ಮುಂಬೈ: ಬಾಲಿವುಡ್ ನಟ ರಣಬೀರ್ ಕಪೂರ್ ಹಾಗೂ ನಟಿ ರಶ್ಮಿಕಾ ಮಂದಣ್ಣ ಅಭಿನಯಿಸಿರುವ ಅನಿಮಲ್ ಚಿತ್ರವು ವಿಶ್ವದಾದ್ಯಂತ ಒಂಬತ್ತು ದಿನಗಳಲ್ಲಿ ಒಟ್ಟು ₹660 ಕೋಟಿ ಗಳಿಸಿದೆ ಎಂದು ಚಿತ್ರ ನಿರ್ಮಾಪಕರು ತಿಳಿಸಿದ್ದಾರೆ.
ನಿರ್ಮಾಣ ಸಂಸ್ಥೆ ಟಿ–ಸೀರಿಸ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಅನಿಮಲ್ ಚಿತ್ರದ ಕಲೆಕ್ಷನ್ ಅಪ್‌ಡೇಟ್ ಅನ್ನು ಹಂಚಿಕೊಂಡಿದೆ. ಚಿತ್ರವು ಬಿಡುಗಡೆಯಾದ 9 ದಿನಗಳಲ್ಲಿ ₹660.89 ಕೋಟಿ ಗಳಿಸಿದೆ ಎಂದು ತಿಳಿಸಿದೆ.
‘ಅರ್ಜುನ್ ರೆಡ್ಡಿ‘ ಸಿನಿಮಾ ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ‘ಅನಿಮಲ್’ ಚಿತ್ರವು ಡಿಸೆಂಬರ್ 1 ರಂದು ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಸೇರಿದಂತೆ ಒಟ್ಟು ಐದು ಭಾಷೆಗಳಲ್ಲಿ ಬಿಡುಗಡೆಗೊಂಡಿತ್ತು.
ಚಿತ್ರದಲ್ಲಿ ರಣಬೀರ್ ಕಪೂರ್ ಪತ್ನಿಯ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಅನಿಲ್ ಕಪೂರ್ ಅವರು ರಣಬೀರ್ ತಂದೆಯಾಗಿ ಕಾಣಿಸಿಕೊಂಡಿದ್ದಾರೆ. ತಂದೆ–ಮಗನ ಸಂಬಂಧ ಸೇರಿದಂತೆ ಅಪರಾಧದ ಕಥಾಹಂದರವನ್ನು ಚಿತ್ರ ಒಳಗೊಂಡಿದೆ.
ಅನಿಮಲ್ ಚಿತ್ರವನ್ನು ಭೂಷಣ್ ಕುಮಾರ್, ಕೃಷ್ಣ ಕುಮಾರ್ ಅವರ ಟಿ–ಸೀರೀಸ್, ಮುರಡ್ ಖೇತನ್ ಅವರ ಸಿನಿ ಒನ್ ಸ್ಟೋಡಿಯೊ ಮತ್ತು ಪ್ರಣಯ್ ರೆಡ್ಡಿ ವಂಗಾ ಅವರ ಭದ್ರಕಾಳಿ ಪಿಕ್ಚರ್ಸ್ ನಿರ್ಮಿಸಿದೆ.