ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆಯ ಸೋಲಿನ ಬೇಸರ: ತೆಲುಗು ಸಿನಿಮಾ ಕಲಾವಿದರ ಸಂಘ ತೊರೆದ ನಟ ಪ್ರಕಾಶ್‌ ರಾಜ್

ಚುನಾವಣೆಯಲ್ಲಿ ನಟ ಮಂಚು ವಿಷ್ಣು ವಿರುದ್ಧ ಸೋಲು
Last Updated 12 ಅಕ್ಟೋಬರ್ 2021, 7:46 IST
ಅಕ್ಷರ ಗಾತ್ರ

ಹೈದರಾಬಾದ್‌: ನಟ ಪ್ರಕಾಶ್‌ ರಾಜ್ ಅವರು ತೆಲುಗು ಮೂವಿ ಆರ್ಟಿಸ್ಟ್ಸ್‌ ಅಸೋಸಿಯೇಷನ್‌ನಿಂದ (MAA) ಹೊರನಡೆದಿದ್ದಾರೆ. ಸಂಘದ ಅಧ್ಯಕ್ಷ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ನಟ ಮಂಚು ವಿಷ್ಣು ವಿರುದ್ಧ ರಾಜ್ ಸೋತಿದ್ದರು.

‘ಸದಸ್ಯರು ಪ್ರಾದೇಶಿಕ ಭಾವನೆಯಿಂದ ಮತ ಹಾಕಿದ್ದೇ ಸೋಲಿಗೆ ಕಾರಣ. ನಾನು ತೆಲುಗಿನ ವ್ಯಕ್ತಿ ಅಲ್ಲ, ಹೊರಗಿನವನು ಎಂದು ವರ್ಗೀಕರಿಸಿದ್ದಾರೆ’ ಎಂದು ರೈ ಹೇಳಿದ್ದಾರೆ. ಎರಡು ದಶಕಕ್ಕೂ ಹೆಚ್ಚಿನ ಅವಧಿಯಿಂದ ರಾಜ್ ಅವರು ತೆಲುಗು ಚಿತ್ರರಂಗದಲ್ಲಿದ್ದಾರೆ.

‘ಮಾ’ದಲ್ಲಿ 900ಕ್ಕೂ ಹೆಚ್ಚು ಸದಸ್ಯರಿದ್ದಾರೆ. ಎರಡು ವರ್ಷಕ್ಕೊಮ್ಮೆ ಆಡಳಿತ ಮಂಡಳಿಗೆ ಚುನಾವಣೆ ನಡೆಯುತ್ತದೆ. ಈ ಬಾರಿಯ ಚುನಾವಣೆಯಲ್ಲಿ ಅಬ್ಬರದ ಪ್ರಚಾರ ನಡೆದಿತ್ತು. ಪ್ರಚಾರದಲ್ಲಿ ಅಹಿತಕರವಾದ ಆರೋಪ–ಪ್ರತ್ಯಾರೋಪಗಳೂ ಕೇಳಿ ಬಂದಿದ್ದವು.

ಒಟ್ಟು 657 ಸದಸ್ಯರು ಮತ ಚಲಾಯಿಸಿದ್ದರು. ರಾಜ್ ಅವರು 109 ಮತಗಳ ಅಂತರದಿಂದ ಸೋತಿದ್ದಾರೆ.

‘ನಾನು ಹೈದರಾಬಾದ್‌ನಲ್ಲಿ ಅತಿಥಿಯ ಹಾಗೆ ಇರಬೇಕು ಎಂದು ಮೋಹನಬಾಬು, ಕೋಟ ಶ್ರೀನಿವಾಸ ರಾವ್‌ ಅವರಂತಹ ನಟರು ಹೇಳಿದ್ದಾರೆ. ಹಾಗಾಗಿ, ಇಲ್ಲಿ ನಾನು ಆಹ್ವಾನಿತನ ರೀತಿಯಲ್ಲಿಯೇ ಇರುತ್ತೇನೆ. ‘ಮಾ’ ಸದಸ್ಯತ್ವ ಬೇಡ. ನಾನು ಲೋಕಸಭಾ ಚುನಾವಣೆಯಲ್ಲಿಯೂ (ಕಳೆದ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರಿನಿಂದ ಅವರು ಸ್ಪರ್ಧಿಸಿದ್ದರು) ಸೋತಿದ್ದೇನೆ. ಆದರೆ ರಾಜಕೀಯ ಬಿಟ್ಟಿಲ್ಲ. ಇನ್ನು ಮುಂದೆ ‘ಮಾ’ದಲ್ಲಿ ಇರುವುದಿಲ್ಲ. ಆದರೆ, ತೆಲುಗು ಚಿತ್ರರಂಗದಲ್ಲಿ ಇರುತ್ತೇನೆ’ ಎಂದು ಪ್ರಕಾಶ್ ರಾಜ್ ಹೇಳಿದ್ದಾರೆ.

ಮಂಚು ವಿಷ್ಣು ಅವರು ನಟ ಮೋಹನ್‌ ಬಾಬು ಅವರ ಮಗ. ಮತದಾರರ ತೀರ್ಪನ್ನು ಗೌರವಿಸುತ್ತೇನೆ. ಈ ಚುನಾವಣೆಯಲ್ಲಿ ರಾಷ್ಟ್ರೀಯತೆ ಕೂಡ ಮುಖ್ಯ ವಿಷಯವಾಗಿತ್ತು ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ವಿರೋಧಿ ಎಂದು ತಮ್ಮನ್ನು ಬಿಂಬಿಸಿಕೊಂಡಿರುವ ರಾಜ್ ಅವರು ಕಣ
ದಲ್ಲಿದ್ದ ಕಾರಣ ರಾಜಕೀಯ ಪಕ್ಷಗಳೂ ಈ ಚುನಾವಣೆಯ ಮೇಲೆ ಕಣ್ಣಿಟ್ಟಿದ್ದವು.

‘ದೇಶವಿರೋಧಿ ಶಕ್ತಿಗಳಿಗೆ ಸರಿಯಾದ ಪಾಠ ಆಗಿದೆ’ ಎಂದು ತೆಲಂಗಾಣ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT