ಭಾನುವಾರ, ಸೆಪ್ಟೆಂಬರ್ 15, 2019
30 °C

ಅನಿಶ್–ನಿಶ್ವಿಕಾ ಜೋಡಿಯ ರಾಮಾರ್ಜುನ

Published:
Updated:

‘ವಾಸು ನಾನ್ ಪಕ್ಕಾ ಕಮರ್ಷಿಯಲ್’ ಚಿತ್ರದಲ್ಲಿ ಒಂದಾಗಿದ್ದ ಅನಿಶ್ ಮತ್ತು ನಿಶ್ವಿಕಾ ನಾಯ್ಡು ಜೋಡಿಯ ಇನ್ನೊಂದು ಸಿನಿಮಾ ಟೀಸರ್‌ ಸಿದ್ಧವಾಗಿದೆ. ‘ರಾಮಾರ್ಜುನ’ ಹೆಸರಿನ ಈ ಚಿತ್ರದ ನಿರ್ದೇಶನ ಕೂಡ ಅನಿಶ್ ಅವರದ್ದು. ಅಷ್ಟೇ ಅಲ್ಲ, ನಿರ್ಮಾಪಕನಾಗಿ ಹಣದ ಬ್ಯಾಗನ್ನು ಕೂಡ ಅವರೇ ಹಿಡಿದಿದ್ದಾರೆ. ಚಿತ್ರದ ಬಗ್ಗೆ ಮಾಹಿತಿ ನೀಡಲು ಅನಿಶ್ ಅವರು ಸುದ್ದಿಗೋಷ್ಠಿ ಕರೆದಿದ್ದರು. ಜೊತೆಯಲ್ಲಿ ಇಡೀ ಚಿತ್ರತಂಡ ಇತ್ತು.

‘ನಾನು ಚಿತ್ರವೊಂದರ ನಿರ್ದೇಶನಕ್ಕೆ ಇಳಿಯುತ್ತೇನೆ ಎಂದು ಯಾವತ್ತೂ ಭಾವಿಸಿರಲಿಲ್ಲ. ಆದರೆ ಅದು ಈಗ ಸಾಧ್ಯವಾಗಿದೆ. ನಾನು ನಿರ್ದೇಶನದ ವಿಚಾರವಾಗಿ ಯಾವುದೇ ಕೋರ್ಸ್‌ ಮಾಡಿದವ ಅಲ್ಲ. ಆದರೆ ನನ್ನ ಹಿಂದಿನ ಚಿತ್ರಗಳ ನಿರ್ದೇಶಕರಿಗೆ ಆಭಾರಿಯಾಗಿದ್ದೇನೆ, ಅವರಿಂದ ಕೆಲಸ ಕಲಿತಿದ್ದೇನೆ’ ಎಂದರು ಅನಿಶ್.

ಚಿತ್ರದ ಟೀಸರ್‌ ನೋಡಿದ ನಂತರ ಅನಿಶ್ ಅವರಿಗೆ ಸಿನಿಮಾ ಬಗ್ಗೆ ಒಂದಿಷ್ಟು ಸಮಾಧಾನ ಆಗಿದೆ. ‘ಪರವಾಗಿಲ್ಲ, ಸಿನಿಮಾ ಒಂದು ಲೆವೆಲ್‌ಗೆ ಬಂದಿದೆ ಎಂಬುದನ್ನು ಟೀಸರ್‌ ನೋಡಿ ಹೇಳುತ್ತಿದ್ದೇನೆ’ ಎಂದು ಅವರು ಹೇಳಿಕೊಂಡರು. ತಮ್ಮ ಚಿತ್ರ ನಿರ್ಮಾಣ ಸಂಸ್ಥೆ ಮೂಲಕ ಬೇರೆಯವರ ಸಿನಿಮಾಗಳನ್ನೂ ನಿರ್ಮಾಣ ಮಾಡಬೇಕು ಎನ್ನುವ ಉದ್ದೇಶ ಅವರಲ್ಲಿ ಇದೆ.

‘ರಾಮಾರ್ಜುನ ಸಿನಿಮಾದಲ್ಲಿ ಇರುವುದು ಕೆಳಮಧ್ಯಮ ವರ್ಗದ ಜನರ ನಡುವೆ ನಡೆಯುವ ಒಂದು ಕಥೆ. ಚಿತ್ರದ ನಾಯಕ ವಿಮಾ ಏಜೆಂಟ್‌. ನಾಯಕ ವಾಸ ಮಾಡುವ ಪ್ರದೇಶದಲ್ಲಿ ಸಾಮೂಹಿಕ ಹತ್ಯಾಕಾಂಡವೊಂದು ನಡೆಯುತ್ತದೆ. ಅದರ ಹಿಂದಿನ ನಿಗೂಢವನ್ನು ಆತ ಹೇಗೆ ಪರಿಹರಿಸುತ್ತಾನೆ ಎಂಬುದು ಚಿತ್ರದ ಕಥೆ’ ಎನ್ನುವುದು ಕಥೆಯ ಬಗ್ಗೆ ಅನಿಶ್ ನೀಡಿದ ವಿವರಣೆ.

‘ರಾಮಾರ್ಜುನ’ ಚಿತ್ರೀಕರಣವು ಶೇಕಡ 80ರಷ್ಟು ಪೂರ್ಣಗೊಂಡಿದ್ದು, ಅಕ್ಟೋಬರ್‌ ಅಥವಾ ನವೆಂಬರ್ ತಿಂಗಳಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ. ‘ಅನಿಶ್ ಅವರ ನಿರ್ಮಾಣ ಸಂಸ್ಥೆಯ ಜೊತೆ ನಾನು ಕೆಲಸ ಮಾಡುತ್ತಿರುವುದು ಎರಡನೆಯ ಬಾರಿ. ಅವರ ಜೊತೆ ಕೆಲಸ ಮಾಡುವುದು ಬಹಳ ಸುಲಭ. ತಾಂತ್ರಿಕ ವಿವರಗಳನ್ನೆಲ್ಲ ಅವರೇ ಹೇಳಿಕೊಡುತ್ತಾರೆ’ ಎಂದರು ನಿಶ್ವಿಕಾ.

ಅವರದ್ದು ಈ ಚಿತ್ರದಲ್ಲಿ ಖುಷಿ ಎನ್ನುವ ಪಾತ್ರ. ‘ಮುಂದೆ ಇಂತಹ ಪಾತ್ರ ಸಿಗುತ್ತದೆಯೇ ಎನ್ನುವುದು ಗೊತ್ತಿಲ್ಲ’ ಎಂದು ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು. ನಟ ಶರತ್ ಲೋಹಿತಾಶ್ವ ಅವರು ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ‘ಹೀರೊಗೆ ಗಾಡ್ ಫಾದರ್ ಪಾತ್ರ ನನ್ನದು. ನಾನು ನಿಭಾಯಿಸಿದ ಪಾತ್ರವು ಒಳ್ಳೆಯ ಪಾತ್ರವೋ ಕೆಟ್ಟ ಪಾತ್ರವೋ ಎಂಬುದು ಚಿತ್ರದ ಕೊನೆಯಲ್ಲಿ ಗೊತ್ತಾಗುತ್ತದೆ’ ಎಂದರು ಶರತ್. ಅಂದಹಾಗೆ, ಶರತ್ ಅವರಿಗೆ ಆ್ಯಕ್ಷನ್–ಕಟ್ ಹೇಳುವಾಗ ಅನಿಶ್ ಅವರಿಗೆ ರೋಮಾಂಚನ ಆಗುತ್ತಿತ್ತಂತೆ.

ವಿಕ್ರಮ್ ಮೋರ್ ಸಾಹಸ ನಿರ್ದೇಶನ ಚಿತ್ರಕ್ಕಿದೆ. ನಾಯಕ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದಾನೆ.

Post Comments (+)