ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮರ್ ಸಿನಿಮಾ ವಿಮರ್ಶೆ: ಹಳೆ ಬಾಟಲಿಗೆ ಹೊಸ ಮುಚ್ಚಳ

Last Updated 31 ಮೇ 2019, 10:42 IST
ಅಕ್ಷರ ಗಾತ್ರ

ಚಿತ್ರ: ಅಮರ್

ನಿರ್ಮಾಪಕರು: ಎನ್. ಸಂದೇಶ್

ನಿರ್ದೇಶನ: ನಾಗಶೇಖರ್

ತಾರಾಗಣ: ಅಭಿಷೇಕ್‌, ತಾನ್ಯಾ ಹೋಪ್, ದೇವರಾಜ್‌, ಸಾಧುಕೋಕಿಲ, ಚಿಕ್ಕಣ್ಣ, ದೀಪಕ್‌ ಶೆಟ್ಟಿ, ಸುಧಾರಾಣಿ

ನಟ ಅಂಬರೀಷ್‌ ಅವರ ಪುತ್ರ ಅಭಿಷೇಕ್‌ ನಟನೆಯ ಮೊದಲ ಚಿತ್ರ ಎನ್ನುವ ಕಾರಣಕ್ಕೆ ಕುತೂಹಲ ಮೂಡಿಸಿದ್ದ ‘ಅಮರ್’ ಚಿತ್ರ ನೀರಸ ನಿರೂಪಣೆ ಮತ್ತು ಚರ್ವಿತ ಚರ್ವಣ ಕಥೆಯಿಂದ ನೋಡುಗರ ಸಾವಧಾನ ಬೇಡುತ್ತದೆ.

ಸಿಗರೇಟು, ಮದ್ಯ, ನಡುನಡುವೆ ಮಳೆಯಲ್ಲಿ ಮಿಂದೇಳುವ ಅಮರ್‌ನ ಪ್ರೇಯಸಿ ಬಾಬಿ. ಆತ ಕೊಡುಗೈ ದಾನಿ. ಈ ಗುಣವೇ ಆತನ ಬದುಕಿಗೆ ಮುಳುವಾಗುತ್ತದೆ. ಅಪ್ಪನನ್ನೂ ಕಳೆದುಕೊಳ್ಳುತ್ತಾನೆ. ಪ್ರೇಯಸಿಯ ಅಪ್ಪನ ಮಾತಿಗೆ ಕಟ್ಟುಬಿದ್ದು ತೊರೆದ ಪ್ರೀತಿಯನ್ನು ಮತ್ತೆ ಪಡೆಯಲು ಹೋರಾಟಕ್ಕಿಳಿಯುವುದೇ ಕಥೆ. ಈ ಕಥನಕ್ಕೆ ಪೂರಕವಾಗಿ ಬೈಕ್ ರೈಡಿಂಗ್‌,‍ಪರಿಸರ ಪ್ರೀತಿ, ಸ್ನೇಹಿತರ ಗುಂಪು, ಆ ಗುಂಪಿನ ಸದಸ್ಯ ಆಪತ್ತಿಗೆ ಸಿಲುಕುವುದು, ಆತನನ್ನು ನಾಯಕ ರಕ್ಷಿಸುವುದು... ಇವೆಲ್ಲವೂ ನಿರ್ದೇಶಕ ನಾಗಶೇಖರ್‌ ಹೇಳಲು ಹೊರಟ ‘ಪ್ರೀತಿ’ಯ ಮಹತ್ವದ ಪೊಳ್ಳು ಕಥನದಲ್ಲಿ ಕ್ಲಿಷೆಯಾಗಿದೆ. ಅವರೇ ಬರೆದ ಕಥೆ ಹಳಿ ಜಾರುವುದಿರಲಿ, ಹಳಿಯನ್ನೇ ಏರಿಲ್ಲ!

‘ಅಮರ್’ ಎನ್ನುವ ಟೈಟಲ್‌ಗೆ ತಕ್ಕಂತೆ ಕಥೆ ಹೊಸೆಯುವುದರಲ್ಲಿ ಆಗಿರುವ ಅಧ್ವಾನಗಳು ಚಿತ್ರದುದ್ದಕ್ಕೂ ಎದ್ದು ಕಾಣುತ್ತವೆ. ಗಟ್ಟಿಯಾದ ಕಥೆ ಇಲ್ಲದೆ, ಮನಸ್ಸು ಕೆರಳಿಸುವ ರಂಜನೆ ಇಲ್ಲದೆ ಚಿತ್ರಕಥೆ ಸೊರಗಿದೆ.

ರಮಣೀಯ ಸ್ಥಳಗಳು, ಹಳೆಯ ಹಾಡಿನ ಮಗ್ಗಿಪುಸ್ತಕವನ್ನು ಕೈಯಲ್ಲಿ ಹಿಡಿದುಕೊಂಡೇ ಪ್ರೇಮ ಕಹಾನಿ ಹೇಳಲು ಪ್ರಯತ್ನಿಸಿದ್ದಾರೆ ನಿರ್ದೇಶಕರು. ಆದರೆ, ತಾವು ಹೇಳುತ್ತಿರುವ ಕಥನದ ಹಾದಿಯ ಬಗ್ಗೆ ಅವರಿಗೆ ಖಚಿತ ನಂಬಿಕೆ ಇದ್ದಂತಿಲ್ಲ.

ಮೊದಲ ಭಾಗದಲ್ಲಿ ಏಕಮುಖವಾಗಿ ಬಿಂಬಿತಗೊಳ್ಳುವ ಅಮರ್‌ ಮತ್ತು ಬಾಬಿಯ ಪ್ರೇಮ ಕಥೆ, ದ್ವಿತೀಯ ಭಾಗದಲ್ಲಿ ಒಮ್ಮೆಲೇ ಇಬ್ಭಾಗವಾಗುತ್ತದೆ. ಪ್ರೇಕ್ಷಕರಲ್ಲಿನಾಯಕನ ಬಗ್ಗೆ ಅನುಕಂಪ ಗಿಟ್ಟಿಸಲು ನಿರ್ದೇಶಕರು ಈ ಅನುಕೂಲಸಿಂಧು ಸೂತ್ರ ಬಳಸಿದ್ದಾರೆ ಎಂದು ಬಿಡಿಸಿ ಹೇಳಬೇಕಿಲ್ಲ. ನಾಯಕನಿಂದಲೇ ಅವಮಾನಿತಳಾಗುವ ನಾಯಕಿ ಕ್ರೈಸ್ತ ಸನ್ಯಾಸಿನಿಯಾಗಿ ಸ್ವಿಡ್ಜರ್ಲೆಂಡ್‌ಗೆ ಹೋಗಿ ನೆಲೆಸುತ್ತಾಳೆ. ಆಗ ಕಥೆ ವಿದೇಶಕ್ಕೆ ಹಾರುತ್ತದೆ.

ತನ್ನ ಹಿಂದೆ ಬಿದ್ದ ಪ್ರಿಯಕರನ ವಿರುದ್ಧ ಸಿಟ್ಟಾಗುವುದು, ಅಪ್ಪನ ಮೂಲಕ ಅವನಿಗೆ ಎಚ್ಚರಿಕೆ ಕೊಡಿಸುವುದು, ಕೊನೆಗೆ ಸನ್ಯಾಸತ್ವ ತೊರೆದು ಅಮರ್‌ನನ್ನು ಬಿಗಿದಪ್ಪಿಕೊಳ್ಳುವುದು ಈ ಚಿತ್ರದ ದೊಡ್ಡ ಅತಿರೇಕ.

‍ಸಾಹಸ ದೃಶ್ಯಗಳಲ್ಲಿ ಅಭಿಷೇಕ್‌ ಅವರಿಂದ ಹೆಚ್ಚಿನ ಕಸರತ್ತು ಮಾಡಿಸಲು ಸಾಹಸ ನಿರ್ದೇಶಕರು ನಾಚಿಕೊಂಡಂತಿದೆ. ಹಾಸ್ಯವೆಂದು ನಿರ್ದೇಶಕರು ಭಾವಿಸಿರುವ ಕೆಲವು ಸನ್ನಿವೇಶಗಳು ಒಮ್ಮೆಯೂ ನಗೆ ಮೂಡಿಸಲಾರಷ್ಟು ಕಳಾಹೀನವಾಗಿವೆ. ಸಾಧುಕೋಕಿಲ, ಚಿಕ್ಕಣ್ಣ ನಟನೆಯಲ್ಲಿ ಬಸವಳಿದಂತೆ ಕಾಣಿಸುತ್ತಾರೆ. ದರ್ಶನ್ ಅವರ ವಿಶೇಷ ಪಾತ್ರ ಚಿತ್ರಕ್ಕೆ ಹೊಸದೇನನ್ನೂ ಕಟ್ಟಿಕೊಟ್ಟಿಲ್ಲ.

ಸತ್ಯ ಹೆಗಡೆ ಅವರ ಛಾಯಾಗ್ರಹಣ ಚಿತ್ರದಲ್ಲಿ ಎದ್ದುಕಾಣುವ ಗುಣಾತ್ಮಕ ಅಂಶ. ಸಿನಿಮಾವೊಂದರ ಆಯಾಮವಾದ ದೃಶ್ಯಭಾಷೆಯನ್ನು ಸೊಗಸಾಗಿ ಕಟ್ಟಿಕೊಟ್ಟಿರುವ ಅವರ ಸ್ವಂತಿಕೆ ಅಭಿನಂದನೆಗೆ ಅರ್ಹ. ಅವರ ಕ್ಯಾಮೆರಾ ಕಣ್ಣಲ್ಲಿ ತಾನ್ಯಾ ಹೋಪ್‌ ಸೊಗಸಾಗಿ ಸೆರೆಯಾಗಿದ್ದಾರೆ. ಅರ್ಜುನ್‌ ಜನ್ಯ ಸಂಗೀತ ಸಂಯೋಜನೆಯ ಒಂದು ಹಾಡು ಗುನುಗುವಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT