ಬುಧವಾರ, ಮಾರ್ಚ್ 3, 2021
19 °C

‘ಸೈರಾ’ದಲ್ಲಿ ಲಕ್ಷ್ಮೀಬಾಯಿಯಾಗಿ ಅನುಷ್ಕಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಂಗನಾ ರನೋಟ್‌ ಬಳಿಕ ಈಗ ಅನುಷ್ಕಾ ಶೆಟ್ಟಿ, ರಾಣಿ ಲಕ್ಷ್ಮೀಬಾಯಿ ಪಾತ್ರದಲ್ಲಿ ನಟಿಸಿದ್ದಾರೆ. ಚಿರಂಜೀವಿ ಮುಖ್ಯಪಾತ್ರದಲ್ಲಿ ನಟಿಸಿರುವ ಬಹುನಿರೀಕ್ಷಿತ ‘ಸೈರಾ ನರಸಿಂಹ ರೆಡ್ಡಿ’ ಚಿತ್ರದಲ್ಲಿ ಅನುಷ್ಕಾ ಲಕ್ಷ್ಮೀಬಾಯಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.  

ಸುರೆಂದರ್‌ ರೆಡ್ಡಿ ಅವರ ‘ಸೈರಾ ನರಸಿಂಹ ರೆಡ್ಡಿ’ ಚಿತ್ರದಲ್ಲಿ ಅನುಷ್ಕಾ ಪ್ರಮುಖ ಪಾತ್ರದಲ್ಲಿ ನಟಿಸಿಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಯಾವ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಬಗ್ಗೆ ಚಿತ್ರತಂಡ ಯಾವುದೇ ಮಾಹಿತಿ ನೀಡಿರಲಿಲ್ಲ. ಹಾಗಾಗಿ ಅಂತೆಕಂತೆ ಸುದ್ದಿಗಳು ಹರಿದಾಡಿದ್ದವು. ಈಗ ಪಾತ್ರದ ಬಗ್ಗೆ ಅಂತಿಮ ಸುದ್ದಿ ಹೊರಬಿದ್ದಿದೆ. ಝಾನ್ಸಿಯ ರಾಣಿ ಲಕ್ಷ್ಮೀಬಾಯಿ ಪಾತ್ರದಲ್ಲಿ ಅನುಷ್ಕಾ ನಟಿಸಿದ್ದು, ಚಿತ್ರೀಕರಣ ಮುಗಿದಿದೆ.  

ಈ ಪಾತ್ರಕ್ಕೆ ಎರಡನೇ ಯೋಚನೆ ಮಾಡದೇ ಚಿತ್ರತಂಡ ಅನುಷ್ಕಾ ಅವರನ್ನು ಆಯ್ಕೆ ಮಾಡಿದೆಯಂತೆ. ‘ಇದು ತುಂಬ ಪ್ರಭಾವಶಾಲಿ ಪಾತ್ರ. ಅನುಷ್ಕಾ ಶೆಟ್ಟಿ ಅವರ ಮಾರುಕಟ್ಟೆ ಇಮೇಜ್‌ ಕೂಡ ಚೆನ್ನಾಗಿದೆ. ಈ ಹಿಂದೆ ಅನೇಕ ಮಹಿಳಾ ಕೇಂದ್ರಿತ ಚಿತ್ರಗಳಲ್ಲಿ ಅವರು ನಟಿಸಿದ್ದು, ಅವರು ಈ ಚಿತ್ರಕ್ಕೆ ಸಹಜ ಆಯ್ಕೆಯಾಗಿದ್ದರು’ ಎಂದು ಸಿನಿಮಾದ ಹತ್ತಿರದ ಮೂಲಗಳು ತಿಳಿಸಿವೆ. 

ಸೈರಾ ಚಿತ್ರಕ್ಕೆ ಅನುಷ್ಕಾ ಧ್ವನಿ ಕೂಡ ನೀಡಿದ್ದಾರೆ. ಈ ಚಿತ್ರ ಅನುಷ್ಕಾ ಅವರ ನಿರೂಪಣೆಯೊಂದಿಗೆ ಆರಂಭವಾಗುತ್ತದೆ. ಅನುಷ್ಕಾ ಅಭಿಮಾನಿಗಳು ಚಿತ್ರ ಬಿಡುಗಡೆಗೆ ಕಾತುರದಿಂದ ಕಾಯುತ್ತಿದ್ದಾರೆ. ಅನೇಕ ಜನರು ಅನುಷ್ಕಾ ಹಾಗೂ ಕಂಗನಾ ರನೋಟ್‌ ಮಧ್ಯೆ ಹೋಲಿಕೆ ಮಾಡಲು ಆರಂಭಿಸಿದ್ದಾರೆ. ‘ಮಣಿಕರ್ಣಿಕಾ- ದಿ ಕ್ವೀನ್ ಆಫ್ ಝಾನ್ಸಿ’ ಚಿತ್ರದಲ್ಲಿ ಕಂಗನಾ ಲಕ್ಷ್ಮೀಬಾಯಿ ರಾಣಿಯ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರವು ಜನವರಿ 25ರಂದು ಬಿಡುಗಡೆಯಾಗಿ ವಿಶ್ವದಾದ್ಯಂತ ಬಾಕ್ಸಾಫೀಸಿನಲ್ಲಿ ಹಿಟ್‌ ಆಗಿತ್ತು. ದೊಡ್ಡ ತಾರಾಬಳಗವನ್ನೇ ಹೊಂದಿರುವ ಚಿತ್ರದಲ್ಲಿ ಬಾಲಿವುಡ್‌ ನಟ ಅಮಿತಾಭ್ ಬಚ್ಚನ್‌ ಕೂಡ ಅತಿಥಿ ಪಾತ್ರವೊಂದರಲ್ಲಿ ನಟಿಸಿದ್ದಾರೆ.  

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು