ಸೋಮವಾರ, ಮೇ 17, 2021
28 °C

'ಅಂದವಾದ' ಸಿನಿಮಾ ವಿಮರ್ಶೆ: ಭಾವನೆ ಮೀಟುವ ಪ್ರೇಮಕಥೆ

ಕೆ.ಎಂ. ಸಂತೋಷ್‌ ಕುಮಾರ್‌ Updated:

ಅಕ್ಷರ ಗಾತ್ರ : | |

Prajavani

ಚಿತ್ರ: ಅಂದವಾದ
ನಿರ್ದೇಶನ: ಚಲ
ನಿರ್ಮಾಪಕರು: ಡಿ.ಆರ್. ಮಧು ಜಿ.ರಾಜ್ 
ತಾರಾಗಣ: ಜೈ, ಅನುಷಾ ರಂಗನಾಥ್, ಹರೀಶ್ ರೈ, ಕೆ.ಎಸ್.ಶ್ರೀಧರ್ 

ವೈದ್ಯಕೀಯ ಕ್ಷೇತ್ರದಲ್ಲಿರುವ ಕೆಲವರ ಅಜಾಗರೂಕತೆಯಿಂದ ಘಟಿಸುವ ಪ್ರಮಾದಗಳು ಅಮಾಯಕ ರೋಗಿಗಳ ಬದುಕನ್ನು ಎಷ್ಟೊಂದು ದುರ್ಭರ, ದುರಂತವಾಗಿಸುತ್ತದೆ ಎನ್ನುವ ಕಥೆಯನ್ನು ನಿರ್ದೇಶಕ ಚಲ ‘ಅಂದವಾದ’ ಚಿತ್ರದಲ್ಲಿ ಪ್ರೇಕ್ಷಕರ ಮನಕರಗಿಸುವಂತೆ ನಿರೂಪಿಸಲು ಯತ್ನಿಸಿದ್ದಾರೆ. ಒಳ್ಳೆಯ ಸಂದೇಶದ ಕಥೆಯನ್ನೇನೊ ನಿರ್ದೇಶಕರು ಆರಿಸಿಕೊಂಡಿದ್ದಾರೆ. ಸಾಮಾಜಿಕ ಸಂದೇಶದ ಎಳೆಗೆ ಪ್ರೀತಿ, ಅನುಕಂಪದ ಸ್ಪರ್ಶ ಕೊಟ್ಟು, ಸಂಗೀತಮಯ ಪ್ರೇಮಕಥೆಯ ಚಿತ್ರವನ್ನಾಗಿಸುವ ಪ್ರಯತ್ನದಲ್ಲಿ ಚಲ ತುಂಬಾನೇ ಸೈಕಲ್ ಹೊಡೆದಿರುವುದು ಕಾಣಿಸುತ್ತದೆ. ಹಾಗಾಗಿ ಚಿತ್ರಕ್ಕೂ ಸೈಕಲ್‌ನ ವೇಗ ಮೀರಿ ಚಲಿಸಲು ಸಾಧ್ಯವಾಗಿಲ್ಲ. 

ಕಥೆ, ಚಿತ್ರಕಥೆ ಅಲ್ಲಲ್ಲಿ ಜಾಳು ಜಾಳಾಗಿರುವುದೂ, ನಿರೂಪಣೆಯಲ್ಲಿ ಕೊಂಡಿ ತಪ್ಪಿರುವುದು, ಸಂಭಾಷಣೆಯಲ್ಲಿ ಇರಬೇಕಾದ ಗಟ್ಟಿತನ ಇಲ್ಲದಿರುವುದು ಚಿತ್ರದ ಕೊರತೆಯಾಗಿ ಕಾಣಿಸಿದರೆ ಅದು ಪ್ರೇಕ್ಷಕರ ತಪ್ಪಲ್ಲ. ಹಾಸ್ಯ ಸಂಭಾಷಣೆಗಳು ಇದ್ದರೂ ಅದರಲ್ಲಿ ಹಾಸ್ಯದ ಗತ್ತು–ಗೈರತ್ತಿನ ರಸಸ್ವಾದ ಇಲ್ಲ. ಚಿತ್ರದ ಎಲ್ಲ ದೃಶ್ಯಗಳೂ ಮನಸಿಗೆ ಮುದ ನೀಡದಿದ್ದರೂ ಕೆಲವು ದೃಶ್ಯಗಳು ಮತ್ತು ಸಂಭಾಷಣೆಗಳು ಪ್ರೇಕ್ಷಕರ ಹೃದಯದ‌ ಭಾವವನ್ನು ಮೀಟುತ್ತವೆ. 

ಅಪಘಾತದಲ್ಲಿ ತಂದೆ–ತಾಯಿ ಕಳೆದುಕೊಂಡು ಆಶ್ರಮದಲ್ಲಿ ಬೆಳೆದು ದೊಡ್ಡವಳಾಗುವ ಚಿತ್ರದ ಕಥಾ ನಾಯಕಿ ಅಮ್ಮು ಅಲಿಯಾಸ್‌ ಅರ್ಥ (ಅನುಷಾ ರಂಗನಾಥ್‌), ನಂಬಲು ಅಸಾಧ್ಯವಾದ ಹಸಿ ಸುಳ್ಳುಗಳನ್ನು ಹೇಳುತ್ತಲೇ, ಕಥಾ ನಾಯಕ ಮೋನಾನನ್ನು (ಜೈ) ನಂಬಿಸುತ್ತಾಳೆ. ಆಕೆ ಯಾಕಿಂಥ ಹಸಿ ಮತ್ತು ಸಿಲ್ಲಿ ಎನಿಸುವ ಸುಳ್ಳುಗಳನ್ನು ಹೇಳುತ್ತಾಳೆ ಎನ್ನುವ ಕುತೂಹಲ ಕೊನೆಯವರೆಗೂ ಕಾಯ್ದುಕೊಂಡು, ನೋಡುಗರ ಕುತೂಹಲವನ್ನೂ ಹೆಚ್ಚಿಸುವ ತಂತ್ರದಲ್ಲಿ ನಿರ್ದೇಶಕರು ಸ್ವಲ್ಪಮಟ್ಟಿಗೆ ಗೆದ್ದಿದ್ದಾರೆ. ಆದರೆ, ಮೊದಲಾರ್ಧ ತೆರೆಯ ಮೇಲೆ ತೆವಳಿದಂತೆ ಸಾಗುವ ಚಿತ್ರದ ಕಥೆ ಪ್ರೇಕ್ಷಕರ ತಾಳ್ಮೆಯನ್ನು ಪರೀಕ್ಷಿಸುತ್ತದೆ. ಮೊದಲಾರ್ಧವನ್ನು ಆವರಿಸಿಕೊಳ್ಳುವ ನಾಯಕಿ ಮತ್ತು ನಾಯಕನ ಬಾಲ್ಯದ ನವಿರುತನವು ಪ್ರೇಕ್ಷಕರನ್ನು ಹಿಡಿದು ಕೂರಿಸುತ್ತದೆ. ಬಾಲನಟಿ ಸಿಂಚನಾ ಮುದ್ದಾದ ನಟನೆಯೂ, ನಾಯಕಿ ಅನುಷಾ ಅವರ ನಟನೆಯಷ್ಟೇ ಪ್ರೇಕ್ಷಕರ ಚಿತ್ತದಲ್ಲಿ ನೆಲೆನಿಲ್ಲುತ್ತದೆ. 

ಮಧ್ಯಂತರದಲ್ಲಿ ತೆರೆದುಕೊಳ್ಳುವ ಕಥೆ ಪ್ರೇಕ್ಷಕನ ಕುತೂಹಲ ಹೆಚ್ಚಿಸಲು ಸಫಲವಾಗಿದೆ. ಕ್ಲೈಮ್ಯಾಕ್ಸ್‌ ದೃಶ್ಯ ಪ್ರೇಕ್ಷಕನ ಕಣ್ಣಾಲಿಗಳು ತಮಗರಿವಿಲ್ಲದಂತೆ ಒದ್ದೆಯಾಗುವಷ್ಟು ಭಾವತೀವ್ರತೆಯಿಂದ ಕೂಡಿದೆ.

ಇನ್ನೂ ಚಿತ್ರದ ನಾಯಕ ಜೈ ಮೊದಲ ಚಿತ್ರದಲ್ಲೇ ಗಮನ ಸೆಳೆಯುವಂತಹ ನಟನಾಗಿ ಭರವಸೆ ಹುಟ್ಟಿಸುತ್ತಾರೆ. ಮುಗ್ಧ ಯುವಕನ ಪಾತ್ರದಲ್ಲಿ ಸಹಜ ನಟನೆ ಮಾಡಿದ್ದಾರೆ. ಪೋಷಕ ನಟರಾದ ಹರೀಶ್ ರೈ, ಕೆ.ಎಸ್.ಶ್ರೀಧರ್ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ.

ಯೋಗರಾಜ್ ಭಟ್, ಜಯಂತ ಕಾಯ್ಕಿಣಿ, ಹೃದಯಶಿವ ರಚನೆಯ ಹಾಡುಗಳು, ವಿಕ್ರಮ್ ವರ್ಮನ್‌ ಸಂಗೀತ ಸಂಯೋಜನೆ ಮತ್ತು ಗುರುಕಿರಣ್ ಹಿನ್ನೆಲೆ ಸಂಗೀತದಿಂದ ಚಿತ್ರ ಸಂಗೀತಮಯವಾಗಿದೆ.

ಮುಂಗಾರು ಮಳೆಯಲ್ಲಿ– ಮಲೆನಾಡಿನ ಹಚ್ಚಹಸಿರಿನ ತಾಣಗಳನ್ನು ಹಿನ್ನೆಲೆಯಾಗಿ ಸೆರೆ ಹಿಡಿದ ದೃಶ್ಯಗಳು ಚಿತ್ರಕ್ಕೆ ಅಂದಗಾರಿಕೆ ತಂದುಕೊಡುವಲ್ಲಿ ಹರೀಶ್ ಎನ್.ಸೊಂಡೇಕೊಪ್ಪ ಛಾಯಾಗ್ರಹಣ ಸಹ್ಯವಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು