ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫ್ಗನ್‌ ಸಂಘರ್ಷವನ್ನು ಬಿಂಬಿಸುವ ನೋಡಲೇಬೇಕಾದ 5 ಸಿನಿಮಾಗಳಿವು...

Last Updated 17 ಆಗಸ್ಟ್ 2021, 8:47 IST
ಅಕ್ಷರ ಗಾತ್ರ

ಅಫ್ಗಾನಿಸ್ತಾನವನ್ನು ತಾಲಿಬಾನಿಗಳು ಮತ್ತೆ ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದಾರೆ. ಎರಡು ದಶಕಗಳಿಂದ ತೆರೆಮರೆಯಲ್ಲಿದ್ದ ತಾಲಿಬಾನಿಗಳು,ಅಮೆರಿಕವು ತನ್ನ ಸೇನೆಯನ್ನು ಅಲ್ಲಿಂದ ಹಿಂತೆಗೆದುಕೊಳ್ಳುವ ಐತಿಹಾಸಿಕ ನಿರ್ಣಯ ಘೋಷಣೆ ಮಾಡಿದ ಬೆನ್ನಲ್ಲೇ ಸಕ್ರಿಯಗೊಂಡು ಕೆಲವೇ ತಿಂಗಳುಗಳಲ್ಲಿ ಇಡೀ ದೇಶವನ್ನೇ ವಶಕ್ಕೆ ಪಡೆದಿದ್ದಾರೆ.

ಈ ಮೂಲಕ ಅಫ್ಗಾನಿಸ್ತಾನದಲ್ಲಿ ಪ್ರಜಾಪ್ರಭುತ್ವ ಸ್ಥಾಪನೆ ಮಾಡುವ ಅಮೆರಿಕದ ಕನಸು ಕೂಡ ಭಗ್ನಗೊಂಡಿದೆ. ತಾಲಿಬಾನಿಗಳ ಆಕ್ರಮಣದಿಂದಾಗಿ ನಾಗರೀಕರು, ಮಹಿಳೆಯರು ಮತ್ತು ಮಕ್ಕಳು ಭಯ ಭೀತರಾಗಿದ್ದಾರೆ. ಕಠಿಣ ಇಸ್ಲಾಮಿಕ್‌ ಕಾನೂನಿನ ತಾಲಿಬಾನ್ ಆಧಿಪತ್ಯಕ್ಕೆ ಸಾಮಾನ್ಯ ಜನತೆ ಥಂಡಾ ಹೊಡೆದಿದ್ದಾರೆ.

2000ನೇ ವರ್ಷದಲ್ಲಿ ತಾಲಿಬಾನಿಗಳ ಆಡಳಿತವನ್ನು ಅಮೆರಿಕ ಕೊನೆಗಾಣಿಸಿತು. ನಂತರ ಜನರ ಆಯ್ಕೆಯ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಇದಾದ 20 ವರ್ಷಗಳ ಬಳಿಕ ಮತ್ತೆ ಅಫ್ಗನ್‌ ತಾಲಿಬಾನಿಗಳ ತೆಕ್ಕೆಗೆ ಹೋಗಿದೆ.

ತಾಲಿಬಾನ್‌ ಹಾಗೂ ಚುನಾಯಿತ ಸರ್ಕಾರದ ಆಳ್ವಿಕೆ ಎಂಬಎರಡು ಕಾಲಘಟ್ಟಗಳಲ್ಲಿ ಅಫ್ಗಾನಿಸ್ತಾನದ ನೈಜ ಚಿತ್ರಣವನ್ನು ಸಿನಿಮಾಗಳಲ್ಲಿ ಕಾಣಬಹುದು. ಅಫ್ಗನ್‌ನಲ್ಲಿ ಸಿನಿಮಾ ನಿರ್ಮಾಣ ವಿರಳವಾದ್ದರಿಂದ ನೆರೆಯ ಇರಾನಿ ಹಾಗೂ ಕೆಲವು ಹಾಲಿವುಡ್‌ ಸಿನಿಮಾಗಳು ಅಲ್ಲಿನ ವಾಸ್ತವ ಸ್ಥಿತಿಯನ್ನು ಕಟ್ಟಿಕೊಟ್ಟಿವೆ.

ತಾಲಿಬಾನ್‌ ಆಳ್ವಿಕೆಯ ಕಾಲದಲ್ಲಿ ಇಸ್ಲಾಮಿಕ್‌ ಕಠಿಣ ಕಾನೂನುಗಳಿಂದ ಜನರು ಹೈರಾಣಾಗಿರುವುದು, ಮಕ್ಕಳು ಮತ್ತು ಮಹಿಳೆಯರ ನರಕ ಸದೃಶ ಬದುಕನ್ನು ಬಿಂಬಿಸುವ ಸಿನಿಮಾಗಳು ತೆರೆಕಂಡಿವೆ. ಇನ್ನು ಅಮೆರಿಕ ಸೇನೆಯ ಸುಪರ್ದಿಯ ಆಡಳಿತದಲ್ಲಿ ಅಫ್ಗನ್‌ ಜನರು ಹೊಸ ಬದುಕಿಗೆ ತೆರೆದುಕೊಂಡ ಚಿತ್ರಣ, ಸೇನಾ ಯೋಧರ ಹೋರಾಟ, ತಾಲಿಬಾನಿಗಳನ್ನು ಹಿಮ್ಮೆಟ್ಟಿಸುವ ಸ್ಥಳೀಯರ ಕುರಿತಾದ ಚಿತ್ರಗಳು ಬಿಡುಗಡೆಗೊಂಡು ಯಶಸ್ವಿಯಾಗಿವೆ.

ಈ ಎರಡು ಕಾಲಘಟ್ಟಗಳಲ್ಲೂ ಅಫ್ಗನ್‌ ಜನರ ನೈಜ ಸ್ಥಿತಿಯನ್ನು ಸಿನಿಮಾಗಳಲ್ಲಿ ಕಾಣಬಹುದಾಗಿದೆ.ಈ ಸಂದರ್ಭದಲ್ಲಿ ಅಫ್ಗಾನಿಸ್ತಾನದ ವಾಸ್ತವ ಚಿತ್ರಣವನ್ನು ಬಿಂಬಿಸಿರುವ ಐದು ಸಿನಿಮಾಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಒಸಾಮಾ...

ತಾಲಿಬಾನಿಗಳ ಆಳ್ವಿಕೆ ಕಾಲದಲ್ಲಿಅಫ್ಗನ್‌ ಜನ ಜೀವನ ಕುರಿತಾದ ಚಿತ್ರ 'ಒಸಾಮಾ'. ಜನರ ಬದುಕನ್ನು ತಾಲಿಬಾನಿಗಳು ಹೇಗೆ ನರಕ ಮಾಡಿಟ್ಟಿದ್ದಾರೆ ಎಂಬುದನ್ನು ಸೂಕ್ಷ್ಮವಾಗಿ ಹೊರ ಜಗತ್ತಿಗೆ ತೋರಿಸಿದ ಚಿತ್ರವಿದು.

2003ರಲ್ಲಿ ತೆರೆಕಂಡ ಈ ಸಿನಿಮಾವನ್ನು ಅಫ್ಗನ್‌ ಮೂಲದ ಸಿದ್ದಿಕ್‌ ಬರ್ಮಾಕ್ ನಿರ್ದೇಶನ ಮಾಡಿದ್ದಾರೆ.

ಬಡತನ, ಹಸಿವು, ನಿರುದ್ಯೋಗ ಕುರಿತಾದ ಈ ಸಿನಿಮಾ ಮತ್ತೊಂದು ಆಯಾಮದಲ್ಲಿ ಹೆಣ್ಣು ಮಕ್ಕಳ ನರಕಮಯ ಬದುಕನ್ನು ಚಿತ್ರಿಸಿದೆ. ಕುಟುಂಬವೊಂದರ ಯಜಮಾನ ಹೆಣ್ಣು ಮಗುವಿಗೆ ಗಂಡು ಮಕ್ಕಳ ವೇಷಹಾಕಿ ಕೆಲಸಕ್ಕೆ ಕಳುಹಿಸುತ್ತಾನೆ. ಅ ಮಗುವಿಗೆ ಒಸಾಮಾ ಎಂದು ಮರು ನಾಮಕರಣ ಮಾಡುತ್ತಾನೆ. ಹೀಗೆ ಅಫ್ಗನರ ಕಷ್ಟದ ಬದುಕನ್ನು ನೈಜವಾಗಿ ತೋರಿಸಿರುವ ಈ ಸಿನಿಮಾವನ್ನು ಈ ಸಂದರ್ಭದಲ್ಲಿ ನೋಡಬಹುದು.

ಕಂದಹಾರ್‌...

ಮಹಿಳೆಯರು ಸ್ವಾತಂತ್ರ್ಯವಿಲ್ಲದೆ, ಪುರುಷರ ನೆರಳಲ್ಲಿ ಹೇಗೆ ಬದುಕುತ್ತಿದ್ದಾರೆ ಎಂಬುದನ್ನು ಚಿತ್ರಿಸಿರುವುದೇ ಕಂದಹಾರ್ ಸಿನಿಮಾ. ಮಹಿಳೆಯರ ನರಕ ಸದೃಶ ಬದುಕನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಲಾಗಿದೆ.

ಇರಾನಿಯನ್‌ ನಿರ್ದೇಶಕ ಮೊಸೇನ್ ಮಕಲ್ಟಾಫ್‌ ನಿರ್ದೇಶನದ ಈ ಸಿನಿಮಾ 2001ರಲ್ಲಿ ಬಿಡುಗಡೆಯಾಗಿ ವಿಶ್ವದ ಗಮನ ಸೆಳೆದಿತ್ತು.

ಕೆನಡಾದಲ್ಲಿ ನೆಲೆಸಿರುವ ಅಫ್ಗನ್‌ ಮಹಿಳೆಯೊಬ್ಬರು ತನ್ನ ಸಹೋದರಿಯನ್ನು ನೋಡಲು ಅಫ್ಗಾನಿಸ್ತಾನಕ್ಕೆ ಬರುತ್ತಾರೆ. ಅಲ್ಲಿ ಸಹೋದರಿಯ ಹುಡುಕಾಟದಲ್ಲಿ ಎದುರಾಗುವ ಸಂಕಷ್ಟಗಳು, ಸಹಿಸಿಕೊಳ್ಳಲು ಸಾಧ್ಯವಿಲ್ಲದ ಇಸ್ಲಾಮಿಕ್‌ ಕಠಿಣ ಕಾನೂನುಗಳ ಪಾಲನೆಯ ಕುರಿತಾಗಿ ಸಿನಿಮಾ ಸಾಗುತ್ತದೆ.

ತಾಲಿಬಾನಿಗಳ ಕಪಿಮುಷ್ಟಿಯಲ್ಲಿ ಮಹಿಳೆಯರ ಬದುಕು ಹೇಗೆ ನಲುಗಿದೆ ಎಂಬುದನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ.

ಎ ಥೌಸಂಡ್‌ ಗರ್ಲ್ಸ್‌ ಲೈಕ್‌ ಮೀ...

ಅಫ್ಗನ್‌ ಮಹಿಳೆಯ ನಿಜ ಜೀವನದ ಕತೆಯನ್ನು ಆಧರಿಸಿದ ಸಾಕ್ಷ್ಯಚಿತ್ರ ಮಾದರಿಯ ಸಿನಿಮಾವಿದು. ಸಹರಾ ಮನಿ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.

ತಂದೆಯಿಂದ ನಿರಂತರವಾಗಿ ಅತ್ಯಾಚಾರಕ್ಕೆ ಒಳಗಾದ ಮಹಿಳೆ ಕಾನೂನು ಹೋರಾಟದ ಮೂಲಕ ತಂದೆಗೆ ಶಿಕ್ಷೆ ಕೊಡಿಸುವ ಪ್ರಯತ್ನ ಮಾಡುತ್ತಾರೆ. ಇದಕ್ಕಾಗಿ ಅಫ್ಗನ್‌ ಪೊಲೀಸರು ಹಾಗೂ ಸ್ಥಳೀಯ ನ್ಯಾಯಾಲಯದ ಮೊರೆ ಹೋದರೂ ಯಾವುದೇ ಪ್ರಯೋಜನವಾಗುವುದಿಲ್ಲ. ಕೊನೆಗೆ ಮಾಧ್ಯಮಗಳ ಮುಂದೆ ಬಂದು ಹೇಳಿಕೆ ಕೊಡುತ್ತಾರೆ. ಆಗ ಈ ಪ್ರಕರಣ ವಿಶ್ವ ಸಮುದಾಯದ ಗಮನ ಸೆಳೆಯುತ್ತದೆ. ಆದರೆ ಅಲ್ಲಿಯೂ ಕೂಡ ನ್ಯಾಯಾಧೀಶರು ಸಂತ್ರಸ್ತ ಮಹಿಳೆಯ ಮೇಲೆ ಸುಳ್ಳು ಆರೋಪ ಮಾಡುತ್ತಾರೆ.

ಬದುಕು, ಭರವಸೆ ಮತ್ತು ಪ್ರೀತಿಯ ಕಥಾ ಹಂದರ ಇರುವ 52 ನಿಮಿಷಗಳ ಈ ಸಿನಿಮಾ ನೋಡುಗರ ಕಣ್ಣಾಲಿಗಳಲ್ಲಿ ನೀರು ತರಿಸುತ್ತದೆ.

ರೆಡ್‌ ಸ್ನೋ...

2019ರಲ್ಲಿ ತೆರೆಗೆ ಬಂದ ಕೆನಡಾದ ಸಿನಿಮಾ ರೆಡ್‌ ಸ್ನೋ. ಅಫ್ಗನ್‌ ಪರ್ವತಗಳಲ್ಲಿ ಕೆನಡಾದ ಸೈನಿಕನೊಬ್ಬ ತಾಲಿಬಾನಿ ಉಗ್ರರ ವಶವಾಗುತ್ತಾನೆ. ಅಲ್ಲಿ ಅವನು ಪಡುವ ಕಷ್ಟಗಳೇ ಸಿನಿಮಾದ ಒಟ್ಟಾರೆ ಹೂರಣ.

ಈ ಸಿನಿಮಾದಲ್ಲಿ ಪವರ್ತಗಳಲ್ಲಿ ಅಡಗಿಕೊಂಡಿರುವ ತಾಲಿಬಾನಿಗಳ ನೈಜ ಜೀವನವನ್ನು ತೋರಿಸಲಾಗಿದೆ. ಅವರ ಇಸ್ಲಾಮಿಕ್‌ ಕಾನೂನುಗಳ ಪಾಲನೆ, ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ, ಪುರುಷರ ದರ್ಪ, ಮಾನವ ಸಂಘರ್ಷದ ಕುರಿತಾಗಿಯೂ ಈ ಸಿನಿಮಾ ಗಮನ ಸೆಳೆಯುತ್ತದೆ.

ಕೆನಡಾದ ಜನಪ್ರಿಯ ನಿರ್ದೇಶಕ ಮ್ಯಾರಿ ಕ್ಲೇಮೆಟ್‌ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

ಲೋನ್ ಸರ್ವೈವರ್...

ಅಮೆರಿಕ ಸೇನೆ, ತಾಲಿಬಾನಿಗಳು ಹಾಗೂ ಸ್ಥಳೀಯರನ್ನು ಕೇಂದ್ರೀಕರಿಸಿಕೊಂಡು ನಿರ್ಮಾಣ ಮಾಡಿರುವ ಸಿನಿಮಾಲೋನ್ ಸರ್ವೈವರ್. ಹಾಲಿವುಡ್‌ ನಿರ್ದೇಶಕ ಪೀಟರ್‌ ಬರ್ಗ್‌ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.

ಅಮೆರಿಕದ ಮೂವರು ಸೇನಾ ಯೋಧರು ಕಣಿವೆಯೊಂದರಲ್ಲಿ ತಾಲಿಬಾನಿಗಳ ವಶವಾಗುತ್ತಾರೆ. ಅವರಲ್ಲಿ ಒಬ್ಬ ತಪ್ಪಿಸಿಕೊಂಡು ಹಳ್ಳಿಯೊಂದರಲ್ಲಿ ಆಶ್ರಯ ಪಡೆಯುತ್ತಾನೆ. ಈ ಸುದ್ದಿ ತಿಳಿದು ತಾಲಿಬಾನಿಗಳು ಆ ಹಳ್ಳಿ ಮೇಲೆ ದಾಳಿ ಮಾಡುತ್ತಾರೆ. ಆಗ ಇಡೀ ಹಳ್ಳಿ ಒಟ್ಟಾಗಿ ತಾಲಿಬಾನಿಗಳನ್ನು ಹಿಮ್ಮೆಟ್ಟಿಸಿ ಯೋಧನನ್ನು ರಕ್ಷಿಸುತ್ತಾರೆ.

2013ರಲ್ಲಿ ಈ ಸಿನಿಮಾ ತೆರೆಗೆ ಬಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT