ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೆಜಿಎಫ್–2 ಯಶಸ್ಸಿನ ಬಳಿಕ ಪುಷ್ಪಾ–2 ಚಿತ್ರಕಥೆ ಪರಿಷ್ಕರಣೆಗೆ ಮುಂದಾದ ಸುಕುಮಾರ್!

Published : 25 ಏಪ್ರಿಲ್ 2022, 11:04 IST
ಫಾಲೋ ಮಾಡಿ
Comments

ಕನ್ನಡದ ನಟ ಯಶ್‌ ಅಭಿನಯದ 'ಕೆಜಿಎಫ್‌–2' ಸಿನಿಮಾ ದೇಶದಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ತೆಲುಗಿನ 'ಪುಷ್ಪಾ–2' ಚಿತ್ರದ ಕಥೆಯನ್ನು ನಿರ್ದೇಶಕ ಸುಕುಮಾರ್‌ ಅವರುಮತ್ತೊಮ್ಮೆ ಪರಿಷ್ಕರಿಸಲು ಮುಂದಾಗಿದ್ದಾರೆ ಎಂದು 'ಬಾಲಿವುಡ್‌ ಹಂಗಾಮ' ವರದಿಮಾಡಿದೆ.

ಕೆಜಿಎಫ್–2 ಸಿನಿಮಾ ಗಳಿಸಿಕೊಂಡ ಭಾರಿ ಯಶಸ್ಸು, ಪುಷ್ಪಾ–2 ಕುರಿತು ನಿರ್ದೇಶಕ ಸುಕುಮಾರ್‌ ದೊಡ್ಡ ಮಟ್ಟದಲ್ಲಿ ಆಲೋಚಿಸುವಂತೆ ಮಾಡಿದೆ. 'ಪುಷ್ಪಾ–2 ಅನ್ನು ಮೊದಲ ಭಾಗಕ್ಕಿಂತಲೂ (ಪುಷ್ಪಾ) ಅತ್ಯುತ್ತಮವಾಗಿ ನಿರ್ಮಿಸಲು ಯೋಜಿಸಲಾಗಿದೆ. ಮೊದಲ ಭಾಗ (ಪುಷ್ಪಾ) ಎಲ್ಲ ನಿರೀಕ್ಷೆಗಳನ್ನು ಮೀರಿ ದೊಡ್ಡ ಮಟ್ಟದ ಯಶಸ್ಸು ಗಳಿಸಿತ್ತು. ಬಜೆಟ್‌ ಕೂಡ ಹೆಚ್ಚಾಗಿತ್ತು. ಆಕ್ಷನ್‌ ದೃಶ್ಯಗಳನ್ನು ಅತ್ಯುತ್ತಮ ರೀತಿಯಲ್ಲಿ ಸಂಯೋಜಿಸಲಾಗಿತ್ತು. ಆದರೆ, ಕೆಜಿಎಫ್‌ ಚಾಪ್ಟರ್‌–2 ಎಲ್ಲ ದಾಖಲೆಗಳನ್ನು ಮುರಿದಿದೆ. ಹೀಗಾಗಿ ಸುಕುಮಾರ್‌ ಮತ್ತಷ್ಟು ಉತ್ತಮವಾಗಿ ಸಿನಿಮಾ ಮಾಡಲು ನಿರ್ಧರಿಸಿದ್ದಾರೆ' ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಸುಕುಮಾರ್‌ ಅವರು ಈಗಾಗಲೇ ಯೋಜಿಸಿದ್ದಕ್ಕಿಂತಲೂ ಉತ್ತಮ ರೀತಿಯಲ್ಲಿ ಸಿನಿಮಾ ಮಾಡಲು ನಿರ್ಧರಿಸಿರುವುದರಿಂದ, ಚಿತ್ರೀಕರಣ ನಿಲ್ಲಿಸಿ ಚಿತ್ರಕತೆಯನ್ನು ಪರಿಷ್ಕರಿಸುತ್ತಿದ್ದಾರೆ. ಅಲ್ಲು ಅರ್ಜುನ್‌ ಅವರು ಬೇರೊಂದು ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದೂ ಹೇಳಲಾಗಿದೆ.

ರಕ್ತ ಚಂದನ ಕಳ್ಳ ಸಾಗಾಣೆ ಸುತ್ತ 'ಪುಷ್ಪಾ' ಕಥೆ ಹೆಣೆಯಲಾಗಿತ್ತು. ಈ ಚಿತ್ರದಲ್ಲಿ ಅಲ್ಲು ಅರ್ಜುನ್‌ಗೆ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದರು. ಮುಂದಿನ ಭಾಗದಲ್ಲಿಯೂ ಈ ಜೋಡಿ ಮುಂದುವರಿಯಲಿದೆ.

ಪುಷ್ಪಾ ಹಾಗೂ ಕೆಜಿಎಫ್–2 ಎರಡೂ ಸಿನಿಮಾಗಳು ಬಾಕ್ಸ್‌ ಆಫೀಸ್‌ನಲ್ಲಿ ದೊಡ್ಡ ಮಟ್ಟದ ಯಶಸ್ಸು ಗಳಿಸಿವೆ. ಈ ಎರಡೂ ಚಿತ್ರಗಳು ತಮ್ಮ ಮೂಲ ಭಾಷೆಯಲ್ಲಿ ಮಾತ್ರವಲ್ಲದೆ, ಬಿಡುಗಡೆಯಾದ ಎಲ್ಲ ಭಾಷೆಗಳಲ್ಲಿಯೂ ಉತ್ತಮ ಪ್ರದರ್ಶನ ತೋರಿವೆ. ಪುಷ್ಪಾ ಸಿನಿಮಾದ ಹಿಂದಿ ಅವತರಣಿಕೆ ₹ 100 ಕೋಟಿಗೂ ಅಧಿಕ ಗಳಿಕೆ ಕಂಡಿದೆ. ಕೆಜಿಎಫ್‌–2 ಸಿನಿಮಾದ ಇದೇ (ಹಿಂದಿ) ಅವತರಣಿಕೆ ₹ 300 ಕೋಟಿಗೂ ಅಧಿಕ ಹಣ ಗಳಿಸಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.

ಕೆಜಿಎಫ್‌–2ಗೆ ಅಲ್ಲು ಮೆಚ್ಚುಗೆ
ಅಲ್ಲು ಅರ್ಜುನ್ ಅವರು ಕೆಜಿಎಫ್–2 ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಯಶ್ ನಟನೆಯನ್ನು ಶ್ಲಾಘಿಸಿದ್ದರು.‘ಕೆಜಿಎಫ್–2ಗೆ ಅಭಿನಂದನೆಗಳು. ಯಶ್ ಅವರಿಂದ ಅದ್ಭುತ ನಟನೆ. ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ ಹಾಗೂ ಇತರರಿಂದ ಗಮನ ಸೆಳೆಯುವಂತಹ ನಟನೆ. ಅತ್ಯುತ್ತಮ ಚಿತ್ರೀಕರಣ. ಎಲ್ಲ ತಂತ್ರಜ್ಞರಿಗೂ ಅಭಿನಂದನೆಗಳು. ಪ್ರಶಾಂತ್ ನೀಲ್ ಅವರಿಂದ ಅದ್ಭುತ ಪ್ರದರ್ಶನ. ಅತ್ಯುತ್ತಮ ಸಿನಿಮಾ ಅನುಭವ ನೀಡಿದ್ದಕ್ಕಾಗಿ ಮತ್ತು ಭಾರತೀಯ ಸಿನಿಮಾ ಉತ್ತುಂಗದಲ್ಲಿ ಕಾಣಿಸುವಂತೆ ಮಾಡಿದ್ದಕ್ಕಾಗಿ ಧನ್ಯವಾದಗಳು’ ಎಂದು ಟ್ವೀಟ್ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT