮಾಧ್ಯಮದ ‘ಹೊನ್ನಕಿರಣ’

ಸಂದೀಪ ನಾಯಕ Updated:

ಅಕ್ಷರ ಗಾತ್ರ : | |

Prajavani

ಜೀ ಟೀವಿಯಲ್ಲಿ ರಾತ್ರಿ 8 ಗಂಟೆಗೆ ಪ್ರಸಾರವಾಗುವ ‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುವ ತಿಪಟೂರು ರಘುಪತಿ ಪಾತ್ರಧಾರಿಯ ಅಭಿನಯವನ್ನು ಕಂಡವರಿಗೆ ಕೊಂಚ ಕಿರಿಕಿಯಾಗದೇ ಇರದು. ನಾಯಕಿ ಅನು ಸಿರಿಮನೆ ಮತ್ತು ಅವರ ಮನೆಯವರಿಗೆ ಆಗಾಗ ತೊಂದರೆ ಕೊಡುವ, ಕಂಡಕಂಡವರ ತಲೆಯಲ್ಲಿ ಹುಳಬಿಡುವ ಈ ನಟನ ಹೆಸರು ಕಿಣ ಹೊನ್ನಾವರ. ಈ ‘ಹುಳಬಿಡುವ ಪಾರ್ಟಿ’ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದವರು.

ವಿದ್ಯಾರ್ಥಿಯಾಗಿದ್ದಾಗಲೇ ತಲೆಯಲ್ಲಿ ಕಲೆಯ ಹುಳ ಬಿಟ್ಟುಕೊಂಡ ಈ ಕಿರಣ ಹೊನ್ನಾವರ ಅವರಿಗೆ ಈಗ ಆರೂರು ಜಗದೀಶ್‌ ನಿರ್ದೇಶನದ ‘ಜೊತೆ ಜೊತೆಯಲಿ’ ಧಾರಾವಾಹಿ ಸಾಕಷ್ಟು ಪ್ರಸಿದ್ಧಿಯನ್ನು ತಂದುಕೊಟ್ಟಿದೆ. ಜೊತೆಗೆ ಅವರ ಪಾತ್ರಕ್ಕೆ ಸಾಕಷ್ಟು ಪ್ರತಿಕ್ರಿಯೆಗಳೂ ಬರುತ್ತಿವೆ. ಅದಕ್ಕೆ ಕಾರಣ ಧಾರಾವಾಹಿಯ ನಿರ್ದೇಶಕ ಆರೂರು ಜಗದೀಶ್‌ ಕತೆಯಲ್ಲಿ ವೈವಿಧ್ಯ ಇರಲಿ ಎಂದು ರೂಪಿಸಿದ, ಖಳಛಾಯೆ ಇರುವ, ಉತ್ಪ್ರೇಕ್ಷಿತ ನಟನೆಯ ಈ ಪಾತ್ರ ಎನ್ನುತ್ತಾರೆ ಕಿರಣ್‌. ಈ ಮೊದಲು ಕಿರಣ್‌ ಅವರನ್ನು ರಸ್ತೆಯಲ್ಲಿ ಕಂಡು ದೂರ ಸರಿಯುತ್ತಿದ್ದವರೂ ಈಗ ಅವರ ಸಮೀಪ ನಿಂತು ಸೆಲ್ಫಿ ತೆಗೆದುಕೊಳ್ಳುವ ಮಟ್ಟಿಗೆ ಆ ಪಾತ್ರ ಜನಪ್ರಿಯವಾಗಿದೆ! ಸ್ಟಾರ್‌ ಸುವರ್ಣದಲ್ಲಿ ಪ್ರಸಾರವಾಗುವ ‘ಮತ್ತೆ ವಸಂತ’ದಲ್ಲಿನ ಪಾತ್ರ ಕೂಡ ಅವರಿಗೆ ಸಾಕಷ್ಟು ಹೆಸರನ್ನು ತಂದುಕೊಟ್ಟಿದೆ.

ಈ ಜನಪ್ರಿಯತೆ ರಾತ್ರಿಬೆಳಗಾಗುವುದರಲ್ಲಿ ಬಂದದ್ದಲ್ಲ. ಎರಡು ದಶಕಗಳ ಕಾಲ ಕಲಾಮಾಧ್ಯಮದಲ್ಲಿ ತೊಡಗಿಕೊಂಡದ್ದರ ಫಲ ಇದು. ಹೊನ್ನಾವರದ ಎಸ್‌.ಡಿ.ಎಂ ಕಾಲೇಜಿನಲ್ಲಿ ಪಿಯುಸಿ ಓದುತ್ತಿರುವಾಗ ಅಲ್ಲಿ ಆಡಿಸುತ್ತಿದ್ದ ನಾಟಕಗಳಲ್ಲಿ ಪಾತ್ರಗಳನ್ನು ಮಾಡುತ್ತಿದ್ದರು. ಅಲ್ಲೇ ಪದವಿ ಓದುವಾಗ ತಿರುಗಾಟಕ್ಕೆ ಬಂದ ನೀನಾಸಂನ ನಾಟಕಗಳು ಅವರಿಗೆ ಕಲೆಯ ಕಡೆಗಿನ ಸೆಳೆತವನ್ನು ಹೆಚ್ಚಿಸಿದವು. ಪದವಿ ಮುಗಿಯುತ್ತಿದ್ದಂತೆ ಹೆಗ್ಗೋಡಿನ ನೀನಾಸಂನ ಒಂದು ವರ್ಷದ ನಾಟಕದ ಡಿಪ್ಲೊಮಾ ಮಾಡಲು ಕಿರಣ್‌ ಹೋದರು. ಅಲ್ಲಿ ಕಲಿಯುತ್ತಿರುವಾಗ ಬಿ.ವಿ. ಕಾರಂತ, ಚಿದಂಬರರಾವ್‌ ಜಂಬೆ, ಕೆ.ವಿ. ಅಕ್ಷರ, ವೆಂಕಟ್ರಮಣ ಐತಾಳ ಅವರ ನಿರ್ದೇಶನದಲ್ಲಿ ಬಂದ ನಾಟಕಗಳಿಗೆ ಕೆಲಸ ಮಾಡಿದರು. ಹಾಗೆ ನಾಟಕಗಳಲ್ಲಿ ಕೆಲಸ ಮಾಡುತ್ತಲೇ ಉದಯ ಟೀವಿಗೆ ಟಿ.ಎಸ್‌. ನಾಗಾಭರಣ ನಿರ್ದೇಶಿಸಿದ ‘ಗೆಳತಿ’ ಧಾರಾವಾಹಿಯಲ್ಲಿ ಪುಟ್ಟ ಪಾತ್ರವೊಂದರಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡರು. ಇದಾದ ಬಳಿಕ ಊರು ಹೊನ್ನಾವರದಲ್ಲಿ ಅಣ್ಣನಿಗೆ ಅಂಗಡಿಯಲ್ಲಿ ಸಹಾಯ ಮಾಡುತ್ತಲೇ ಕಿರಣರ ಅವಕಾಶಗಳ ಹುಡುಕಾಟ ಮುಂದುವರಿದಿತ್ತು. ಆಗಲೇ ಈ ಟೀವಿಗಾಗಿ ಏಣಗಿ ನಟರಾಜ್‌ ನಿರ್ದೇಶಿಸಿದ ‘ಇದು ಎಂಥಾ ಲೋಕವಯ್ಯ’ ಎಂಬ ಹಾಸ್ಯ ಧಾರಾವಾಹಿಯಲ್ಲಿ ನಟಿಸಲು ಅವಕಾಶವೊಂದು ಹುಡುಕಿಕೊಂಡು ಬಂತು.

ಅವರ ವೃತ್ತಿಜೀವನಕ್ಕೆ ತಿರುವು ಕೊಟ್ಟದ್ದು ಬಿ.ಎಂ. ಗಿರಿರಾಜ್‌ರ ‘ಜಟ್ಟ’, ‘ಮೈತ್ರಿ’, ಪವನ್‌ಕುಮಾರ್ ಅವರ ’ಲೂಸಿಯಾ’ ಸಿನಿಮಾಗಳಲ್ಲಿ ಸಿಕ್ಕ ಪಾತ್ರಗಳು. ‘ಯು ಟರ್ನ್‌’, ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’, ‘ಅವನೇ ಶ್ರೀಮನ್ನಾರಾಯಣ’, ‘ಕಿರಗೂರಿನ ಗಯ್ಯಾಳಿಗಳು’ ತರಹದ ಮುಖ್ಯ ಸಿನಿಮಾಗಳೂ ಸೇರಿದಂತೆ ಸುಮಾರು 35 ಸಿನಿಮಾಗಳಲ್ಲಿ ಕಿರಣ್‌ ಅಭಿನಯಿಸಿದ್ದಾರೆ. ‘ಮಿ. ಜೊ ಬಿ ಕರ್ವಾಲೊ’ ಎಂಬ ಹಿಂದಿ ಸಿನಿಮಾದಲ್ಲೂ ಅವರು ಕಾಣಿಸಿಕೊಂಡಿದ್ದಾರೆ. ರಾಘು ಶಿವಮೊಗ್ಗ ನಿರ್ದೇಶನದ ರಾಜ್ಯ ಪ್ರಶಸ್ತಿ ಪಡೆದ ಕಿರುಚಿತ್ರ ‘ಚೌಕಾಬಾರ’ದಲ್ಲಿ ಕೂಡ ಅಭಿನಯಿಸಿದ್ದಾರೆ.  ಬಿ. ಸುರೇಶ್‌, ಮಂಸೋರೆ, ಸಂತೋಷ್‌ ಆನಂದ್‌ ರಾಮ್‌, ಸುಮನ್ ಕಿತ್ತೂರು, ರಾಜ್‌ ಬಿ. ಶೆಟ್ಟಿ ಅವರಂತಹ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದಾರೆ. ಈ ಎಲ್ಲ ಅವಕಾಶಗಳೂ ದೃಶ್ಯಮಾಧ್ಯಮದಲ್ಲಿನ ಅವರ ಅನುಭವವನ್ನು ಹೆಚ್ಚಿಸಿವೆ. ಕಿರಣ್‌ ಅಭಿನಯಿಸಿರುವ ‘ಗರುಡ ಗಮನ ವೃಷಭ ವಾಹನ’, ‘ಯುವರತ್ನ’ ಸೇರಿದಂತೆ ಕೆಲವು ಸಿನಿಮಾಗಳು ಇನ್ನಷ್ಟೇ ಬಿಡುಗಡೆಯಾಗಬೇಕಿವೆ. ಅವುಗಳ ಬಗ್ಗೆ ಅವರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ತಮ್ಮ ವೃತ್ತಿಯ ಕುರಿತಂತೆ ಯಾವ ಯೋಜನೆಯನ್ನೂ ಇಟ್ಟುಕೊಳ್ಳದ ಕಿರಣ್‌, ‘ನನ್ನ ಮುಂದೆ ಸದ್ಯಕ್ಕೆ ಯಾವುದೇ ಯೋಜನೆಗಳಿಲ್ಲ. ಒಳ್ಳೆಯ, ನಿರ್ದೇಶಕರು, ತಂತ್ರಜ್ಞರು, ನಟರೊಂದಿಗೆ ಕೆಲಸ ಮಾಡುವ ಇರಾದೆ ನನ್ನದು. ಈಗಾಗಲೇ ಪವನ್‌ಕುಮಾರ್‌ ನಿರ್ದೇಶನದ ‘ಯು ಟರ್ನ್‌’ನಲ್ಲಿ ಮಾಡಿದ ನನ್ನ ಪಾತ್ರವನ್ನು ಅದರ ತೆಲುಗು, ತಮಿಳು ಅವತರಣಿಕೆಗಳಲ್ಲೂ ಮಾಡಿದ್ದೇನೆ. ಹಾಗಾಗಿ ಅವಕಾಶಗಳು ಬಂದರೆ ಬೇರೆ ಭಾಷೆಗಳಲ್ಲಿ ನಟಿಸುವ ಉದ್ದೇಶ ಕೂಡ ಇದೆ. ನನಗೆ ನಿಂತ ನೀರಾಗುವುದು ಬೇಕಿಲ್ಲ. ಅಭಿನಯಲ್ಲಿ ಮುಕ್ತವಾಗಿ ಎಲ್ಲವನ್ನೂ ಸ್ವೀಕರಿಸಿ, ಚಲನಶೀಲವಾಗಿರಬೇಕು ಎಂಬುದು ನನ್ನ ಆಶಯ’ ಎನ್ನುತ್ತಾರೆ. ಬಂದ ಎಲ್ಲ ಪಾತ್ರಗಳನ್ನು ಒಪ್ಪಿಕೊಂಡು ನಟಿಸುವ ಕಿರಣ್‌, ತಾವು ನಿರ್ದೇಶಕರ ನಟ ಎಂದು ಈಗಾಗಲೇ ಸಾಬೀತು ಮಾಡಿದ್ದಾರೆ.

ಮಾಡುವ ಪಾತ್ರಗಳ ಕುರಿತು ಯಾವುದೇ ಅವರಿಗೆ ಯಾವುದೇ ನಿರೀಕ್ಷೆಗಳಿಲ್ಲ. ‘ನನಗೆ ಇಂಥದ್ದೇ ಪಾತ್ರ ಸಿಗಬೇಕು ಎಂದಿಲ್ಲ. ಪಾತ್ರಗಳು ಹೀಗೇ ಇರಬೇಕು ಎಂಬ ಗುರಿ, ಹಟ ನನ್ನದಲ್ಲ. ನಮ್ಮ ಕನಸಿನ ಪಾತ್ರ ಸಿಕ್ಕಮೇಲೆ ಎಲ್ಲ ಮುಗಿದು ಹೋದಂತೆ. ಆದ್ದರಿಂದ ಈ ಬಗ್ಗೆ ನಾನೊಂದು ಉದಾಹರಣೆ ಕೊಡುತ್ತೇನೆ. ಮೈಸೂರು ರಾಜನ ಪಾತ್ರ ಮಾಡುವುದು ನನ್ನ ಗುರಿಯಾಗಿತ್ತು ಎಂದುಕೊಳ್ಳೋಣ. ಆ ಪಾತ್ರವೂ ಸಿಕ್ಕು ನಾನು ಗುರಿ ಮುಟ್ಟಿದ ಮೇಲೆ, ಮಾರನೆ ದಿನ ಸೇವಕನ ಪಾತ್ರ ಬಂದರೆ ಅದನ್ನೂ ಮಾಡಬೇಕಲ್ಲವೆ? ಹಾಗಾಗಿ ನನಗೆ ಸಮಾಜದಲ್ಲಿ ಕಾಣಸಿಗುವ ಎಲ್ಲ ಬಗೆಯ ಪಾತ್ರಗಳನ್ನು ಮಾಡುವಂತಾಗಬೇಕು ಎಂಬ ಆಶೆ ಇದೆ. ಕಲಾವಿದ ಯಾವತ್ತೂ ಪಾತ್ರಗಳ ಬಗ್ಗೆ ಗಡಿಗಳನ್ನು ಹಾಕಿಕೊಳ್ಳಬಾರದು. ಯಾಕೆಂದರೆ, ಎಲ್ಲ ಬಗೆಯ ಪಾತ್ರಗಳು ಸೇರಿಯೇ ಒಂದು ಸಿನಿಮಾ ಆಗುತ್ತದೆ. ನಾನೇನೂ ಈ ರಂಗಕ್ಕೆ ನಾಯಕನಾಗಲು ಬಂದವನಲ್ಲ. ಪೋಷಕ ಪಾತ್ರಗಳಲ್ಲಿ ಯಾವುದು ಸಿಕ್ಕರೂ ಸರಿ. ಈ ರಂಗಕ್ಕೆ ಬಂದಾಗ ಒಂದರಿಂದ ಮೂರು ದೃಶ್ಯಗಳಿಗೆ ಸೀಮಿತನಾಗಿದ್ದ ನಾನು ಈಗ ಇಡೀ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಈ ರಂಗದಲ್ಲಿ ನನ್ನ ಅಭಿನಯವೇ ನನ್ನ ಬಂಡವಾಳ’ ಎನ್ನುತ್ತಾರೆ.

ಬೆಂಗಳೂರಿನಲ್ಲಿ ‘ಥಿಯೇಟರ್‌ ತತ್ಕಾಲ್‌’ ಎಂಬ ರಂಗಭೂಮಿಗೆ ಸಂಬಂಧಿಸಿದ ಸಂಸ್ಥೆಯನ್ನು ನಟರಾದ ನೀನಾಸಂ ಸತೀಶ್‌, ಅಚ್ಯುತ, ಗೋಪಾಲಕೃಷ್ಣ ಕಟಗೂರ್‌, ನಿರ್ದೇಶಕ ರಾಘು ಶಿವಮೊಗ್ಗ ಅವರೊಂದಿಗೆ ಕಿರಣ್ ಕಟ್ಟಿದ್ದಾರೆ. ನಟನೆ, ನಿರ್ದೇಶನದ ಬಗ್ಗೆ ತರಬೇತಿಕೊಡುವುದು, ನಾಟಕಗಳನ್ನು ಪ್ರದರ್ಶಿಸುವುದು ಈ ಸಂಸ್ಥೆಯ ಮುಖ್ಯ ಉದ್ದೇಶ. ಈಗಾಗಲೇ ಈ ಸಂಸ್ಥೆ ‘ವಿಗಡ ವಿಕ್ರಮರಾಯ’, ‘ಬ್ರೆಕ್ಟ್‌ ಸಂಜೆ’, ‘ಶೇಕ್‌ಸ್ಪಿಯರ್‌ ಮನೆಗೆ ಬಂದ’, ‘ಕೊಳ’ ನಾಟಕಗಳನ್ನು ಪ್ರದರ್ಶಿಸಿದೆ. ಅವಕ್ಕೆ ಪ್ರೇಕ್ಷಕರ ಉತ್ತಮ ಸ್ಪಂದನೆ ಕೂಡ ಬಂದಿದೆ. ಇದರೊಂದಿಗೆ ‘ಟಿಟ್ಟಿಭ(ಥಿಯೇಟರ್‌ ತತ್ಕಾಲ್‌ ಅಂಡ್‌ ಬುಕ್)ದ ಅಡಿಯಲ್ಲಿ ‘ಕೇಳು ಪುಸ್ತಕ’(ಆಡಿಯೊ ಬುಕ್‌)ಗಳನ್ನು ಹೊರತರುವ ಉದ್ದೇಶ ಕೂಡ ಅವರಿಗಿದೆ.

ಕಿರಣ್‌ ಅಭಿನಯದ ರಾಜ್ಯ ಪ್ರಶಸ್ತಿ ಪಡೆದ ಕಿರುಚಿತ್ರ ‘ಚೌಕಾಬಾರ’ವನ್ನು ವೀಕ್ಷಿಸಲು ಈ ಲಿಂಕ್‌ ಕ್ಲಿಕ್‌ ಮಾಡಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು