ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫ್ಗನ್‌ನಲ್ಲಿ 20 ವರ್ಷಗಳ ಸುದೀರ್ಘ ರಕ್ತಸಿಕ್ತ ಅಧ್ಯಾಯ ಅಂತ್ಯಕ್ಕೆ ಬದ್ಧ: ಬೈಡನ್

Last Updated 17 ಆಗಸ್ಟ್ 2021, 8:38 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅಫ್ಗಾನಿಸ್ತಾನದಲ್ಲಿ ಅಮೆರಿಕದ ಸಿಬ್ಬಂದಿಯ ಮೇಲೆ ದಾಳಿ ನಡೆದರೆ ಅಥವಾ ಅವರ ಕಾರ್ಯಾಚರಣೆಗೆ ಅಡ್ಡಿ ಮಾಡಿದರೆ, ಅತ್ಯಂತ ಕ್ಷಿಪ್ರ ಹಾಗೂ ಪ್ರಬಲವಾದ ಪ್ರತಿಕ್ರಿಯೆಯನ್ನು ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ತಾಲಿಬಾನಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಅಫ್ಗಾನಿಸ್ತಾನದಿಂದ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಿರುವುದಾಗಿ ಹೇಳಿರುವ ಬೈಡನ್‌, ಯಾವುದೇ ಪ್ರತಿರೋಧ ತೋರದೆಯೇ ತಾಲಿಬಾನಿಗಳಿಗೆ ಅಧಿಕಾರ ಬಿಟ್ಟುಕೊಟ್ಟಿರುವ ಅಫ್ಗನ್‌ ನಾಯಕತ್ವವನ್ನು ದೂಷಿಸಿದ್ದಾರೆ.

ದೇಶವನ್ನು ಉದ್ದೇಶಿಸಿ ಸೋಮವಾರ ಮಾತನಾಡಿರುವ ಬೈಡನ್‌, 'ಸ್ಥಳಾಂತರಿಸುವ, ಸೇನಾ ಪಡೆಯನ್ನು ಹಿಂದಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆಯ ಕುರಿತು ತಾಲಿಬಾನಿಗಳಿಗೆ ಸ್ಪಷ್ಟ ಸಂದೇಶ ರವಾನಿಸಲಾಗಿದೆ. ಅವರೇನಾದರೂ ನಮ್ಮ ಸಿಬ್ಬಂದಿಯ ಮೇಲೆ ದಾಳಿ ಮಾಡಿದರೆ ಅಥವಾ ನಮ್ಮ ಕಾರ್ಯಾಚರಣೆಗೆ ಅಡ್ಡಿಪಡಿಸಿದರೆ, ಅಮೆರಿಕ ಅತ್ಯಂತ ಚುರುಕಾಗಿ ಮತ್ತು ಇನ್ನಷ್ಟು ತೀಕ್ಷ್ಣ ರೀತಿಯಲ್ಲಿ ಪ್ರತಿಕ್ರಿಯಿಸುತ್ತದೆ' ಎಂದಿದ್ದಾರೆ.

ಪೂರ್ವ ಯೋಜಿತ ರೀತಿಯಲ್ಲೇ ಅಮೆರಿಕ ಸೇನಾ ಪಡೆಗಳನ್ನು ಅಫ್ಗಾನಿಸ್ತಾನದಿಂದ ಹಿಂದಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆ ಪೂರ್ಣಗೊಳಿಸುವುದಕ್ಕೆ ಬದ್ಧನಾಗಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

ಅಮೆರಿಕದ ಸೇನಾ ಪಡೆಯು ಹಿಂದಕ್ಕೆ ಸಾಗುತ್ತಿದ್ದಂತೆ ತಾಲಿಬಾನಿಗಳು ಆಕ್ರಮಣ ಹೆಚ್ಚಿಸುವ ಮೂಲಕ ಅಫ್ಗಾನಿಸ್ತಾನವನ್ನು ತಮ್ಮ ಹಿಡಿತಕ್ಕೆ ಪಡೆದಿದ್ದಾರೆ. ದೇಶದಿಂದ ಪಲಾಯನ ಮಾಡಿ ಜೀವ ಉಳಿಸಿಕೊಳ್ಳಲು ಸಾವಿರಾರು ಜನರು ಕಾಬೂಲ್‌ ವಿಮಾನ ನಿಲ್ದಾಣದತ್ತ ನುಗ್ಗಿದ್ದಾರೆ. ನೂಕುನುಗ್ಗಲು ಉಂಟಾಗಿ ಅಲ್ಲಿನ ಸ್ಥಿತಿಯೂ ಅಯೋಮಯವಾಗಿದೆ, ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಇಂಥ ಭಯಭೀತ ಪರಿಸ್ಥಿತಿ ಸೃಷ್ಟಿಯಾಗಲು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರ ನಿರ್ಧಾರವೇ ಕಾರಣ ಎಂದು ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳಲ್ಲಿರುವ ಅಫ್ಗನ್‌ ನಾಗರಿಕರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದರು.

ಅದರ ಬೆನ್ನಲ್ಲೇ ಬೈಡನ್‌ ಅಮೆರಿಕನ್ನರು ಉದ್ದೇಶಿಸಿ ಮಾತನಾಡಿದ್ದಾರೆ. 'ಈ ಮಿಷನ್‌ ಪೂರ್ಣಗೊಳ್ಳುತ್ತಿದ್ದಂತೆ ನಮ್ಮ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆಯು ಮುಕ್ತಾಯವಾಗಲಿದೆ. ಅಮೆರಿಕದ ಸುದೀರ್ಘ ಸಮರವನ್ನು ರಕ್ತಸಿಕ್ತ 20 ವರ್ಷಗಳ ಬಳಿಕ ಮುಕ್ತಾಯಗೊಳಿಸುತ್ತಿದ್ದೇವೆ. ಎಷ್ಟೇ ದೊಡ್ಡ ಪ್ರಮಾಣದಲ್ಲಿ ಸೇನಾ ಪಡೆಗಳನ್ನು ನಿಯೋಜಿಸಿದರೂ ಸಹ ''ಸುಸ್ಥಿರವಾದ ಮತ್ತು ಸುಭದ್ರ ಅಫ್ಗಾನಿಸ್ತಾನವನ್ನು'' ರಚಿಸುವುದು ಸಾಧ್ಯವಿಲ್ಲ ಎಂಬುದಕ್ಕೆ ಇಂದು ನಾವು ಕಾಣುತ್ತಿರುವ ಘಟನೆಗಳೇ ಸಾಕ್ಷಿಯಾಗಿವೆ. ಇತಿಹಾಸದ ಮೂಲಕ ತಿಳಿದಿರುವಂತೆ, ಅದು ಸಾಮ್ರಾಜ್ಯಗಳ ಸ್ಮಶಾನವೇ ಆಗಿದೆ' ಎಂದು ಹೇಳಿದ್ದಾರೆ.

ಅಲ್‌–ಕೈದಾ ಉಗ್ರರಿಂದ ಎದುರಾಗುವ ಆತಂಕ ಶಮನಗೊಳಿಸುವುದು ಹಾಗೂ ಒಸಾಮಾ ಬಿನ್‌ ಲಾಡೆನ್‌ನನ್ನು ಮುಗಿಸುವ ನಮ್ಮ ಮಿಷನ್‌ ಯಶಸ್ವಿಯಾಗಿದೆ. ಅಫ್ಗಾನಿಸ್ತಾನದ ಪ್ರಸ್ತುತ ಸನ್ನಿವೇಶವು ಸಂಕಟ ತಂದಿದೆ, ಆದರೆ ಸೇನಾ ಪಡೆಯನ್ನು ಹಿಂತೆಗೆಯುವ ನಿರ್ಧಾರದ ಕುರಿತು ಪಶ್ಚಾತಾಪವಿಲ್ಲ ಎಂದು ಬೈಡನ್‌ ತಿಳಿಸಿದ್ದಾರೆ.

'ಕಳೆದ 20 ವರ್ಷಗಳಲ್ಲಿ ಅಫ್ಗಾನಿಸ್ತಾನದಲ್ಲಿ ನಮ್ಮ ಮಿಷನ್‌ ಹಲವು ತಪ್ಪು ಹೆಜ್ಜೆಗಳನ್ನಿಟ್ಟಿದೆ. ಆ ಬಗ್ಗೆ ನಾವು ಪ್ರಾಮಾಣಿಕರಾಗಿರಬೇಕು. ಅಫ್ಗಾನಿಸ್ತಾನದಲ್ಲಿ ಸಮರ ಪರಿಸ್ಥಿತಿಯ ಮೇಲೆ ನಿಗಾವಹಿಸಿರುವ ನಾಲ್ಕನೇ ಅಧ್ಯಕ್ಷ ನಾನು. ಈ ಹೊಣೆಯನ್ನು ಐದನೇ ಅಧ್ಯಕ್ಷರಿಗೂ ಮುಂದುವರಿಸಲು ಸಾಧ್ಯವಿಲ್ಲ. ಗಂಭೀರ ಗಾಯಗಳಿಗೆ ಒಳಗಾಗುವುದು, ಜೀವವನ್ನೇ ಕಳೆದುಕೊಂಡು ಕುಟುಂಬವನ್ನು ಸಂಕಟಕ್ಕೆ ದೂಡಿ, ಮತ್ತೊಂದು ರಾಷ್ಟ್ರದ ನಾಗರಿಕ ಯುದ್ಧದಲ್ಲಿ ನಿರಂತರವಾಗಿ ಹೋರಾಡಲು ನಮ್ಮ ಪಡೆಗಳಿಗೆ ಸೂಚಿಸಲು ಸಾಧ್ಯವಿಲ್ಲ. ಇದು ನಮ್ಮ ರಾಷ್ಟ್ರದ ಭದ್ರತೆ ಹಿತಾಸಕ್ತಿಯಾಗಿಲ್ಲ ಹಾಗೂ ಅಮೆರಿಕದ ಜನತೆಗೆ ಇದು ಬೇಕಿಲ್ಲ' ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT