ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾ.ರಾಜ್‌ಕುಮಾರ್ ಜನ್ಮದಿನ: ಬೊಮ್ಮಾಯಿ, ಸಿದ್ದರಾಮಯ್ಯ ಸೇರಿ ಗಣ್ಯರಿಂದ ಶುಭಾಶಯ

Last Updated 24 ಏಪ್ರಿಲ್ 2022, 7:10 IST
ಅಕ್ಷರ ಗಾತ್ರ

ಬೆಂಗಳೂರು: ನಟ ಸಾರ್ವಭೌಮ, ವರನಟ ಡಾ.ರಾಜ್‌ಕುಮಾರ್ ಅವರ 94ನೇ ಜನ್ಮದಿನವನ್ನು ಇಂದು (ಭಾನುವಾರ) ಆಚರಿಸಲಾಗುತ್ತಿದೆ.

ನೆಚ್ಚಿನ ನಟನಹುಟ್ಟುಹಬ್ಬದ ಅಂಗವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸೇರಿದಂತೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸ್ಮರಿಸಿದ್ದಾರೆ.

‘ನಟಸಾರ್ವಭೌಮ, ಕನ್ನಡಿಗರ ಆರಾಧ್ಯ ದೈವ, ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ, ವರನಟ ಡಾ.ರಾಜ್ ಕುಮಾರ್ ರವರ ಜನ್ಮದಿನದಂದು ಅವರಿಗೆ ಅಭಿಮಾನಪೂರ್ವಕ ನಮನಗಳು. ಕನ್ನಡ ಹಾಗೂ ಕನ್ನಡಿಗರ ಅಸ್ಮಿತೆಯಾಗಿ, ತೆರೆಯ ಮೇಲೆ ತಮ್ಮ ಅದ್ಭುತ ನಟನೆಯಿಂದ, ತೆರೆಯ ಹಿಂದೆ ತಮ್ಮ ಹೃದಯ ವೈಶಾಲ್ಯತೆಯಿಂದ ಜನಮಾನಸದಲ್ಲಿ ಶಾಶ್ವತವಾಗಿ ಉಳಿದಿರುವ ಡಾ.ರಾಜ್ ಅವರು ಈ ನಾಡು, ನುಡಿಗೆ ಸಲ್ಲಿಸಿದ ಸೇವೆ ಅವಿಸ್ಮರಣೀಯವಾದುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.

‘ಆದರ್ಶಮಯವಾದ ಬದುಕು ಮತ್ತು ಕಲಾಸೇವೆಯ ಮೂಲಕ ಸಾರ್ವಕಾಲಿಕ‌ ಮಾದರಿಯನ್ನು ಹಾಕಿಕೊಟ್ಟು ನಮ್ಮೆಲ್ಲ‌ ನಡೆ-ನುಡಿಯನ್ನು ಪ್ರಭಾವಿಸುತ್ತಲೇ ಇರುವ ನಾಡಿನ ಹೆಮ್ಮೆಯ ಪುರುಷೋತ್ತಮ ಮತ್ತು 'ನಮ್ಮ ಕಾಡಿನ' ಹಿರಿಯ ಡಾ.ರಾಜಕುಮಾರ್ ಎಂಬ ಚೇತನಕ್ಕೆ ಹುಟ್ಟುಹಬ್ಬದ ದಿನದ ಗೌರವ ಪೂರ್ವಕ ನಮನಗಳು’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

‘ಡಾ.ರಾಜ್‌ಕುಮಾರ್ ಅವರು‌ ಕನ್ನಡದ ಅಸ್ಮಿತೆಯಾಗಿ ಮನೆಮನಗಳಲ್ಲಿ ನೆಲೆಸಿದ್ದಾರೆ. ನಟನಾಗಿ, ಗಾಯಕನಾಗಿ ಎಲ್ಲಕ್ಕಿಂತ ಮಿಗಿಲಾಗಿ ಪರಿಪೂರ್ಣತೆಯ ಸಾಕಾರಮೂರ್ತಿಯಾಗಿ ಕೋಟ್ಯಂತರ ಜನರಿಗೆ ಸ್ಫೂರ್ತಿಯ ಸೆಲೆ‌ಯಾಗಿದ್ದಾರೆ. ಅಣ್ಣಾವ್ರ ಜನ್ಮದಿನದ ಶುಭಸಂದರ್ಭದಲ್ಲಿ‌ ಹೃದಯಪೂರ್ವಕ ನಮನಗಳು’ ಎಂದು ಡಿ.ಕೆ.ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.

‘ಕನ್ನಡಿಗರ ಮನೆ-ಮನಗಳಲ್ಲಿ ಶಾಶ್ವತವಾಗಿ ನೆಲೆಸಿರುವ ಮಹಾನ್‌ ತಾರೆ, ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿ ಪುರಸ್ಕೃತರು, ಕರ್ನಾಟಕ ರತ್ನ, ಪದ್ಮಭೂಷಣ ಡಾ.ರಾಜ್‌ ಕುಮಾರ್‌ ಅವರ ಜಯಂತಿಯಂದು ಆ ಮೇರುನಟರಿಗೆ ನನ್ನ ಭಾವಪೂರ್ಣ ನಮನಗಳು’ ಎಂದು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಟ್ವೀಟ್‌ ಮಾಡಿದ್ದಾರೆ.

‘ಕನ್ನಡಿಗರ ಸಾಕ್ಷಿಪ್ರಜ್ಞೆ, ಆಸ್ಮಿತೆ, ಶಕ್ತಿ, ಸ್ಫೂರ್ತಿಯ ಸೆಲೆಯಾಗಿರುವ ಡಾ.ರಾಜ್‌ ಕುಮಾರ್‌ ಅವರನ್ನು ಸದಾ ಸ್ಮರಿಸುತ್ತಾ ಅವರ ಆದರ್ಶ ಹೆಜ್ಜೆಗಳಲ್ಲಿ ಶ್ರದ್ಧೆಯಿಂದ ನಡೆಯೋಣ. ನಾಡು, ನುಡಿ, ನೆಲ, ಜಲ ವಿಚಾರಗಳಲ್ಲಿ ಅಣ್ಣಾವ್ರು ಹೊಂದಿದ್ದ ಆಶಯಗಳನ್ನು ಸಾಕಾರಗೊಳಿಸಲು ಶ್ರಮಿಸೋಣ. ಸಿನಿಮಾ ಎಂದರೆ ಮನರಂಜನೆಯಷ್ಟೇ ಅಲ್ಲ, ಸಮಾಜದ ಪಾಲಿನ ಚಿಕಿತ್ಸಕ ಮಾರ್ಗ ಎಂದು ನಂಬಿ ನಡೆದ ಭಾರತೀಯ ಚಿತ್ರರಂಗದ ಏಕೈಕ ಕಲಾಸಂತರು ಅವರು. ಈ ಕಾರಣಕ್ಕಾಗಿಯೇ ಅಣ್ಣಾವ್ರು ಅಜರಾಮರ. ಅವರ ಚಿತ್ರಗಳನ್ನೇ ನೋಡಿಕೊಂಡು ಬೆಳೆದ ನನ್ನ ಮೇಲೆ ಅವರ ಪ್ರಭಾವ ಹೆಚ್ಚು. ‘ಬಂಗಾರದ ಮನುಷ್ಯʼ ಚಿತ್ರವೇ ನಾನಿಂದು ಕೃಷಿಕನಾಗಲು ಪ್ರೇರಣೆ’ ಎಂದು ಕುಮಾರಸ್ವಾಮಿ ಸ್ಮರಿಸಿದ್ದಾರೆ.

‘ನಟಸಾರ್ವಭೌಮ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ, ಪದ್ಮಭೂಷಣ, ಕರ್ನಾಟಕ ರತ್ನ ಡಾ. ರಾಜ್ ಕುಮಾರ್ ಅವರ ಜನ್ಮದಿನದಂದು ಆ ಮೇರು ನಟನಿಗೆ ಅಭಿಮಾನಪೂರ್ವಕ ನಮನಗಳು. ಕೋಟ್ಯಂತರ ಅಭಿಮಾನಿಗಳ ಪಾಲಿನ ನೆಚ್ಚಿನ ‘ಅಣ್ಣಾವ್ರು', ಕನ್ನಡಿಗರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ’ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಾಡಿದ್ದಾರೆ.

ಎಂಥದೇ ಪಾತ್ರವಾದರೂ ಅದಕ್ಕೆ ಜೀವ ತುಂಬುವಂತಹ ಅದ್ಭುತ ಅಭಿನಯ, ತಮ್ಮ ಸರಳತೆ–ಸಜ್ಜನಿಕೆಯಿಂದ ಕನ್ನಡಿಗರ ಮನಗೆದ್ದ ಡಾ. ರಾಜ್‌, ಗೋಕಾಕ್ ಚಳವಳಿಯಲ್ಲಿ ಭಾಗಿಯಾಗುವ ಮೂಲಕ ಕನ್ನಡಿಗರ ಸ್ವಾಭಿಮಾನವನ್ನು ಬಡಿದೆಬ್ಬಿಸಿದವರು.

2006 ಏಪ್ರಿಲ್ 12ರಂದು ಅವರು ನಿಧನರಾಗಿದ್ದು, ಆ ಬಳಿಕ ಅವರ ಜನ್ಮ ದಿನಾಚರಣೆಯನ್ನು ಅಭಿಮಾನಿಗಳು ಸವಿನೆನಪಿನಿಂದ ಆಚರಿಸುತ್ತಾ ಬರುತ್ತಿದ್ದಾರೆ. ಬೆಂಗಳೂರು ಸೇರಿದಂತೆ ನಾಡಿನ ವಿವಿಧೆಡೆ ಇರುವ ರಾಜ್‌ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಿರುವ ಅಭಿಮಾನಿಗಳು ಅವರಿಗೆ ಗೌರವ ಸಲ್ಲಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT