ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವನದಲ್ಲಿ ಪರಿಶ್ರಮ ಇರಲಿ, ರಿಲಾಕ್ಸ್ ಆಗಬೇಡಿ: ನಟ ಸಾಯಿಕುಮಾರ್‌

ಪುಸ್ತಕ ಲೋಕಾರ್ಪಣೆ ಸಮಾರಂಭ
Last Updated 15 ಡಿಸೆಂಬರ್ 2019, 14:56 IST
ಅಕ್ಷರ ಗಾತ್ರ

ದಾವಣಗೆರೆ: ‘ಜೀವನದಲ್ಲಿ ರಿಲಾಕ್ಸ್ ಆಗಬೇಡಿ. ಸತತ ಪರಿಶ್ರಮದಿಂದ ಸಾಧನೆ ಮಾಡಬೇಕು. ಆಧುನಿಕತೆ ಬೇಕು. ಆದರೆ ನಮ್ಮ ನಾಗರಿಕತೆಯನ್ನೂ ಮರೆಯಬಾರದು‘ ಎಂದು ಬಹುಭಾಷಾ ನಟ ಸಾಯಿಕುಮಾರ್‌ ಹೇಳಿದರು.

ನಗರದ ಸಿದ್ಧಗಂಗಾ ಶಾಲೆಯಲ್ಲಿ ಭಾನುವಾರ ಜಿಲ್ಲೆ ಸಮಾಚಾರ ದಿನಪತ್ರಿಕೆ ಬಳಗ ಹಮ್ಮಿಕೊಂಡಿದ್ದ ಹಿರಿಯ ಪತ್ರಕರ್ತ ವಿ. ಹನುಮಂತಪ್ಪ ಅವರ ‘ಅಕ್ಷರಯೋಧ ರಾಮೋಜಿರಾವ್‌’ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.

‘ಎಷ್ಟೇ ಆಧುನಿಕತೆಗೆ ತೆರೆದುಕೊಂಡರೂ ನಮ್ಮ ಸಂಸ್ಕೃತಿ, ಪರಂಪರೆಯನ್ನು ಮರೆಯಬಾರದು. ಭಾರತ ದೇಶದಲ್ಲಿ ಹುಟ್ಟುವುದು ನಮ್ಮ ಪೂರ್ವಜನ್ಮದ ಸುಕೃತ. ವಿದೇಶಿಯರು ನಮ್ಮ ಸಂಸ್ಕೃತಿಗೆ ಮಾರುಹೋಗಿದ್ದಾರೆ. ನಾವು ಅದನ್ನು ಮರೆಯಬಾರದು’ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

‘ದೇಶ ನಮಗೇನು ಮಾಡಿದೆ ಎನ್ನುವುದಕ್ಕಿಂತ, ದೇಶಕ್ಕೆ ನಾವು ಏನು ಕೊಡುಗೆ ಎನ್ನುವುದು ಮುಖ್ಯ ಎಂದ ಅವರು,ನಾನು ಎನ್ನುವುದು ಹೇಡಿತನ. ನಮ್ಮದು ಎನ್ನುವುದು ಗಂಡಸ್ಥನ’ ಎಂದು ಡೈಲಾಗ್‌ ಹೊಡೆದರು.

‘ಸಾಮಾನ್ಯ ಕುಟುಂಬದಲ್ಲಿ ಜನಿಸಿದ ರಾಮೋಜಿರಾವ್‌ ಅವರು ಅತಿದೊಡ್ಡ ಸಾಧನೆ ಮಾಡಿದ್ದಾರೆ. ಅವರು ಎಲ್ಲರಿಗೂ ಆದರ್ಶ. ಅವರೆಂದರೆ ಒಂದು ಉದ್ಯಮ, ವಿಪ‌್ಲವ, ವಿಜಯ. ಅವರು ನಡೆದಾಡುವ ಪತ್ರಿಕೋದ್ಯಮದ ವಿಶ್ವವಿದ್ಯಾಲಯ. ಜನಪ್ರಿಯತೆ ಬಯಸದ ಅವರ ಸರಳತೆ ಎಲ್ಲರಿಗೂ ಮಾದರಿ. ಅವರ ಅಭಿಮಾನಿಯಾಗಿ ಇಲ್ಲಿಗೆ ಬಂದಿದ್ದೇನೆ. ಅವರು ಪ್ರತಿಯೊಬ್ಬರಿಗೂ ಪ್ರೇರಣೆ’ ಎಂದು ಹೇಳಿದರು.

‘ಮಾತೃಭಾಷೆ ತೆಲುಗು. ಆದರೆ ಜೀವನದ ಭಾಷೆ ಕನ್ನಡ. ಸಂಸ್ಕಾರ ಅಮ್ಮ ಕೊಟ್ಟರೆ ನೀವು ಅಭಿಮಾನ ಕೊಟ್ಟಿದ್ದೀರಿ. ಕರ್ನಾಟಕ ಇಲ್ಲದೆ ನಮ್ಮ ಕುಟುಂಬ ಇಲ್ಲ’ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ಪಿ. ವೀರಭದ್ರಪ್ಪ, ‘ರಾಮೋಜಿರಾವ್‌ ಅವರು ಆಂಧ್ರಪ್ರದೇಶದಲ್ಲಿ ದೊಡ್ಡ ಮಟ್ಟದಲ್ಲಿ ಆರ್ಥಿಕ ಚಿಂತನೆ ಮಾಡಿದವರು.ತಮ್ಮ ‘ಮಾರ್ಗದರ್ಶಿ’ ಚಿಟ್‌ ಫಂಡ್‌ ಮೂಲಕ ಆರ್ಥಿಕವಾಗಿ ಹಿಂದುಳಿದವರ ಅಭಿವೃದ್ಧಿಗೆ ಸಹಕಾರ ನೀಡಿದರು. ಒಬ್ಬ ವ್ಯಕ್ತಿ ಒಂದು ಸಂಸ್ಥೆಯಾಗಿ ಬೆಳೆಯಬಲ್ಲ ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ. ಅವರ ಆಲೋಚನೆಗಳು ನಮಗೆ ದಾರಿದೀಪವಾಗಬೇಕು’ ಎಂದು ಹೇಳಿದರು.

ಪುಸ್ತಕ ಕುರಿತು ಮಾತನಾಡಿದ ಪ್ರಾಚಾರ್ಯ ದಾದಾಪೀರ್‌ ನವಿಲೇಹಾಳ್‌, ‘ರಾಮೋಜಿರಾವ್‌ ಅವರ ಒಟ್ಟು ವ್ಯಕ್ತಿತ್ವವನ್ನು ಹನುಮಂತಪ್ಪ ಅವರು ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ರಾಮೋಜಿರಾವ್‌ ಅವರ ಬದುಕಿನ ಕುರಿತ ಸಮಗ್ರ ಚಿತ್ರಣ ಇರುವ ಕೃತಿ ಯುವಕರಿಗೆ ಪ್ರೇರಣೆಯಾಗಬಲ್ಲದು. ವಿದ್ಯಾರ್ಥಿಗಳು ಈ ಪುಸ್ತಕವನ್ನು ಖರೀದಿಸಿ ಓದಬೇಕು’ ಎಂದು ಹೇಳಿದರು.

ಲೇಖಕ ಹನುಮಂತಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿದ್ಧಗಂಗಾ ವಿದ್ಯಾಸಂಸ್ಥೆ ಪ್ರಾಚಾರ್ಯರಾದ ಜಸ್ಟಿನ್‌ ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ಚಲನಚಿತ್ರ ನಿರ್ದೇಶಕ ರಾಧಾಕೃಷ್ಣ ಪಲ್ಲಕ್ಕಿ, ವಿಶ್ವಚೇತನ ವಿದ್ಯಾಸಂಸ್ಥೆಯ ಡಾ. ವೀರಮಾಚನೇನಿ ವಿಜಯಲಕ್ಷ್ಮಿ, ಬಳಗದ ಗೌರವಾಧ್ಯಕ್ಷ ಎನ್‌.ಟಿ. ಎರ‍್ರಿಸ್ವಾಮಿ ಇದ್ದರು. ಹೇಮಂತ್‌ಕುಮಾರ್‌ ಪ್ರಾರ್ಥಿಸಿದರು. ಭಾರತಿ ಪರಿಚಯಿಸಿದರು. ಸಾಲಿಗ್ರಾಮ ಗಣೇಶ್‌ ಶೆಣೈ ನಿರೂಪಿಸಿದರು.

ಬಳಿಕ ಅಪರಾಧ ತಡೆ ಮಾಸಾಚರಣೆ ಕುರಿತು ಸಂದೇಶ ನೀಡಿದ ಸಾಯಿಕುಮಾರ್, ‘ಅಪರಾಧ ತಡೆಗೆ‍ಪೊಲೀಸರೊಂದಿಗೆ ಸಾರ್ವಜನಿಕರ ಸಹಕಾರ ಮುಖ್ಯ‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT