ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಿರ್ಗಮನವಲ್ಲ ಆಗಮನ!: ನಟ ಸುನಿಲ್ ರಾವ್ ಸಂದರ್ಶನ

Last Updated 9 ಜೂನ್ 2022, 19:30 IST
ಅಕ್ಷರ ಗಾತ್ರ

ಬಾಲನಟನಾಗಿ ಪುಟ್ಟ ಪುಟ್ಟ ಹೆಜ್ಜೆ ಇಟ್ಟು, ಅಮ್ಮನೊಂದಿಗೆ ಹಾಡುತ್ತಾ, ವೇದಿಕೆಗಳಲ್ಲಿ ಗಮನ ಸೆಳೆದು ಇದೀಗ 22ನೇ ಚಿತ್ರ ‘ತುರ್ತು ನಿರ್ಗಮನ’ದ ಬಾಗಿಲಿನಲ್ಲಿ ಮತ್ತೆ ತ್ವರಿತ ಆಗಮನದ ತವಕದಲ್ಲಿದ್ದಾರೆ ‘ಎಕ್ಸ್‌ಕ್ಯೂಸ್‌ ಮಿ’ ಖ್ಯಾತಿಯ ಸುನೀಲ್‌ ರಾವ್‌. ಸುನೀಲ್‌ ಅವರಿಗೆ ಕಲೆ ರಕ್ತಗತವಾಗಿಯೇ ಒಲಿದು ಬಂದಿದೆ. ಪ್ರಾಮಾಣಿಕ ಪ್ರಯತ್ನವೇ ಎಲ್ಲ ದಾರಿ ತೋರುತ್ತದೆ ಎಂದು ವಿನಯಪೂರ್ವಕವಾಗಿ ನುಡಿಯುತ್ತಾರೆ.

ಕಲೆಯನ್ನೇ ನೆಚ್ಚಿಕೊಳ್ಳಲು ಕಾರಣವೇನು?

ಹೌದು, ಕಲೆಯನ್ನೇ ನೆಚ್ಚಿಕೊಳ್ಳುತ್ತೇನೆ ಎಂದೂ ಊಹಿಸಿರಲಿಲ್ಲ. ಪಿಯುಸಿಯಲ್ಲಿದ್ದಾಗ ವಿಜ್ಞಾನ ಆಯ್ಕೆ ಮಾಡಿಕೊಂಡು ಎರಡು ತಿಂಗಳಲ್ಲೇ ಕಲಾ ವಿಭಾಗಕ್ಕೆ ವಾಪಸಾದೆ. ನಮ್ಮ ಕುಟುಂಬ ಕಲಾ ಹಿನ್ನೆಲೆಯದ್ದಾದ್ದರಿಂದ ಅವರೂ ಬೆಂಬಲಿಸಿದರು. ನಟನೆಯನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ ಎಂದುಕೊಂಡಿರಲಿಲ್ಲ. ಆದರೆ ನನಗಿಂತಲೂ ನನ್ನ ಅಪ್ಪ – ಅಮ್ಮನಿಗೆ ವಿಶ್ವಾಸವಿತ್ತು. ಹಾಗಾಗಿ ಅವರು ಅಂದುಕೊಂಡಂತೆ ಆಗಿದೆ. ಪದವಿ ಓದುತ್ತಿದ್ದಾಗಲೇ ಧಾರಾವಾಹಿಗಳಲ್ಲಿ ಅವಕಾಶ ಬಂದಿತು.

ಸಂಗೀತಗಾರನಾಗಬೇಕು ಎಂಬ ಆಸೆ ಇತ್ತು. ಅಮ್ಮನ ಆಸೆಯೂ ಅದೇ ಇತ್ತು. ಕಲಿಯಲಿಕ್ಕಾಗಲಿಲ್ಲ. ಅಲ್ಪಮಟ್ಟಿಗೆ ಗಿಟಾರ್‌, ಡ್ರಮ್‌, ಕೀಬೋರ್ಡ್‌ ನುಡಿಸುತ್ತೇನೆ ಅಷ್ಟೇ.ಈಗ ಇಲ್ಲಿವರೆಗೆ ಬಂದಿದ್ದೇನೆ. ಎಲ್ಲವೂ ಸ್ವಯಂ ಕಲಿಕೆ.

22 ಚಿತ್ರಗಳು, ಹಲವು ಧಾರಾವಾಹಿ, ವೆಬ್‌ ಸಿರೀಸ್‌ ಪ್ರಯಾಣವನ್ನೊಮ್ಮೆ ಅವಲೋಕಿಸಿದರೆ?

ಸಾಕಷ್ಟು ಏರಿಳಿತ ಕಂಡಿದ್ದೇನೆ. ಆದರೆ, ಯಶಸ್ಸು ಅಥವಾ ಸೋಲಿನಲ್ಲಿ ಇಡೀ ತಂಡ ಅಥವಾ ಯಾರಾದರೊಬ್ಬರು ಕಾರಣರಾಗಿರುತ್ತಾರೆ. ಹಾಗೆಂದು ಕುಗ್ಗುವುದಲ್ಲ. ಯಶಸ್ಸು ಆದಾಗ ಇಡೀ ತಂಡ ಸಂಭ್ರಮಿಸುವುದಿಲ್ಲವೇ. ಹಾಗೆಯೇ ಇದೂ ಕೂಡಾ. ಯಾರನ್ನೂ ದೂಷಿಸುವುದು ಆಗಬಾರದು. ಆದರೆ, ನನಗೆ ಕೊಟ್ಟ ಕೆಲಸದಲ್ಲಿ ಪ್ರಾಮಾಣಿಕವಾಗಿ ತೊಡಗಿಕೊಂಡಿದ್ದೇನೆಯೇ ಎಂಬುದನ್ನು ನೋಡಬೇಕು. ಅಲ್ಲಿ ಪ್ರಾಮಾಣಿಕನಾಗಿದ್ದೇನೆ. ಬದ್ಧತೆ ತೋರಿದ್ದೇನೆ ಎಂದು ಇದ್ದರೆ ಸಾಕು. ಸೋಲು– ಗೆಲುವಿಗೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಮಾಡಿರುವ ಕೆಲಸಗಳಲ್ಲಿ ತಕ್ಕಮಟ್ಟಿಗೆ ಯಶಸ್ಸು ಕಂಡಿದ್ದೇನೆ. ಆ ಮಟ್ಟಕ್ಕೆ ನನಗೊಂದು ಸಾರ್ಥಕತೆ ಇದೆ.

ಬದುಕಿನಲ್ಲಿ ಅಮ್ಮನ ಪ್ರಭಾವ ಎಷ್ಟು ಇದೆ?

ಅಮ್ಮನ (ಬಿ.ಕೆ. ಸುಮಿತ್ರಾ) ಹಾಗೆ ಸಂಗೀತ ಕಲಿಯಲಾಗಲಿಲ್ಲ. ಆದರೆ, ನೋಡುತ್ತಾ, ಕೇಳುತ್ತಾ ಹಾಡಿದೆ. ಅಮ್ಮನ ಗುಣಗಳನ್ನು ಕಲಿತಿದ್ದೇನೆ. ನಾನು ಚಿಕ್ಕವನಾಗಿದ್ದಾಗಲೇ ಅವರು ಅದೆಷ್ಟೋ ಖ್ಯಾತಿ ಹೊಂದಿದ್ದವರು. ಆದರೆ, ಯಾವತ್ತೂ ಮೆರೆಯಲಿಲ್ಲ, ಬಾಗಿದರು. ಹಾಗಾಗಿ ಈ ಸರಳತೆ, ವಿನಯ ಕಲಿತೆ. ಅಮ್ಮ, ಅಪ್ಪ, ಅಕ್ಕ ಸುತ್ತಮುತ್ತಲಿದ್ದವರೆಲ್ಲರ ಜೊತೆ ಬಾಳುವಾಗ ಒಂದಲ್ಲಾ ಒಂದು ವಿಷಯ ನಮ್ಮ ಮೇಲೆ ಪ್ರಭಾವ ಬೀರಿಯೇ ಇರುತ್ತದೆ. ಹಾಗಾಗಿ ಪ್ರಭಾವ ಅನ್ನುವುದಕ್ಕಿಂತ ಕಲಿತದ್ದೇ ಹೆಚ್ಚು.

ಹೆಚ್ಚು ಸ್ಫೂರ್ತಿ ನೀಡಿದ ಸಿನಿಗುರುಗಳು?

ನನ್ನನ್ನು ಬಾಲನಟನಾಗಿ ಗುರುತಿಸಿದ ಬಿ.ಸಿ. ಗೌರಿಶಂಕರ್‌ ಒಬ್ಬ ಒಳ್ಳೆಯ ತಂತ್ರಜ್ಞರೂ ಹೌದು. ಅಲ್ಲಿಂದ ನಟನೆ ಆರಂಭವಾಯಿತು. ನಾಲ್ಕನೇ ವಯಸ್ಸಿಗೆ ಹಾಡುತ್ತಿದ್ದೆ. ಮುಂದೆ ನಟನೆ ಆಯಿತು. ಅನಂತನಾಗ್‌ ಅವರು ಒಂದು ವಿಶ್ವವಿದ್ಯಾಲಯದಂತೆ. ಅಂಬರೀಷ್‌ ಅವರ ಜೊತೆಗೆ ಕೆಲಸ ಮಾಡುವುದೇ ಬೇರೆ, ಸಾಹಿತಿ ಆರ್‌.ಎನ್‌. ಜಯಗೋಪಾಲ್‌, ಭಾರ್ಗವ, ಬಿ. ಸುರೇಶ, ಟಿ.ಎನ್‌. ಸೀತಾರಾಂ, ಎಸ್‌. ನಾರಾಯಣ್‌, ಪ್ರೇಮ್‌, ಪ್ರಕಾಶ್‌ ರಾಜ್‌, ಓಂ ಪ್ರಕಾಶ್‌ ರಾವ್‌, ದಿನೇಶ್‌ ಬಾಬು... ಹೀಗೆ ಹಲವಾರು ಮಂದಿ ಇದ್ದಾರೆ. ಕೆಲವರಿಂದ ಭಾಷಾ ಶುದ್ಧಿ, ನಟನೆ, ಕೆಲಸದ ವೈಖರಿ ಹೀಗೆ ಒಂದೊಂದು ವಿಚಾರ ಕಲಿತಿದ್ದೇನೆ. ಅವರು ಯಾರೂ ಕೂಡಾ ಹೀಗೇ ಎಂದು ಹೇಳಿಕೊಡಲಿಲ್ಲ. ಬದಲಾಗಿ ಕೆಲಸ ಮಾಡಿಸುತ್ತಲೇ ಕಲಿಸಿದವರು. ಇದೆಲ್ಲಾ ನನ್ನ ಬೆಳವಣಿಗೆಗೆ ಸಹಾಯ ಮಾಡಿದೆ.

ಏನಿದು ‘ತುರ್ತು ನಿರ್ಗಮನ’?

ಈ ಚಿತ್ರ ಹೈ ಫೈ ಫ್ಯಾಂಟಸಿ ಡ್ರಾಮಾ. ನಿಜ ಜೀವನದಲ್ಲಿ ಮ್ಯಾಜಿಕ್‌ನಂಥ ವಿಷಯ ಸಿಕ್ಕಾಗ ಹೇಗಿರಬಹುದು ಎಂಬುದನ್ನು ಹೇಳಿದ್ದೇವೆ. ಹೊಸ ಪ್ರಯತ್ನ ಇದು. ಕನ್ನಡ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲಾಗಬಹುದು ಎಂಬ ನಿರೀಕ್ಷೆ ಇಟ್ಟುಕೊಂಡಿದ್ದೇವೆ. ಸೋಂಬೇರಿ ಹುಡುಗನೊಬ್ಬನಿಗೆ ಬದುಕಿನ ಕಷ್ಟದಲ್ಲಿ ಎರಡನೇ ಅವಕಾಶ ಸಿಕ್ಕಾಗ ಅವನು ಏನು ಮಾಡುತ್ತಾನೆ ಎಂಬುದನ್ನು ಹೇಳಿದ್ದೇನೆ. ಈ ಚಿತ್ರದಲ್ಲಿ ಕೆಲಸ ಮಾಡಿದ ಹೆಮ್ಮೆ ಇದೆ. ಒಳ್ಳೆಯ ನಿರ್ದೇಶಕರು (ಹೇಮಂತ್‌ ಕುಮಾರ್‌) ಒಂದು ಭಿನ್ನವಾದ ಕಥೆ ಹೇಳಿದ್ದಾರೆ. ಒಳ್ಳೆಯ ತಂತ್ರಜ್ಞಾನ ಬಳಸಿದ್ದೇವೆ. ಇದು ಕನ್ನಡ ಚಿತ್ರರಂಗಕ್ಕೆ ಬಳುವಳಿ ಆಗಲಿದೆ ಎಂಬ ವಿಶ್ವಾಸವಿದೆ. ಈ ವಿಭಿನ್ನ ಪ್ರಯತ್ನವನ್ನು ಪ್ರೇಕ್ಷಕರು ಖಂಡಿತವಾಗಿ ಮೆಚ್ಚುತ್ತಾರೆ.

ಬೇರೆ ಭಾಷೆಗಳತ್ತ ಆಸಕ್ತಿ?

ಮೊದಲು ಇರಲಿಲ್ಲ. ಈಗ ಅಲ್ಲಿಯೂ ಪ್ರಯತ್ನ ಮಾಡಬೇಕು ಎಂಬ ಮನಸ್ಸಿದೆ. ಕೆಲವು ಅವಕಾಶಗಳೇನೋ ಇವೆ. ಮುಂದೆ ನೋಡೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT