ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Pv Web Exclusive: ಅಣ್ಣವರ ಮೇಲಿನ ಅಭಿಮಾನ ಮತ್ತು ಬಿಳಿ ಗಡ್ಡ

ನಟ, ಬರಹಗಾರ ಎಂ.ಕೆ. ಮಠ ಅವರ ಸಂಕಲ್ಪದ ಹಿಂದಿನ ರಹಸ್ಯ
Last Updated 29 ಸೆಪ್ಟೆಂಬರ್ 2020, 6:37 IST
ಅಕ್ಷರ ಗಾತ್ರ

‘ಅಣ್ಣವರ ಅಪಹರಣದ ಸಂದರ್ಭದಲ್ಲಿ ತೆಗೆದುಕೊಂಡ ನಿರ್ಧಾರ ಇದು. ಕಾಫಿ, ಟೀ ಕುಡಿಯುವುದನ್ನು ಬಿಟ್ಟೆ; ಬಿಸಿ ನೀರು ಸ್ನಾನ ಅಲ್ಲಿಗೇ ಕೊನೆಯಾಯ್ತು. ಬೆಡ್‌ ಮೇಲೆ ಎಂದಿಗೂ ಮಲಗಿಯೇ ಇಲ್ಲ. ಇದು ಅಣ್ಣವರ ಮೇಲಿನ ಅಭಿಮಾನದಿಂದ ಮಾತ್ರ; ಯಾವುದೇ ಫಲಾಪೇಕ್ಷೆ ಇಲ್ಲ’

–ಹೀಗೆ ಹೇಳಿದವರು ನಟ, ನಿರ್ದೇಶಕ, ಬರಹಗಾರರೂ ಆದ ಎಂ.ಕೆ. ಮಠ. ಕೊರೊನಾ ಲಾಕ್‌ಡೌನ್‌ನಿಂದ ತಮ್ಮ ಊರು ದಕ್ಷಿಣ ಕನ್ನಡದ ಉಪ್ಪಿಂಗನಡಿ ಸೇರಿರುವ ಅವರು ಡಾ.ರಾಜ್‌ಕುಮಾರ್ ಮೇಲಿನ ಅಭಿಮಾನ, ತಮ್ಮ ಅಪರೂಪದ ಬಳಿ ಗಡ್ಡ, ತಮ್ಮೊಳಗಿನ ಕಥೆಗಾರನ ಕುರಿತು ಮಥಿಸುತ್ತ ಹೋದರು.

‘ಅದು ಟಿ.ಎಸ್‌. ನಾಗಾಭರಣ ನಿರ್ದೇಶನದ ಸಂಕ್ರಾಂತಿ ಧಾರಾವಾಹಿ ಶೂಟಿಂಗ್ ಸಮಯ. ಹೊಸಕೋಟೆಯ ತಾವರೆಕೆರೆಯಲ್ಲಿ ಸೆಟ್‌ ಹಾಕಲಾಗಿತ್ತು. ಅಣ್ಣವರ ಅಪಹರಣದ ಸುದ್ದಿ ಬಂತು; ಶೂಟಿಂಗ್ ರದ್ದಾಯಿತು. ಅಲ್ಲಿ ಭರ್ಜರಿ ಸೆಟ್‌ ಹಾಕಲಾಗಿತ್ತು. ಸೆಟ್‌ ಕಾಯಲು ನಾನು ಮತ್ತು ವಿಜಯಪುರದ ಒಬ್ಬರು ಅಲ್ಲೇ ಉಳಿದುಕೊಂಡೆವು. ನನಗೆ ಬ್ಯಾಲದಿಂದಲೂ ರಾಜ್‌ಕುಮಾರ್‌ ಬಗ್ಗೆ ಅಪಾರ ಅಭಿಮಾನ. ಊರಿನ ಟೆಂಟ್‌ ಟಾಕೀಸ್‌ನಲ್ಲಿ ಕುಳಿತು ಅವರ ಅಷ್ಟೂ ಸಿನಿಮಾಗಳನ್ನು ನಾಲ್ಕೈದು ಬಾರಿ ನೋಡಿಕೊಂಡು ಬೆಳೆದವನು. ಅವರ ಸಹಾಯಕನಾಗಬೇಕೆಂಬ ಹಂಬಲ ಬಹಳ ಇತ್ತು. ಅವರ ಅಪಹರಣದ ಸುದ್ದಿ ಒಂದು ರೀತಿಯಲ್ಲಿ ನನಗೆ ಬರಸಿಡಿಲು ಬಡಿದ ಹಾಗೆ ಆಯ್ತು; ಮಂಕಾಗಿ ಹೋದೆ. ಸುದ್ದಿ ನೋಡಲು ಟಿವಿ ಮುಂದೆ 24 ಗಂಟೆ ಕುಳಿತುಕೊಳ್ಳುತ್ತಿದ್ದೆ. ಹರಕೆ ಹೊರುವುದು, ಉರುಳುಸೇವೆ ಮಾಡುವುದು ಹೀಗೆ ಜನರ ಅಭಿಮಾನ ಮೇರೆ ಮೀರಿತ್ತು. ನನಗೂ ಏನಾದರೂ ಮಾಡಬೇಕಲ್ಲ ಅನಿಸಿತು. ಕೈಯಲ್ಲಿ ಟೀ ಕ್ಲಾಸ್ ಬಿಟ್ಟರೆ ಬೇರೆನೂ ಕಾಣಲಿಲ್ಲ. ಸರಿ, ಅಣ್ಣವರು ಬರುವವರೆಗೂ ಟೀ–ಕಾಫಿ ಮುಟ್ಟಬಾರದು ಎಂದು ತೀರ್ಮಾನಿಸಿದೆ’

‘ಮೂರು ದಿವಸ ಕಳೆದಿತ್ತು; ಬೆಳಿಗ್ಗೆ ಸ್ನಾನಕ್ಕೆ ನೀರು ಕಾಯಿಸಿಕೊಳ್ಳಲು ಬಕೆಟ್‌ಗೆ ಕಾಯಿಲ್‌ ಹಾಕಿ ಕರೆಂಟ್‌ ಸ್ವಿಚ್‌ ಆನ್‌ ಮಾಡುತ್ತಿದ್ದಂತೆ ಯೋಚನೆ ಬಂತು, ಅಣ್ಣವರಿಗೆ ಕಾಡಿನಲ್ಲಿ ಸ್ನಾನಕ್ಕೆ ನೀರು ಸಿಗುವುದಿಲ್ಲ. ಅಣ್ಣವರಿಗೆ ಇಲ್ಲದ್ದು, ನನಗೂ ಬೇಡ ಎಂದು ಅಂದಿನಿಂದ ತಣ್ಣೀರು ಸ್ನಾನ ಮಾಡಲು ಆರಂಭಿಸಿದೆ. ಇದಾಗಿ ಐದನೇ ದಿನಕ್ಕೆ ರಾತ್ರಿ ಬೆಡ್‌ನಲ್ಲಿ ಮಲಗುತ್ತಿದ್ದವನಿಗೆ ಮತ್ತೆ ಅಣ್ಣವರ ಕಾಡಿನ ವನವಾಸ ಕಾಡಿತು. ಬೆಡ್‌ ಬೇಡ ಚಾಪೆ ಮೇಲೆ ಮಲಗಲು ನಿರ್ಧರಿಸಿದೆ. ಅಣ್ಣವರು ಮರಳಿ ಬರುವುದಕ್ಕೆ 108 ದಿವಸಗಳಾದವು. ಅಷ್ಟರ ಒಳಗಾಗಲೇ ನನ್ನ ದೇಹವೂ ಈ ಹೊಸ ಬದಲಾವಣೆಗೆ ಒಗ್ಗಿಕೊಂಡಿತ್ತು. ಡಾ.ರಾಜ್‌ಕುಮಾರ್‌ ಅವರಿಗೆ ನನ್ನ ವಿಷಯ ಹೇಗೋ ತಿಳಿಯಿತು. ಭೇಟಿಗೆ ಆಸಕ್ತಿ ತೋರಿಸಿದರು. ಅವರನ್ನು ಭೇಟಿಯಾಗಬೇಕು ಎನ್ನುವಷ್ಟರಲ್ಲಿ ಅವರು ನಮ್ಮಿಂದ ದೂರವಾದರು. ಈ ನೋವು ನನ್ನನ್ನು ಈಗಲೂ ಕಾಡುತ್ತಲೇ ಇದೆ’

‘ಇವನು ಇದನ್ನು ಪ್ರಚಾರಕ್ಕಾಗಿ ಮಾಡುತ್ತಾನೆ ಎಂದು ಕೆಲವರು ಆಡಿಕೊಂಡರು. ಆದರೆ, ನನಗೆ ಅದು ಬೇಡ. ಅಣ್ಣವರ ಅಭಿಮಾನದಿಂದ ಇಂದಿಗೂ ಈ ಸಂಕಲ್ಪ ಮುಂದುವರಿಸಿದ್ದೇನೆ. ಇದು ನನ್ನ ದಿನಚರಿಯಾಗಿದೆ. ಈ ತೀರ್ಮಾನದಿಂದ ನನ್ನ ಜೀವನದಲ್ಲಿ ಬದಲಾವಣೆ ಕಂಡೆ. ಯಾವುದೇ ಕಾಯಿಲೆಗಳು ಅಂಟಿಕೊಳ್ಳಲಿಲ್ಲ. ಬೆನ್ನು ನೋವು ಇದುವರೆಗೂ ಕಾಡಲಿಲ್ಲ’

ಬಿಳಿ ಗಡ್ಡದ್ದು ಇನ್ನೊಂದು ಕಥೆ

ಪುನೀತ್‌ ರಾಜ್‌ಕುಮಾರ್ ನಟನೆಯ ‘ರಾಜ್‌ಕುಮಾರ್’ ಚಿತ್ರದ ಚಿತ್ರೀಕರಣದ ಒಂದು ವರ್ಷದ ಮೊದಲು, ಅದರ ಸಹ ನಿರ್ದೇಶಕರು ಫೋನ್‌ ಮಾಡಿ, ಮೂರು ತಿಂಗಳಲ್ಲಿ ಚಿತ್ರೀಕರಣ ಆರಂಭವಾಗುತ್ತೆ; ಗಡ್ಡ ತೆಗೆಸಬೇಡಿ ಎಂದರು. ಸರಿ ಎಂದು ಬಿಟ್ಟೆ. ಒಂಬತ್ತು ತಿಂಗಳು ಆದ ಮೇಲೆ ಚಿತ್ರೀಕರಣ ಆರಂಭಗೊಂಡಿತು. ಅಷ್ಟು ಹೊತ್ತಿಗೆ ನನ್ನ ಗಡ್ಡ ಎದೆಮಟ್ಟಕ್ಕೆ ಬೆಳೆದಿತ್ತು. ನಿರ್ದೇಶಕರಿಗೇ ಶಾಕ್‌ ಆಯಿತು. ಇಷ್ಟು ದೊಡ್ಡ ಗಡ್ಡ ಬೇಡ ಎಂದು ಟ್ರಿಮ್‌ ಮಾಡಿಸಿದರು. ಈ ಸಿನಿಮಾ ಮುಗಿಯುತ್ತಿದ್ದಂತೆ ದುನಿಯಾ ವಿಜಿ ಮತ್ತು ನನ್ನ ಭೇಟಿ 14 ವರ್ಷಗಳ ನಂತರ ಆಯಿತು. ನಾವಿಬ್ಬರು ಗಳಸ್ಯ–ಕಂಠಸ್ಯರು. ಮೊದಲು ಅವನಿಗೆ ಧಾರಾವಾಹಿಯಲ್ಲಿ ನಟಿಸಲು ಅವಕಾಶ ಕೊಟ್ಟಿದ್ದೇ ನಾನು. ಅವನ ‘ಮಾಸ್ತಿಗುಡಿ’ ಚಿತ್ರದ ಪಾತ್ರಕ್ಕೊಂದಕ್ಕೆ ನನ್ನ ರೀತಿಯ ಗಡ್ಡ ಬೇಕಿತ್ತು. ಗಡ್ಡ ನಿನಗೆ ಅದೃಷ್ಟ ತರುತ್ತೆ; ಪಾತ್ರ ಮಾಡು ಎಂದ. ಅವನು ಹೇಳಿದ್ದು ಸತ್ಯವಾಗಿತ್ತು. ಅವಕಾಶಗಳು ಒಂದೊಂದಾಗಿ ಸಿಗುತ್ತ ಬಂದವು’

‘ಬಿಳಿ ಗಡ್ಡ ಬಿಟ್ಟಿರೋರು ಇಂಡಸ್ಟ್ರಿಯಲ್ಲಿ ತುಂಬಾ ಕಡಿಮೆ ಇದ್ದಾರೆ. ನಾಲ್ಕು ವರ್ಷಗಳಲ್ಲಿ ನಾನು ಮಾಡಿದ ಅಷ್ಟೂ ಸಿನಿಮಾಗಳಲ್ಲೂ ಬಿಳಿ ಗಡ್ಡ ಇದೆ. ಈ ಮಧ್ಯೆ ರಕ್ಷಿತ್‌ ಶೆಟ್ಟಿ ಅವರ ‘ಅವನೇ ಶ್ರೀಮನ್ ನಾರಾಯಣ’ದಲ್ಲೂ ನನ್ನ ಗಡ್ಡ ಗಮನ ಸೆಳೆದಿತ್ತು. ಈಗ ನಾಲ್ಕು ಸಿನಿಮಾಗಳು ಬಿಡುಗಡೆ ಹಂತದಲ್ಲಿವೆ; ಅವುಗಳಲ್ಲಿಯೂ ಈ ಬಿಳಿ ಗಡ್ಡ ಹೈಲೆಟ್ ಆಗಿದೆ. ಪುನೀತ್ ರಾಜಕುಮಾರ್‌ ನಟನೆಯ ‘ಯುವ ರತ್ನ’ ಚಿತ್ರದಲ್ಲಿ ಶಾಲೆಯ ವಾಚ್‌ಮನ್ ಮಾತ್ರ. ಮಂಜು ಕೊಡಗು ನಿರ್ದೇಶನದ ‘ಕಣ್ಣೇರಿ’, ತೃಪ್ತಿ ನಿರ್ದೇಶನದ ‘ನಲ್ಕೆ’ ಹಾಗೂ ನವೀನ್ ಕೃಷ್ಣ ಅವರ ‘ಮೇಲೊಬ್ಬ ಮಾಯಾವಿ’ ಚಿತ್ರಗಳಲ್ಲೂ ನನ್ನ ಬಿಳಿ ಗಡ್ಡ ರಾರಾಜಿಸಿದೆ.

ಬರವಣಿಗೆ ಎಂಬ ಹುಚ್ಚು

‘ಬರವಣಿಗೆ ನನಗೆ ಹುಚ್ಚು. ಶಾಲಾ–ಕಾಲೇಜಿಗೆ ಹೋಗಿ ಹೆಚ್ಚು ಕಲಿತಿಲ್ಲವಾದರೂ ಸಾಹಿತ್ಯಾಸಕ್ತಿ ಹೆಚ್ಚು. ಏಳು ಭಾಷೆ ಮಾತನಾಡಲು ಬರುತ್ತೆ. ‘ಮಾನವಿ’ ಹಾಗೂ ‘ಎಲ್ಲ ಮರೆತಿದ್ದೀಯ’ ಎರಡು ಕಥಾಸಂಕಲನ ಹೊರತಂದಿದ್ದೇನೆ. ಇನ್ನೂ ಸಾಕಷ್ಟು ಕಥೆಗಳನ್ನು ಬರೆದಿದ್ದೇನೆ. ಆದರೆ, ಪ್ರಕಟಿಸುವ ಕಲೆ ಸಿದ್ಧಿಸಿಲ್ಲ. ನಾಗಾಭರಣ ಅವರ ಜತೆ ಇದ್ದಷ್ಟು ವರ್ಷ ಅವರ ನಿರ್ದೇಶನದ ಧಾರಾವಾಹಿಗೆ ಸಂಭಾಷಣೆಗಾರ, ನಟ, ಸಂಚಿಕೆ ನಿರ್ದೇಶಕನಾಗಿ ದುಡಿದಿದ್ದೇನೆ. ಅದರ ಜೊತೆಯಲ್ಲೇ ಹಲವು ಬೇರೆ ಧಾರಾವಾಹಿ, ಚಲನಚಿತ್ರಗಳಲ್ಲಿ ಅಭಿನಯಿಸಿದ್ದೇನೆ’

‘2008 ರಲ್ಲಿ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದ ‘ಗಗ್ಗರ’ ತುಳು ಚಿತ್ರಕ್ಕೆ ರಾಷ್ಟ್ರಪ್ರಶಸ್ತಿಯ ಗೌರವ ಸಿಕ್ಕಿತು. ಅದೇ ಚಿತ್ರದ ನನ್ನ ಅಭಿನಯಕ್ಕೆ 2008–09 ನೇ ಸಾಲಿನಲ್ಲಿ ಅತ್ಯುತ್ತಮ ಪೋಷಕ ನಟ ರಾಜ್ಯ ಪ್ರಶಸ್ತಿಯ ಗೌರವ ಬಂದಿದೆ. 2015 ರಲ್ಲಿ ಅಭಿನಯಿಸಿದ್ದ ‘ರಾಮಾ ರಾಮಾರೇ’, ‘ರಾಜ್‌ಕುಮಾರ’, ‘ಭೇಟಿ’ ಚಿತ್ರಗಳಿಗೆ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಹಿರಿಮೆಯ ಗರಿ ಸಿಕ್ಕಿದೆ’

‘ನನಗೆ ಗೊತ್ತಿರುವುದು ನಟನೆ, ನಿರ್ದೇಶನ ಹಾಗೂ ಬರವಣಿಗೆ. ನನ್ನ ಶಕ್ತಿ ತಿಳಿದವರಷ್ಟೇ ನನಗೆ ಅವಕಾಶ ಕೊಡುತ್ತಾರೆ. ಉಪ್ಪಿನಂಗಡಿಯ ಸೀಟಿನ ಮನೆಯಲ್ಲೇ ಇನ್ನೂ ವಾಸ ಇದ್ದೇನೆ. ಅವಕಾಶ ಸಿಗುತ್ತಿಲ್ಲ ಎಂದು ಕೊರಗುವುದೂ ಇಲ್ಲ'

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT