ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಟಾಕಿ ಪೋರಿ’ಯ ಮನದಾಳ

Last Updated 7 ಮೇ 2021, 1:55 IST
ಅಕ್ಷರ ಗಾತ್ರ

ಚಂದನವನದ ಗ್ಲ್ಯಾಮರಸ್‌ ಬೆಡಗಿ ನಟಿ ಆಶಿಕಾ ರಂಗನಾಥ್‌ ‘ಮದಗಜ’ ಚಿತ್ರದಲ್ಲಿ ಪಕ್ಕಾ ಹಳ್ಳಿ ಹುಡ್ಗಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಚಿತ್ರೀಕರಣ ಕೊನೆಯ ಹಂತದಲ್ಲಿದೆ.ಆಶಿಕಾ ನಟಿಸಿರುವ ‘ಅವತಾರ ಪುರುಷ’, ರೆಮೊ’ ಚಿತ್ರದ ಚಿತ್ರೀಕರಣ ಮುಗಿದಿದ್ದು, ಚುಟುಚುಟು ಹುಡ್ಗಿ ಇದೀಗ ಪಟಾಕಿ ಪೋರಿಯಾಗಿ ‘ಸಿನಿಮಾ ಪುರವಣಿ’ ಜೊತೆಗೆ ತಮ್ಮ ಮನದಾಳದ ಮಾತುಗಳನ್ನಾಡಿದ್ದಾರೆ.

***

*ಚಿತ್ರೀಕರಣವೆಲ್ಲ ಸ್ತಬ್ಧವಾಗಿದೆ. ಮತ್ತೆ ಲಾಕ್‌ಡೌನ್‌ ರೀತಿಯ ಅನುಭವ?

ಚಿತ್ರೀಕರಣದಲ್ಲೇ ತಲ್ಲೀನರಾಗಿದ್ದ ನಮಗೆ ಮನೆಯಲ್ಲೇ ಕೈಕಾಲು ಕಟ್ಟಿಹಾಕಿದಂತಿದೆ. ಬೇಜಾರಾಗುತ್ತದೆ. ಆದರೆ ಪರಿಸ್ಥಿತಿ ಹಿಂದಿನಂತಿಲ್ಲ. ದಿನವೂ ಮನೆಯಲ್ಲೇ ವರ್ಕ್‌ಔಟ್‌ ಮಾಡುತ್ತಾ, ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುವುದರತ್ತ ನನ್ನ ಗಮನವಿದೆ. ಈ ಹಿಂದಿನ ಲಾಕ್‌ಡೌನ್‌ ಎಲ್ಲರಿಗೂ ಒಂದು ರೀತಿ ಹೊಸದಾಗಿತ್ತು. ಈ ಬಾರಿ ಮತ್ತೆ ಲಾಕ್‌ಡೌನ್‌ ಆಗುತ್ತದೆ ಎನ್ನುವುದು ಬಹುತೇಕ ಜನರಿಗೆ ಖಚಿತವಾಗಿತ್ತು. ಕುಟುಂಬ ಸದಸ್ಯರ ಜೊತೆಗೆ ಕೂತು ಒಟಿಟಿಯಲ್ಲಿ ಸಿನಿಮಾ ನೋಡುವ ಹೊಸ ಅಭ್ಯಾಸ ಶುರುವಾಗಿದೆ. ಕೋವಿಡ್‌ ಎರಡನೇ ಅಲೆ ತುಂಬಾ ತೀವ್ರವಾಗಿದೆ. ಮಕ್ಕಳಿಗೆ ಕೋವಿಡ್‌ ದೃಢಪಟ್ಟರೆ ಹೆತ್ತ ತಂದೆತಾಯಿಯೂ ಜೊತೆಗೆ ಇರಲು ಸಾಧ್ಯವಾಗದಷ್ಟು ಗಂಭೀರವಾಗಿದೆ ಈ ಸೋಂಕು. ಎಲ್ಲರೂ ಎಚ್ಚರಿಕೆಯಿಂದ ಇರಬೇಕು. ಸಾಮಾಜಿಕ ಜಾಲತಾಣದ ವೇದಿಕೆಗಳಲ್ಲಿ ನನಗೆ ಬಹಳಷ್ಟು ಫಾಲೊವರ್ಸ್‌ ಇದ್ದಾರೆ. ಸಾಕಷ್ಟು ಜನರು ನೆರವು ಕೋರಿ ಸಂದೇಶ ಕಳುಹಿಸಿದ್ದಾರೆ. ಇದು ನೈಜವಾಗಿದೆಯೇ ಎಂದು ಪರಿಶೀಲಿಸಿ, ನನ್ನ ಖಾತೆಯಲ್ಲಿ ಶೇರ್‌ ಮಾಡಿದ್ದೇನೆ. ಖಾತೆಯಲ್ಲಿರುವ ನನ್ನ ಸ್ನೇಹಿತರು, ಅಭಿಮಾನಿಗಳು ಇವರಿಗೆ ಸಹಾಯ ಮಾಡಿದ್ದಾರೆ.

*ಚುಟುಚುಟು ಹುಡ್ಗಿ ಈಗ ಪಟಾಕಿ ಪೋರಿಯಾಗಿದ್ದೀರಿ. ಹೇಗಿದೆ ಹೊಸ ಹೆಸರು?

ಕೋಟಿಗೊಬ್ಬ 3 ಚಿತ್ರದ ‘ಪಟಾಕಿ ಪೋರಿ’... ಊಹಿಸದೇ ಬಂದ ಅವಕಾಶ. ವಿಶೇಷ ಹಾಡಿಗೆ ನನ್ನನ್ನು ಆಯ್ಕೆ ಮಾಡುತ್ತಾರೆ ಎಂದು ಅಂದುಕೊಂಡಿರಲಿಲ್ಲ. ಇದುವರೆಗೂ ನಾಯಕಿಯಾಗಷ್ಟೇ ಉತ್ತಮ ಪಾತ್ರಗಳಲ್ಲಿ ನಾನು ಗುರುತಿಸಿಕೊಂಡಿದ್ದೆ. ಮೊದಲಿಗೆ ಈ ರೀತಿ ಹಾಡಿನಲ್ಲಿ ಅಭಿನಯಿಸಬೇಕೇ ಬೇಡವೇ ಎನ್ನುವ ಗೊಂದಲ ನನ್ನಲ್ಲಿ ಮೂಡಿತ್ತು. ನನ್ನ ಸಿನಿಮಾ ಪಯಣದಲ್ಲಿ ಇಷ್ಟು ಬೇಗ ಈ ರೀತಿ ಹಾಡಿನಲ್ಲಷ್ಟೇ ಕಾಣಿಸಿಕೊಳ್ಳುವುದು ಅಗತ್ಯತೆ ಇದೆಯೇ ನನಗೆ ಅನ್ನಿಸಿತ್ತು. ಸುದೀಪ್‌ ಅವರ ಜೊತೆಗೆ ನಟಿಸುವ ಅವಕಾಶ ಹಾಗೂ ನೃತ್ಯದಲ್ಲಿ ನನಗಿರುವ ಆಸಕ್ತಿಯಿಂದ ಕೊನೆಗೆ ಒಪ್ಪಿಕೊಂಡೆ.

ಜನರೂ ಚುಟುಚುಟು ಆದಮೇಲೆ ಯಾವ ಹಾಡು ಎಂದು ಕೇಳುತ್ತಿದ್ದರು. ಖ್ಯಾತ ನೃತ್ಯ ನಿರ್ದೇಶಕ ರಾಜು ಸುಂದರಂ ಹಾಗೂ ಅದ್ಭುತವಾದ ಚಿತ್ರತಂಡದ ಜೊತೆ ಕೆಲಸ ಮಾಡಿದ ಅನುಭವ ಅದ್ಭುತ. ಕೋಟಿಗೊಬ್ಬ–3 ಎಂದಾಕ್ಷಣ ಆಶಿಕಾ ಕೇವಲ ಈ ಹಾಡಿಗಷ್ಟೇ ಸೀಮಿತ ಎಂದು ಅಭಿಮಾನಿಗಳೂ ಅಂದುಕೊಂಡಿಲ್ಲ. ಐಟಂ ಸಾಂಗ್‌ ಆಗಿದ್ದರೆ ಐಟಂ ಸಾಂಗ್‌ಗೆ ನೃತ್ಯ ಮಾಡುವವರನ್ನೇ ಕರೆದುಕೊಂಡು ಬರುತ್ತಿದ್ದರು. ಐಟಂ ಸಾಂಗ್‌ನಿಂದಲೇ ಹಿಟ್‌ ಆದ ನಟಿಯರಿದ್ದಾರೆ. ಆದರೆ, ಈ ಹಾಡು ಚಿತ್ರದ ಆರಂಭದಲ್ಲೇ ಬರುತ್ತದೆ. ಎಲ್ಲೂ ನನ್ನನ್ನು ಐಟಂ ಸಾಂಗ್‌ ರೀತಿ ಪ್ರದರ್ಶಿಸಿಲ್ಲ. ಗ್ಲ್ಯಾಮರಸ್‌ ಲುಕ್‌ನಲ್ಲಿ ನಾನು ಕಾಣಿಸಿಕೊಂಡಿದ್ದೇನೆ.

*ಕಾಶ್ಮೀರದಲ್ಲಿ ರೆಮೊ ಚಿತ್ರದ ಚಿತ್ರೀಕರಣದ ಅನುಭವ ಹೇಗಿತ್ತು?

ನಾವು ರೆಮೊ ಚಿತ್ರದ ಚಿತ್ರೀಕರಣಕ್ಕೆಂದು ಕಾಶ್ಮೀರಕ್ಕೆ ಹೋದ ಸಂದರ್ಭ ಬಹಳ ಅಪಾಯದ ಅವಧಿಯಾಗಿತ್ತು. ಹೋಗುವುದೋ ಬೇಡವೋ ಎಂಬ ಗೊಂದಲ ನಮ್ಮಲ್ಲಿ ಇತ್ತು. ಆದರೆ, ಜವಾಬ್ದಾರಿಯುತ ಕಲಾವಿದರಾಗಿ ನಾವು ಹೋಗಬೇಕಾಯಿತು. ಮೂರು ದಿನ ಚಿತ್ರೀಕರಣ ಮುಗಿಸಿಕೊಂಡು ಬಂದೆವು. ಕಾಶ್ಮೀರದ ಸೋನ್‌ಮಾರ್ಗ್‌ ಹಳ್ಳಿಯೊಂದರಲ್ಲಿ ಚಿತ್ರೀಕರಣವಿದ್ದ ಕಾರಣ ಅಷ್ಟು ಅಪಾಯ ಇರಲಿಲ್ಲ. ಮೊದಲು ಕಾಶ್ಮೀರದಲ್ಲಿ ಚಿತ್ರೀಕರಣವಾಗಬೇಕಿದ್ದ ದೃಶ್ಯಗಳನ್ನು ಗ್ರಾಫಿಕ್ಸ್‌ನಲ್ಲಿ ಮಾಡಿದ್ದೆವು. ಇದು ಸೂಕ್ತವಾಗಿ ಕಾಣಿಸದೇ ಇದ್ದ ಕಾರಣ ಕಾಶ್ಮೀರಕ್ಕೆ ಪ್ರಯಾಣ ಬೆಳೆಸಿದೆವು. ಹಾಡು ಚೆನ್ನಾಗಿ ಮೂಡಿಬಂದಿದೆ.

*ಶ್ರೀಮುರುಳಿ ಅವರ ಜೊತೆಗಿನ ‘ಮದಗಜ’ದ ಮೇಲೆ ಬಹಳಷ್ಟು ನಿರೀಕ್ಷೆ ಇದೆ. ನಿಮ್ಮ ಪಾತ್ರದ ಬಗ್ಗೆ?

ಈ ಹಿಂದಿನ ಸಿನಿಮಾಗಳಲ್ಲಿ ನಾನು ಈ ರೀತಿಯ ಪಾತ್ರ ಮಾಡಿರಲಿಲ್ಲ. ಪಕ್ಕಾ ಹಳ್ಳಿ ಹುಡುಗಿಯ ಪಾತ್ರ ಇದು. ಗ್ಲ್ಯಾಮರಸ್‌ ಆಗಿ, ಕಾಲೇಜು ಹುಡುಗಿ ಪಾತ್ರದಲ್ಲಿ ಮಾಡರ್ನ್‌ ಯುವತಿಯಾಗಿ ಕಾಣಿಸಿಕೊಂಡಿದ್ದೆ. ಹೀಗಾಗಿ ಮೊದಲು ನಿರ್ದೇಶಕರಿಗೂ ನಾನು ಈ ಪಾತ್ರ ನಿಭಾಯಿಸಬಲ್ಲೆನೇ ಎಂಬ ಸಂಶಯವಿತ್ತು. ಆದರೆ ಎರಡು ದೃಶ್ಯದ ಚಿತ್ರೀಕರಣವಾದ ಬಳಿಕ ಅವರೇ ನನ್ನ ಪಾತ್ರವನ್ನು ಮೆಚ್ಚಿಕೊಂಡರು. ಕೃಷಿ ಶಿಕ್ಷಣ ಪದವಿ ಪಡೆದು ವ್ಯವಸಾಯ ಮಾಡುವ ಹುಡುಗಿಯ ಪಾತ್ರ ನನ್ನದು. ಅವಳೇ ಇಷ್ಟಪಟ್ಟು ಕೃಷಿ ಶಿಕ್ಷಣ ಪಡೆದು ಈ ಕ್ಷೇತ್ರಕ್ಕೆ ಇಳಿದಿರುತ್ತಾಳೆ. ಆಧುನಿಕ ಯೋಚನೆಗಳಿದ್ದರೂ, ಹಳ್ಳಿಯಲ್ಲೇ ಜೀವನ ಮಾಡಬೇಕು ಎನ್ನುವ ಗುಣದವಳು. ಹಳ್ಳಿ ಸೊಗಡು, ಮಾತೂ ಕೂಡಾ ಹಳ್ಳಿಯದ್ದೇ. ಇದು ವಿಭಿನ್ನ ಅನುಭವವಾಗಿದೆ.

*ಆಶಿಕಾ ಮುಂದಿನ ಪ್ರಾಜೆಕ್ಟ್ಸ್‌ಗಳು?

ಸದ್ಯಕ್ಕೆ ‘ರೆಮೊ’ ಹಾಗೂ ‘ಅವತಾರ ಪುರುಷ’ ಚಿತ್ರದ ಚಿತ್ರೀಕರಣ ಮುಗಿಸಿದ್ದೇನೆ. ‘ಮದಗಜ’ ಚಿತ್ರದ 10–15 ದಿನದ ಇನ್ನೊಂದು ಶೆಡ್ಯೂಲ್‌ ಇದೆ. ಮೈಸೂರಿನಲ್ಲೇ ಕೊನೆಯ ಹಂತದ ಚಿತ್ರೀಕರಣ ನಡೆಯಲಿದೆ. ಇದಾದರೆ ಒಪ್ಪಿಕೊಂಡ ಚಿತ್ರಗಳ ಶೂಟಿಂಗ್‌ ಮುಗಿಯುತ್ತದೆ. ೀ ಚಿತ್ರಗಳ ಮೇಲೆಯೇ ನನಗೆ ಬಹಳಷ್ಟು ನಿರೀಕ್ಷೆಯಿದೆ. ಇಲ್ಲಿಯವರೆಗೂ ಹೊಸ ಸಿನಿಮಾಗಳಿಗೆ ಸಹಿ ಹಾಕಿಲ್ಲ. 2–3 ಚಿತ್ರಗಳ ಚರ್ಚೆ ನಡೆಯುತ್ತಿದೆ. ಈಗಿನ ಪರಿಸ್ಥಿತಿಯಲ್ಲಿ ಯಾವುದೇ ಚಿತ್ರಗಳು ಚಿತ್ರೀಕರಣ ಆರಂಭಿಸುವುದು ಅನುಮಾನವಾಗಿದೆ. ಇಲ್ಲಿಯವರೆಗೂ ಒಳ್ಳೆಯ ಪಾತ್ರಗಳನ್ನು ಮಾಡಿದ್ದೇನೆ. ಇದೇ ರೀತಿಯ ಸಿನಿಮಾಗಳು ಅಥವಾ ಇದಕ್ಕಿಂತ ಸವಾಲಿನ ಪಾತ್ರ ಬರುವುದಕ್ಕೆ ಕಾಯುತ್ತಿದ್ದೇನೆ. ⇒v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT