ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರಾಟ ಪರ್ವದ ಅಪೂರ್ವ ಸಂಗಮ

Last Updated 19 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಮಹಾಭಾರತದ ಹದಿನೆಂಟು ಅಧ್ಯಾಯಗಳ ಪೈಕಿ ನಾಲ್ಕನೇ ಅಧ್ಯಾಯವೇ ‘ವಿರಾಟ ಪರ್ವ’. ಇದೇ ಹೆಸರಿನಡಿ ಈಗ ಕನ್ನಡ ಸಿನಿಮಾವೊಂದು ನಿರ್ಮಾಣವಾಗಿದೆ. ಈ ವಿರಾಟ ಪರ್ವವೂ ನಾಲ್ಕು ಬಗೆಯಲ್ಲಿ, ಮೂರು ಕಾಲಘಟ್ಟಗಳಲ್ಲಿ ಸಿದ್ಧವಾಗಿದೆ. ಇತ್ತೀಚೆಗೆ ನಟ ಪುನೀತ್‌ ರಾಜ್‌ಕುಮಾರ್‌ ಚಿತ್ರದ ಮೊದಲ ಪೋಸ್ಟರ್ ಅನ್ನು ಬಿಡುಗಡೆಗೊಳಿಸಿದರು. ಕಾರ್ಗಿಲ್‌ ಯುದ್ಧದಲ್ಲಿ ಹುತಾತ್ಮರಾದ ಸೈನಿಕರ ಹೆತ್ತವರಿಂದ ಎರಡನೇ ಪೋಸ್ಟರ್ ಅನ್ನು ಬಿಡುಗಡೆ ಮಾಡಿಸಲಾಗಿದೆ.

ಎಸ್.ಆರ್. ಮೀಡಿಯಾದಡಿ ಸುನಿಲ್‌ ರಾಜ್ ಇದಕ್ಕೆ ಬಂಡವಾಳ ಹೂಡಿದ್ದಾರೆ. ರಾಷ್ಟ್ರಕವಿ ಕುವೆಂಪು ಅವರ ಒಂದು ಗೀತೆಯ ಎಂಟು ಸಾಲುಗಳನ್ನು ಚಿತ್ರದಲ್ಲಿ ಬಳಸಲಾಗಿದೆಯಂತೆ. ‘ತೇನಾ ವಿನ ತೃಣ ಮಾಪಿ ಆ ಚಾಲತಿ ಮಮತೆಯ ಬಿಡು ನೀ ಮೂಡ ಮನ...’ ಗೀತೆಯ ಸಾಲುಗಳನ್ನು ಒಂದೂವರೆ ದಶಕದ ಹಿಂದಿನ ಕಾಲಘಟ್ಟಕ್ಕೆ ಹೊಂದಿಸಲಾಗಿದೆ. ಸೈನಿಕ ತನ್ನ ಎಂಟು ವರ್ಷದ ಅಂಗವಿಕಲ ಮಗಳಿಗೆ ಯಾವ ರೀತಿ ಅರ್ಥೈಸಿ ಕಣ್ಮರೆಯಾಗಿರುತ್ತಾನೆ ಎನ್ನುವುದನ್ನು ಕಟ್ಟಿಕೊಡಲಾಗಿದೆಯಂತೆ.

ಈ ಹಿಂದೆ ‘ಮುದ್ದು ಮನಸೇ’ ಸಿನಿಮಾ ನಿರ್ದೇಶಿಸಿದ್ದ ಅನಂತ್ ಶೈನ್‌ ಅವರೇ ಇದಕ್ಕೆ ಆ್ಯಕ್ಷನ್‌ ಕಟ್ ಹೇಳಿದ್ದಾರೆ. ಅವರೇ ಕಥೆ, ಚಿತ್ರಕಥೆ, ಸಂಭಾಷಣೆಯ ನೊಗ ಹೊತ್ತಿದ್ದಾರೆ. ಮಳೆಗಾಲ, ಚಳಿಗಾಲ ಹಾಗೂ ಬೇಸಿಗೆ ಕಾಲಕ್ಕೆ ಕಾದು ಇದರ ಶೂಟಿಂಗ್‌ ನಡೆಸಲಾಗಿದೆ. ಹಾಗಾಗಿ, ಚಿತ್ರೀಕರಣಕ್ಕೆ ಎರಡು ವರ್ಷಗಳ ಕಾಲ ಸಮಯ ಹಿಡಿಯಿತು ಎನ್ನುವುದು ಚಿತ್ರತಂಡದ ವಿವರಣೆ. ಭಟ್ಕಳ, ಮೈಸೂರು, ಕೋಲಾರ ಹಾಗೂ ಬೆಂಗಳೂರಿನಲ್ಲಿ ಶೂಟಿಂಗ್‌ ನಡೆಸಲಾಗಿದೆ.

ಮನುಷ್ಯ ಸಂಬಂಧಕ್ಕೆ ಪೆಟ್ಟು ಬಿದ್ದಾಗ ಅದರ ಉಳಿವಿಗಾಗಿ ಏನೆಲ್ಲಾ ಪ್ರಯತ್ನ ಮಾಡುತ್ತಾನೆ ಎಂಬುದೇ ಇದರ ತಿರುಳು.ಅಜ್ಞಾತವಾಸ, ಹುಡುಕಾಟ ಹಾಗೂ ಥ್ರಿಲ್ಲಿಂಗ್ ಅಂಶಗಳು ಇದರಲ್ಲಿವೆ.ಚಿತ್ರದಲ್ಲಿ ಮೂರು ವ್ಯಕ್ತಿಗಳ ಮನಸ್ಥಿತಿ ಬಿಚ್ಚಿಕೊಳ್ಳುತ್ತದೆಯಂತೆ. ಮಂಸೋರೆ, ಯಶ್ ಶೆಟ್ಟಿ ಹಾಗೂ ಹೇಮಂತ್ ಸುಶೀಲ್ ಈ ಪಾತ್ರಗಳಿಗೆ ಜೀವ ತುಂಬಿದ್ದಾರೆ.

ಶಿವ ಬಿ.ಕೆ. ಕುಮಾರ್ ಹಾಗೂ ಶಿವ ಸೀನ ಅವರ ಕ್ಯಾಮೆರಾ ಕೈಚಳಕವಿದೆ. ವಿನಿಟ್ ರಾಜ್ ಮೆನನ್ ಸಂಗೀತ ನೀಡಿದ್ದಾರೆ. ಋತ್ವಿಕ್ ಮುರಳೀಧರ್ ಹಾಗೂ ವಿಜಯ್ ರಾಜ್ ಹಿನ್ನೆಲೆ ಸಂಗೀತದ ಹೊಣೆ ಹೊತ್ತಿದ್ದಾರೆ. ವಿ. ನಾಗೇಂದ್ರಪ್ರಸಾದ್, ಯೋಗರಾಜ್ ಭಟ್ ಹಾಗೂ ಕವಿರಾಜ್ ಹಾಡುಗಳನ್ನು ಬರೆದಿದ್ದಾರೆ. ವಿಕ್ರಮ್ ಮೋರ್ ಹಾಗೂ ಮಾಸ್ ಮಾದ ಸಾಹಸ ಸಂಯೋಜಿಸಿದ್ದಾರೆ. ವೆಂಕಿ ಸಂಕಲನ ನಿರ್ವಹಿಸಿದ್ದಾರೆ. ಮೋಹನ್‌ ಅವರ ನೃತ್ಯ ನಿರ್ದೇಶನವಿದೆ.ಆರು ಗೌಡ, ಅಭಿನಯ, ಅನಿಲ್ ಸಿದ್ದು, ಅನ್ವಿತಾ ಸಾಗರ್, ಹರಿಣಿ, ಪ್ರಕಾಶ್ ಹೆಗ್ಗೋಡು, ಉಮೇಶ್ ಪುಂಗ, ಸ್ಪಂದನಾ ಪ್ರಸಾದ್, ಪ್ರನ್ಯ ಪಿ. ರಾವ್, ಚೈತ್ರಾ ಕೋಟೂರು ತಾರಾಗಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT