ಬುಧವಾರ, ಫೆಬ್ರವರಿ 19, 2020
21 °C

ಆಶಿಕಾ ರಂಗನಾಥ್‌ಗೆ ಒಲಿದ 'ಮದಗಜ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

‘ಕ್ರೇಜಿ ಬಾಯ್‌’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟವರು ನಟಿ ಆಶಿಕಾ ರಂಗನಾಥ್‌. ಅವರು ಬಣ್ಣದಲೋಕ ಪ್ರವೇಶಿಸಿದ ಹಿಂದೆ  ಒಂದು ಕುತೂಹಲದ ಕಥೆಯಿದೆ. ಬೆಂಗಳೂರಿನಲ್ಲಿ ನಡೆದ ‘ಫ್ರೆಶ್‌ಫೇಸ್‌’ ಸ್ಪರ್ಧೆಯಲ್ಲಿ ಅವರು ರನ್ನರ್‌ಅಫ್ ಆಗಿದ್ದರು. ಅವರ ಫೋಟೊಗಳು ಹೇಗೊ ನಿರ್ದೇಶಕರಿಗೆ ತಲುಪಿದವಂತೆ. ಆಗ ಅವರು ಸಿನಿಮಾದಲ್ಲಿ ನಟಿಸಲು ಆಶಿಕಾ ಮುಂದೆ ಕೋರಿಕೆ ಮುಂದಿಟ್ಟರಂತೆ.

ಪ್ರಸ್ತುತ ಅವರ ಕೈಯಲ್ಲಿ ರಾಶಿ ರಾಶಿ ಸಿನಿಮಾಗಳಿವೆ. ‘ಗರುಡ’, ‘ಅವತಾರ ಪುರುಷ’, ‘ರೆಮೊ’ ಮತ್ತು ‘ರಂಗಮಂದಿರ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನೂ ಹೆಸರಿಡದೆ ಪಿ.ಸಿ. ಶೇಖರ್ ನಿರ್ದೇಶನದ ಹೊಸ ಚಿತ್ರಕ್ಕೂ ಅವರೇ ನಾಯಕಿ.

ಈ ನಡುವೆಯೇ ‘ಹೆಸರಾಂತ ಸ್ಟಾರ್‌ನಟಿಯೊಬ್ಬರು ನಮ್ಮ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಆ ನಟಿ ಯಾರಿರಬಹುದೆಂದು ಊಹಿಸಿ’ ಎಂದು ಹೀರೊಯಿನ್‌ ಮುಖ ಕಾಣದಂತೆ ಹಿಂದಿನಿಂದ ಕ್ಲಿಕ್ಕಿಸಿದ ಫೋಟೊ ಇರುವ ಪೋಸ್ಟರ್‌ ಅನ್ನು ‘ಮದಗಜ’ ಚಿತ್ರದ ನಿರ್ದೇಶಕ ಎಸ್. ಮಹೇಶ್‌ಕುಮಾರ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಈ ಪೋಸ್ಟರ್‌ ವೈರಲ್‌ ಆಗಿತ್ತು.

ನಟನೆಯಲ್ಲಿ ಸಾಕಷ್ಟು ಪಳಗಿರುವ ಆಶಿಕಾ ಅವರಿಗೆ ನಟ ಶ್ರೀಮರಳಿ ನಾಯಕನಾಗಿರುವ ‘ಮದಗಜ’ ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಅವಕಾಶ ಒಲಿದುಬಂದಿದೆ. ರಚಿತಾ ರಾಮ್‌, ಅನುಪಮಾ ಪರಮೇಶ್ವರನ್‌ ಮತ್ತು ಶ್ರೀನಿಧಿ ಶೆಟ್ಟಿ ಅವರನ್ನು ಹಿಂದಿಕ್ಕೆ ಆಶಿಕಾ ‘ಮದಗಜ’ನಿಗೆ ಮದನಾರಿಯಾಗಿ ಒಲಿದಿದ್ದಾರೆ. ಫೆ. 20ರಂದು ವಾರಾಣಸಿಯಲ್ಲಿ ಚಿತ್ರ ಸೆಟ್ಟೇರಲಿದೆ. ಮಾರನೇ ದಿನವಾದ ಶಿವರಾತ್ರಿಯಂದು ಮೊದಲ ಹಂತದ ಶೂಟಿಂಗ್‌ ಶುರುವಾಗಲಿದೆ.

ಆಶಿಕಾ ಸಂಪ್ರದಾಯಸ್ಥ ಹುಡುಗಿಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು. ಆದರೆ, ಶರಣ್‌ ಜೊತೆಗೆ ನಟಿಸಿದ ‘ರ‍್ಯಾಂಬೊ 2’ ಚಿತ್ರದಲ್ಲಿನ ಅವರ ಬೋಲ್ಡ್‌ ಹುಡುಗಿಯ ಅವತಾರ ಪಡ್ಡೆಹುಡುಗರ ನಿದ್ದೆಕೆಡಿಸಿತ್ತು. ಇದರಲ್ಲಿ ಅವರು ಕಾಸ್ಟೂಮ್‌ನಿಂದ ಹಿಡಿದು ನಟನೆವರೆಗೂ ಬದಲಾವಣೆ ಮಾಡಿಕೊಂಡಿದ್ದರು.

‘ಮದಗಜ’ ಚಿತ್ರದಲ್ಲಿನ ಅವರ ಪಾತ್ರದ ಬಗ್ಗೆ ನಿರ್ದೇಶಕರು ಇನ್ನೂ ಗುಟ್ಟು ಬಿಟ್ಟುಕೊಟ್ಟಿಲ್ಲ. ಆದರೆ ದಾವಣಿ ತೊಟ್ಟು, ಹೆಗಲ ಮೇಲೆ ಸಲಿಕೆ ಹಿಡಿದು ಅಶಿಕಾ ನೀಡಿರುವ ಭಂಗಿಯಂತೂ ಸೊಗಸಾಗಿದೆ. ಶ್ರೀಮುರಳಿ ಮತ್ತು ಈ ಮೂಗುತಿ ಸುಂದರಿಯ ಕೆಮಿಸ್ಟ್ರಿ ತೆರೆಯ ಮೇಲೆ ಹೇಗೆಲ್ಲಾ ಇರಲಿದೆ ಎಂಬ ಲೆಕ್ಕಾಚಾರದಲ್ಲಿ ಅವರ ಅಭಿಮಾನಿಗಳು ಮುಳುಗಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು