ಸೋಮವಾರ, ಸೆಪ್ಟೆಂಬರ್ 16, 2019
27 °C

ನಟಿ ಶ್ವೇತಾ ಶ್ರೀವಾತ್ಸವ್ ಪುತ್ರಿ ಈಗ ಅತಿ ಕಿರಿಯ ಸೆಲೆಬ್ರಿಟಿ

Published:
Updated:
Prajavani

ಸಿಂಪಲ್ಲಾಗ್‌ ಒಂದ್‌ ಲವ್‌ ಸ್ಟೋರಿ, ‘ಕಿರಗೂರಿನ ಗಯ್ಯಾಳಿಗಳು’, ‘ಫೇರ್‌ ಅಂಡ್‌ ಲವ್ಲಿ’ ಚಿತ್ರಗಳಲ್ಲಿ ಪ್ರೇಕ್ಷಕರ ಗಮನ ಸೆಳೆದ ನಟಿ ಶ್ವೇತಾ ಶ್ರೀವಾತ್ಸವ್‌, ತಾಯ್ತನದ ಕಾರಣಕ್ಕೆ ಚಿತ್ರರಂಗದಿಂದ ಮೂರು ವರ್ಷಗಳಿಂದ ಬಿಡುವು ಪಡೆದಿದ್ದರು. ಈಗ ಮಗಳು ಪುಟ್ಟ ಪುಟ್ಟ ಹೆಜ್ಜೆ ಇಟ್ಟು ನಡೆದಾಡುತ್ತಿದ್ದಾಳೆ. ಶ್ವೇತಾ ಮತ್ತೆ ನಟನೆಯತ್ತ ಮುಖಮಾಡಲು ಸಜ್ಜಾಗಿದ್ದಾರೆ. ಈಗ ಅವರು ಒಬ್ಬರೇ ಚಿತ್ರರಂಗಕ್ಕೆ ಮರಳಲು ಸಜ್ಜಾಗಿಲ್ಲ, ಒಳ್ಳೆಯ ಸ್ಕ್ರಿಪ್ಟ್‌ ಸಿಕ್ಕಿದರೆ ಮಗಳು ಅಶ್ಮಿತಾ ಶ್ರೀವಾತ್ಸವ್‌ ಜತೆಗೆ ಇನಿಂಗ್ಸ್‌ ಆರಂಭಿಸಲು ತಯಾರಿಯಲ್ಲಿದ್ದಾರೆ. 

ಶ್ವೇತಾ, ಎರಡು ವರ್ಷಗಳಿಂದ ಮಗಳ ಜತೆಗೆ 24X7 ಎನ್ನುವಂತೆ ಸಮಯ ಕಳೆಯುತ್ತಿದ್ದಾರೆ. ಅವರ ಮಗಳು ಅಶ್ಮಿತಾ ಅವರಿಗಷ್ಟೇ ವಿಶೇಷ ಮಗು ಎನಿಸಿಲ್ಲ, ಆ ಪುಟಾಣಿಯು ತನ್ನ ಇನ್‌ಸ್ಟಾಗ್ರಾಮ್‌ ಫಾಲೋವರ್ಸ್‌ಗೂ ತುಂಬಾ ವಿಶೇಷವೇ ಆಗಿ ಕಾಣಿಸುತ್ತಿದ್ದಾಳೆ. ಆಕೆಗೆ ಲಕ್ಷಾಂತರ ಅಭಿಮಾನಿಗಳ ಸಮೂಹವೇ ಇದೆ. ಅಶ್ಮಿತಾಗೆ ಆರು ತಿಂಗಳು ತುಂಬಿದಾಗ ಆಕೆಗಾಗಿ ಶ್ವೇತಾ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರತ್ಯೇಕ ಖಾತೆ ತೆರೆದಿದ್ದರು. ಅಶ್ಮಿತಾಗೆ ಎರಡನೇ ವರ್ಷ ತುಂಬುವುದರೊಳಗೆ ಆಕೆಯ ಫಾಲೋವರ್ಸ್‌ಗಳ ಸಂಖ್ಯೆ ಒಂದು ಲಕ್ಷ ದಾಟಿದೆ! ಅಂದರೆ, ಯಾರು ಬೇಕಾದರೂ ಊಹಿಸಬಹುದು ಈ ‘ಬೇಬಿ ಸೆಲೆಬ್ರಿಟಿ’ ಸಾಮಾಜಿಕ ಜಾಲತಾಣದಲ್ಲಿ ಎಷ್ಟೊಂದು ಫೇಮಸ್ಸು ಅಂಥ.

ಶ್ವೇತಾ ಪತಿ ಅಮಿತ್‌ ಶ್ರೀವಾತ್ಸವ್‌ ಮತ್ತು ಮಗಳು ಅಶ್ಮಿತಾ ಶ್ರೀವಾತ್ಸವ್‌ ಜತೆಗೆ ‘ಪ್ರಜಾವಾಣಿ’ ಕಚೇರಿಗೆ ಭೇಟಿ ಕೊಟ್ಟಿದ್ದರು. ತಮ್ಮ ಸಿನಿ ಬದುಕು ಮತ್ತು ತಮ್ಮ ಮಗಳ ಬಗ್ಗೆ ಹಲವು ಮಾಹಿತಿಗಳನ್ನು ‘ಸಿನಿಮಾ ಪುರವಣಿ’ ಜತೆಗೆ ಹಂಚಿಕೊಂಡರು.

 

ಬೆಳ್ಳಿತೆರೆಯ ಮೇಲೆ ಶ್ವೇತಾ ಅವರ ಮುಖ ದರ್ಶನ ಮತ್ತೆ ಯಾವಾಗ? ಎಂದು ಮಾತಿಗೆ ಇಳಿದಾಗ, ‘ಮದುವೆ, ಗರ್ಭಿಣಿ, ಮಗು ಆಯಿತು ಎಂದಾಕ್ಷಣ ನಾವಿನ್ನು ನಟಿಸುವುದಿಲ್ಲವೆಂದು ಚಿತ್ರರಂಗದ ಮಂದಿಯೇ ನಿರ್ಧರಿಸಿಕೊಂಡರೇ ಹೇಗೆ? ಇದು ಬೇಸರದ ಸಂಗತಿ. ನಮ್ಮ ವೃತ್ತಿಗೂ ತಾಯ್ತನಕ್ಕೂ ಸಂಬಂಧವೇ ಇಲ್ಲ. ಯಾರಾದರೂ ತಂದೆಯಾದ ತಕ್ಷಣ ನಟನಾ ವೃತ್ತಿ ಬಿಡುತ್ತಾರಾ? ಹಾಗೆಯೇ ತಾಯಿಯಾದ ತಕ್ಷಣ ನಟನೆ ಬಿಡಬಾರದು ಎನ್ನುವುದು ನನ್ನ ಧೋರಣೆ. ನಾನು ಯಾವತ್ತೂ ಬಿಡುವು ಪಡೆಯಲು ಇಷ್ಟಪಡುವವಳಲ್ಲ. ಈಗ ನನ್ನೆದುರಿಗೆ ಅವಕಾಶಗಳೇ ಇಲ್ಲವೆಂದಲ್ಲ. ಸುಮಾರು 15 ಸ್ಕ್ರಿಪ್ಟ್‌ಗಳನ್ನು ತಿರಸ್ಕರಿಸಿದ್ದೇನೆ. ಒಳ್ಳೆಯ ಸ್ಕ್ರಿಪ್ಟ್‌, ಪಾತ್ರವನ್ನು ಎದುರು ನೋಡುತ್ತಿದ್ದೇನೆ ಅಷ್ಟೆ’ ಎಂದು ಮಾತು ವಿಸ್ತರಿಸಿದರು.

ನಿರ್ದಿಷ್ಟ ಪಾತ್ರಗಳಿಗೆ ಸೀಮಿತಗೊಳಿಸುವ ಚಿತ್ರರಂಗದವರ ಪ್ರವೃತ್ತಿಗೆ ಅವರಲ್ಲಿ ಬೇಸರವಿದೆ. ‘ಈಗ ಬಂದಿದ್ದ ಸ್ಕ್ರಿಪ್ಟ್‌ಗಳಲ್ಲಿ ಬಹುತೇಕ ಒಂದೇ ರೀತಿಯ ಪಾತ್ರಗಳು ಇದ್ದವು. ಒಮ್ಮೆ ವೇಶ್ಯೆಯ ಪಾತ್ರದಲ್ಲಿ ನಟಿಸಿದೆ, ಇನ್ನೊಮ್ಮೆ ಗಯ್ಯಾಳಿಯ ಪಾತ್ರದಲ್ಲಿ ಕಾಣಿಸಿಕೊಂಡೆ. ಹಾಗಾಂತ ಅವೇ ಪಾತ್ರಗಳು ಪುನಃ ಬರುತ್ತಿದ್ದರೆ ಹೇಗೆ? ನನಗೂ ವಿಭಿನ್ನ ಪಾತ್ರಗಳಲ್ಲಿ ನಟಿಸುವ ಆಸೆ, ಆಸಕ್ತಿ ಇದೆ. ಒಂದು ಸಿನಿಮಾದಲ್ಲಿ ಯಾವುದೋ ಒಂದು ಪಾತ್ರ ಮಾಡಿದ ತಕ್ಷಣ ಅದೇ ಪಾತ್ರಕ್ಕೆ ಬ್ರಾಂಡ್‌ ಮಾಡಬಾರದು’ ಎನ್ನುತ್ತಾರೆ ಅವರು.

ತುಂಬು ಗರ್ಭಿಣಿಯಾಗಿದ್ದಾಗ ಶ್ವೇತಾ ಬೆಲ್ಲಿ ಪೇಂಟಿಂಗ್ ಮಾಡಿಸಿಕೊಂಡು, ಕನ್ನಡದ ಯಾವ ತಾರೆಯೂ ಮಾಡದ ಸಾಹಸದಿಂದ ಗಮನ ಸೆಳೆದು ಸುದ್ದಿಯಾಗಿದ್ದರು. ಈ ಬಗ್ಗೆ ಮಾತು ಹೊರಳಿದಾಗ ‘ನಾವು ಕಲಾವಿದರು. ನಮ್ಮ ಖುಷಿ, ಆನಂದವನ್ನು ಕಲೆಯ ಮೂಲಕವೇ ವ್ಯಕ್ತಪಡಿಸಬೇಕು. ಮಗಳು ಬೆಳೆದ ಮೇಲೆ ತಾನು ಗರ್ಭದಲ್ಲಿರುವಾಗಲೇ ಅಮ್ಮ ಬೆಲ್ಲಿ ಪೇಂಟಿಂಗ್‌ ಮಾಡಿಸಿಕೊಂಡು ಖುಷಿಪಟ್ಟಿದ್ದಳೆನ್ನುವುದನ್ನು ಕೇಳಿ, ನೋಡಿ ಆಕೆಯೂ ಆನಂದಿಸುತ್ತಾಳೆ. ಅವಳಿಗೆ ಅಂತಹದೊಂದು ಖುಷಿ ಮತ್ತು ಸವಿನೆನಪು ಕಟ್ಟಿಕೊಡುವುದು ನಮ್ಮ ಉದ್ದೇಶವಾಗಿತ್ತು’ ಎಂದರು.

ಬೇಬಿ ಸೆಲೆಬ್ರಿಟಿ

ಪುಟಾಣಿ ಅಶ್ಮಿತಾ ಈಗ ಸಾಮಾಜಿಕ ಜಾಲತಾಣದಲ್ಲಿ ‘ಬೇಬಿ ಸೆಲೆಬ್ರಿಟಿ’ಯಾಗಿ ಗಮನ ಸೆಳೆಯುತ್ತಿದ್ದಾಳೆ. ಆಕೆಯ ಆಟ, ತುಂಟಾಟಗಳ ವಿಡಿಯೊ, ಫೋಟೊಗಳಿಗೆ ಫಾಲೋವರ್ಸ್‌ಗಳು ಫುಲ್‌ ಫಿದಾ ಆಗಿದ್ದಾರೆ. ಹೌದು, ಆ ಮಗುವಿನ ಜತೆಗೆ ಸ್ವಲ್ಪ ಸಮಯ ಕಳೆದರೂ ಸಾಕು ‘ಮಗು ಎಷ್ಟೊಂದು ಚೂಟಿ, ಎಷ್ಟೊಂದು ಮುದ್ದುಮುದ್ದಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸದೇ ಇರಲಾರರು. ಅಶ್ಮಿತಾ ಕ್ಯಾಮೆರಾಕ್ಕೆ ನೀಡುವ ಫೋಸುಗಳಿಗೂ ಛಾಯಾಗ್ರಾಹಕ ಕೂಡ ಬೆಕ್ಕಸ ಬೆರಗಾಗಲೇಬೇಕು.

‘ಮಗು ಮೊಬೈಲ್‌ಗೆ ಅಂಟಿಕೊಂಡಿದೆ’ ಎಂದು ದೂರುವ ಸ್ಥಿತಿ ಇದೆಯಾ? ಎಂದಾಗ, ‘ಇದು ತಂತ್ರಜ್ಞಾನದ ಯುಗ. ನಾವು ಮಕ್ಕಳ ಕೈಗೆ ಮೊಬೈಲ್‌ ಸಿಗದಂತೆ ಬಚ್ಚಿಡಲು ಸಾಧ್ಯವೇ ಇಲ್ಲವೆನ್ನುವಂತಾಗಿದೆ. ಆದರೆ, ನಾನು ಮಗಳ ಕೈಗೆ ಮೊಬೈಲ್‌ ಕೊಟ್ಟು ಕೂರಿಸುವುದಿಲ್ಲ. ಊಟ, ತಿಂಡಿ ತಿನ್ನಿಸುವಾಗ ಮೊಬೈಲ್‌ನಲ್ಲಿ ಅವಳಿಗೆ ಇಷ್ಟದ ಚಿತ್ರ, ವಿಡಿಯೊ, ಚಂದಮಾಮನನ್ನೂ ತೋರಿಸುತ್ತೇನೆ’ ಎನ್ನುತ್ತಾರೆ ಅವರು.

‘ಅವಳ ಪುಟಾಣಿ ಹೆಜ್ಜೆಯ ಓಡಾಟ, ನಲ್ನುಡಿಗಳಿಂದ ನನಗೆ ಸಮಯ ಕಳೆದದ್ದೇ ಗೊತ್ತಾಗುವುದಿಲ್ಲ. ಅಮಿತ್‌ ಕೂಡ ಮಗಳ ಪಾಲನೆಯ ಜವಾಬ್ದಾರಿಯನ್ನು ಸಮನಾಗಿ ಹಂಚಿಕೊಳ್ಳುತ್ತಾರೆ. ಒಂದು ರೀತಿಯಲ್ಲಿ ಅವರೂ ಮಗುವಿಗೆ ತಾಯಿಯಂತೇ ಇದ್ದಾರೆ. ಮಗಳ ಆಟ– ತುಂಟಾಟಗಳ ವಿಡಿಯೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುತ್ತಾರೆ’ ಎನ್ನುವ ಮಾತು ಸೇರಿಸಿದರು ಶ್ವೇತಾ.

Post Comments (+)