ಶನಿವಾರ, ಮೇ 15, 2021
24 °C
‘ಪ್ರಜಾವಾಣಿ’ ಫೇಸ್‌ಬುಕ್ ಲೈವ್‌ ಸಂವಾದದಲ್ಲಿ ನಿರ್ದೇಶಕದ್ವಯರ ಒತ್ತಾಯ

ಪ್ರಜಾವಾಣಿ ಸಂವಾದ: 'ಪ್ರೌಢಶಾಲೆಯಿಂದಲೇ ಸಿನಿಮಾ ಶಿಕ್ಷಣ ಆರಂಭಿಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಸಿನಿಮಾ ಶಿಕ್ಷಣ ಇಲ್ಲದ ಕಡೆ ಸಿನಿಮಾ ಸಂಸ್ಕೃತಿ ಬೆಳೆಯಲು ಸಾಧ್ಯವಿಲ್ಲ. ಹೀಗಾಗಿ ಪ್ರೌಢಶಾಲಾ ಹಂತದಿಂದಲೇ ಸಿನಿಮಾ ಶಿಕ್ಷಣವು ಪಠ್ಯಕ್ರಮದ ಭಾಗವಾಗಬೇಕು’ ಎಂಬ ಒಮ್ಮತದ ಆಗ್ರಹವನ್ನು ವ್ಯಕ್ತಪಡಿಸಿದ್ದು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌.ನಾಗಾಭರಣ ಹಾಗೂ ಚಿತ್ರ ನಿರ್ದೇಶಕ ಬಿ.ಸುರೇಶ್‌. ‘ಕನ್ನಡ ಚಿತ್ರರಂಗದ ನೈಜ ಸಮಸ್ಯೆಗಳೇನು?’ ಎಂಬ ವಿಷಯದ ಕುರಿತು ನಡೆದ ಪ್ರಜಾವಾಣಿ ಫೇಸ್‌ಬುಕ್‌ ಲೈವ್‌ ಸಂವಾದದಲ್ಲಿ ಮಾತನಾಡಿದ ಇವರು, ಚಿತ್ರಮಂದಿರಗಳಲ್ಲಿ ಸಿನಿಮಾ ವೀಕ್ಷಣೆ ಮೇಲೆ ಒಟಿಟಿ ಪರಿಣಾಮ, ಚಿತ್ರರಂಗ ಎದುರಿಸಬೇಕಾದ ಸವಾಲುಗಳ ಬಗ್ಗೆ ತಮ್ಮ ಅಭಿಪ್ರಾಯ ಮಂಡಿಸಿದರು. 

ಮಕ್ಕಳಿಗೆ ದೃಶ್ಯಭಾಷೆಯ ಅರಿವಾಗಬೇಕು

‘ಸಿನಿಮಾ ಶಿಕ್ಷಣವನ್ನು ಪ್ರೌಢಶಾಲೆ ಹಂತದಿಂದಲೇ ಪಠ್ಯಕ್ರಮದಲ್ಲಿ ಅಳವಡಿಸಲು ಸರ್ಕಾರವು ಕ್ರಮಕೈಗೊಳ್ಳಬೇಕು. ಮಕ್ಕಳಿಗೆ ದೃಶ್ಯಭಾಷೆ ಏನೆಂದು ಗೊತ್ತಾಗಬೇಕು. ನಂತರದಲ್ಲಿ ಪತ್ರಿಕೋದ್ಯಮ ಪದವಿ ಇರುವಂತೆ ಉನ್ನತ ಶಿಕ್ಷಣದಲ್ಲೂ ಸಿನಿಮಾ ಶಿಕ್ಷಣ ತರಲಿ’ ಎಂದು ಬಿ.ಸುರೇಶ್‌ ಆಗ್ರಹಿಸಿದರು.

‘ಸಿನಿಮಾ ಶಿಕ್ಷಣ ಇಲ್ಲದ ಕಡೆ ಸಿನಿಮಾ ಸಂಸ್ಕೃತಿ ಬೆಳೆಯಲು ಸಾಧ್ಯವಿಲ್ಲ. ಸರ್ಕಾರವೇ ಇದನ್ನು ಮಾಡಬೇಕು ಎಂದಲ್ಲ, ಸಿನಿಮಾದಲ್ಲಿದ್ದ ದೊಡ್ಡ ಶಕ್ತಿಗಳು ಇದಕ್ಕೆ ಕೈಹಾಕಬೇಕು. ಸೈದ್ಧಾಂತಿಕ ಶಿಸ್ತು ಬೇಕು. ಸಿನಿಮಾಗೆ ಪಠ್ಯಕ್ರಮದ ಚೌಕಟ್ಟನ್ನು ರೂಪಿಸಬೇಕು’ ಎಂದು ನಾಗಾಭರಣ ಕೂಡಾ ಸಹಮತ ವ್ಯಕ್ತಪಡಿಸಿದರು.

ಹೊಸ ಚಿತ್ರಮಂದಿರಗಳ ನಿರ್ಮಾಣ ಅಗತ್ಯ: ‘ಕೆಲ ವರ್ಷಗಳ ಹಿಂದೆ ರಾಜ್ಯದಲ್ಲಿ ಚಿತ್ರಮಂದಿರಗಳ ಸಂಖ್ಯೆ 1 ಸಾವಿರ ದಾಟುವ ವೇಗದಲ್ಲಿ ಬೆಳೆಯುತ್ತಿತ್ತು. ಇದೀಗ ಈ ಸಂಖ್ಯೆ 630ರ ಗಡಿಯಲ್ಲಿದ್ದು, ಕೋವಿಡ್‌ನಿಂದಾಗಿ ಮತ್ತಷ್ಟು ಚಿತ್ರಮಂದಿರಗಳಿಗೆ ಬೀಗ ಬಿದ್ದಿದ್ದು, ಇದೀಗ 570ರ ಆಸುಪಾಸಿನಲ್ಲಿದೆ. ಕೆಲವು ಊರಿನಲ್ಲಿ ಚಿತ್ರಮಂದಿರಗಳೇ ಇಲ್ಲ. ಜನತಾ ಚಿತ್ರಮಂದಿರ ಮಾಡುತ್ತೇವೆ ಎಂದರು ಆದರೆ ಅದೂ ಆಗಿಲ್ಲ. ಹೊಸ ಚಿತ್ರಮಂದಿರಗಳಲ್ಲಿ ವಿಷಯಾಧಾರಿತ ಚಿತ್ರಗಳಿಗೆ ಆದ್ಯತೆ ದೊರೆಯಬೇಕು. ಊರೂರು ತಿರುಗಿ ‘ಪುಟ್ಟಕ್ಕನ ಹೈವೆ’ ಚಿತ್ರ ತೋರಿಸುವ ಪರಿಸ್ಥಿತಿ ನನಗೆ ಎದುರಾಗಿತ್ತು’ ಎಂದು ಸುರೇಶ್‌ ಹೇಳಿದರು.

ಸರ್ಕಾರ ಬೆನ್ನುತಟ್ಟುವ ಕೆಲಸ ಮಾಡಲಿ: ‘ಕನ್ನಡ ಚಿತ್ರರಂಗ ಮತ್ತಷ್ಟು ಬೆಳೆಯಲು ನಿರ್ಮಾಪಕ, ವಿತರಕ, ಪ್ರದರ್ಶಕ ಒಂದು ಕುಟುಂಬ ಎಂದು ಯೋಚನೆ ಮಾಡಬೇಕು. ಸರ್ಕಾರವೂ ಸಮಯಕ್ಕೆ ಸರಿಯಾಗಿ ಪ್ರೋತ್ಸಾಹಿಸಬೇಕು. 2016ರವರೆಗೆ ಮಾತ್ರ ಸಬ್ಸಿಡಿ ಬಿಡುಗಡೆ ಆಗಿದೆ. ಸಕಾಲಕ್ಕೆ ಪ್ರಶಸ್ತಿಗಳ ಘೋಷಣೆ ಆಗಬೇಕು’ ಎಂದು ಹೇಳಿದರು.

ಪ್ರತ್ಯೇಕ ಇಲಾಖೆ ಮತ್ತು ಸಚಿವರ ಅಗತ್ಯತೆ

‘ದೃಶ್ಯ ಮಾಧ್ಯಮಕ್ಕೆ ಸಂಬಂಧಿಸಿದಂತೆ ಒಂದು ಇಲಾಖೆ ಆಗಬೇಕು. ಅದಕ್ಕೆ ಪ್ರತ್ಯೇಕ ಸಚಿವರು ಇರಬೇಕು’ ಎಂದು ಟಿ.ಎಸ್‌.ನಾಗಾಭ‍‍‍ರಣ ಪ್ರತಿಪಾದಿಸಿದರು.

‘ಸಿನಿಮಾವನ್ನು ವಾರ್ತಾ ಮತ್ತು ಪ್ರಸಾರ ಇಲಾಖೆ ಅಡಿ ಇಟ್ಟಿರುವುದೇ ದೊಡ್ಡ ತಪ್ಪು. ಸಂಸ್ಕೃತಿ ಇಲಾಖೆ ಕೆಳಗಡೆ ಇದು ಬರಬೇಕು’ ಎನ್ನುವ ಬಿ.ಸುರೇಶ್‌ ಅವರ ಮಾತಿಗೆ ಸಹಮತವ್ಯಕ್ತಪಡಿಸಿದ ನಾಗಾಭರಣ, ‘ಹಾಲಿವುಡ್‌ಗೆ ಬೇಕಾದ ವಿಎಫ್‌ಎಕ್ಸ್‌ ಕರ್ನಾಟಕದಲ್ಲಿ ಆಗುತ್ತಿದೆ. ಆದರೆ, ಕನ್ನಡ ಚಿತ್ರರಂಗಕ್ಕೆ ಇದರಿಂದ ಯಾವುದೇ ಉಪಯೋಗವಾಗುತ್ತಿಲ್ಲ. ಐಟಿ ಇಲಾಖೆಗೆ ಇದನ್ನು ಸೇರಿಸಿದ ಪರಿಣಾಮ ಹೀಗಾಗಿದೆ. ವಿಎಫ್‌ಎಕ್ಸ್‌, ಅನಿಮೇಷನ್‌, ಗೇಮಿಂಗ್‌ ಅಲ್ಲಿಗೆ ಹೊರಟು ಹೋಗಿದೆ. ನೀತಿಯಲ್ಲೂ ಬದಲಾವಣೆ ಆಗಬೇಕಾಗಿದೆ. ಪ್ರತ್ಯೇಕ ಇಲಾಖೆಗೆ ಚಿತ್ರರಂಗದ ಹಿನ್ನೆಲೆಯಿಂದ ಬಂದ ಸಚಿವರೇ ಆಗಬೇಕು ಎಂದೇನಿಲ್ಲ, ಅವರಿಗೆ ಒಳ್ಳೆಯ ಕಿವಿ ಇದ್ದರೆ ಸಾಕು’ ಎಂದರು.

ಪಾರದರ್ಶಕತೆ ಇರಲಿ: ಕೇವಲ ಕೊರೊನಾ, ಕೊರೊನೋತ್ತರದಲ್ಲಿ ಮಾತ್ರ ಕನ್ನಡ ಚಿತ್ರರಂಗ ಸಮಸ್ಯೆ ಎದುರಿಸುತ್ತಿದೆ ಎನ್ನುವುದು ತಪ್ಪು. ಸಹೋದರ ಭಾಷೆಗಳ ಜೊತೆಗಿನ ಸ್ಪರ್ಧೆ, ಬಾಲಿವುಡ್‌ ಸಿನಿಮಾಗಳ ನಡುವೆ ಕನ್ನಡ ಚಿತ್ರಗಳು ಸಿಲುಕುತ್ತಿವೆ. ಇಲ್ಲಿ ಬಲಿಷ್ಠವಾದವರ ಆಟ ಮಾತ್ರ ನಡೆಯುತ್ತಿತ್ತು. ಈ ಎಲ್ಲ ಸ್ಪರ್ಧೆಗಳನ್ನು ಎದುರಿಸಿ ನಿಲ್ಲಲು, ವಿತರಕರು ಹಾಗೂ ಪ್ರದರ್ಶಕರ ನಡುವಿನ ಪಾರದರ್ಶಕತೆ ಮುಖ್ಯ. ವೀಕ್ಷಕರಲ್ಲೂ ಮಲ್ಟಿಪ್ಲೆಕ್ಸ್‌ ಗುಣ ಬಂದಿದೆ ಎಂದು ತಿಳಿದ ಮೇಲೆ ಅದನ್ನೇ ನಿರ್ದೇಶಕ, ನಿರ್ಮಾಪಕ ಬಳಸಿಕೊಂಡು ಪ್ರತಿಸ್ಪರ್ಧಿಯಾಗಬೇಕು’ ಎಂದು ಕಿವಿಮಾತು ಹೇಳಿದರು.

ಒಟಿಟಿ ಪರ್ಯಾಯ ಅಲ್ಲ: ‘ಪ್ರಸ್ತುತ ಸಂದರ್ಭದಲ್ಲಿ ಒಟಿಟಿ ಪರ್ಯಾಯವಲ್ಲ. ಈಗ ಟಿ.ವಿ ಬದಲು ಒಟಿಟಿಗೆ ಸಿನಿಮಾ ಮಾರುತ್ತಾರೆ. ಚಿತ್ರಮಂದಿರದಲ್ಲೇ ಚಿತ್ರ ನೋಡುವ ದೊಡ್ಡ ಪಡೆಯೇ ಇದೆ. ತನ್ನ ಸಿನಿಮಾ ಬೇರೆ, ಹೆಂಡತಿ ಸಿನಿಮಾ ಬೇರೆ... ಹೀಗಾಗಿ ಒಟಿಟಿಗೆ ಹೋಗುತ್ತಾರೆ, ವಿನಃ ಚಿತ್ರಮಂದಿರಗಳಲ್ಲೇ ಚಿತ್ರವನ್ನು ನೋಡುವವರ ಸಂಖ್ಯೆ ಇನ್ನೂ ಹೆಚ್ಚಿದೆ. ಎಲ್ಲರಲ್ಲೂ ಸ್ಮಾರ್ಟ್‌ಫೋನ್‌ ಇದೆ ಅಂದಾಕ್ಷಣ ಒಟಿಟಿಯಲ್ಲಿ ಇರುತ್ತಾರೆ ಎಂದಲ್ಲ’ ಎಂದರು.

‘ಹೊಸ ತಂತ್ರಜ್ಞಾನ ಬಂತು ಎಂದರೆ ಕಥನ ಮಾಧ್ಯಮ ಸಾಯುವುದಿಲ್ಲ. ಒಟಿಟಿ ಬಂತು ಎಂದರೆ ಸಿನಿಮಾ ಸಾಯುವುದಿಲ್ಲ’ ಎಂದು ಬಿ.ಸುರೇಶ್‌ ಕೂಡಾ ಒಮ್ಮತ ವ್ಯಕ್ತಪಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು