ಶನಿವಾರ, ಮಾರ್ಚ್ 6, 2021
21 °C

ಬಜಾರ್‌ನಲ್ಲಿ ಕಂಡ ಬಿಡಿ ಚಿತ್ರಗಳು

ಕೆ.ಎಚ್. ಓಬಳೇಶ್‌ Updated:

ಅಕ್ಷರ ಗಾತ್ರ : | |

Prajavani

ಚಿತ್ರ: ಬಜಾರ್

ನಿರ್ಮಾಣ: ತಿಮ್ಮೇಗೌಡ

ನಿರ್ದೇಶನ: ಸಿಂಪಲ್‌ ಸುನಿ

ತಾರಾಗಣ: ಧನ್‌ವೀರ್‌, ಅದಿತಿ ಪ್ರಭುದೇವ, ಶರತ್‌ ಲೋಹಿತಾಶ್ವ, ಸಾಧುಕೋಕಿಲ, ಅರುಣಾ ಬಾಲರಾಜ್‌, ಚೇತನ್‌ ಚಂದ್ರ, ಧರ್ಮೇಂದ್ರ ಅರಸ್‌, ಮಂಜುನಾಥ ಹೆಗಡೆ

ಸಿನಿಮಾದ ವಸ್ತುವಿಷಯಗಳಲ್ಲಿ ಭೂಗತಲೋಕದ ಕಥನ ಹಳೆಯ ಟ್ರೆಂಡ್‌. ಅದಕ್ಕೊಂದಿಷ್ಟು ನವಿರಾದ ಪ್ರೀತಿ ಬೆರೆಸಿ ನೋಡುಗರನ್ನು ಚಿತ್ರಮಂದಿರಕ್ಕೆ ಸೆಳೆಯುವ ತಂತ್ರಗಾರಿಕೆಯ ದಿನಮಾನವಿದು. ‘ಬಜಾರ್’ ಚಿತ್ರದಲ್ಲೂ ನಿರ್ದೇಶಕ ಸಿಂಪಲ್‌ ಸುನಿಗೆ ಇದೇ ಬಂಡವಾಳ. ಆದರೆ, ಈ ಹಳೆಯ ಸೂತ್ರದೊಟ್ಟಿಗೆ ಅವರು ಬಣ್ಣಬಣ್ಣದ ‍‍ಪಾರಿವಾಳಗಳನ್ನು ಹಾರಿಬಿಟ್ಟು ಜಾಣತನ ಮೆರೆದಿದ್ದಾರೆ. 

ರೌಡಿಸಂ, ಪ್ರೀತಿ, ಪಾರಿವಾಳ ಹಾರಾಟ ಸ್ಪರ್ಧೆ ಮೂರನ್ನೂ ಬೆಸೆಯಲು ಹೋಗಿರುವ ನಿರ್ದೇಶಕರಿಗೆ ಕೆಲವು ದೃಶ್ಯಗಳಲ್ಲಿ ಹಿಡಿತ ಸಾಧಿಸಲು ಆಗಿಲ್ಲ. ಕೆಲವೆಡೆ ಚಿತ್ರಕಥೆ ಬಾಜಿಗೆ ಬಿಟ್ಟ ಪಾರಿವಾಳದಂತೆ ಎತ್ತರಕ್ಕೆ ಹಾರುತ್ತದೆ. ಮತ್ತೆ ಕೆಲವೆಡೆ ರೆಕ್ಕೆ ಮುರಿದ ಹಕ್ಕಿಯಂತೆ ಧೊಪ್ಪನೆ ನೆಲಕ್ಕೆ ಬೀಳುತ್ತದೆ. ಬಜಾರ್‌ನಲ್ಲಿ ಫಳ ಫಳ ಹೊಳೆಯುವ ಪಿಸ್ತೂಲ್‌ಗಳು, ಮಾರುದ್ದದ ಲಾಂಗ್‌ಗಳನ್ನು ನಿರ್ದೇಶಕರು ಚೆನ್ನಾಗಿಯೇ ಝಳಪಿಸಿದ್ದಾರೆ.

ನಾಯಕನ ಏಟಿಗೆ ಎದುರೇಟು ನೀಡಲಾಗದೆ ತರಗೆಲೆಗಳಂತೆ ಪುಡಿ ರೌಡಿಗಳು ನೆಲಕ್ಕುರುಳುತ್ತಾರೆ. ಪಾರಿವಾಳದ ದಾವಡಿಯೊಳಗಿರುವ ಸೇಡಿನ ಹೊಗೆ. ಎದುರಾಳಿಯನ್ನು ಕೊಚ್ಚಿ ಹಾಕುವ ಹೊಸ ಬಗೆಯೂ ಚಿತ್ರದಲ್ಲಿದೆ. ಚಂದನವನದಲ್ಲಿ ವಿಭಿನ್ನ ಶೈಲಿಯಲ್ಲಿ ಲಾಂಗ್‌ ಬಳಸಿರುವ ಉದಾಹರಣೆ ಇದೆ. ಈ ಚಿತ್ರದಲ್ಲಿನ ಲಾಂಗ್‌ ಬಳಕೆಯ ಶೈಲಿ ಅದಕ್ಕೊಂದು ಹೊಸ ಸೇರ್ಪಡೆ.

ಸಿನಿಮಾದಲ್ಲಿ ನಾಯಕ ಕಲ್ಕಿ ಎದುರಾಳಿಗಳ ವಿರುದ್ಧ ತೊಡೆತಟ್ಟಿ ನಿಲ್ಲುವ ದೃಶ್ಯವಿದೆ. ಎದುರಿಗೆ ಪ್ರೀತಿ ವ್ಯಕ್ತಪಡಿಸಲು ಸಜ್ಜಾಗಿ ನಿಂತ ಪ್ರೇಯಸಿ ಪಾರಿ. ರೌಡಿಗಳಿಂದ ಏಟು ತಿನ್ನುವ ನಾಯಕನಿಗೆ ಲಾಂಗನ್ನು ಕೈಗೆತ್ತಿಕೊಳ್ಳಲು ಆಗುವುದಿಲ್ಲ. ಆಗ ಆಕೆಗೆ ವೇಲಿನಿಂದ ಕೈಗೆ ಲಾಂಗ್‌ ಕಟ್ಟುವಂತೆ ಕೇಳುತ್ತಾನೆ. ಕೊನೆಗೆ, ದಣಿದು ಮರದಡಿ ಕುಳಿತ ನಾಯಕನಿಗೆ ಕಟ್ಟು ಸಡಿಲವಾಗಿದೆ ಮತ್ತೆ ಬಿಗಿಯಾಗಿ ಕಟ್ಟಲೇ ಎಂದು ನಾಯಕಿಯ ಬಾಯಲ್ಲಿ ನಿರ್ದೇಶಕರು ಡೈಲಾಗ್‌ ಹೇಳಿಸಿದ್ದಾರೆ. 

ಕಥೆಗೊಂದು ಚೌಕಟ್ಟು ಇಲ್ಲ. ಚೆಲ್ಲಾ‍ಪಿಲ್ಲಿ ಚಿತ್ರಗಳಂತೆ ಕಂಡರೂ ಪಾರಿವಾಳದ ಹಾರಾಟ ಕಥೆಗೆ ಅಗತ್ಯವಿರುವಷ್ಟು ಭೂಮಿಕೆ ಒದಗಿಸುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಆದರೆ, ಕ್ಲೈಮ್ಯಾಕ್ಸ್‌ ದೃಶ್ಯ ಅತಿರೇಕ ಎನಿಸುತ್ತದೆ. ರೌಡಿಗಳಿಂದ ಥಳಿತಕ್ಕೊಳಗಾದ ನಾಯಕ ಕೊನೆಯುಸಿರು ಎಳೆದಿದ್ದಾನೆ ಎಂದುಕೊಳ್ಳುತ್ತಾರೆ ಪ್ರೇಕ್ಷಕರು. ಮತ್ತೊಂದೆಡೆ ರೌಡಿಗಳಿಗೆ ಗುಂಡು ಹಾರಿಸಿದ ಪೊಲೀಸ್‌ ಅಧಿಕಾರಿ ಕಲ್ಕಿ ಸತ್ತಿದ್ದಾನೆ ಎಂದು ಬಗೆಯುತ್ತಾನೆ. ಆದರೆ, ನಾಯಕನ ಎದೆಯ ಮೇಲೆ ಪಾರಿವಾಳ ಕೂರಿಸಿ ಮತ್ತೆ ಅವನಿಗೆ ಜೀವ ಬರಿಸುವ ಮೂಲಕ ನಿರ್ದೇಶಕರು ಪ್ರಹಸನ ಸೃಷ್ಟಿಸುತ್ತಾರೆ. 

ಪ್ರೀತಿ ವೈಫಲ್ಯಕ್ಕೆ ಸಿಲುಕಿದ ಶೋಕ್ದಾರ್‌ ಆಗಿ ಧನ್‌ವೀರ್ ಇಷ್ಟವಾಗುತ್ತಾರೆ. ಅದಿತಿ ಪ್ರಭುದೇವ, ಶರತ್‌ ಲೋಹಿತಾಶ್ವ ಅವರದ್ದು ಅಚ್ಚುಕಟ್ಟಾದ ನಟನೆ. ಸಾಧುಕೋಕಿಲ ಅವರ ನಟನೆಗೆ ಸಿಕ್ಕ ಅವಕಾಶ ಕಮ್ಮಿ. ರವಿ ಬಸ್ರೂರು ಸಂಗೀತ ಸಂಯೋಜನೆಯ ಒಂದು ಹಾಡು ಗುನುಗುವಂತಿದೆ. ಸಂತೋಷ್‌ ರೈ ಪಾತಾಜೆ ಅವರ ಛಾಯಾಗ್ರಹಣ ಕೆಲವು ದೃಶ್ಯಗಳಿಗಷ್ಟೇ ಸಹನೀಯವಾಗಿದೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು